ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಯೂನಸ್ ಗೆ ಅವಮಾನ

0
308

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮಾಜಿ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು ಸೋಮವಾರ ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶಿ ನಿವಾಸಿಗಳ ಗುಂಪೊಂದು ಅವಮಾನಿಸಿದೆ. ಈ ಘಟನೆಯನ್ನು ಬಾಂಗ್ಲಾದೇಶದ ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದು, “ಅವಾಮಿ ಉಗ್ರರ” ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.

ನೋಬೆಲ್ ಪ್ರಶಸ್ತಿ ವಿಜೇತ ಯೂನಸ್ ಅವರು ದೋಹಾದಿಂದ ಕತಾರ್ ಏರ್‌ವೇಸ್ ವಿಮಾನದಲ್ಲಿ ಆಗಮಿಸಿ ಟರ್ಮಿನಲ್ 8 ತಲುಪಿದ ನಂತರ ಈ ಆಕ್ರೋಶವನ್ನು ಎದುರಿಸಬೇಕಾಯಿತು ಎಂದು ಬಾಂಗ್ಲಾದೇಶದ ದಿನಪತ್ರಿಕೆ ‘ಡೈಲಿ ಸನ್’ ವರದಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಯೂನಸ್ ಅವರು ವಿಮಾನ ನಿಲ್ದಾಣದೊಳಗೆ ವೀಲ್‌ಚೇರ್‌ನಲ್ಲಿ ಕುಳಿತಿದ್ದಾಗ ಜನರು ಅವರ ವಿರುದ್ಧ ಜೋರಾಗಿ ಕೂಗಾಡುವುದು ಕಂಡುಬಂದಿದೆ. ಒಬ್ಬ ವ್ಯಕ್ತಿ, “ನೀನು ಭಯೋತ್ಪಾದಕ, ಇಲ್ಲಿಗೆ ಏಕೆ ಬಂದೆ? ನನ್ನ ದೇಶದಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡಿದ್ದೀಯಾ!” ಎಂದು ಕೂಗುತ್ತಿರುವುದು ಕೇಳಿಸುತ್ತಿತ್ತು.

ಯೂನಸ್ ಅವರನ್ನು “ಭಯೋತ್ಪಾದಕ” ಎಂದು ಕೆಲವರು ಪ್ರತಿಪಾದಿಸಿದ್ದು ಅವರಿಂದ ಬಾಂಗ್ಲಾದ ಪ್ರಜಾಪ್ರಭುತ್ವ ಕೆಟ್ಟು ಹೋಗಿದೆ ನಾಗರಿಕರು ಮತ್ತು ಸಾವಿರಾರು ಪೊಲೀಸರ ಸಾವಿಗೆ ಅವರು ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವರು “ಗೋ ಬ್ಯಾಕ್ ” ಎಂದೂ ಕೂಗುತ್ತಿದ್ದರು. ಸಮಯೋಚಿತವಾಗಿ ಮಧ್ಯೆ ಪ್ರವೇಶಿಸಿದ ಭದ್ರತಾ ಸಿಬ್ಬಂದಿ ಯೂನಸ್ ಅವರನ್ನು ಶೀಘ್ರವಾಗಿ ವಿಮಾನ ನಿಲ್ದಾಣದ ಒಳಭಾಗಕ್ಕೆ ಕರೆ ತಂದಿತು. ನಂತರ ಯೂನಸ್ ಅವರು ಸಹಾಯಕರ ನೆರವಿನೊಂದಿಗೆ ಮುಂದೆ ಸಾಗಿದರು.

ಘಟನೆಯ ಕುರಿತು ಬಾಂಗ್ಲಾ ದೇಶ ಸರಕಾರ ತೀವ್ರವಾಗಿ ಪ್ರತಿಕ್ರಿಯಿಸಿದೆ. ಪ್ರಧಾನಿಯವರ ಸಲಹೆಗಾರ ಡಾ. ಜಹೇದ್ ಉರ್ ರಹ್ಮಾನ್‌ರು ಘಟನೆಯನ್ನು ಅವಾಮಿ ಭಯೋತ್ಪಾದನೆ ಎಂದು ಹೇಳಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

“ಗಂಭೀರ ಅಪರಾಧ ಎಸಗಿದವರು ವಿಚಾರಣೆ ಎದುರಿಸಲೇಬೇಕು,” ಎಂದು ಹೇಳಿದ ಅವರು, ಅವಾಮಿ ಲೀಗ್ ಪಕ್ಷವು ಮಾನವೀಯತೆಯ ವಿರುದ್ಧ ಅಪರಾಧ ಎಸಗಿದೆ ಮತ್ತು ತನ್ನ ಗತಕಾಲದ ಕೃತ್ಯಗಳಿಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ, ಬದಲಿಗೆ ಅಸ್ಥಿರತೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ನ್ಯಾಷನಲ್ ಸಿಟಿಜನ್ ಪಾರ್ಟಿ ಸಂಚಾಲಕ ಮತ್ತು ಸಂಸದ ನಹೀದ್ ಇಸ್ಲಾಂ ಈ ಘಟನೆಯನ್ನು ಖಂಡಿಸಿದ್ದು, ನಿಷೇಧಿತ ಅವಾಮಿ ಲೀಗ್‌ನ ಕಾರ್ಯಕರ್ತರೇ ಇದಕ್ಕೆ ಹೊಣೆ ಎಂದು ಆರೋಪಿಸಿದ್ದಾರೆ.

ಬಾಂಗ್ಲಾದೇಶ ಜಮಾಅತೆ ಇಸ್ಲಾಮೀ ಪಾರ್ಟಿಯ ನಾಯಕ ಡಾ. ಸೈಯದ್ ಅಬ್ದುಲ್ಲಾ ಮೊಹಮ್ಮದ್ ತಾಹಿರ್ ಅವರು, ನೋಬೆಲ್ ಪ್ರಶಸ್ತಿ ವಿಜೇತರನ್ನು ಈ ರೀತಿ ನಡೆಸಿಕೊಂಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂನಸ್ ಮತ್ತು ಬಾಂಗ್ಲಾದೇಶ ಎರಡಕ್ಕೂ ಮಾಡಿದ ಅಪಮಾನ ಎಂದು ಹೇಳಿದ್ದಾರೆ.