ಬೆಂಗಳೂರು: ಮೂವರು ಶಾಸಕರ ಅನರ್ಹತೆಯು ಮುಂಬೈಯಲ್ಲಿ ಉಳಿದುಕೊಂಡಿರುವ ಅತೃಪ್ತ ಶಾಸಕರಿಗೆ ಬಿಸಿ ಮುಟ್ಟಿಸಿರುವುದು ಸ್ಪಷ್ಟವಾಗಿದ್ದು, ಇದೀಗ ಅವರಲ್ಲಿ ಕೆಲವು ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಇದನ್ನು ಸ್ವತಃ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಎಂ ಬಿ ಪಾಟೀಲರು ಈ ಬಗ್ಗೆ ಮಾತಾಡಿದ್ದರು. ಇಬ್ಬರು ಅತೃಪ್ತ ಶಾಸಕರು ಸಿದ್ದರಾಮಯ್ಯರಿಗೆ ಕರೆ ಮಾಡಿದ್ದರು, ಆದರೆ ಅವರು ಕರೆ ಸ್ವೀಕರಿಸಿಲ್ಲ ಎಂದು ಹೇಳಿದ್ದರು. ಆ ಬಳಿಕ ಅದನ್ನು ಅತೃಪ್ತ ಶಾಸಕರಲ್ಲಿ ಒಬ್ಬರಾಗಿರುವ ಹೆಚ್ ವಿಶ್ವನಾಥ್ ಅಲ್ಲಗಳೆದಿದ್ದರು. ಯಾವ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ, ಮೈತ್ರಿ ನಾಯಕರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಸಿ ಸುಳ್ಳು ಎಂದು ಹೇಳಿದ್ದರು. ಮಾತ್ರವಲ್ಲ,
ಯಾವ ನಾಯಕರೂ ಸಹ ಅತೃಪ್ತರನ್ನು ಸಂಪರ್ಕಿಸಲು ಪ್ರಯತ್ನಿಸಿಲ್ಲ. ಅವರು ಪ್ರಯತ್ನಿಸಿದರೂ ಸಹ ಯಾರೂ ಅವರೊಂದಿಗೆ ಹೋಗಲು ಸಿದ್ಧರಿಲ್ಲ. ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ. ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದೇವೆ. ನಮ್ಮ ನಿರ್ಧಾರವೂ ಸಹ ಅಷ್ಟೇ ಗಟ್ಟಿಯಾಗಿದೆ. ಏಕೆಂದರೆ ನಾವು ಯಾರೂ ದುಡ್ಡಿಗಾಗಿ ಬಂದಿಲ್ಲ. ಸರ್ಕಾರದ ವಿರುದ್ಧ ಅಸಮಾಧಾನದಿಂದ ಹೊರ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಆದರೆ,
ಇದೀಗ ಸ್ವತಃ ಸಿದ್ದರಾಮಯ್ಯನವರೇ, ಕೆಲವು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ ಎಂದಿದ್ದಾರೆ. ಆದರೆ, ಅವರೊಂದಿಗೆ ಮಾತನಾಡಬಾರದು ಎಂದು ನಾನು ಕರೆ ಸ್ವೀಕರಿಸಲಿಲ್ಲ. ಅನರ್ಹತೆ ಶಿಕ್ಷೆಗೆ ಹೆದರಿ ನನಗೆ ಕರೆ ಮಾಡಿದ್ದರು. ಹೀಗಾಗಿ ನಾನು ಕರೆ ಸ್ವೀಕರಿಸಿಲ್ಲ ಎಂದು ಹೇಳುವ ಮೂಲಕ ಎಂ.ಬಿ.ಪಾಟೀಲ್ ಅವರ ಹೇಳಿಕೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಯಾವ ಶಾಸಕರು ಬರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಅವರು ಬಂದಿದ್ದರೆ ಕುಮಾರಸ್ವಾಮಿ ಅವರ ಸರ್ಕಾರ ಉರುಳುತ್ತಿರಲಿಲ್ಲ ಎಂದ ಸಿದ್ದರಾಮಯ್ಯ, ಅವರ ಕರೆಯನ್ನು ಸ್ವೀಕರಿಸುವ ಉದ್ದೇಶ ತನಗಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಈ ಬೆಳವಣಿಗೆಯು ಅತೃಪ್ತ ಶಾಸಕರಲ್ಲಿ ಗೊಂದಲ ಮೂಡಿರುವಂತೆ ಮತ್ತು ಒಗ್ಗಟ್ಟು ಮುರಿದಿರುವಂತೆ ಕಾಣಿಸುತ್ತಿದೆ. ಅತೃಪ್ತರನ್ನು ಯಾರೋ ಬಲವಂತದಿಂದ ಕೂಡಿ ಹಾಕಿರುವರೇ, ಅವರ ಬಂಡಾಯ ಅವರಿಗಿಂತಲೂ ಬೇರೆ ಯಾರಿಗೋ ಅಗತ್ಯವಾಗಿದೆಯೇ, ವಿಶ್ವನಾಥ್ ರು ಇವರನ್ನೆಲ್ಲ ಹಿಡಿದಿಡುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಜನರಲ್ಲಿ ಮೂಡತೊಡಗಿದೆ.












