ಸನ್ಮಾರ್ಗ ವಾರ್ತೆ
ಗುವಾಹಟಿ: ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸಚಿವ ಸಂಪುಟವು, ಪರವಾನಗಿ ಪಡೆದ ಮುಸ್ಲಿಂ ರಿಜಿಸ್ಟ್ರಾರ್ಗಳಾದ ‘ಕಾಜಿ’ಗಳನ್ನು ದೀರ್ಘಕಾಲದಿಂದ ಅವಲಂಬಿಸಿದ್ದ ವ್ಯವಸ್ಥೆಯನ್ನು ಬದಲಾಯಿಸಿ, ರಾಜ್ಯಾದ್ಯಂತ ಮುಸ್ಲಿಂ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸುವ ಹೊಸ ನಿಯಮಗಳಿಗೆ ಅನುಮೋದನೆ ನೀಡಿದೆ. ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರವನ್ನು ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಪ್ರಕಟಿಸಿದರು.
“ಇನ್ನು ಮುಂದೆ ಮುಸ್ಲಿಂ ವಿವಾಹಗಳನ್ನು ರಿಜಿಸ್ಟ್ರಾರ್ಗಳು ನೋಂದಾಯಿಸಲಿದ್ದಾರೆ” ಎಂದು ಮುಖ್ಯಮಂತ್ರಿ ಹೇಮಂತ್ ಹೇಳಿದರು. ಅರ್ಜಿಗಳ ಸಂಖ್ಯೆ ಹೆಚ್ಚಾದರೆ, ಸಾರ್ವಜನಿಕರಿಗೆ ಯಾವುದೇ ವಿಳಂಬ ಮತ್ತು ತೊಂದರೆ ಉಂಟಾಗದಂತೆ ತಡೆಯಲು ಸರ್ಕಾರವು ಹೆಚ್ಚುವರಿ ಅಧಿಕಾರಿಗಳನ್ನು ರಿಜಿಸ್ಟ್ರಾರ್ಗಳಾಗಿ ನೇಮಿಸಲಿದೆ ಎಂದು ತಿಳಿದರು.
ಮುಸ್ಲಿಂ ವಿವಾಹಗಳನ್ನು ನೋಂದಾಯಿಸುವುದರಿಂದ ಕಾಝಿಗಳನ್ನು ಹಿಂದಿನ ಸರ್ಕಾರಿ ನಿರ್ಧಾರವೊಂದು ತಡೆದಿತ್ತಾದರೂ, ಪರ್ಯಾಯ ವ್ಯವಸ್ಥೆಯನ್ನು ಸೂಚಿಸಿರಲಿಲ್ಲ ಎಂದು ಹೇಮಂತ್ ಶರ್ಮಾ ಗಮನಸೆಳೆದರು. ನೋಂದಣಿಯನ್ನು ಸಂಪೂರ್ಣವಾಗಿ ರಾಜ್ಯದ ಆಡಳಿತ ಯಂತ್ರದ ಅಡಿಗೆ ತರುವ ಮೂಲಕ ಹೊಸ ನಿಯಮಗಳು ಆ ಕೊರತೆಯನ್ನು ನೀಗಿಸುತ್ತವೆ ಎನ್ನಲಾಗಿದೆ.
2026ರ ನಿಯಮಗಳು ‘ಅಸ್ಸಾಂ ಕಡ್ಡಾಯ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ, 2024’ (Assam Compulsory Registration of Muslim Marriages and Divorces Act, 2024) ಅನ್ನು ಜಾರಿಗೆ ತರುತ್ತವೆ ಮತ್ತು 1935ರ ಹಿಂದಿನ ಕಾನೂನನ್ನು ಬದಲಾಯಿಸುತ್ತವೆ. ಹಳೆಯ ‘ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ’ಯು ಸ್ವಯಂಪ್ರೇರಿತ ನೋಂದಣಿಗೆ ಅವಕಾಶ ನೀಡಿತ್ತು, ಆದರೂ 2010ರ ತಿದ್ದುಪಡಿಯು ನೋಂದಣಿಯನ್ನು ಕಡ್ಡಾಯಗೊಳಿಸಿತ್ತು.
2024ರ ಕಾಯ್ದೆಯು ಕಠಿಣ ಅರ್ಹತಾ ಷರತ್ತುಗಳನ್ನು ಪರಿಚಯಿಸಿದೆ. ಇದು ಅಪ್ರಾಪ್ತರ ಮದುವೆಗೆ ಅವಕಾಶ ನೀಡುವ ಯಾವುದೇ ನಿಬಂಧನೆಯನ್ನು ತೆಗೆದುಹಾಕುತ್ತದೆ. ಕಾನೂನಿನ ಪ್ರಕಾರ, ಮದುವೆಯ ಸಮಯದಲ್ಲಿ ಮಹಿಳೆಗೆ ಕನಿಷ್ಠ 18 ವರ್ಷ ಮತ್ತು ಪುರುಷನಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
ನೋಂದಣಿ ಪ್ರಕ್ರಿಯೆಗೆ ಈಗ ಅರ್ಜಿದಾರರು ಗುರುತು, ವಯಸ್ಸು ಮತ್ತು ನಿವಾಸದ ಪ್ರಮಾಣಪತ್ರದ ಜೊತೆಗೆ ಇಬ್ಬರ ಘೋಷಣೆಗಳನ್ನು ಸಲ್ಲಿಸುವ ಅಗತ್ಯವಿದೆ. ಕಾನೂನು ಸಾರ್ವಜನಿಕ ಸೂಚನೆಯ ಅವಶ್ಯಕತೆ ಮತ್ತು ನೋಂದಣಿಯನ್ನು ಅಂತಿಮಗೊಳಿಸುವ ಮೊದಲು 30 ದಿನಗಳ ಆಕ್ಷೇಪಣಾ ಅವಧಿಯನ್ನು ಸಹ ಒಳಗೊಂಡಿದೆ. ಮುಕ್ತ ಒಪ್ಪಿಗೆ ಮತ್ತು ನಿಷೇಧಿತ ಸಂಬಂಧಗಳು ಹೆಚ್ಚುವರಿ ಷರತ್ತುಗಳಲ್ಲಿ ಸೇರಿವೆ.
ಈ ಬದಲಾವಣೆಯು ಮುಸ್ಲಿಂ ವಿವಾಹ ನೋಂದಣಿಯನ್ನು ಅರೆ-ಔಪಚಾರಿಕ, ಸಮುದಾಯ-ಆಧಾರಿತ ಪ್ರಕ್ರಿಯೆಯಿಂದ ಔಪಚಾರಿಕ ರಾಜ್ಯ ಕಾರ್ಯವನ್ನಾಗಿ ಬದಲಾಯಿಸುತ್ತದೆ, ಇದು ಭಾರತದ ಇತರ ಸಮುದಾಯಗಳಿಗೆ ಅನ್ವಯಿಸುವ ನೋಂದಣಿ ವ್ಯವಸ್ಥೆಗಳೊಂದಿಗೆ ಸರಿಹೊಂದಿಸುತ್ತದೆ ಎನ್ನಲಾಗಿದೆ.












