ಸನ್ಮಾರ್ಗ ವಾರ್ತೆ
ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಷ್ಟು ಜನ ಅಕ್ರಮ ನುಸುಳುಕೋರರನ್ನು ಗುರುತಿಸಲಾಗಿದೆ? ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ? ಎಷ್ಟು ಜನರನ್ನು ದೇಶದಿಂದ ಗಡೀಪಾರು ಮಾಡಲಾಗಿದೆ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಪ್ರಶ್ನಿಸಿದ್ದಾರೆ.
ದೇಶದ ಸುಮಾರು 14 ಕೋಟಿ ಜನರ ಸಂವಿಧಾನಾತ್ಮಕ ಮತದಾನದ ಹಕ್ಕನ್ನು ಕಸಿಯುವ ಕೆಲಸ ನಡೆಯುತ್ತಿದೆ. ಇದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಗೃಹಸಚಿವರು ನುಸುಳುಕೋರರ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅಮಿತ್ ಶಾ ಅವರ ಪ್ರಚೋದನೆಯಿಂದ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಪ್ರಕ್ರಿಯೆ ನಡೆಯುತ್ತಿದೆ. 100 ಕೋಟಿಗೂ ಹೆಚ್ಚು ಭಾರತೀಯರನ್ನು ಎಸ್ಐಆರ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದ್ದು, ಇದರ ಪಾರದರ್ಶಕ ಫಲಿತಾಂಶ ಮತ್ತು ಮಾಹಿತಿಗಳನ್ನು ತಿಳಿದುಕೊಳ್ಳುವ ಹಕ್ಕು ದೇಶದ ಜನರಿಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಸಾಮಜಿಕ ಮಾಧ್ಯಮ ಎಕ್ಸ್ ಮೂಲಕ ಅವರು ಅಮಿತ್ ಶಾರನ್ನು ಪ್ರಶ್ನಿಸಿದ್ದು ಇದೇ ವೇಳೆ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ರು ಚುನಾವಣಾ ಮೋಸದ ವಿರುದ್ಧ ದೇಶ ಒಗ್ಗೂಡಿ ಹೋರಾಟಕ್ಕಿಳಿಯಬೇಕೆಂದು ಕರೆ ನೀಡಿದ್ದಾರೆ. ಭಾರತದ ಏಕೈಕ ಧ್ವನಿ ಎಂಬ ತಲೆಬರಹದಡಿಯಲ್ಲಿ ಇದು ಕೇವಲ ಚುನಾವಣೆಯ ಹೋರಾಟ ಮಾತ್ರ ಅಲ್ಲ. ಬದಲಾಗಿ ಹಿಂದುಳಿದವರು ಬಡವರು ಹಕ್ಕು ವಂಚಿತರಿಗಾಗಿ ನಡೆಯುತ್ತಿರುವ ಹೋರಾಟ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಯುವಕರಿಗೆ ಕೆಲಸ ಮಹಿಳೆಯರಿಗೆ ಸುರಕ್ಷೆ ಮತ್ತು ಗೌರವಗಳನ್ನು ಖಚಿತಪಡಿಸಬೇಕು. ಜಾತಿ ತಾರತಮ್ಯ ನಿಲ್ಲಬೇಕು. ಅರ್ಹರಿಗೆ ಅವರ ಹಕ್ಕುಗಳು ಕೊಡಲ್ಪಡಬೇಕೆಂದೂ ಅಖಿಲೇಶ್ ಯಾದವ್ ಹೇಳಿದ್ದಾರೆ.












