ಗಣಿಗಾರಿಕೆ ವಿವಾದ: ರಾಜಸ್ಥಾನದಲ್ಲಿ ಮಾಜಿ ಬಿಜೆಪಿ ಶಾಸಕನ ಮೇಲೆ ಮಾರಣಾಂತಿಕ ಗುಂಪು ಹಲ್ಲೆ

0
120

ಸನ್ಮಾರ್ಗ ವಾರ್ತೆ

ಜೈಪುರ: ರಾಜಸ್ಥಾನದಲ್ಲಿ ಕ್ರಷರ್ ಘಟಕವನ್ನು ಮರುಪ್ರಾರಂಭಿಸುವ ವಿಚಾರವಾಗಿ ನಡೆದ ವಿವಾದದಲ್ಲಿ ಮಾಜಿ ಬಿಜೆಪಿ ಶಾಸಕರೊಬ್ಬರನ್ನು ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಮೃತರನ್ನು ಭರತ್‌ಪುರ ಜಿಲ್ಲೆಯ ಅತರ್ ಸಿಂಗ್ ಭಡಾನಾ ಎಂದು ಗುರುತಿಸಲಾಗಿದೆ.

ಭಡಾನಾ ಅವರು ಭೋಂಡಾ ಗ್ರಾಮದಲ್ಲಿರುವ ಕ್ರಷರ್‌ಗೆ ಭೇಟಿ ನೀಡಿದ್ದ ವೇಳೆ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಈ ಘರ್ಷಣೆಯ ಸಂದರ್ಭದಲ್ಲಿ ಭಡಾನಾ ಹಾಗೂ ಅವರ ಸಹಚರ ಗಗನ್ ಶರ್ಮಾ ಅವರ ಮೇಲೆ ಲಾಠಿ ಮತ್ತು ಕಲ್ಲುಗಳಿಂದ ದಾಳಿ ಮಾಡಲಾಗಿದೆ ಎಂದು ವೃತ್ತ ನಿರೀಕ್ಷಕ ನೀರಜ್ ಭಾರದ್ವಾಜ್ ತಿಳಿಸಿದ್ದಾರೆ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಡಾನಾ ಅವರನ್ನು ನಂತರ ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಶರ್ಮಾ ಅವರನ್ನು ವಿಶೇಷ ಚಿಕಿತ್ಸೆಗಾಗಿ ಭರತ್‌ಪುರಕ್ಕೆ ಸ್ಥಳಾಂತರಿಸಲಾಯಿತು.

ತಮ್ಮ ಗೋಮಾಳಗಳಲ್ಲಿ ಒತ್ತುವರಿ ಮತ್ತು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಭಡಾನಾ ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಮುಚ್ಚಲ್ಪಟ್ಟಿದ್ದ ಕ್ರಷರ್ ಘಟಕವನ್ನು ಮರುಪ್ರಾರಂಭಿಸುವ ಪ್ರಯತ್ನಗಳಿಂದ ಈ ಘರ್ಷಣೆ ಭುಗಿಲೆದ್ದಿದೆ. ಕಳೆದ 10-15 ದಿನಗಳಿಂದ ಕ್ರಷರ್ ಮರುಪ್ರಾರಂಭಿಸುವುದನ್ನು ವಿರೋಧಿಸಿ ತಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಗ್ರಾಮಸ್ಥರು ಹೇಳಿಕೊಳ್ಳುತ್ತಿದ್ದಾರೆ.

ಆದರೆ ಭಾನುವಾರ ಸಂಜೆ ಭಡಾನಾ ಅವರು 40 ರಿಂದ 50 ಜನರನ್ನು ಜತೆಗೆ ಕರೆದುಕೊಂಡು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಯತ್ನಿಸಿದರು, ಇದು ದೊಡ್ಡ ಮಟ್ಟದ ಘರ್ಷಣೆಗೆ ಕಾರಣವಾಯಿತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪರಸ್ಪರರ ಮೇಲೆ ಹಲ್ಲೆ ನಡೆಸಿರುವುದಾಗಿ ಎರಡೂ ಪಕ್ಷಗಳು ದೂರು ನೀಡಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಭಾರದ್ವಾಜ್ ತಿಳಿಸಿದ್ದಾರೆ. ಭಡಾನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.