ಬೀದರ್ | ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)ʼ ಸೀರತ್ ಅಭಿಯಾನದ ಪ್ರಯುಕ್ತ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

0
232

ಸನ್ಮಾರ್ಗ ವಾರ್ತೆ

ಬೀದರ್: ಜಮಾಅತೆ ಇಸ್ಲಾಮಿ ಹಿಂದ್ ಬೀದರ್ ಘಟಕವು ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ಪ್ರೌಢಶಾಲಾ ವಿಭಾಗದಲ್ಲಿ ಹಾಜಿ ಮುಹಮ್ಮದ್ ಸುಲ್ತಾನ್ ಮೆಮೊರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ರುಕ್ಸಾನಾ ಬೇಗಂ ಹಾಗೂ ಕಾಲೇಜು ವಿಭಾಗದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಅಫ್ಸಾನ್ ಪರ್ವೀನ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಕ್ರಾಂತಿಯ ಹರಿಕಾರ ಪ್ರವಾದಿ ಮುಹಮ್ಮದ್(ಸ) ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ಕ್ರಾಂತಿಯ ಹರಿಕಾರ ಪ್ರವಾದಿ ಮುಹಮ್ಮದ್(ಸ) ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರೌಢಶಾಲಾ ವಿಭಾಗದಲ್ಲಿ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಭಾಗ್ಯವತಿ ಹನುಮಂತ ದ್ವಿತೀಯ, ಕಮಠಾಣದ ರೋಶನ್ ಪಬ್ಲಿಕ್ ಶಾಲೆಯ ಆಫ್ರಿನ್ ಮುಹಮ್ಮದ್ ಅಕ್ರಂ ತೃತೀಯ, ಕಾಲೇಜು ವಿಭಾಗದಲ್ಲಿ ಕರ್ನಾಟಕ ಪದವಿ ಕಾಲೇಜಿನ ಭುವನೇಶ್ವರಿ ಕಾವಳೆ ದ್ವಿತೀಯ ಹಾಗೂ ಸಾಯಿ ಸ್ಫೂರ್ತಿ ಕಾಲೇಜಿನ ಮೇಘಾ ಶಿವರಾಜ ತೃತೀಯ ಬಹುಮಾನ ಪಡೆದಿದ್ದಾರೆ.

ನಗರದ ಡಿಸೆಂಟ್ ಫಂಕ್ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ತಲಾ ರೂ. 5 ಸಾವಿರ, ರೂ. 3 ಸಾವಿರ ಮತ್ತು ರೂ. 2 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರಬಂಧ ಸ್ಪರ್ಧೆ ವಿಜೇತರಲ್ಲಿ ಒಬ್ಬರಾದ ಭುವನೇಶ್ವರಿ ಕಾವಳೆ ರವರು ಜಮಾಅತೆ ಇಸ್ಲಾಮೀ ಹಿಂಗೆ ಕೃತಜ್ಞತೆ ಸಲ್ಲಿಸಿದರು. ಪ್ರಬಂಧ ಸ್ಪರ್ಧೆಯಿಂದಾಗಿ, “ಇಸ್ಲಾಮಿನ ಬೋಧನೆಗಳು ಮತ್ತು ತಮ್ಮ ಆದರ್ಶಗಳ ಮೂಲಕ ಪೈಗಂಬರ್‌ ಮುಹಮ್ಮದ್‌ರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹೇಗೆ ಬದಲಾವಣೆ ತಂದರು ಎನ್ನುವುದನ್ನು ಅಧ್ಯಯನ ಮಾಡಲು ಸಾಧ್ಯವಾಯಿತು. ಇದಕ್ಕಾಗಿ ಸ್ಪರ್ಧೆ ಸಂಘಟಿಸಿದ ಜಮಾಅತೆ ಇಸ್ಲಾಮಿ ಹಿಂದ್‍ಗೆ ಕೃತಜ್ಞತೆ ಸಲ್ಲಿಸುವೆ” ಎಂದು ಹೇಳಿದರು.

ಇಸ್ಲಾಮ್‌ ಧರ್ಮ, ಪ್ರವಾದಿ ಮುಹಮ್ಮದರು(ಸ) ಹಾಗೂ ಪವಿತ್ರ ಕುರ್‌ಆನಿನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಈ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಎಂದು ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝ್ಝಂ ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಾದ ಮುಹಮ್ಮದ್ ಆರಿಫುದ್ದೀನ್, ಮೌಲಾನಾ ಸೈಯದ್ ಸಿರಾಜುದ್ದೀನ್ ನಿಜಾಮಿ, ಮೌಲಾನಾ ಮುಹಮ್ಮದ್ ಮುನೀಸ್ ಕಿರ್ಮಾನಿ, ಮುಹಮ್ಮದ್ ಸಲಾವುದ್ದೀನ್ ಫರ್ಹಾನ್, ಸೈಯದ್ ಅಝ್ಹಾನ್ ಅಹಮ್ಮದ್, ಡಾ. ಬುಶ್ರಾ ಐಮನ್, ಆಜಂ ಪಾಶಾ, ರಫೀಕ್ ಅಹಮ್ಮದ್ ಗಾದಗಿ, ಮುಜ್ತಬಾ ಖಾನ್, ಹೈದರ್ ಅಲಿ ಶಾಕಿರ್, ಅಸ್ಲಂ ಪಾಷಾ ಖಾದ್ರಿ, ಮುಹಮ್ಮದ್ ಷಫಿಉದ್ದೀನ್, ಎಂಜಿನಿಯರ್ ಸೈಯದ್ ಅತಿಕುಲ್ಲಾ, ಮುಹಮ್ಮದ್ ಆರಿಫುದ್ದೀನ್, ಮುಹಮ್ಮದ್ ಸಲಾಹುದ್ದೀನ್ ಮತ್ತಿತರರು ಹಾಜರಿದ್ದರು.