ಸನ್ಮಾರ್ಗ ವಾರ್ತೆ
ಭೋಪಾಲ್: ಸಿಸ್ಟಮ್ ಪರಿವರ್ತನ್ ಅಭಿಯಾನದ ಅಧ್ಯಕ್ಷ ಆಝಾದ್ ಸಿಂಗ್ ದಬಾಸ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಬುಧನಿ ವಿಧಾನಸಭಾ ಕ್ಷೇತ್ರದ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿಯನ್ನು ಪ್ರಚೋದಿಸಿದ್ದಾರೆಂಬ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಶುಭರಂಜನ್ ಸೇನ್ ಅವರಿಗೆ ಪತ್ರ ಬರೆದು ಉನ್ನತ ಮಟ್ಟದ ತನಿಖೆ ಹಾಗೂ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪತ್ರದ ಪ್ರಕಾರ, ಈ ಪ್ರದೇಶದಲ್ಲಿ 12 ಜನರಿಂದ 31.48 ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಸುಮಾರು 78,700 ಸಸಿಗಳು ನಾಶವಾಗಿವೆ. ಒತ್ತುವರಿಗೆ ಸಂಬಂಧಿಸಿದಂತೆ ಅರಣ್ಯ ಅಪರಾಧ ಪ್ರಕರಣ ದಾಖಲಿಸುವುದು ಹಾಗೂ ಒಕ್ಕಲೆಬ್ಬಿಸುವ ಆದೇಶ ಹೊರಡಿಸಿರುವುದನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಅರಣ್ಯ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆ ಸೇರಿದಂತೆ ಸಂಬಂಧಿತ ಕಾನೂನು ವಿಧಿಗಳಡಿ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಮರ್ಥ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್, ಕಾರ್ತಿಕೇಯ ಸಿಂಗ್ ಚೌಹಾಣ್ ಮತ್ತು ರಾಮ್ಕಾಂತ್ ಭಾರ್ಗವ ಅವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಅಡ್ಡಿಪಡಿಸುವುದರೊಂದಿಗೆ ಒತ್ತುವಳಿದಾರರನ್ನು ಪ್ರಚೋದಿಸಿದ್ದಾರೆ. ಈ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ. ಕೊಸ್ಮಿ ಪ್ರದೇಶದ ಕಂಪಾರ್ಟ್ಮೆಂಟ್ ಸಂಖ್ಯೆ ಆರ್ಎಫ್-426ರಲ್ಲಿ ಒತ್ತುವರಿಯಿಂದಾಗಿ ಗಿಡ ನೆಡುವಿಕೆಗೆ ಹಾನಿಯಾಗಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ವರದಿಯನ್ನು ಉಲ್ಲೇಖಿಸಿ ದಬಾಸ್ ಪತ್ರದಲ್ಲಿ ತಿಳಿಸಿದ್ದಾರೆ.
ಸೀಹೋರ್ ಅರಣ್ಯ ವಿಭಾಗದ ಬುಧನಿ, ರೇಹಟಿ, ಲಾಡ್ಕುಯಿ, ವೀರ್ಪುರ್ ಮತ್ತು ಇಚ್ಛಾವರ್ ಪ್ರದೇಶಗಳಲ್ಲಿ ಅರಣ್ಯ ಭೂಮಿ ಒತ್ತುವರಿ ಹಾಗೂ ಅರಣ್ಯ ಹಕ್ಕು ಪತ್ರಗಳ ಹಂಚಿಕೆಯಲ್ಲಿನ ಅನಿಯಮಿತತೆಗಳ ಕುರಿತು 2019ರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಪರಿಣಾಮಕಾರಿ ತನಿಖೆ ನಡೆದಿಲ್ಲ ಎಂದು ದಬಾಸ್ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳ ಮೇಲೆಯೂ ಅವರು ಆರೋಪ ಹೊರಿಸಿದ್ದಾರೆ. ಅಕ್ಟೋಬರ್ 11ರಂದು ಬುಧನಿ ವಿಧಾನಸಭಾ ಕ್ಷೇತ್ರದ ಕೊಸ್ಮಿ ಗ್ರಾಮದ ಬಳಿ ಅರಣ್ಯ ಅಭಿವೃದ್ಧಿ ನಿಗಮದ ಮರ ಗಿಡ ನೆಡುವ ಪ್ರದೇಶದಿಂದ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯ ವೇಳೆ ಅಡಚಣೆ ಉಂಟಾಗಿರುವುದನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.












