ಸನ್ಮಾರ್ಗ ವಾರ್ತೆ
ದಮಾಮ್: ಪೂರ್ವ ಸೌದಿ ಅರೇಬಿಯಾದ ಬೃಹತ್ ಅಭಿವೃದ್ಧಿ ಯೋಜನೆಗಳು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಾಂತೀಯ ಅಭಿವೃದ್ಧಿ ಪ್ರಾಧಿಕಾರದ ಹಂಗಾಮಿ ಸಿಇಒ ಡಾ. ತಲಾಲ್ ಅಲ್-ಮಗ್ಲೂತ್ ತಿಳಿಸಿದ್ದು, ಈ ಕುರಿತು ಮಾಹಿತಿ ನೀಡಿದ ಅವರು ಇದಕ್ಕಾಗಿ 2,400 ಕೋಟಿಗಿಂತಲೂ ಹೆಚ್ಚು ವೆಚ್ಚವಾಗಿದೆ ಎಂದರು.
ಈ ಯೋಜನೆಗಳಲ್ಲಿ 2,400 ಕೋಟಿ ರಿಯಾಲ್ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 130ಕ್ಕೂ ಹೆಚ್ಚು ಯೋಜನೆಗಳು ಸದ್ಯ ಅಂತಿಮ ಹಂತದಲ್ಲಿದ್ದು, ಅರಾಮ್ಕೊ ವಿಶ್ವಕಪ್ ಸ್ಟೇಡಿಯಂ, ನಬ್ದ್ ಅಲ್ ಖೋಬರ್, ಅಜ್ನಾನ್ & ಬೇಫ್ರಂಟ್, ಅವೆನ್ಯೂಸ್, ಅಲ್ ಒಥೈಮ್ ಸರ್ಕಲ್ & ಅಲ್ ಒಥೈಮ್ ಪಾರ್ಕ್ ಪ್ರಮುಖ ಯೋಜನೆಗಳಾಗಿವೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಾಕಾರಗೊಳಿಸಲಾಗುತ್ತಿದೆ. ಈ ವರ್ಷ ಮತ್ತು ಮುಂಬರುವ ವರ್ಷಗಳಲ್ಲಿ ಇವುಗಳನ್ನು ಹಂತ ಹಂತವಾಗಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಮಗ್ಲೂತ್ ಹೇಳಿದರು.
ಪೂರ್ವ ವಲಯದ ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸುವುದು, ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವುದು, ಜೊತೆಗೆ ದೊಡ್ಡ ಪ್ರಮಾಣದ ಹೂಡಿಕೆ ಅವಕಾಶಗಳು ಮತ್ತು ಹೊಸ ಉದ್ಯೋಗ ಸೃಷ್ಟಿಸುವುದು ಈ ಯೋಜನೆಗಳ ಮುಖ್ಯ ಗುರಿಯಾಗಿದ್ದು, ಪೂರ್ವ ಸೌದಿಯ ಹೊಸ ಅಭಿವೃದ್ಧಿ ಯೋಜನೆಗಳು ಮತ್ತು ವಿಶ್ವಕಪ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬಂಧಿಸಿದ ದೃಶ್ಯಗಳು ಹಾಗೂ ವಿವರಗಳೊಂದಿಗೆ ಈ ವೀಡಿಯೊವನ್ನು ಹೊರತರಲಾಗಿದೆ.












