ಸನ್ಮಾರ್ಗ ವಾರ್ತೆ
ಹೊಸ ದೆಹಲಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಜನರನ್ನು ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೊರಗಿಡುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ. ಅಕ್ಟೋಬರ್ 6 ರಂದು ನಡೆಯಲಿರುವ ರೇಜಿನಗರ ಮತ್ತು ನಂದಿಗ್ರಾಮ ಉಪಚುನಾವಣೆಗಳ ಮೊದಲು ತುರ್ತು ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದ ಮುಂದೆ ಈ ಪ್ರಕರಣದ ತುರ್ತು ವಿಚಾರಣೆಗಾಗಿ ಮನವಿ ಮಾಡಲಾಗಿತ್ತು.
ಪ್ರಸ್ತುತ ಈ ಪ್ರಕರಣವು ಅಕ್ಟೋಬರ್ 5 ರಂದು ವಿಚಾರಣೆಗೆ ಪಟ್ಟಿ ಮಾಡಲ್ಪಟ್ಟಿದೆ. ನಂದಿಗ್ರಾಮ ಮತ್ತು ರೇಜಿನಗರದಲ್ಲಿ ನಡೆದ ಎಸ್ಐಆರ್ ಸಮಯದಲ್ಲಿ ಯಾರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆಯೋ ಅಂತಹ ಅನೇಕ ಜನರು ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ ಮತ್ತು ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ತಮ್ಮ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಈ ಎರಡು ಕ್ಷೇತ್ರಗಳಲ್ಲಿ ಮಾತ್ರ ಎಸ್ಐಆರ್ನ ಭಾಗವಾಗಿ 18,000 ಕ್ಕೂ ಹೆಚ್ಚು ಮೇಲ್ಮನವಿಗಳು ಬಾಕಿ ಉಳಿದಿವೆ ಎಂದೂ ವಕೀಲರು ಬೆಟ್ಟು ಮಾಡಿದರು.
ಆದರೆ ಇವು ಕೇವಲ ‘ಉಪಚುನಾವಣೆಗಳು’ ಎಂಬುದು ಮುಖ್ಯ ನ್ಯಾಯಮೂರ್ತಿಗಳ ಪ್ರತಿಕ್ರಿಯೆಯಾಗಿತ್ತು. ಪ್ರಕರಣವನ್ನು ತುರ್ತಾಗಿ ಪರಿಗಣಿಸಲು ಸಾಧ್ಯವಿಲ್ಲ. ನಿಗದಿತ ದಿನಾಂಕದಂತೆ ಅಕ್ಟೋಬರ್ 5 ರಂದು ವಿಚಾರಣೆ ನಡೆಯಲಿದೆ ಎಂದೂ ಅವರು ಘೋಷಿಸಿದರು. ಮುಖ್ಯ ನ್ಯಾಯಮೂರ್ತಿಗಳಲ್ಲದೆ, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತು.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ಗೆ ಸಂಬಂಧಿಸಿದಂತೆ ಒಟ್ಟು 38,31,429 ಮೇಲ್ಮನವಿಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ 22,21,118 ಮೇಲ್ಮನವಿಗಳು ಮತದಾರರ ಪಟ್ಟಿಯಿಂದ ಹೆಸರುಗಳ ಹೊರಗಿಡುವಿಕೆಗೆ ವಿರುದ್ಧವಾಗಿದ್ದರೆ, 16,10,311 ಮೇಲ್ಮನವಿಗಳು ಹೆಸರುಗಳ ಸೇರ್ಪಡೆಗೆ ವಿರುದ್ಧವಾಗಿದ್ದವು. ಸೆಪ್ಟೆಂಬರ್ 16 ರಂತೆ, ಕೇವಲ 1,26,194 ಮೇಲ್ಮನವಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. 37,05,235 ಮೇಲ್ಮನವಿಗಳು ಬಾಕಿ ಉಳಿದಿವೆ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.












