ಸನ್ಮಾರ್ಗ ವಾರ್ತೆ
ಬೀದರ್: ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನೈಜ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಫಾರಂ–7 ಅರ್ಜಿಗಳನ್ನು ವ್ಯಾಪಕವಾಗಿ ಸಲ್ಲಿಸಲಾಗಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣದ ಬಗ್ಗೆ ಚುನಾವಣಾ ಆಯೋಗ ಹಾಗೂ ಜಿಲ್ಲಾ ಆಡಳಿತವು ತಕ್ಷಣ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಆಗ್ರಹಿಸಿದೆ.
ಈ ಕುರಿತು ಪರಿಶೀಲನೆ ನಡೆಸಲು ವೆಲ್ಫೇರ್ ಪಾರ್ಟಿ ಕರ್ನಾಟಕದ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ಇಂದು ಸೆಪ್ಟೆಂಬರ್ 25ರಂದು ಭಾಲ್ಕಿ ನಗರಕ್ಕೆ ಭೇಟಿ ನೀಡಿ, ವಿವಿಧ ಪ್ರದೇಶಗಳಿಗೆ ತೆರಳಿ ಮತದಾರರನ್ನು ನೇರವಾಗಿ ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದರು. ಫಾರಂ–7 ಅರ್ಜಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿದರು.
ಪ್ರಾಥಮಿಕವಾಗಿ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಭಾಲ್ಕಿಯ ಒಂದು ವಾರ್ಡ್ನಲ್ಲಿ ಸುಮಾರು 800, ಮತ್ತೊಂದು ವಾರ್ಡ್ನಲ್ಲಿ 200, ಇನ್ನೊಂದು ವಾರ್ಡ್ನಲ್ಲಿ ಸುಮಾರು 198 ಮತದಾರರ ಹೆಸರುಗಳನ್ನು ಅಳಿಸುವಂತೆ ಫಾರಂ–7 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದೇ ರೀತಿಯಾಗಿ ಹಲವು ವಾರ್ಡ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳು ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ.
ವಿಶೇಷವಾಗಿ, ಈ ಅರ್ಜಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನೈಜ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿದ್ದರೆ, ಅರ್ಜಿಗಳ ಹಿಂದಿನ ಕಾರಣಗಳು, ಅರ್ಜಿದಾರರ ವಿವರಗಳು ಮತ್ತು ಸಂಬಂಧಿತ ದಾಖಲೆಗಳನ್ನು ಪಾರದರ್ಶಕವಾಗಿ ಪರಿಶೀಲಿಸುವ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ, ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷರು ಬೀದರ್ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಭಾಲ್ಕಿ ಕ್ಷೇತ್ರದಲ್ಲಿ ಸಲ್ಲಿಕೆಯಾಗಿರುವ ಫಾರಂ–7 ಅರ್ಜಿಗಳ ಕುರಿತು ಚುನಾವಣಾ ಆಯೋಗ ಮತ್ತು ಜಿಲ್ಲಾ ಆಡಳಿತವು ವಿಶೇಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಅರ್ಹ ಮತ್ತು ನೈಜ ಮತದಾರನ ಹೆಸರನ್ನು ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. ವಿಶೇಷವಾಗಿ ಯಾವುದೇ ಒಂದು ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವ ಪ್ರಯತ್ನ ನಡೆದಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ತಪ್ಪು ಅಥವಾ ದುರುದ್ದೇಶಪೂರ್ವಕವಾಗಿ ಸಲ್ಲಿಸಲಾದ ಅರ್ಜಿಗಳು ಕಂಡುಬಂದರೆ, ಅದರ ಹಿಂದೆ ಇರುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಆಗ್ರಹಿಸಿದೆ.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಕೈಬಿಡುವ ಯಾವುದೇ ಪ್ರಯತ್ನವನ್ನು ವೆಲ್ಫೇರ್ ಪಾರ್ಟಿ ಒಪ್ಪುವುದಿಲ್ಲ. ಪ್ರತಿಯೊಬ್ಬ ಅರ್ಹ ಮತದಾರನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸುರಕ್ಷಿತವಾಗಿ ಉಳಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಗ್ಯಾನೇಶ್ ಕುಮಾರ ವಜಾಗೊಳಿಸಿ.
ಪ್ರಜಾಪ್ರಭುತ್ವ ಮತ್ತು ನಾಗರಿಕರ ಬೆನ್ನಿಗೆ ಚೂರಿ ಹಾಕಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಗೆ ತಕ್ಷಣ ವಜಾಗೊಳಿಸಬೇಕೆಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೈನ್ ಅಗ್ರಹಿಸಿದ್ದಾರೆ. ಅವರು ಸುದ್ದಿಘೋಷ್ಠಿ ಯಲ್ಲಿ ಮಾತನಾಡುತ್ತ ಚುನಾವಣಾ ಆಯೋಗಕ್ಕೆ 6 ಪ್ರಶ್ನೆ ಗಳು ಕೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ನಮ್ಮ 6 ನೇರ ಪ್ರಶ್ನೆಗಳು
- ಇಬ್ಬರು ಚುನಾವಣಾ ಆಯುಕ್ತರು 14 ಬಾರಿ ಆಕ್ಷೇಪ ದಾಖಲಿಸಿರುವುದಾದರೆ, ಆ ಆಕ್ಷೇಪಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಲಾಗುವುದೇ?
- Form-6ನಲ್ಲಿ ಮಾಡಲಾದ ಬದಲಾವಣೆ ಯಾವ ಕಾನೂನು ಮತ್ತು ನಿಯಮದ ಆಧಾರದ ಮೇಲೆ ಮಾಡಲಾಯಿತು?
- ಮತದಾರರ ಡೇಟಾಬೇಸ್ನ ಅಂತಿಮ ನಿಯಂತ್ರಣ ಯಾರ ಕೈಯಲ್ಲಿದೆ ಮತ್ತು ಯಾವುದೇ ಬದಲಾವಣೆಗೆ ಸಂಪೂರ್ಣ audit trail ಇದೆಯೇ?
- ECINet ವ್ಯವಸ್ಥೆಯು ನೆಲಮಟ್ಟದ ಚುನಾವಣಾ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸಲು ಅಥವಾ override ಮಾಡಲು ಸಾಧ್ಯವೇ?
- ಪಶ್ಚಿಮ ಬಂಗಾಳದ 16.10 ಲಕ್ಷ appeals ಸಲ್ಲಿಕೆಯ ಸಂಪೂರ್ಣ ದಾಖಲೆ ಮತ್ತು ಪ್ರಕ್ರಿಯೆಯನ್ನು ಸಾರ್ವಜನಿಕಗೊಳಿಸಲಾಗುವುದೇ?
- ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಲು, ಈ ಎಲ್ಲಾ ಆಕ್ಷೇಪಗಳು ಮತ್ತು ನಿರ್ಧಾರಗಳ ಕುರಿತು ಚುನಾವಣಾ ಆಯೋಗವು ಸ್ವತಂತ್ರ ಹಾಗೂ ಸಂಪೂರ್ಣ ಪಾರದರ್ಶಕ ವಿವರಣೆ ನೀಡಲು ಸಿದ್ಧವಿದೆಯೇ?
ನಾವು ಚುನಾವಣಾ ಆಯೋಗದ ಸಂವಿಧಾನಾತ್ಮಕ ಸ್ವಾಯತ್ತತೆಯನ್ನು ಗೌರವಿಸುತ್ತೇವೆ. ಆದರೆ ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಪಾರದರ್ಶಕತೆ, ಕಾನೂನುಬದ್ಧತೆ ಮತ್ತು ಹೊಣೆಗಾರಿಕೆ ಅತ್ಯಗತ್ಯ.
ಆದ್ದರಿಂದ The Indian Express ತನಿಖೆಯಲ್ಲಿ ಬಹಿರಂಗವಾಗಿರುವ ವಿಷಯಗಳ ಕುರಿತು ಚುನಾವಣಾ ಆಯೋಗವು ಸಾರ್ವಜನಿಕರಿಗೆ ಸ್ಪಷ್ಟ ಉತ್ತರ ನೀಡಬೇಕು.
ಮತದಾರರ ಪಟ್ಟಿ ಕೇವಲ ಆಡಳಿತಾತ್ಮಕ ದಾಖಲೆ ಅಲ್ಲ — ಅದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕಿನ ಆಧಾರವಾಗಿದೆ.
ಮತದಾರರ ಹಕ್ಕು ರಕ್ಷಿಸಬೇಕು.
ಮತದಾರರ ಪಟ್ಟಿ ಪಾರದರ್ಶಕವಾಗಬೇಕು.
ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ವಿಶ್ವಾಸ ಉಳಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ: ವೆಲ್ಫೇರ್ ಪಾರ್ಟಿ ಬೀದರ್ ಜಿಲ್ಲಾಧ್ಯಕ್ಷ ಮುಬಶೀರ್ ಶಿಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ತಾಲೂಕು ಅಧ್ಯಕ್ಷ ಜಾವೀದ್ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.












