“ವಿಶ್ವ ಹಿಂದೂ ಪರಿಷತ್ತಿನಲ್ಲಿ ತೊಡಗಿಸಿಕೊಂಡಿರುವೆ, ಹಾಗಂತ ಅನ್ಯ ಮತೀಯರನ್ನು ನಾನೇಕೆ ದ್ವೇಷಿಸಲಿ” ಎಂದಿದ್ದರು ಏರ್ಯ ಲಕ್ಷ್ಮೀ ನಾರಾಯಣ ಆಳ್ವರು: ಅಗಲಿದ ಸಾಹಿತಿಗೆ ಸಂತಾಪ

0
993

ಸನ್ಮಾರ್ಗ ವಾರ್ತೆ

ಬಂಟ್ವಾಳ, ಜು. 28: ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಸಂಘಟಕ ಮತ್ತು ಸಮಾಜ ಸುಧಾರಕ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ನಿನ್ನೆ ಶನಿವಾರ (ಜು.27) ರಾತ್ರಿ ಹೃದಯಾಘಾತದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು..

ಜಮಾಅತೆ ಇಸ್ಲಾಮಿ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಘಟಕವು 2008ರಲ್ಲಿ ಜಿಲ್ಲೆಯಾದ್ಯ೦ತ ಹಮ್ಮಿಕೊಂಡಿದ್ದ ಒಂದು ತಿಂಗಳ ಧಾರ್ಮಿಕ ಸೌಹಾರ್ದ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಇಡೀ ಅಭಿಯಾನದ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಾತ್ರವಲ್ಲ ಹಿಂದೂ ಮುಸ್ಲಿಮರ ನಡುವೆ ಸೌಹಾರ್ದದ ಕೊಂಡಿಯಾಗಿ ರಾಜ್ಯಮಟ್ಟದಲ್ಲಿ ಗುರುತಿಗೀಡಾಗಿದ್ದರು. ಹಿಂದೂ ಮುಸ್ಲಿಮರ ನಡುವೆ ಸೌಹಾರ್ದವನ್ನು ಉಂಟುಮಾಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡೆ ಆರಂಭಿಸಲಾಗಿದ್ದ ಆ ಅಭಿಯಾನದ ಉದ್ದಕ್ಕೂ ಸಕ್ರಿಯವಾಗಿ ಅವರು ಕಾರ್ಯನಿರ್ವಹಿಸಿದರಲ್ಲದೆ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಮಟ್ಟದಲ್ಲಿ ರಚಿಸಿದ ಧಾರ್ಮಿಕ ಸೌಹಾರ್ದ ಸಮಿತಿಯ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜೊತೆಗೆ ಜಮಾಅತೆ ಇಸ್ಲಾಮಿ ಹಿಂದ್ ನ ಮತ್ತು ಶಾಂತಿ ಪ್ರಕಾಶನದ ಹಲವಾರು ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ, ಮುಖ್ಯ ಅತಿಥಿ, ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಸಂದರ್ಭಾನುಸಾರ ಸನ್ಮಾರ್ಗ ಪತ್ರಿಕೆಗೆ ಪತ್ರ ಬರೆಯುವ ಮೂಲಕ ತನ್ನತನವನ್ನು ಮೆರೆದಿದ್ದರು. ತನಗೆ ಇಸ್ಲಾಮನ್ನು ತಿಳಿಸಿಕೊಟ್ಟದ್ದು ಜಮಾಅತೆ ಇಸ್ಲಾಮಿ ಎಂದು ಅವರು ಹಲವರಲ್ಲಿ ಹೇಳಿಕೊಂಡಿದ್ದರಲ್ಲದೆ, ತಾನು ಜಮಾಅತೆ ಇಸ್ಲಾಮಿಯನ್ನು ಸದಾ ಬೆಂಬಲಿಸುವೆ ಎಂದಿದ್ದರು.

1999ರಲ್ಲಿ ಬಿಡುಗಡೆಗೊಂಡ ಅವರ ಅವರ ಅಭಿನಂದನಾ ಗ್ರಂಥ ಏರ್ಯ ದಲ್ಲಿ ಅವರೊಂದಿಗೆ ಸಂದರ್ಶಕರು ಒಂದು ಪ್ರಶ್ನೆಯನ್ನು ಕೇಳಿದ್ದರು. ಪ್ರಶ್ನೆ ಹೀಗಿತ್ತು-

ವಿಶ್ವ ಹಿಂದೂ ಪರಿಷತ್ ನಲ್ಲಿ ನಿಮ್ಮನ್ನು ನೀವು ಆಳವಾಗಿ ತೊಡಗಿಸಿಕೊಂಡಿದ್ದೀರಲ್ಲಾ, ಇದಕ್ಕೆ ಕಾರಣಗಳೇನು? ಜಾತೀಯತೆ, ಕೋಮುವಾದದ ಆರೋಪ ಮೊದಲಾಗಿ ವಿವಾದಾಸ್ಪದವಾಗಲಿಲ್ಲವೇ?

ಅವರು ಉತ್ತರ ಸಂಕ್ಷಿಪ್ತದಲ್ಲಿ ಹೀಗಿತ್ತು-

“ನಾನು ವಿಶ್ವ ಹಿಂದೂ ಪರಿಷತ್ತನ್ನು ಸೇರುವ ಮೊದಲೇ ನನಗೆ ಬಹಳಷ್ಟು ಅನ್ಯಧರ್ಮೀಯ ಮಿತ್ರರಿದ್ದರು. ಅವರೊಡನೆ ಅಷ್ಟೇ ಆತ್ಮೀಯವಾದ ಸಂಬಂಧ ಇಂದೂ ಇದೆ. ಎಂದೂ ನಾನು ಹಿಂದುವಲ್ಲದ ಯಾರನ್ನೂ ದ್ವೇಷಿಸಿಲ್ಲ. ವಿಶ್ವದ ಎಲ್ಲೆಡೆಗಳಿಂದಲೂ ಒಳಿತನ್ನು ಸ್ವೀಕರಿಸಬೇಕೆಂದು ಋಗ್ವೇದದ ಮಂತ್ರವೇ ಹೇಳುತ್ತಿರುವಾಗ ಮತ್ತು ವಸುಧೈವ ಕುಟುಂಬದ ಭಾವನೆಯ ಮೂಲಕ ಲೋಕಾ ಸಮಸ್ತಾ ಸುಖಿನೋ ಭವಂತು ಎಂದು ಸಾರುವ ಹಿಂದೂ ಧರ್ಮದ ನಿಜವಾದ ಅನುಯಾಯಿ ನಾನಾಗಿದ್ದರೆ- ನಾನು ಅನ್ಯಮತೀಯರನ್ನು ಹೇಗೆ ದ್ವೇಷಿಸಬಲ್ಲೆ?”

ವಿಶೇಷವೆಂದರೆ, ಇವರ ಕಲಿಕೆ ಹತ್ತನೇ ತರಗತಿಗೆ ಮುಕ್ತಾಯವನ್ನು ಕಂಡಿತ್ತಾದರೂ ಆ ಬಳಿಕದ ಓದು ಅವರನ್ನು ಸಾಹಿತ್ಯ, ಸಾಂಸ್ಕೃತಿಕ, ಆಧ್ಯಾತ್ಮಿಕ ವಿಷಯಗಳ ತಜ್ಞನನ್ನಾಗಿಸಿತು. ಹಿಂದಿ ಭಾಷೆ ಕಲಿತು ರಾಷ್ಟ್ರ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಡಾ/ ಬಿ ಚಂದಯ್ಯ ಹೆಗ್ಡೆ ಅವರ ಮೂಲಕ ಇಂಗ್ಲಿಷ್ ಸಾಹಿತ್ಯವನ್ನೂ ಕರಗತ ಮಾಡಿಕೊಂಡರು. ಬಾಲ್ಯದಲ್ಲಿ ಗಾಂಧೀಜಿಯವರಿಂದ ಪ್ರಭಾವಿತರಾಗಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡರು. ಅಲ್ಲದೆ, ಗಾಂಧೀಜಿಯ ನಿಧನದ ದಿನದಂದು ಅವರಿಗೆ ಸಲ್ಲಿಸುವ ಗೌರವದ ಸಂಕೇತವಾಗಿ ದೂಮಪಾನ ಮತ್ತು ಮಾಂಸಾಹಾರವನ್ನು ಶಾಶ್ವತವಾಗಿ ತ್ಯಜಿಸಿದ್ದರು.

1946ರಲ್ಲಿ ಹರಿಜನ ಸೇವಾ ಸಂಘವನ್ನು ಸ್ಥಾಪಿಸಿ ಅಸ್ಪೃಶ್ಯತೆಯನ್ನು ನೀಗಿಸಲು ಪ್ರಯತ್ನಿಸಿದರಲ್ಲದೆ, ಅದರ ಫಲಿತಾಂಶವಾಗಿ ಹರಿಜನ ಆಳ್ವ ಎಂಬ ಗೇಲಿಗೂ ಒಳಗಾದರು. 1948ರಲ್ಲಿ ಗ್ರಾಮದಳ ಸ್ಥಾಪಿಸಿ ತನ್ನ ಗ್ರಾಮದಲ್ಲಿ ನಡೆಯುತ್ತಿದ್ದ ಇಸ್ಪೀಟು ಆಟ ನಿಲ್ಲಿಸುವಲ್ಲಿ ಯಶಸ್ವಿಯಾದರು. ಕಳ್ಳಭಟ್ಟಿ ಶರಾಬು ಮಾರಾಟ ಮತ್ತು ಜುಗಾರಿ (ಗುಡುಗುಡು) ನಿಲ್ಲಿಸುವಲ್ಲೂ ಯಶ ಕಂಡರು. 1942ರ ಕ್ವಿಟ್ ಇಂಡಿಯಾ ಚಳವಳಿಯ ಬಳಿಕ ಅವರು ಕಾಂಗ್ರೆಸ್ ಅಭಿಮಾನಿಯಾಗಿ ಬದಲಾದರು. 1952 ಮತ್ತು 57ರಲ್ಲಿ ಅವಡಿ ಮತ್ತು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮ್ಮೇಲನದಲ್ಲಿ ಭಾಗವಹಿಸಿದರು. ಎರಡು ಬಾರಿ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಲು ಆಫರ್ ಬಂದರೂ ನಯವಾಗಿ ನಿರಾಕರಿಸಿದರು.

ಇತರ ಶಿಕ್ಷಣ ಪ್ರೇಮಿಗಳ ಜೊತೆ ಸೇರಿ ಹುಟ್ಟೂರಾದ ಮೊಡಂಕಾಪುವಿನಲ್ಲಿ ಅವರು ಸ್ಥಾಪಿಸಿದ ದೀಪಿಕಾ ಹೈಸ್ಕೂಲು ಮೂರು ದಶಕಗಳನ್ನೂ ದಾಟಿ ಇವತ್ತು ಶಿಕ್ಷಣ ಸೇವೆಯಲ್ಲಿ ನಿರತವಾಗಿದೆ.

ಇವರು ಬರೆದ ರಾಮಾಶ್ವಮೇದ ತರಂಗಗಳು ಎಂಬ ಕೃತಿ 1959ರಲ್ಲಿ ಪ್ರಕಟವಾಯಿತು. ಈ ಕೃತಿಯು ಅಂದಿನ ಮೈಸೂರು ಮತ್ತು ಮದರಾಸು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿ ಪರಿಗಣಿತವಾಗಿತ್ತು. ಸ್ನೇಹಸೇತು-ಪತ್ರರೂಪದ ಕಾದಂಬರಿ; ಜೀವನ ಚಿತ್ರ-ಮುಳಿಯ ತಿಮ್ಮಪ್ಪಯ್ಯನವರ ಕುರಿತದ್ದು; ಕೃತಿವಿಮರ್ಶೆ-ನಾಗೇಗೌಡರ ಸ್ವಾಗತ ಗೀತೆ ಮತ್ತು ಮೊದಲ ಮಳೆ, ಸಂಚಯ, ಓರಗೆಗೆ ಒಲವಿನ ಒಸಗೆ ಮುಂತಾದ ಕೃತಿಗಳನ್ನು ಇವರು ಬರೆದಿದ್ದಾರೆ. ತುಳುನಾಡಿನ ಭೂತಾರಾಧನೆಯ ಕುರಿತಾದ ಸಮಗ್ರ ಅಧ್ಯಯನ ಗ್ರಂಥ `ಮಂಗಳ ತಿಮರು’ವನ್ನು ಹೊರತಂದಿದ್ದಾರೆ. ಗಾನ ಕೋಗಿಲೆ ಎಂಬ ಹೆಸರಲ್ಲಿ ಯಕ್ಷಗಾನ ಭಾಗವತ ದಾಮೋದರ ಮಂಡಚ್ಛರ ಸಂಸ್ಮರಣ ಗ್ರಂಥ ಸಂಪಾದಿಸಿದ್ದಾರೆ. 1975-77ರ ತುರ್ತುಸ್ಥಿತಿಯನ್ನು ಖಂಡಿಸಿ “ಕತ್ತೆ ಸತ್ತು ಹೋಯಿತು”ಎಂಬ ಹೆಸರಲ್ಲಿ ಅವರು ಬರೆದ ವಿಡಂಬನಾತ್ಮಕ ಕವನ ಬಹಳ ಜನಪ್ರಿಯವಾಗಿತ್ತು. ಅದನ್ನು ಆ ಬಳಿಕ ಡಾ/ ಶಿವರಾಮ ಕಾರಂತರು ಇಂಗ್ಲಿಷ್ ಗೆ ಅನುವಾದಿಸಿದ್ದರು.

ಸಂದ ಗೌರವಗಳು

dav

ಕುಂದಾಪುರದಲ್ಲಿ 1993ರಲ್ಲಿ ನಡೆದ ಆರನೇ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸೇವೆಗಾಗಿ ಸನ್ಮಾನಿತರಾದರಲ್ಲದೆ, 1994ರಲ್ಲಿ ನಡೆದ ಬಂಟವಾಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಗೊಂಡಿದ್ದರು. ಅಲ್ಲದೆ, ರಾಜ್ಯ ಯಕ್ಷಗಾನ ಮತ್ತು ಜಾನಪದ ಅಕಾಡಮಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಯಕ್ಷಗಾನ ಪರಿಷತ್ ನ ಸ್ಥಾಪನೆಯಲ್ಲೂ ಅವರದೇ ಪ್ರಧಾನ ಪಾತ್ರ. 1979ರಲ್ಲಿ ಧರ್ಮಸ್ಥಳದಲ್ಲಿ ಜರಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿ ದುಡಿದಿದ್ದಾರೆ. ಅಲ್ಲದೆ, ಹಲವಾರು-ಸಾಹಿತ್ಯ ಸಮ್ಮೇಳನ, ಕೆನರಾ ಜ್ಯೂನಿಯರ್ ಕಾಲೇಜ್ ಬೆಳ್ಳಿಹಬ್ಬ, ಬಂಟರ ಸಂಘದ ಅಮೃತ ಮಹೋತ್ಸವ, ತುಳು ಸಾಹಿತ್ಯ ಅಕಾಡಮಿ ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ, ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಸಮಿತಿ, ಪರಮೇಶ್ವರಭಟ್ಟ ಪ್ರಶಸ್ತಿ ಸಮಿತಿ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ ಸಮಿತಿಗಳ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಜೊತೆಗೇ,
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ, ವಿಬಾಗ ಅಧ್ಯಕ್ಷರಾಗಿ, ಪ್ರಾಂತೀಯ ಉಪಾಧ್ಯಕ್ಷರಾಗಿ ಮತ್ತು ಕೇಂದ್ರ ಆಡಳಿತ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಆಳ್ವರಲ್ಲಿ ಗ್ರಂಥಾಧ್ಯಯನ ಗುಣವಿತ್ತು. ಪೂರ್ವದ ಹಿಂದೂ ಸಂಸ್ಕೃತಿ ಸಮಾಜಗಳ ಅಧ್ಯಯನಕ್ಕಾಗಿ ಸಿಂಗಾಪುರ, ಮಲೇಷ್ಯಾ, ಥಾಯ್ಲಾಂಡ್, ಇಂಡೊನೇಷ್ಯಾಗಳಿಗೆ ಪ್ರವಾಸ ಹೋಗಿದ್ದಾರೆ.

ಆಳ್ವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ಮೊಡಂಕಾಪು ಬಳಿಯ ಏರ್ಯದ ಏರ್ಯಬೀಡು ನಿವಾಸದಲ್ಲಿ. ಇಸವಿ- 1926 ಮಾರ್ಚ್-19. ತಂದೆಯ ಹೆಸರು ಮಾವಂತೂರು ಸುಬ್ಬಯ್ಯ ಆಳ್ವ. ತಾಯಿ- ಸೋಮಕ್ಕ. ಆಳ್ವರು ಪತ್ನಿ ಆನಂದಿ ರೈ, ಪುತ್ರಿ ಸುಖದಾ, ಅಳಿಯ ಬಾಲಕೃಷ್ಣ ಹೆಗ್ಡೆ ಮತ್ತು ಅಪಾರ ಬಂಧು ಮಿತ್ರಾದಿಗಳನ್ನು ಅಗಲಿದ್ದಾರೆ. ಏರ್ಯ ಲಕ್ಷ್ಮೀ ನಾರಾಯಣ ಅವರ ಅಗಲಿಕೆಗೆ ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಷ್ಟ್ರಾಧ್ಯಕ್ಷ ಮೌಲಾನಾ ಸಿರಾಜುಲ್ ಹಸನ್ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಅವರ ಜೊತೆ ಈ ಹಿಂದೆ ನಡೆಸಿದ್ದ ಹಲವು ಚರ್ಚೆ, ಮಾತುಕತೆಗಳನ್ನು ಸ್ಮರಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿದ್ದ ಸರ್ವಧರ್ಮ ಸಮ್ಮೇಳನದ ಸಂದರ್ಭದಲ್ಲಿ ಅವರು ಆಳ್ವರ ಮನೆಗೆ ಭೇಟಿ ಕೊಟ್ಟ ಕ್ಷಣಗಳನ್ನು ಮತ್ತು ನಡೆಸಿದ ಮಾತುಕತೆಯನ್ನು ಹಾಗೂ ಅವರ ಆತಿಥ್ಯವನ್ನು ಸ್ಮರಿಸಿದ್ದಾರೆ. ಅಲ್ಲದೆ, ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಜ್ಯ ಅಧ್ಯಕ್ಷ ಅತರುಲ್ಲಾ ಷರೀಫ್, ಹಾಲಿ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕು೦ಞ, ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಯು., ಜಿಲ್ಲಾ ಸಂಚಾಲಕ ಸಯೀದ್ ಇಸ್ಮಾಈಲ್, ಕೆ ಎಂ ಷರೀಫ್, ಮಂಗಳೂರು ಸ್ಥಾನೀಯ ಅಧ್ಯಕ್ಷ ಕೆ ಎಂ ಅಶ್ರಫ್ ಮುಂತಾದವರು ಆಳ್ವರ ಅಗಲಿಕೆಗೆ ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಬಿ ಸಿ ರೋಡ್ ಸ್ಥಾನೀಯ ಅಧ್ಯಕ್ಷ ಅಮಾನುಲ್ಲಾ ಖಾನ್ ತರೀಕೆರೆ ಅವರ ನೇತೃತ್ವದ ತಂಡವು ಆಳ್ವರ ಮನೆಗೆ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನವನ್ನು ವ್ಯಕ್ತಪಡಿಸಿದೆ.