ಸನ್ಮಾರ್ಗ ಸಂಪಾದಕೀಯ
ಉಮರ್ ಖಾಲಿದ್, ಮುಬಾರಕ್ ಅಲಿ, ಸ್ವತಂತ್ರ ಭಾರದ್ವಾಜ್- ಇವರಲ್ಲಿ ಉಮರ್ ಖಾಲಿದ್ ಅವರು ಕಳೆದ 6 ವರ್ಷಗಳಿಂದ ವಿಚಾರಣೆ ಇಲ್ಲದೇ ಜೈಲಲ್ಲಿದ್ದಾರೆ. ಎರಡೂವರೆ ವರ್ಷಗಳ ಕಾಲ ಜೈಲಲ್ಲಿದ್ದ ಮುಬಾ ರಕ್ಗೆ ಜಾಮೀನು ದೊರೆತಿದೆ. 10 ದಿನಗಳ ಕಾಲ ಜೈಲಲ್ಲಿದ್ದ ಸ್ವತಂತ್ರ ಭಾರದ್ವಾಜ್ಗೂ ಜಾಮೀನು ಸಿಕ್ಕಿದೆ. ಉಮರ್ ಖಾಲಿದ್ ಮತ್ತು ಮುಬಾರಕ್ ಅಲಿಗೆ ಹೋಲಿಸಿದರೆ ಸ್ವತಂತ್ರ ಭಾರದ್ವಾಜ್ನದ್ದು ಭಿನ್ನ ಪ್ರಕರಣ.
ಈತ ಆನ್ ಕ್ಯಾಮರಾದ ಮುಂದೆಯೇ ತನ್ನ ಪರಾಕ್ರಮವನ್ನು ಹೇಳಿಕೊಂಡಿದ್ದ. ಕಾಕ್ರೋಚ್ ಪ್ರತಿಭಟನೆಯ ಸಮಯದಲ್ಲಿ ದಲಿತ ಕಂಟೆಂಟ್ ಬರಹಗಾರ್ತಿ ನೀಶು ಆಝಾದ್ಳ ತಂದೆ ಸಂಜಯ್ ಕುಮಾರ್ ಅವರ ತಲೆ ಒಡೆದಿದ್ದಾನೆ ಎಂದು ಈತ ಹೇಳಿದ್ದ. ‘ಅವರ ತಲೆಗೆ 60 ಹೊಲಿಗೆಗಳನ್ನು ಹಾಕಲಾಗಿದೆ, ಅವರು ಸಾಯುವ ಸ್ಥಿತಿಯಲ್ಲಿದ್ದರು, ಆಂಬ್ಯುಲೆನ್ಸ್ನಲ್ಲಿ ಕೊಂಡುಹೋಗಲಾಯಿತು, ನನ್ನನ್ನು ಪೊಲೀಸರು ಠಾಣೆಗೆ ಕೊಂಡೊಯ್ದರು, ಆಗ ದೆಹಲಿ ಸಚಿವ ಕಪಿಲ್ ಮಿಶ್ರಾರು ಪೊಲೀಸರಿಗೆ ಕರೆ ಮಾಡಿದರು, ಪೊಲೀಸರು ತಕ್ಷಣ ತನ್ನನ್ನು ಬಿಡುಗಡೆಗೊಳಿಸಿದರು, ನಿಜವಾಗಿ ಹತ್ಯಾ ಯತ್ನ ಆರೋಪದಲ್ಲಿ ನನ್ನನ್ನು ಜೈಲಿಗೆ ಹಾಕಬೇಕಿತ್ತು..’ ಎಂದೆಲ್ಲಾ ಆತ ಕ್ಯಾಮರಾದ ಮುಂದೆಯೇ ಹೇಳಿಕೊಂಡಿದ್ದ. ‘ತಾನು ಹಾಕಿಕೊಂಡಿದ್ದ ಶೂ ಮತ್ತು ಕೈಯಲ್ಲಿದ್ದ ಲಾಠಿ- ಎರಡೂ ದೆಹಲಿ ಪೊಲೀಸರದ್ದು’ ಎಂದೂ ಆತ ಹೇಳಿದ್ದ. ಈತನನ್ನು ಸೆಪ್ಟೆಂಬರ್ 5ರಂದು ಬಂಧಿಸಿದ ಪೊಲೀಸರು ಎಸ್ಸಿ, ಎಸ್ಟಿ ಕಾಯ್ದೆ, ಪೋಸ್ಕೋ ಕಾಯ್ದೆ, ಅತ್ಯಾಚಾರ ಬೆದರಿಕೆ, ಆನ್ಲೈನ್ ಕಿರುಕುಳ, ಲೈಂಗಿಕ ಕಿರುಕುಳ ಇತ್ಯಾದಿ ಹಲವು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದರು. ಆದರೆ,
ಇದಾಗಿ ಕೇವಲ ಹತ್ತೇ ದಿನಗಳೊಳಗೆ ಈತನಿಗೆ 3 ವಾರಗಳ ಜಾಮೀನು ಸಿಕ್ಕಿದೆ. ಇದಕ್ಕೆ ಹೋಲಿಸಿದರೆ,
ಉತ್ತರ ಪ್ರದೇಶದ ಮುಬಾರಕ್ ಅಲಿ ಇಂಥ ತಪ್ಪನ್ನೇನೂ ಮಾಡಿರಲಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಿಗೆ ಬೆದರಿಕೆಯ ಇಮೇಲ್ ಸಂದೇಶ ರವಾನಿಸಿದ್ದಾನೆ ಎಂಬ ಆರೋಪದಲ್ಲಿ ಈತನನ್ನು 2024 ಮಾರ್ಚ್ 20ರಂದು ಬಂಧಿಸಲಾಗಿತ್ತು. ಪೊಲೀಸ್ ಮಾಹಿತಿದಾರ ಜನ್ನತುನ್ನಿಸಾ ಅವರೊಂದಿಗೆ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ನಿಂದನಾತ್ಮಕ ಇಮೇಲ್ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಈತನ ಮೇಲಿತ್ತು. ಈತನ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಸಮುದಾಯಗಳ ನಡುವೆ ಶತ್ರುತ್ವ, ಸಾರ್ವಜನಿಕ ಶಾಂತಿಗೆ ಭಂಗ, ವಂಚನೆ, ನಕಲಿ ದಾಖಲೆಗಳು, ಕಂಪ್ಯೂಟರ್ ಸಂಬಂಧಿತ ಅಪರಾಧಗಳ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಹೀಗೆ ಬಂಧನದ ಎರಡೂವರೆ ವರ್ಷಗಳ ಬಳಿಕ ಕಳೆದ ವಾರ ಈತನಿಗೆ ಜಾಮೀನು ಸಿಕ್ಕಿದೆ. ಈ ಜಾಮೀನಿಗೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಪಹಲ್ ಕೊಟ್ಟಿರುವ ಕಾರಣವೂ ಗಮನಾರ್ಹ-
‘ವಿಚಾರಣೆ ನಿಧಾನವಾಗಿ ನಡೆಯುತ್ತಿದೆ, 30 ಸಾಕ್ಷಿಗಳ ಪೈಕಿ ಈ ಎರಡೂವರೆ ವರ್ಷಗಳಲ್ಲಿ ಕೇವಲ 6 ಮಂದಿಯ ವಿಚಾರಣೆಯನ್ನು ಮಾತ್ರ ನಡೆಸಲಾಗಿದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇನ್ನು,
ಉಮರ್ ಖಾಲಿದ್ ವಿಷಯವಂತೂ ಹೇಳಬೇಕಾಗಿಲ್ಲ. 11 ವಾಲ್ಯೂಮ್ಗಳ 17 ಸಾವಿರ ಪುಟಗಳುಳ್ಳ ಚಾರ್ಜ್ಶೀಟನ್ನು ಪೊಲೀಸರು ಸಲ್ಲಿಸಿದ್ದಾರೆ. ಉಮರ್ ವಿರುದ್ಧ ದೆಹಲಿ ಗಲಭೆಯ ಸಂಚಿನ ಆರೋಪವನ್ನು ಹೊರಿಸಲಾಗಿದೆ. ಯುಎಪಿಎ ಪ್ರಕರಣ ದಾಖಲಿಸಲಾಗಿದೆ. ಆದರೆ ಈವರೆಗೂ ವಿಚಾರಣೆಯೇ ನಡೆದಿಲ್ಲ. ಕಳೆದ ಆರು ವರ್ಷಗಳಲ್ಲಿ ಉಮರ್ ಖಾಲಿದ್ ಹಲವು ಬಾರಿ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಮಾರ್ಚ್ 2022, 2024 ಮತ್ತು 2026.. ಹೀಗೆ ಮೂರು ಬಾರಿ ವಿಚಾರಣಾ ನ್ಯಾಯಾಲಯವು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. 2022 ಅಕ್ಟೋಬರ್ನಲ್ಲಿ ಮತ್ತು 2025 ಸೆಪ್ಟೆಂಬರ್ನಲ್ಲಿ ದೆಹಲಿ ಹೈಕೋರ್ಟ್ ಇವರಿಗೆ ಜಾಮೀನು ನೀಡಲು ನಿರಾಕರಿಸಿದೆ. 2026 ಜನವರಿ 5ರಂದು ಸುಪ್ರೀಮ್ ಕೋರ್ಟ್ ಕೂಡಾ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದೆ. 2026 ಎಪ್ರಿಲ್ನಲ್ಲಿ ಉಮರ್ ಖಾಲಿದ್ ಸುಪ್ರೀಮ್ಗೆ ರಿವ್ಯೂ ಪಿಟಿಷನ್ ಹಾಕಿದರು. ಅದನ್ನೂ ಸುಪ್ರೀಮ್ ಕೋರ್ಟ್ ತಿರಸ್ಕರಿಸಿದೆ. 2026 ಜೂನ್ ಮತ್ತು ಜುಲೈಯಲ್ಲಿ ಅವರು ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಕೋರಿಕೆ ಸಲ್ಲಿಸಿದರು. ಅದೂ ಪುರಸ್ಕೃತವಾಗಲಿಲ್ಲ. ಸುಪ್ರೀಮ್ ಕೋರ್ಟ್ನ ತೀರ್ಪನ್ನು ಉಲ್ಲೇಖಿಸುತ್ತಾ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ. 2026 ಜನವರಿಯಲ್ಲಿ ಜಾಮೀನು ನಿರಾಕರಿಸುತ್ತಾ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪಂತೂ ಹಲವು ನ್ಯಾಯಾಂಗ ತಜ್ಞರನ್ನೇ ಬೆರಗುಗೊಳಿಸಿದೆ. ಅದೇನೆಂದರೆ,
‘ಸಾಕ್ಷಿಗಳ ವಿಚಾರಣೆ ಮುಗಿದ ನಂತರ ಅಥವಾ ಒಂದು ವರ್ಷದ ನಂತರ ಮತ್ತೆ ಜಾಮೀನು ಅರ್ಜಿ ಹಾಕಬಹುದು. ಅಲ್ಲಿವರೆಗೆ ಜಾಮೀನು ಕೋರಬಾರದು.’
ಈ ಮೂರೂ ಪ್ರಕರಣಗಳನ್ನು ಜೋಡಿಸಿಟ್ಟು ನೋಡಿದರೆ, ಒಂದಂತೂ ಸ್ಪಷ್ಟವಾಗುತ್ತದೆ. ಸರಕಾರ ಧರ್ಮದ್ವೇಷಿಯಾಗಿದ್ದರೆ ಸಾಮಾನ್ಯ ಆರೋಪಿಯನ್ನೂ ಮಹಾನ್ ಅಪರಾಧಿಯಂತೆ ಷರಾ ಬರೆಯಲು ಸಾಧ್ಯವಿದೆ. ಅದು ಹೇಗೆಂದರೆ, ಪ್ರಭುತ್ವ ಪೊಲೀಸ್ ಇಲಾಖೆಯನ್ನು ಪೂರಕವಾಗಿ ಬಳಸಿಕೊಳ್ಳುತ್ತದೆ. ಇಲ್ಲಸಲ್ಲದ ಮತ್ತು ಕಲ್ಪಿತ ಕತೆಗಳನ್ನು ಆರೋಪಿಯ ಮೇಲೆ ಕಟ್ಟಲಾಗುತ್ತದೆ. ಹತ್ತು-ಹಲವು ಆಘಾತಕಾರಿ ಸೆಕ್ಷನ್ಗಳನ್ನು ಆರೋಪಿಯ ಮೇಲೆ ಹೇರಲಾಗುತ್ತದೆ. ಸಾಕ್ಷಿಗಳ ದಂಡನ್ನೇ ಹೆಸರಿಸಲಾಗುತ್ತದೆ. ಸಾವಿರಾರು ಪುಟಗಳ ಚಾರ್ಜ್ಶೀಟನ್ನೇ ಸಲ್ಲಿಸಲಾಗುತ್ತದೆ. ಇವುಗಳ ಪರಿಶೀಲನೆಯೇ ನ್ಯಾಯಾಧೀಶರ ಪಾಲಿಗೆ ಸವಾಲಾಗುವಂತೆ ನೋಡಿಕೊಳ್ಳಲಾಗುತ್ತದೆ. ಸಾಕ್ಷಿಗಳ ವಿಚಾರಣೆಯನ್ನು ವಿಳಂಬಗೊಳಿಸುತ್ತಾ ಹೋಗುವುದು ಮತ್ತು ಜಾಮೀನು ಅರ್ಜಿಯನ್ನು ಈ ಸಾಕ್ಷಿ ವಿಚಾರಣೆಯ ನೆಪದಲ್ಲಿ ವಿರೋಧಿಸುತ್ತಾ ಹೋಗುವ ತಂತ್ರ ಹೆಣೆಯಲಾಗುತ್ತದೆ. ನ್ಯಾಯಾಧೀಶರು ಲಭ್ಯ ಸಾಕ್ಷಿಗಳ ಮೇಲೆ ತೀರ್ಪು ನೀಡಲು ಸಾಧ್ಯವೇ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ ಎಂಬುದು ಪ್ರಭುತ್ವಕ್ಕೆ ಗೊತ್ತಿದೆ. ಆದ್ದರಿಂದಲೇ,
ನ್ಯಾಯಾಲಯಗಳನ್ನೇ ದಾರಿ ತಪ್ಪಿಸುವ ರೀತಿಯಲ್ಲಿ ಪ್ರಭುತ್ವ ಬಳಸು ದಾರಿಯನ್ನು ಆರಿಸಿಕೊಳ್ಳುತ್ತದೆ. ತನಗಾಗದವರ ಮೇಲೆ ಕಠಿಣ ಸೆಕ್ಷನ್ಗಳನ್ನು ದಾಖಲಿಸಿ ಸಾಕ್ಷಿ ವಿಚಾರಣೆಯ ನೆಪದಲ್ಲಿ ಜೈಲ್ಲಲ್ಲಿ ಕೊಳೆಯುವಂತೆ ಮಾಡುವುದು ಮತ್ತು ತನ್ನ ಪರವಾಗಿರುವ ಆರೋಪಿಗೆ ಜಾಮೀನು ಸಿಗುವ ಎಲ್ಲಾ ದಾರಿಗಳು ಮುಕ್ತವಾಗಿರುವಂತೆ ನೋಡಿಕೊಳ್ಳುವುದನ್ನು ಮಾಡುತ್ತದೆ.
ಉಮರ್ ಖಾಲಿದ್ ಕಳೆದ 6 ವರ್ಷಗಳಿಂದ ವಿಚಾರಣೆಯೂ ಇಲ್ಲದೇ ಜೈಲ್ಲಲ್ಲಿ ಕೊಳೆಯುತ್ತಿರುವುದರ ಹಿಂದೆ ಪ್ರಭುತ್ವದ ಸಂಚಿದೆ. ಅವರ ಮೇಲೆ ಯುಎಪಿಎ ಪ್ರಕರಣ ದಾಖಲಿಸಿರುವುದಕ್ಕೂ ನಿರ್ದಿಷ್ಟ ಉದ್ದೇಶವಿದೆ. ವಿಚಾರಣೆಯಿಲ್ಲದೇ ಮತ್ತು ಜಾಮೀನು ಸಿಗುವುದಕ್ಕೆ ಅವಕಾಶವೇ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಇಂಥದ್ದೊಂದು ಕಾಯ್ದೆಯನ್ನು ಅವರ ಮೇಲೆ ಹೇರಲಾಗಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಒಂದುವೇಳೆ, ವಿಚಾರಣೆ ನಡೆದರೆ ಬಣ್ಣ ಬಯಲಾಗುತ್ತದೆ. ತಾವು ಹೊರಿಸಿದ ಆರೋಪಗಳಿಗೆ ನಿರ್ದಿಷ್ಟ ದಾಖಲೆಯನ್ನು ಪೊಲೀಸರು ಒದಗಿಸಬೇಕಾಗುತ್ತದೆ. ಅದು ಕಷ್ಟಸಾಧ್ಯ ಎಂಬ ಅರಿವಿರುವುದರಿಂದಲೇ ವಿಚಾರಣೆ ನಡೆಯದಂತೆ ನೋಡಿಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ ಎಂಬ ಅಭಿಪ್ರಾಯ ಇದೆ. ಅಂದಹಾಗೆ,
ಆನ್ ಕ್ಯಾಮರಾದ ಮುಂದೆ ಅಪರಾಧವನ್ನು ಒಪ್ಪಿಕೊಂಡ ವ್ಯಕ್ತಿ ಹತ್ತೇ ದಿನಗಳೊಳಗೆ ಜಾಮೀನು ಪಡೆದು ಹೊರಬಂದಿರುವಾಗ, ಹೀಗೆ ಮಾಡದ ಮತ್ತು ಬೆದರಿಕೆಯ ಇಮೇಲ್ ಕಳುಹಿಸಿದ ಆರೋಪಿಗೆ ಜೈಲಿನಿಂದ ಹೊರಬರುವುದಕ್ಕೆ ಎರಡೂವರೆ ವರ್ಷ ಬೇಕಾಗಿದೆ. ಉಮರ್ ಖಾಲಿದ್ಗೆ ಇನ್ನೂ ಈ ಅವಕಾಶ ಲಭ್ಯವಾಗಿಲ್ಲ. ನ್ಯಾಯ ಪ್ರಕ್ರಿಯೆಯ ಈ ವಿಧಾನವು ಜನಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ಅಸಮಾಧಾನ ಹುಟ್ಟಿಸುವುದಂತೂ ಸಹಜ. ಪ್ರಭುತ್ವದ ಸಂಚನ್ನು ಅರಿತುಕೊಂಡು ನ್ಯಾಯಾಲಯಗಳು ಈ ವಿಷಯದಲ್ಲಿ ಕಾರ್ಯಪ್ರವೃತ್ತವಾಗಬೇಕಾದ ಅಗತ್ಯವಿದೆ.












