ಸನ್ಮಾರ್ಗ ವಾರ್ತೆ
ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ತನ್ನು ಬದಿಗೊತ್ತಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರು ಸೌದಿ ಅರೇಬಿಯಾಗೆ ಹೆಚ್ಚಿನ ಸೈನಿಕರನ್ನು ರವಾನಿಸಲು ಅನುಮತಿ ನೀಡಿರುವುದು ಸೇನೆ ಮತ್ತು ಪಾರ್ಲಿಮೆಂಟಿನ ನಡುವೆ ಸಂಘರ್ಷದ ಸ್ಥಿತಿಯನ್ನು ನಿರ್ಮಿಸಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ, ‘ಮಕ್ಕಾ ರಕ್ಷಣಾ ಒಪ್ಪಂದ’ದ ಪ್ರಕಾರ ಪಾಕಿಸ್ತಾನ ಸೇನೆಯು ಸೌದಿಗೆ ಹೆಚ್ಚಿನ ಸೈನಿಕರನ್ನು ರವಾನಿಸುತ್ತಿದೆ.
ಆದರೆ, ಪಾಕಿಸ್ತಾನದ ಸಂಸತ್ತು 11 ವರ್ಷಗಳ ಹಿಂದೆ ಯೆಮೆನ್ ಸರಕಾರ ಮತ್ತು ಹೂತಿ ಸಂಘರ್ಷದಿಂದ ಪಾಕಿಸ್ತಾನ ದೂರವಿರಬೇಕೆಂದು ಸಂಸತ್ತು ಸರ್ವಾನುಮತದಿಂದ ನಿರ್ಣಯಿಸಿತ್ತು. ಮುನೀರ್ ನಡೆ ಪಾರ್ಲಿಮೆಂಟ್ ಅನ್ನು ಧಿಕ್ಕರಿಸಿದಂತೆ ಆಗಿದೆ. ಸಂಸತ್ತಿನಲ್ಲಿ ಚರ್ಚಿಸದೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಇನ್ನೊಂದು ಕಡೆ, ಅಗತ್ಯವಿರುವ ಎಲ್ಲಾ ಅಧಿಕೃತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವೇ ಈ ಸೇನಾ ನಡೆಯನ್ನು ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ವಾರ್ತಾ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ ಮಾಜ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಸೇರಿದಂತೆ ಹಲವರು ಸೇನೆಯ ಈ ಕ್ರಮವನ್ನು ವಿರೋಧಿಸಿದ್ದಾರೆ. ದೇಶದ ರಕ್ಷಣೆ ಮತ್ತು ವಿದೇಶಾಂಗ ನೀತಿಯಲ್ಲಿ ಸೇನೆಯು ಅನಗತ್ಯವಾಗಿ ಅಧಿಕಾರ ಚಲಾಯಿಸುತ್ತಿದೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳು ಪಾಕಿಸ್ತಾನದ ನಾಗರಿಕ ಸರ್ಕಾರ ಮತ್ತು ಸೇನಾ ನಾಯಕತ್ವದ ನಡುವಿನ ಅಧಿಕಾರದ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತಂದಿವೆ.












