ನೆತನ್ಯಾಹು ವಿರುದ್ಧದ ಬಂಧನ ವಾರಂಟ್ ಅನ್ನು ಐಸಿಸಿ ಹಿಂಪಡೆಯುವುದಿಲ್ಲ; ಒತ್ತಡದ ಹೊರತಾಗಿಯೂ ತನಿಖೆ ಮುಂದುವರಿಯಲಿದೆ

0
255

ಸನ್ಮಾರ್ಗ ವಾರ್ತೆ

ಹೇಗ್: ಇಸ್ರೇಲಿ ಅಧಿಕಾರಿಗಳ ವಿರುದ್ಧದ ಬಂಧನ ವಾರಂಟ್‌ಗಳು ಅಥವಾ ಸಂಬಂಧಿತ ಅರ್ಜಿಗಳನ್ನು ಹಿಂಪಡೆಯಲು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯವು (ಐಸಿಸಿ) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉಪ ಪ್ರಾಸಿಕ್ಯೂಟರ್ ನಝಾಹತ್ ಶಮಿಮ್ ಖಾನ್ ಹೇಳಿದ್ದಾರೆ. ಅಮೆರಿಕದ ಒತ್ತಡ ಮತ್ತು ನಿರ್ಬಂಧಗಳ ಹೊರತಾಗಿಯೂ ಈ ಪ್ರಕರಣದ ವಿಚಾರಣೆಗಳು ಮುಂದುವರಿದಿವೆ ಎಂದು ಅವರು ತಿಳಿಸಿದ್ದಾರೆ.

“ಪ್ರಕರಣವು ಇನ್ನೂ ನಡೆಯುತ್ತಿದೆ. ಬಂಧನ ವಾರಂಟ್ ಅರ್ಜಿಗಳನ್ನು ಅಥವಾ ಅಸ್ತಿತ್ವದಲ್ಲಿರುವ ಬಂಧನ ವಾರಂಟ್‌ಗಳನ್ನು ಹಿಂಪಡೆಯಲು ನಾವು ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆಯು ಮುಂದುವರಿದಿದೆ” ಎಂದು ಉಪ ಪ್ರಾಸಿಕ್ಯೂಟರ್ ನಝಾಹತ್ ಶಮಿಮ್ ಖಾನ್ ಅವರು ಸಿಎನ್‌ಎನ್‌ಗೆ (CNN) ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2024ರ ನವೆಂಬರ್‌ನಲ್ಲಿ, 2023ರ ಅಕ್ಟೋಬರ್‌ನಿಂದ ಗಾಝಾದಲ್ಲಿ ಎಸಗಲಾಗಿದೆ ಎನ್ನಲಾದ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಉಲ್ಲೇಖಿಸಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಂದಿನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಐಸಿಸಿ ಬಂಧನ ವಾರಂಟ್ ಹೊರಡಿಸಿತ್ತು.

ಅಂದಿನಿಂದ ಅಮೆರಿಕವು ಮಾಜಿ ಪ್ರಾಸಿಕ್ಯೂಟರ್ ಕರೀಮ್ ಖಾನ್, ಇಬ್ಬರು ಉಪ ಪ್ರಾಸಿಕ್ಯೂಟರ್‌ಗಳು ಮತ್ತು ಒಂಬತ್ತು ನ್ಯಾಯಾಧೀಶರು ಸೇರಿದಂತೆ ಐಸಿಸಿ ನಾಯಕತ್ವದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಐಸಿಸಿ ಅಧ್ಯಕ್ಷರು ಸೇರಿದಂತೆ ನ್ಯಾಯಾಧೀಶರೂ ಸಹ ನಿರ್ಬಂಧಗಳ ಪಟ್ಟಿಯಲ್ಲಿದ್ದಾರೆ.

ಬಂಧನ ವಾರಂಟ್‌ಗಳನ್ನು ಪ್ರಶ್ನಿಸಿ ಇಸ್ರೇಲ್ ಕೂಡ ಐಸಿಸಿಯಲ್ಲಿ ಕಾನೂನು ಕ್ರಮ ಕೈಗೊಂಡಿದೆ. ಈ ಪೈಕಿ ಎರಡು ಮೇಲ್ಮನವಿಗಳು ಇನ್ನೂ ಬಾಕಿ ಇವೆ. ಐಸಿಸಿಯ ಸದಸ್ಯರಲ್ಲದ ಇಸ್ರೇಲಿ ನಾಗರಿಕ ಮೇಲೆ ನ್ಯಾಯಾಲಯವು ಅಧಿಕಾರ ವ್ಯಾಪ್ತಿಯನ್ನು ಹೊಂದಿದೆಯೇ ಎಂಬ ಪ್ರಶ್ನೆಯನ್ನೂ ಈ ಮೇಲ್ಮನವಿಗಳು ಎತ್ತಿವೆ.

ಈ ಮಧ್ಯೆ, ಹಿರಿಯ ಇಸ್ರೇಲಿ ಅಧಿಕಾರಿಗಳ ವಿರುದ್ಧ ಹೆಚ್ಚಿನ ಪ್ರಕರಣಗಳನ್ನು ಪರಿಗಣಿಸಲು ಪ್ರಾಸಿಕ್ಯೂಟರ್ ಕಚೇರಿಯು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ವರದಿಗಳಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಐಸಿಸಿ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಸಮಯದಲ್ಲಿ ನಝಾಹತ್‌ ಶಮೀಮ್‌ ಖಾನ್ ಅವರ ಪ್ರತಿಕ್ರಿಯೆ ಬಂದಿದೆ. ಐಸಿಸಿಯನ್ನು ಕ್ರಮೇಣವಾಗಿ ನಾಶಪಡಿಸಲು ಅಗತ್ಯವಿರುವ ಎಲ್ಲಾ ಮಾರ್ಗ ಗಳನ್ನು ಬಳಸುವುದಾಗಿ ಅಮೆರಿಕದ ವಿದೇಶಾಂಗ ಸಚಿಮ ಮಾರ್ಕೊ ರೂಬಿಯೊ ಜುಲೈನಲ್ಲಿ ಹೇಳಿದ್ದರು.

ಆದಾಗ್ಯೂ, ಐಸಿಸಿಯು ರೋಮ್ ಕಾಯಿದೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ನ್ಯಾಯಾಲಯದ ಕಾರ್ಯಾಚರಣೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತವೆ ಎಂದು ನಝಾಹತ್‌ ಶಮೀಮ್‌ ಖಾನ್ ಸ್ಪಷ್ಟಪಡಿಸಿದರು. ಐಸಿಸಿ ಅಧಿಕಾರಿಗಳು ತೀವ್ರ ಒತ್ತಡವನ್ನು ಎದುರಿಸುತ್ತಿದ್ದರೂ, ತನಿಖೆಗಳು, ಪ್ರಾಸಿಕ್ಯೂಷನ್‌ಗಳು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳು ಮುಂದುವರಿಯುತ್ತವೆ ಎಂದು ತಿಳಿಸಿದರು.

ಈ ಮಧ್ಯೆ, ಅಮೆರಿಕವು 2025ರ ಆಗಸ್ಟ್‌ನಲ್ಲಿ ನಝಾಹತ್‌ ಶಮೀಮ್‌ ಖಾನ್ ಮತ್ತು ಸಹ ಉಪ ಪ್ರಾಸಿಕ್ಯೂಟರ್ ಮಾಮೆ ಮಂಡಿಯಾಯೆ ನಿಯಾಂಗ್ ಅವರ ಮೇಲೆ ನಿರ್ಬಂಧಗಳನ್ನು ವಿಧಿಸಿತು. ಈ ನಿರ್ಬಂಧಗಳು ಅವರ ಅಮೆರಿಕದ ಸ್ವತ್ತುಗಳನ್ನು ಸ್ಥಗಿತಗೊಳಿಸಿದವು ಮತ್ತು ಅಮೆರಿಕದ ವ್ಯಕ್ತಿಗಳು ಹಾಗೂ ಕಂಪನಿಗಳು ಅವರಿಗೆ ಹಣ, ಸರಕುಗಳು ಮತ್ತು ಸೇವೆಗಳನ್ನು ಒದಗಿಸುವುದನ್ನು ನಿಷೇಧಿಸಿದವು.

ಬ್ಯಾಂಕಿಂಗ್ ಸೇವೆಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಂಭಾವ್ಯ ನಷ್ಟ ಸೇರಿದಂತೆ ಈ ನಿರ್ಬಂಧಗಳು ಗಮನಾರ್ಹವಾದ ವೈಯಕ್ತಿಕ ಪರಿಣಾಮಗಳನ್ನು ಬೀರುತ್ತವೆ ಎಂದು ನಝಾಹತ್‌ ಶಮೀಮ್‌ ಖಾನ್ ಹೇಳಿದರು.

ಒತ್ತಡಗಳ ನಡುವೆಯೂ ಅಂತರರಾಷ್ಟ್ರೀಯ ಕಾನೂನಿನ ಭವಿಷ್ಯಕ್ಕಾಗಿ ಭರವಸೆ ಇದೆ ಎಂದು ನಝಾಹತ್‌ ಹೇಳಿದರು. ಐಸಿಸಿಯು ಸಂತ್ರಸ್ತರು ನ್ಯಾಯವನ್ನು ಕೋರಲು ಒಂದು ವೇದಿಕೆಯಾಗಿ ಮುಂದುವರಿಯುತ್ತದೆ ಮತ್ತು ನ್ಯಾಯಾಲಯದ ಸಿಬ್ಬಂದಿ ಮಾನವೀಯತೆಗಾಗಿ ಕೆಲಸ ಮಾಡುತ್ತಾರೆ ಎಂದು ಅವರು ತಿಳಿಸಿದರು.