ಜ್ಞಾನೇಶ್ ಕುಮಾರ್ ವಜಾಕ್ಕೆ, SIR ಕೈಬಿಡಲು ಆಗ್ರಹಿಸಿ ಸೋಲಿಡಾರಿಟಿ ಪ್ರತಿಭಟನೆಗೆ ಕರೆ

0
139

ಸನ್ಮಾರ್ಗ ವಾರ್ತೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ, SIR ಕೈಬಿಡಲು, ಮತದಾರರ ಪಟ್ಟಿಯಿಂದ ಕೈಬಿಟ್ಟ ಅರ್ಹ ಮತದಾರರ ಹೆಸರನ್ನು ಮರು ಸೇರ್ಪಡೆಗೆ ಒತ್ತಾಯಿಸಿ ಯುವಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರೆ ನೀಡಿದೆ.

ಭಾರತದ ಸಂವಿಧಾನವು ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ಮತದಾನದ ಹಕ್ಕನ್ನು ನೀಡಿದೆ. ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ನಮ್ಮ ಪ್ರಜಾಪ್ರಭುತ್ವದ ಮೂಲ ಆಧಾರವಾಗಿವೆ. ಆದ್ದರಿಂದ ಮತದಾರರ ಪಟ್ಟಿಯ ತಯಾರಿಕೆ, ತಿದ್ದುಪಡಿ, ಹೆಸರು ಸೇರ್ಪಡೆ ಮತ್ತು ಹೆಸರು ತೆಗೆದುಹಾಕುವ ಪ್ರಕ್ರಿಯೆ ಅತ್ಯಂತ ಪಾರದರ್ಶಕ, ಕಾನೂನುಬದ್ಧ ಮತ್ತು ಪರಿಶೀಲಿಸಬಹುದಾದ ರೀತಿಯಲ್ಲಿ ನಡೆಯುವುದು ಅತ್ಯಗತ್ಯ.

ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ನಂಬಿಕೆ ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆಯಬೇಕಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ದೇಶದಾದ್ಯಂತ ಹಲವು ಗಂಭೀರ ಆತಂಕಗಳು ಮತ್ತು ದೂರುಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ SIR ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕು ಹಾಗೂ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಎಲ್ಲಾ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಅನ್ಯಾಯವಾಗದಂತೆ ಮರು ಸೇರ್ಪಡೆ ಮಾಡಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ ಆಗ್ರಹಿಸಿದೆ.

ಕರ್ನಾಟಕದಲ್ಲಿ SIR ಪ್ರಕ್ರಿಯೆ ವೇಳೆ 1.08 ಕೋಟಿ ಮತದಾರರನ್ನು ‘Absent, Shifted, Dead, Duplicate and Others’ (ASDDO) ವರ್ಗದಲ್ಲಿ ಗುರುತಿಸಲಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿರುವ ಸುಮಾರು 4.46 ಕೋಟಿ ಮತದಾರರ ಪೈಕಿ 43.81 ಲಕ್ಷ ಮಂದಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಮುಂದುವರಿದಿದೆಯೇ ಎಂಬ ಆತಂಕಕ್ಕೆ ಒಳಗಾಗಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಗಂಭೀರ ವಿಚಾರವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಮತದಾರರ ಹೆಸರನ್ನು ಅಳಿಸಲು Form-7 ಅರ್ಜಿಗಳ ದುರುಪಯೋಗ ನಡೆಯುತ್ತಿದ್ದು, ಈ ಸಂಬಂಧ ಪ್ರಕರಣಗಳು ದಾಖಲಾಗಿರುವುದಾಗಿ ವರದಿಯಾಗಿದೆ. ಇದನ್ನು ತಡೆಗಟ್ಟಲು ಸೂಕ್ತ ಎಚ್ಚರಿಕೆ ಕ್ರಮಗಳನ್ನು ಚುನಾವಣಾ ಆಯೋಗವು ತೆಗೆದುಕೊಳ್ಳಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ ಆಗ್ರಹಿಸಿದೆ.

ಮತದಾನದ ಹಕ್ಕು ಕೇವಲ ಒಂದು ಚುನಾವಣೆಯ ಹಕ್ಕಲ್ಲ; ಅದು ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ನಾಗರಿಕರ ಧ್ವನಿಯ ಮೂಲಾಧಾರವಾಗಿದೆ. ಯಾವುದೇ ಕಾರಣಕ್ಕೂ ಒಬ್ಬ ಅರ್ಹ ನಾಗರಿಕನ ಹೆಸರೂ ತಪ್ಪಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ವಿಶ್ವಾಸವನ್ನು ಕಾಪಾಡುವುದು ಚುನಾವಣಾ ಆಯೋಗದ ಪ್ರಮುಖ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ ರಕ್ಷಕ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನಾತ್ಮಕ ಮುಖ್ಯಸ್ಥರಾಗಿರುವ ಮಾನ್ಯ ರಾಷ್ಟ್ರಪತಿಗಳು, ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ ಆಗ್ರಹಿಸಿದೆ.

The Indian Express ತನಿಖೆಯಲ್ಲಿ ಬಹಿರಂಗವಾಗಿರುವ ಅಂಶಗಳನ್ನು ಪರಿಗಣಿಸಿ, ಮತದಾರರ ಹಕ್ಕುಗಳ ರಕ್ಷಣೆ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಲು ಅಗತ್ಯವಾದ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ ಒತ್ತಾಯಿಸಿದೆ.

ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕದ ಬೇಡಿಕೆಗಳು:

1.SIR ಈ ಕೂಡಲೇ ರದ್ದು ಮಾಡಬೇಕು.

2.SIR ಆಧರಿಸಿ ನಡೆದಿರುವ ಎಲ್ಲಾ ಚುನಾವಣೆಗಳನ್ನು ರದ್ದುಗೊಳಿಸಬೇಕು.

3.ಆಯೋಗವನ್ನು ಆಯ್ಕೆ ಮಾಡುವ 2023 ರ ತಿದ್ದುಪಡಿ ರದ್ದಾಗಬೇಕು. ಸ್ವತಂತ್ರ, ಪ್ರಾತಿನಿಧಿಕ ಸಾಂವಿಧಾನಿಕ ಸಮಿತಿಯ ಮೂಲಕ ಆಯೋಗ ಆಯ್ಕೆಯಾಗಬೇಕು..

4.ಹಳೆಯ SR ಮತ್ತು IR ಪದ್ಧತಿಯಲ್ಲೇ ಮತ ಪಟ್ಟಿ ಪರಿಷ್ಕರಣೆ ಆಗಬೇಕು. ಇನ್ನು ಮುಂದೆ ಅದೂ ಕೂಡ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳ ಉಸ್ತುವಾರಿ, ಮೇಲ್ವಿಚಾರಣೆಯಲ್ಲಿ ನಡೆಯಬೇಕು.

5.Form-6ನಲ್ಲಿ ಮಾಡಲಾದ ಬದಲಾವಣೆಗಳ ಕಾನೂನುಬದ್ಧತೆ ಮತ್ತು ಅವುಗಳನ್ನು ಜಾರಿಗೆ ತಂದ ಪ್ರಕ್ರಿಯೆಯ ಕುರಿತು ಸಂಪೂರ್ಣ ಪರಿಶೀಲನೆ ನಡೆಸಬೇಕು.

6.SIR ಪ್ರಕ್ರಿಯೆಯ ಸಂದರ್ಭದಲ್ಲಿ ಫಾರಂ–7 ಅನ್ನು ಬಳಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳು ಮತ್ತು ದೂರುಗಳನ್ನು ತನಿಖೆ ನಡೆಸಲು ಚುನಾವಣಾ ಆಯೋಗವು ವಿಶೇಷ ತಂಡವನ್ನು ರಚಿಸಬೇಕು. ತಪ್ಪಿತಸ್ಥರ ವಿರುದ್ಧ ಕೂಡಲೇ ಎಫ್ ಐ ಆರ್ ದಾಖಲಿಸಿ, ಬಂಧಿಸಿಬೇಕು.

7.ECINet ಸೇರಿದಂತೆ ಮತದಾರರ ಡೇಟಾಬೇಸ್ ನಿರ್ವಹಿಸುವ IT ವ್ಯವಸ್ಥೆಗಳ ಸ್ವತಂತ್ರ ತಾಂತ್ರಿಕ ಮತ್ತು ಆಡಳಿತಾತ್ಮಕ audit ನಡೆಸಬೇಕು.

8.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಅಳಿಸುವಿಕೆ ಮತ್ತು ಮರುಸೇರ್ಪಡೆಗೆ ಸಂಬಂಧಿಸಿದ ಪ್ರತಿಯೊಂದು ಕ್ರಮಕ್ಕೂ ಸ್ಪಷ್ಟವಾದ audit trail ಮತ್ತು accountability mechanism ಇರಬೇಕು.

9.ದೇಶದಾದ್ಯಂತ SIR ಪ್ರಕ್ರಿಯೆಯಿಂದ ಬಾಧಿತರಾಗಿರುವ ಮತದಾರರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಮಟ್ಟದಲ್ಲಿ ಸ್ವತಂತ್ರ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪರಿಗಣಿಸಬೇಕು.

10.SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಎಲ್ಲಾ ಅರ್ಹ ಮತದಾರರ ಹೆಸರುಗಳನ್ನು ಮರು ಸೇರ್ಪಡೆಗೊಳಿಸಬೇಕು.

11.ಮತದಾರರ ಹೆಸರು ಕೈಬಿಡಲು ಕಾರಣವಾಗಿರುವ ದಾಖಲೆಗಳು, ಪ್ರಕ್ರಿಯೆ ಮತ್ತು ಆಕ್ಷೇಪಣೆಗಳ ಕುರಿತು ಸಂಪೂರ್ಣ ಪಾರದರ್ಶಕತೆ ಒದಗಿಸಬೇಕು.

12.ಅರ್ಹ ಮತದಾರರ ಹೆಸರನ್ನು ಅಕ್ರಮವಾಗಿ ಅಥವಾ ತಪ್ಪಾಗಿ ತೆಗೆದುಹಾಕಲು ಪ್ರಯತ್ನಿಸಿರುವ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

13 ಮತದಾರರಿಗೆ ನೀಡಲಾಗಿರುವ ನೋಟಿಸ್‌ಗಳಿಗೆ ಸಮರ್ಪಕ ಸಮಯ, ಸುಲಭವಾದ ಪ್ರಕ್ರಿಯೆ ಹಾಗೂ ಸೂಕ್ತ ಮಾರ್ಗದರ್ಶನ ಒದಗಿಸಬೇಕು.

14.SIR ಪ್ರಕ್ರಿಯೆಯಿಂದ ಹೊರಗುಳಿದಿರುವ ಅಥವಾ ಹೆಸರು ಕೈಬಿಡಲ್ಪಟ್ಟಿರುವ ಅರ್ಹ ನಾಗರಿಕರಿಗೆ ತಮ್ಮ ಹಕ್ಕನ್ನು ಸ್ಥಾಪಿಸಲು ಪರಿಣಾಮಕಾರಿ ಮೇಲ್ಮನವಿ ಮತ್ತು ಮರುಪರಿಶೀಲನಾ ವ್ಯವಸ್ಥೆ ಕಲ್ಪಿಸಬೇಕು.

15 ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲಗಳು ಮತ್ತು ದೂರುಗಳ ಕುರಿತು ಚುನಾವಣಾ ಆಯೋಗವು ಸಾರ್ವಜನಿಕವಾಗಿ ಸ್ಪಷ್ಟ ಮಾಹಿತಿ ನೀಡಬೇಕು.

16.ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಉಂಟಾಗಿರುವ ಗಂಭೀರ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು

17.ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಸಂವಿಧಾನಾತ್ಮಕ ಸ್ಥಾನವನ್ನು ಗೌರವಿಸುವುದರ ಜೊತೆಗೆ, ಅದರ ಕಾರ್ಯವೈಖರಿಯಲ್ಲಿ ಪಾರದರ್ಶಕತೆ, ಆಂತರಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಪರಿಶೀಲನೆ ಖಚಿತಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.