ಪ್ರವಾದಿ ಮುಹಮ್ಮದ್(ಸ) ಸೀರತ್ ಸಮಾವೇಶ: ನಾವೆಲ್ಲರೂ ಐಕ್ಯತೆಯಿಂದ ಬಾಳಿದಾಗ ಮಾತ್ರ ದೇಶದ ಸಂವಿಧಾನ ಉಳಿಯಲು ಸಾಧ್ಯ: ವಿವೇಕ್ ಆಳ್ವ

0
289

ಸನ್ಮಾರ್ಗ ವಾರ್ತೆ

ಮೂಡುಬಿದಿರೆ: ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ರಂಗದಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬರಬೇಕು. ಸಮಾಜದಲ್ಲಿ ಸೌಹಾರ್ದತೆ ಉಳಿಯಬೇಕಾದರೆ ನಮ್ಮ ಧರ್ಮದ ಆಚರಣೆಗಳ ಜೊತೆಗೆ ಇತರ ಧರ್ಮಗಳ ಆಚರಣೆಗಳನ್ನೂ ಗೌರವಿಸಿ, ಅರ್ಥಮಾಡಿಕೊಳ್ಳುವ ಮನೋಭಾವವನ್ನು ಯುವಜನತೆ ಬೆಳೆಸಿಕೊಳ್ಳಬೇಕು. ನಾವೆಲ್ಲರೂ ಒಂದಾಗಿ, ಐಕ್ಯತೆಯಿಂದ ಬದುಕಿದಾಗ ಮಾತ್ರ ದೇಶದ ಸಂವಿಧಾನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಮೂಡುಬಿದಿರೆಯ ಸೀರತ್ ಸಮಿತಿ ವತಿಯಿಂದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜೀವನ ಮತ್ತು ಸಂದೇಶದ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ಜಗತ್ತಿಗೆ ಬಂದ ಹಲವಾರು ಮಹಾಪುರುಷರು ಒಂದೊಂದು ಕ್ಷೇತ್ರಕ್ಕೆ ಸೀಮಿತರಾಗಿ ಜನರ ಗಮನ ಸೆಳೆದರೆ, ಪ್ರವಾದಿ ಮುಹಮ್ಮದ್ (ಸ) ಅವರು ಬದುಕಿನ ಎಲ್ಲಾ ರಂಗಗಳಲ್ಲೂ ಮಾದರಿಯಾಗಿ ಸಮಗ್ರ ಮಾರ್ಗದರ್ಶನ ನೀಡಿದವರು ಎಂದರು.

“ಬಾಚಣಿಗೆಯ ಹಲ್ಲುಗಳಂತೆ ಜಗತ್ತಿನ ಎಲ್ಲ ಮನುಷ್ಯರೂ ಸಮಾನರು ಎಂಬುದನ್ನು ಪ್ರವಾದಿಯವರು ಇಡೀ ಜಗತ್ತಿಗೆ ಕಲಿಸಿಕೊಟ್ಟರು. ಸಮಾನತೆ ಮತ್ತು ಗೌರವ ಇರುವಲ್ಲಿ ಮಾತ್ರ ನ್ಯಾಯ ನೆಲೆಸಲು ಸಾಧ್ಯ” ಎಂದು ಅವರು ಹೇಳಿದರು.

ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್ ಮಾತನಾಡಿ, “ಸುಮಾರು 1500 ವರ್ಷಗಳ ಹಿಂದೆ ಶಿಕ್ಷಣದ ಅವಕಾಶಗಳಿಲ್ಲದ ಹಾಗೂ ಬಡತನದ ಹಿನ್ನೆಲೆಯಿಂದ ಬಂದ, ಕೇವಲ 63 ವರ್ಷಗಳ ಕಾಲ ಬದುಕಿದ ಪ್ರವಾದಿ ಮುಹಮ್ಮದ್ (ಸ) ಅವರ ಪ್ರಭಾವ ಇಂದಿಗೂ ಜಗತ್ತಿನಾದ್ಯಂತ ಇರುವುದಕ್ಕೆ ಅವರು ತಂದ ಬದಲಾವಣೆ, ಸುಧಾರಣೆ ಹಾಗೂ ಅವರ ಸರಳ ಮತ್ತು ಆದರ್ಶ ಜೀವನವೇ ಕಾರಣ. ನಿಜವಾಗಿ ಒಂದು ಧರ್ಮವನ್ನು ತಿಳಿಯಬೇಕಾದರೆ ಆ ಧರ್ಮದ ಮೂಲವನ್ನು ಅಧ್ಯಯನ ಮಾಡಬೇಕು” ಎಂದರು.

ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್‌ನ ಧರ್ಮಗುರು ರೆ. ಫಾ. ವಿನ್ಸೆಂಟ್ ಡಿಸೋಜ ಮಾತನಾಡಿ, “ಪ್ರವಾದಿಯವರ ಸಂದೇಶವು ಒಂದು ಹೂವಿನ ತೋಟದಲ್ಲಿ ಅರಳುವ ಹೂವಿನಂತೆ ಕೇವಲ ತನಗಾಗಿ ಅಥವಾ ಕೆಲವರಿಗಾಗಿ ಸೀಮಿತವಾಗಿಲ್ಲ. ಅದು ಸರ್ವರಿಗೂ ದಾರಿದೀಪವಾಗಿದೆ. ನಮ್ಮ ಚಿಂತನೆಗಳು ಬದಲಾದರೆ ಮಾತ್ರ ಸಮಾಜವನ್ನು ಬದಲಿಸಲು ಸಾಧ್ಯ” ಎಂದರು.

ಮಣಿಪಾಲ್ ಎಂ.ಐ.ಟಿ.ಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಜಮಾಲುದ್ದೀನ್ ಅವರು ವಿಷಯ ಮಂಡಿಸಿದರು.

ಅಹ್ಮದ್ ಫಾಝಾ ಅವರ ಕಿರಾಅತ್‌ನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನಿವಾಸಿ ಭಾರತೀಯ ಉದ್ಯಮಿ ಮೆಹಫೂಝ್ ಸ್ತುತಿಗೀತೆ ಹಾಡಿದರು. ಸೀರತ್ ಸಮಿತಿಯ ಉಪಾಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್ ಸ್ವಾಗತಿಸಿದರು. ಕಾರ್ಯದರ್ಶಿ ಶೇಖ್ ನೂರುದ್ದೀನ್ ವಂದಿಸಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು.

ಸೀರತ್ ಸಮಿತಿಯ ಹಮೀದ್ ರಾಯಲ್, ಝಮೀರ್ ಫರ್ಹಾನ್, ಇರ್ಷಾದ್ ಎನ್‌ಜಿ, ಮುಹಮ್ಮದ್ ಆರಿಫ್, ನದೀಮ್, ಶಹಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.