ಸನ್ಮಾರ್ಗ ವಾರ್ತೆ
ಹೊಸ ದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರನ್ನು ಸರಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎನ್ನಲಾದ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್ (JIH) ನ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ಸಲೀಮ್ ಇಂಜಿನಿಯರ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗದ (ECI) ಕಾರ್ಯವೈಖರಿಯ ಕುರಿತು ಬಂದಿರುವ ವರದಿಗಳು ಈ ಪ್ರಮುಖ ಸಂಸ್ಥೆಯ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ಸಾಂವಿಧಾನಿಕ ಕಾರ್ಯವೈಖರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಅವರು ಹೇಳಿದರು.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ , “ಮತದಾರರ ನೋಂದಣಿ, ಹೆಸರುಗಳ ರದ್ಧತಿ ಮತ್ತು ಸ್ಥಳ ಬದಲಾವಣೆ, ಮತದಾರರ ಡೇಟಾಬೇಸ್, ನಮೂನೆ 6 ಮತ್ತು ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಗಂಭೀರ ವಿಷಯಗಳ ಕುರಿತು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆಗಳನ್ನು ಎತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ (IE) ತನಿಖೆಯಿಂದ ಬಹಿರಂಗಗೊಂಡಿದೆ. ಪ್ರಮುಖ ನಿರ್ಧಾರಗಳಿಂದ ಅವರನ್ನು ದೂರವಿಡಲಾಗಿದೆ ಎಂದು ವರದಿಯಾಗಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. 1995ರ ಟಿ.ಎನ್. ಶೇಷನ್ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಚುನಾವಣಾ ಆಯುಕ್ತರು ಬಹುಸದಸ್ಯರ ಸಮಿತಿ ಮತ್ತು ಮುಖ್ಯ ಚುನಾವಣಾ ಆಯುಕ್ತರು ಸಮಾನರಲ್ಲಿ ಮೊದಲಿಗರು ಎಂದು ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗವು ತನ್ನ ಸ್ವಂತ ವೈಯಕ್ತಿಕ ಸಂಸ್ಥೆಯಂತೆ ಸಿಇಒ (CEC) ವರ್ತಿಸಲು ಸಾಧ್ಯವಿಲ್ಲ. ಆರೋಪಗಳು ಸಾಬೀತಾದರೆ, ಸ್ವತಂತ್ರ ತನಿಖೆ ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.” ಎಂದು ತಿಳಿಸಿದ್ದಾರೆ.
ಪ್ರೊ. ಸಲೀಮ್ ಇಂಜಿನಿಯರ್ ರವರು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯ ಕುರಿತು ಮಾತನಾಡುತ್ತಾ, “ಅರ್ಹ ನಾಗರಿಕರಿಗೆ ಮತದಾರರಾಗುವುದನ್ನು ಪ್ರಜಾಪ್ರಭುತ್ವವು ಸುಲಭಗೊಳಿಸಬೇಕೇ ಹೊರತು ಕಷ್ಟಕರವಾಗಿಸಬಾರದು. ಅನಗತ್ಯ ಅಡೆತಡೆಗಳಿಲ್ಲದೆ ಅರ್ಹ ನಾಗರಿಕರು ಮತದಾರರ ಪಟ್ಟಿಯನ್ನು ಪ್ರವೇಶಿಸಿದಾಗ ಮಾತ್ರ ಮತದಾನದ ಹಕ್ಕು ಅರ್ಥಪೂರ್ಣವಾಗಿರುತ್ತದೆ. ಚುನಾವಣಾ ಆಯೋಗವು ಸಂವಿಧಾನ ಮತ್ತು ಭಾರತದ ಜನರಿಗೆ ಸೇರಿದ್ದು, ಯಾವುದೇ ವೈಯಕ್ತಿಕ ಹುದ್ದೆದಾರರಿಗೆ ಸೇರಿದ್ದಲ್ಲ. ನಾಗರಿಕರಿಗೆ ಮತದಾನದ ಮೂಲಭೂತ ಹಕ್ಕನ್ನು ವಂಚಿಸುವುದು ಕೇವಲ ಆಡಳಿತಾತ್ಮಕ ಲೋಪವಲ್ಲ; ಇದು ದೇಶ ಮತ್ತು ಅದರ ಜನರಿಗೆ ಮಾಡಿದ ಗಂಭೀರ ದ್ರೋಹವಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರು ಕಂಡುಬಂದವರ ವಿರುದ್ಧ ಕಾನೂನಿನನ್ವಯ ಕಠಿಣ ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿಯನ್ನು ರಕ್ಷಿಸುವುದು ಎಂದರೆ ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವನ್ನು ರಕ್ಷಿಸುವುದಾಗಿದೆ.” ಎಂದು ಹೇಳಿದರು.












