ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಭಾರತದಿಂದ ಹೊರ ಹೋಗುವಂತೆ ನೋಟಿಸ್ ಜಾರಿ ಮಾಡಿರುವುದನ್ನು ಕಾಕ್ರೋಚ್ ಜನತಾ ಪಾರ್ಟಿಯ ಸಂಯೋಜಕ ಅಭಿಜಿತ್ ದೀಪ್ಕೆ ತೀವ್ರವಾಗಿ ಟೀಕಿಸಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿ ಅಮೆರಿಕದ ಗಾಯಕಿ ಮೇರಿ ಮಿಲ್‌ಬೆನ್ ಬಹಿರಂಗವಾಗಿ ಮಾತನಾಡುತ್ತಾರೆ, ಭಾರತದಲ್ಲಿ ವಾಸಿಸುವ ಒಸಿಐ ಕಾರ್ಡ್ ಇರುವ ಇಮ್ರಾನ್ ಖಾನ್ ಸರಕಾರ ಅಥವಾ ಬಿಜೆಪಿಯ ಆಡಳಿತ ವ್ಯವಸ್ಥೆಯ ವಿರುದ್ಧ ಮಾತನಾಡಬಾರದೇ ಎಂದು ದೀಪ್ಕೆ ಸರಕಾರದ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ ತಾನು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ, ತಾನು ವಾಸಿಸುತ್ತಿರುವ ನಗರದ ಪ್ರಜೆಗಳ ಸಂಚಾರ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸಿರುವುದನ್ನು ಪ್ರಶ್ನಿಸಲು ತಾನೂ ಪ್ರತಿಭಟನೆಯಲ್ಲಿ ಭಾಗವಹಿಸಿದೆ ಎಂದು ಆಮಿರ್ ಖಾನ್ ಸೋದರಳಿಯ ಕೂಡ ಆಗಿರುವ ಇಮ್ರಾನ್ ಖಾನ್ ಹೇಳಿದ್ದಾರೆ.
ಕಳೆದ ದಿವಸ ಪ್ರಮುಖ ಅಮೆರಿಕನ್ ಗಾಯಕಿ ಮೇರಿ ಮಿಲ್‌ಬೆನ್ ಸಿಜೆಪಿಗೆ ಕೆಲವು ವಿಶೇಷ ಫಂಡಿಂಗ್ ಗ್ರೂಪ್‌ಗಳಿಂದ ಭಾರೀ ಪ್ರಮಾಣದ ಹಣ ಲಭಿಸುತ್ತಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಬೆಟ್ಟು ಮಾಡಿ ಅಭಿಜಿತ್ ದೀಪ್ಕೆ ತೀಕ್ಷ್ಣ ಟೀಕಾ ಪ್ರಹಾರ ನಡೆಸಿದ್ದಾರೆ.












