ಸಿಇಸಿ ಜ್ಞಾನೇಶ್ ಕುಮಾರ್‌ಗೆ ಕೇರಳದಲ್ಲಿ ಸಂಕಷ್ಟ: 20 ವರ್ಷಗಳ ಹಳೆಯ ಪ್ರಕರಣದ ವಿಜಿಲೆನ್ಸ್ ಕಡತ ತರಿಸಿಕೊಂಡ ಕೇರಳ ಗೃಹ ಇಲಾಖೆ

0
485

ಸನ್ಮಾರ್ಗ ವಾರ್ತೆ

2006ರಲ್ಲಿ ಜ್ಞಾನೇಶ್ ಕುಮಾರ್ ಕೇರಳದ ಲೋಕೋಪಯೋಗಿ ಕಾರ್ಯದರ್ಶಿಯಾಗಿದ್ದಾಗ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಇಂಜಿನಿಯರ್.

ತಿರುವನಂತಪುರಂ: ಕೇಂದ್ರ ಮುಖ್ಯ ಚುನಾವಣೆ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ 2006ರಲ್ಲಿ ನಡೆದಿದ್ದ ವಿಜಿಲೆನ್ಸ್ ತನಿಖೆಯ ಹಳೆಯ ಕಡತಗಳನ್ನು ಕೇರಳ ಗೃಹ ಇಲಾಖೆ ದಿಢೀರನೆ ತರಿಸಿಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ‘ಇಂಡಿಯಾ’ ಒಕ್ಕೂಟವು ಸಿಇಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

2006ರಲ್ಲಿ ಗ್ಯಾನೇಶ್ ಕುಮಾರ್ ಅವರು ಕೇರಳದ ಲೋಕೋಪಯೋಗಿ (PWD) ಕಾರ್ಯದರ್ಶಿಯಾಗಿದ್ದಾಗ ಈ ಪ್ರಕರಣ ನಡೆದಿತ್ತು. ಬಹುಕೋಟಿ ವೆಚ್ಚದ ‘ಕೇರಳ ರಾಜ್ಯ ಸಾರಿಗೆ ಯೋಜನೆ’ (KSTP) ಅಡಿಯಲ್ಲಿ ಎಂ.ಸಿ. ರಸ್ತೆ ಅಭಿವೃದ್ಧಿ ಕಾಮಗಾರಿ ವಹಿಸಿಕೊಂಡಿದ್ದ ಇಂಡೋ-ಮಲೇಷ್ಯನ್ ಒಕ್ಕೂಟ ‘ಪಾಟಿ-ಬೆಲ್’ನ ಮುಖ್ಯ ಯೋಜನಾ ವ್ಯವಸ್ಥಾಪಕ, ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸಿ ಬೀನ್ ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಮಗಾರಿಯ ಬಿಲ್‌ಗಳನ್ನು ಸರ್ಕಾರಿ ಅಧಿಕಾರಿಗಳು ಮಂಜೂರು ಮಾಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅವರು ಈ ಹಂತಕ್ಕೆ ತಲುಪಿದ್ದರು ಎನ್ನಲಾಗಿದೆ.

1988ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಗ್ಯಾನೇಶ್ ಕುಮಾರ್ ಅವರ ಹೆಸರನ್ನು ಲೀ ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು. ಯೋಜನೆಯ ಅನುಷ್ಠಾನದಲ್ಲಿ ನಡೆಯುತ್ತಿದ್ದ ವ್ಯವಸ್ಥಿತ ಭ್ರಷ್ಟಾಚಾರದ ಬಗ್ಗೆಯೂ ಅವರು ವಿವರಿಸಿದ್ದರು. ಈ ಘಟನೆ ರಾಜ್ಯಾದ್ಯಂತ ತೀವ್ರ ಗದ್ದಲ ಸೃಷ್ಟಿಸಿದಾಗ, ಅಂದಿನ ಎಲ್‌ಡಿಎಫ್ ಸರ್ಕಾರವು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪ್ರಾಥಮಿಕ ತನಿಖೆಗೆ ಆದೇಶಿಸಿತ್ತು.

ಆರಂಭದಲ್ಲಿ ತೀವ್ರತೆ ಪಡೆದುಕೊಂಡಿದ್ದ ವಿಜಿಲೆನ್ಸ್ ತನಿಖೆಯು ಕಾಲಕ್ರಮೇಣ ತಣ್ಣಗಾಗಿ ಸ್ಥಗಿತಗೊಂಡಿತ್ತು. ಇದೀಗ ಪ್ರಕರಣದ ಮರುತನಿಖೆಗೆ ಸರ್ಕಾರ ಮುಂದಾಗಿದೆಯಾದರೂ, ಆರಂಭಿಕ ಹುಡುಕಾಟದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಆ ಸಮಯದಲ್ಲಿ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿದ್ದ ಕ್ರೈಂ ಬ್ರಾಂಚ್ ಕಚೇರಿಯಲ್ಲೂ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಸಿಪಿಎಂ ಪಕ್ಷವು ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆಯಾದರೂ, ಈ ಪ್ರಕರಣವನ್ನು ಮರುಪರಿಶೀಲಿಸಲು ಹೊರಟಿರುವುದು ಸಿಪಿಎಂ ಪಕ್ಷಕ್ಕೇ ತಿರುಗೇಟು ನೀಡುವ ಸಾಧ್ಯತೆಯಿದೆ. ಏಕೆಂದರೆ, 2006ರಲ್ಲಿ ಈ ಘಟನೆ ನಡೆದು ತನಿಖೆ ಸ್ಥಗಿತಗೊಂಡಾಗ ರಾಜ್ಯದಲ್ಲಿ ಸಿಪಿಎಂ ನೇತೃತ್ವದ ಎಲ್‌‌ಡಿಎಫ್ ಸರ್ಕಾರವೇ ಅಧಿಕಾರದಲ್ಲಿತ್ತು.