ಶಾಲಿಮಾರ್ ಬಾಗ್‌ ಮದೀನಾ ಮಸೀದಿ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ: ಎಂಸಿಡಿಯ ಕೋಮುವಾದಿ ಮುಖ ಅನಾವರಣ – ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಮಲಿಕ್ ಮೊಹ್ತಸಿಮ್ ಖಾನ್

0
224

ಸನ್ಮಾರ್ಗ ವಾರ್ತೆ

ನವದೆಹಲಿ: ದೆಹಲಿಯ ಶಾಲಿಮಾರ್ ಬಾಗ್‌ನಲ್ಲಿರುವ ಮದೀನಾ ಮಸೀದಿ ಹಾಗೂ ಅದರ ಪಕ್ಕದ ಕಟ್ಟಡಗಳ ವಿರುದ್ಧ ತಡರಾತ್ರಿ ನಡೆಸಲಾದ ಬುಲ್ಡೋಜರ್ ಕಾರ್ಯಾಚರಣೆಯನ್ನು ಜಮಾಅತೆ ಇಸ್ಲಾಮೀ ಹಿಂದ್ (JIH) ಉಪಾಧ್ಯಕ್ಷ ಮಲಿಕ್ ಮೊಹ್ತಸಿಮ್ ಖಾನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕಾರ್ಯಾಚರಣೆಯು ದೆಹಲಿ ಮಹಾನಗರ ಪಾಲಿಕೆಯ (MCD) ಕೋಮುವಾದಿ ಮನೋಭಾವವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ. ಮಸೀದಿಗೆ ಸಂಬಂಧಿಸಿದ ಪ್ರಕರಣವು ನ್ಯಾಯಾಂಗ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಈ ಕಾರ್ಯಾಚರಣೆಯ ಕುರಿತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷರು ಹೀಗೆ ತಿಳಿಸಿದ್ದಾರೆ:

“ಶಾಲಿಮಾರ್ ಬಾಗ್‌ನಲ್ಲಿ ನಡೆದ ಧ್ವಂಸ ಕಾರ್ಯಾಚರಣೆಯ ಸಂದರ್ಭಗಳು, ಎಂಸಿಡಿಯು ಕೋಮುವಾದಿ ಮನೋಭಾವದಿಂದ ವರ್ತಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಸಂವಿಧಾನಾತ್ಮಕವಾಗಿ ನಿಗದಿಪಡಿಸಲಾದ ತನ್ನ ಕರ್ತವ್ಯವನ್ನು ನ್ಯಾಯಸಮ್ಮತವಾಗಿ ಮತ್ತು ಪಕ್ಷಪಾತರಹಿತವಾಗಿ ನಿರ್ವಹಿಸುವ ಬದಲು ಎಂಸಿಡಿಯು ಅದರಿಂದ ವಿಚಲಿತವಾಗಿದೆ.

ಸೆಪ್ಟೆಂಬರ್ 15ರಂದು ಎಂಸಿಡಿ ಅಪೀಲು ನ್ಯಾಯಮಂಡಳಿಯು ಮುಂದಿನ ವಿಚಾರಣೆಯ ದಿನಾಂಕದವರೆಗೆ ಮಸೀದಿಯ ನೆಲ ಅಂತಸ್ತಿನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿತ್ತು. ಸೆಪ್ಟೆಂಬರ್ 21ರಂದು ವಕೀಲರು ಕೆಲಸದಿಂದ ದೂರ ಉಳಿದಿದ್ದ ಕಾರಣ ಪ್ರಕರಣದ ವಿಚಾರಣೆ ನಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ನ್ಯಾಯಮಂಡಳಿಯು ಯಾವುದೇ ಮಧ್ಯಂತರ ಆದೇಶಗಳಿದ್ದರೆ ಅವು ಡಿಸೆಂಬರ್ 3ರವರೆಗೆ ಮುಂದುವರಿಯುತ್ತವೆ ಎಂದು ನಿರ್ದೇಶಿಸಿತು.

ಮದೀನಾ ಮಸೀದಿಗೆ ಸಂಬಂಧಿಸಿದ ಪ್ರಕರಣ ನ್ಯಾಯಮಂಡಳಿಯ ಮುಂದೆ ವಿಚಾರಣೆಯಲ್ಲಿದೆ ಎಂಬುದು ಎಂಸಿಡಿಗೆ ತಿಳಿದಿದ್ದರೂ, ಅದು ಧ್ವಂಸ ಕಾರ್ಯಾಚರಣೆ ನಡೆಸಿದ್ದೇಕೆ? ಧ್ವಂಸಕ್ಕೆ ಆದೇಶ ನೀಡಿದವರು ಯಾರು? ಹಾಗೂ ಅದನ್ನು ತಡರಾತ್ರಿ, ಗುಪ್ತವಾಗಿ ನಡೆಸಿದ್ದೇಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಮುಂದುವರಿದು ಮಲಿಕ್ ಮೊಹ್ತಸಿಮ್ ಖಾನ್ ಅವರು, “ಸೆಪ್ಟೆಂಬರ್ 22–23ರ ರಾತ್ರಿ ಮಸೀದಿಯ ಮೇಲ್ಭಾಗಗಳನ್ನು ಧ್ವಂಸಗೊಳಿಸಿರುವುದು, ಪ್ರಕರಣದ ಕಾನೂನು ಪ್ರಕ್ರಿಯೆ ಇನ್ನೂ ಬಾಕಿಯಿರುವ ಸಂದರ್ಭದಲ್ಲಿ, ಈ ಕ್ರಮದ ಸಮಯ ಮತ್ತು ವಿಧಾನಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಸೆಪ್ಟೆಂಬರ್ 3, 2026ರಂದು ಹೊರಡಿಸಲಾದ ಧ್ವಂಸ ಆದೇಶದ ವ್ಯಾಪ್ತಿಗೆ ನಿಖರವಾಗಿ ಯಾವ ಭಾಗಗಳು ಒಳಪಟ್ಟಿದ್ದವು? ವಾಸ್ತವವಾಗಿ ಯಾವ ಭಾಗಗಳನ್ನು ಧ್ವಂಸಗೊಳಿಸಲಾಯಿತು? ನ್ಯಾಯಮಂಡಳಿಯ ಮುಂದುವರಿದ ಮಧ್ಯಂತರ ನಿರ್ದೇಶನಗಳಿಗೆ ಅನುಗುಣವಾಗಿಯೇ ಈ ಕಾರ್ಯಾಚರಣೆ ನಡೆಸಲಾಗಿತ್ತೇ? ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು.

ಧ್ವಂಸ ಕಾರ್ಯಾಚರಣೆಗೆ ಮುನ್ನ ಕುರಾನ್ ಹಾಗೂ ಇತರ ಧಾರ್ಮಿಕ ಸಾಮಗ್ರಿಗಳನ್ನು ತೆರವುಗೊಳಿಸಲು ಸಾಕಷ್ಟು ಸಮಯ ನೀಡಲಾಗಲಿಲ್ಲ ಎಂದು ಮಸೀದಿ ಪ್ರತಿನಿಧಿಗಳು ಆರೋಪಿಸಿದ್ದಾರೆ. ಈ ಆರೋಪ ಅತ್ಯಂತ ಗಂಭೀರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅನ್ವಯಿಸುವ ನಿಬಂಧನೆಗಳಡಿ ಪ್ರಕರಣ ದಾಖಲಿಸಬೇಕು” ಎಂದು ಅವರು ಹೇಳಿದ್ದಾರೆ.

“ಎಂಸಿಡಿಯ ಕಾನೂನುಬಾಹಿರ ಕ್ರಮಗಳ ಹೊರತಾಗಿಯೂ, ದೆಹಲಿಯ ಮುಸ್ಲಿಮರು ತಮ್ಮ ಧರ್ಮವನ್ನು ಆಚರಿಸುವ, ಧಾರ್ಮಿಕ ಗುರುತು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವ ಸಂವಿಧಾನಾತ್ಮಕ ಹಕ್ಕುಗಳಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ.

ಒಂದು ಆರಾಧನಾ ಸ್ಥಳವನ್ನು ಧ್ವಂಸಗೊಳಿಸುವುದು ಎಂದಿಗೂ ನ್ಯಾಯಸಮ್ಮತ ಪ್ರಕ್ರಿಯೆಗೆ ಅಥವಾ ಕಾನೂನುಬದ್ಧವಾಗಿ ವಿವಾದವನ್ನು ಪರಿಹರಿಸುವುದಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ” ಎಂದು ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಮಲಿಕ್ ಮೊಹ್ತಸಿಮ್ ಖಾನ್ ತಿಳಿಸಿದ್ದಾರೆ.