ಸನ್ಮಾರ್ಗ ವಾರ್ತೆ
ಬೆಂಗಳೂರು: ಮಸೀದಿಗಳು ಹಾಗೂ ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಕೈಬಿಡುವ ಕುರಿತು ಉಂಟಾಗಿರುವ ಆತಂಕಗಳು ಹಾಗೂ ಹೆಚ್ಚುತ್ತಿರುವ ದ್ವೇಷಪೂರಿತ ಅಪರಾಧಗಳ ವಿರುದ್ಧ ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ತಡೆಯುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತ, ಎಪಿಸಿಆರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾನಿಟರಿಂಗ್ ಕಮಿಟಿ ಆಫ್ ಇಂಡಿಯನ್ ಮುಸ್ಲಿಮ್ಸ್ನ ಸದಸ್ಯರೂ ಆದ ನದೀಮ್ ಖಾನ್ ಅವರನ್ನು ದೆಹಲಿ ಪೊಲೀಸರು ಗೃಹಬಂಧನದಲ್ಲಿರಿಸಿರುವ ಕ್ರಮವನ್ನು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ಮತ್ತು SIR ಮೂಲಕ ಮತದಾರರ ಪಟ್ಟಿಯಿಂದ ಹೆಸರುಗಳು ಕೈಬಿಡುವ ಕುರಿತು ವ್ಯಕ್ತವಾಗುತ್ತಿರುವ ಆತಂಕಗಳ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ದೆಹಲಿಯ ಜಂತರ್ ಮಂತರ್ನಲ್ಲಿ ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ಸೆಪ್ಟೆಂಬರ್ 29ರಂದು ಬೆಳಿಗ್ಗೆ ದೆಹಲಿಯಲ್ಲಿರುವ ನದೀಮ್ ಖಾನ್ ಅವರ ಮನೆಗೆ ತೆರಳಿದ್ದ ದೆಹಲಿ ಪೊಲೀಸರು, ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಹೊರಗೆ ತೆರಳದಂತೆ ಅವರನ್ನು ಅಲ್ಲಿಯೇ ನಿರ್ಬಂಧಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡಲು ದೇಶದ ಸಂವಿಧಾನ ನೀಡಿರುವ ಹಕ್ಕನ್ನು ಕೂಡ ಕಸಿದುಕೊಳ್ಳಲಾಗಿದೆ. ಇದು ಖಂಡನೀಯ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಂ ಅಹ್ಮದ್ ತಿಳಿಸಿದ್ದಾರೆ.
ಭಾರತದ ಸಂವಿಧಾನದ 19(1)(a) ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಮತ್ತು ಮಾತಿನ ಸ್ವಾತಂತ್ರ್ಯದ ಹಕ್ಕು ಇದೆ. ಅದೇ ರೀತಿ 19(1)(b) ಅಡಿಯಲ್ಲಿ ಶಸ್ತ್ರಾಸ್ತ್ರವಿಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಸಂವಿಧಾನ ಖಾತರಿಪಡಿಸಿದೆ. ಸಂವಿಧಾನದ 19(1)(c) ಸಂಘಟನೆಗಳನ್ನು ರಚಿಸುವ ಹಕ್ಕನ್ನೂ ನೀಡುತ್ತದೆ. ಸುಪ್ರೀಂ ಕೋರ್ಟ್ ಕೂಡ ಶಾಂತಿಯುತ ಪ್ರತಿಭಟನೆ ಮತ್ತು ಪ್ರದರ್ಶನಗಳು ಸಂವಿಧಾನದ Article 19(1)(a) ಮತ್ತು 19(1)(b) ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕುಗಳಾಗಿವೆ ಎಂದು ಸ್ಪಷ್ಟಪಡಿಸಿದೆ. ಆದರೂ ಕೂಡ ನದೀಮ್ ಖಾನ್ ಅವರನ್ನು ಗೃಹ ಬಂಧನದಲ್ಲಿಸಿರುವುದು ಒಪ್ಪುವಂಥದ್ದಲ್ಲ. ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವ ವ್ಯಕ್ತಿಯನ್ನು ಯಾವುದೇ ಕಾನೂನುಬದ್ಧ ಆಧಾರವನ್ನು ಸ್ಪಷ್ಟಪಡಿಸದೆ ನಿರ್ಬಂಧಿಸುವುದು ಪ್ರಜಾಪ್ರಭುತ್ವದ ಹಕ್ಕುಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರ್ಹ ನಾಗರಿಕರ ಹೆಸರುಗಳು ತಪ್ಪಾಗಿ ಕೈಬಿಡದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಅತ್ಯಂತ ಮುಖ್ಯವಾಗಿದೆ. ಆದರೆ, ಚುನಾವಣಾ ಆಯೋಗದ ನಡೆಯನ್ನು ಹಾಗೂ ಕೇಂದ್ರ ಸರ್ಕಾರವು ನಡೆದುಕೊಳ್ಳುತ್ತಿರುವ ಕ್ರಮವನ್ನು ಪ್ರಶ್ನಿಸಿದರೆ ತಪ್ಪೇನಿದೆ? ಹೋರಾಟದ ಧ್ವನಿಗಳನ್ನು ಇಂದು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿರುವುದಕ್ಕೆ ನದೀಮ್ ಖಾನ್ ಅವರ ಗೃಹ ಬಂಧನವು ಉದಾಹರಣೆಯಾಗಿದೆ ಎಂದು ಸೋಲಿಡಾರಿಟಿ ತಿಳಿಸಿದೆ.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಮತ್ತು ನ್ಯಾಯದ ಭರವಸೆ ನೀಡಿದೆ. ಶಾಂತಿಯುತವಾಗಿ ಪ್ರಶ್ನಿಸುವುದು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕುಗಳು ಪ್ರಜಾಪ್ರಭುತ್ವದ ಮೂಲಭೂತ ಅಂಶಗಳಾಗಿವೆ. ಈ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳ ಕರ್ತವ್ಯವಾಗಿದೆ. ಹಾಗಾಗಿ, ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಅವರನ್ನು ಗೃಹ ಬಂಧನದಲ್ಲಿರಿಸಿರುವ ಕ್ರಮವು ಖಂಡನೀಯ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ತಿಳಿಸಿದೆ.
ಇದೇ ವೇಳೆ, ಇಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದ ನಾನಾ ಮುಖಂಡರನ್ನು ಪೊಲೀಸರು ಬಂಧಿಸಿ, ವಶಕ್ಕೆ ತೆಗೆದುಕೊಂಡ ಕ್ರಮ ಕೂಡ ಸಮರ್ಥನೀಯವಲ್ಲ. ಕೂಡಲೇ ಎಲ್ಲರನ್ನೂ ಬಿಡುಗಡೆಗೊಳಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಂ ಅಹ್ಮದ್ ಒತ್ತಾಯಿಸಿದ್ದಾರೆ.












