13 ಸಾವಿರ ಎಕರೆ ಕಾಫಿ ತೋಟದ ಮಾಲಕ ಸಿದ್ಧಾರ್ಥ್ ದಿಢೀರ್ ನಾಪತ್ತೆಗೆ ಕಾರಣವೇನು? ಚಾಲಕ ಮತ್ತು ತಂದೆಯ ಅಭಿಪ್ರಾಯವೇನು? ಇಲ್ಲಿದೆ ಡೀಟೈಲ್ಸ್

0
2402

ಮಂಗಳೂರು: ಚಿಕ್ಕಮಗಳೂರು ಮೂಲದ ಖ್ಯಾತ ಉದ್ಯಮಿ ಕೆಫೆ ಕಾಫಿ ಡೇ ಮಾಲಕ, ಬಹುಕೋಟಿ ಆಸ್ತಿಗಳ ಒಡೆಯ ಮತ್ತು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರು ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿರುವಂತೆಯೇ, ವಿವಿಧ ಅನುಮಾನಗಳಿಗೂ ಕಾರಣವಾಗಿದೆ.

ಕಂಕನಾಡಿ ಪೊಲೀಸರು ಸಿದ್ಧಾರ್ಥ್ ಅವರ ಕಾರಿನ ಚಾಲಕ ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬಸವರಾಜ್ ಹೇಳಿರುವ ಪ್ರಕಾರ, ಸಿದ್ಧಾರ್ಥ್ ಅವರು ಸಾಹೇಬ್ರು ದಾರಿಯುದ್ಧಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ. ಮಂಗಳೂರು ಸರ್ಕಲ್‍ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ ಎಂದು ಚಾಲಕ ವಿವರಿಸಿದ್ದಾರೆ.

ಸೇತುವೆ ಬಳಿ ಬಂದಾಗ, ಕಾರು ನಿಲ್ಲಿಸಿ ನೀನು ಹೋಗು, ನಾನು ವಾಕಿಂಗ್‍ಗೆ ಹೋಗಬೇಕು ಎಂದು ನನ್ನೊಂದಿಗೆ ಹೇಳಿದ್ದಾರೆ, ಹೀಗಾಗಿ ನಾನು ಕಾರು ನಿಲ್ಲಿಸಿದ್ದೇನೆ. ಹೀಗೆ ಕಾರಿನಿಂದ ಇಳಿದ ಅವರು ವಾಕ್ ಮಾಡಿದವರು ಮತ್ತೆ ವಾಪಸ್ ಕಾರ್ ಬಳಿ ಬಾರದಿರುವುದನ್ನು ಕಂಡು ಚಾಲಕ ಅವರನ್ನು ಹಿಂಬಾಲಿಸಿದ್ದಾರೆ. ಆಗ, ಮತ್ತೆ ಸಿದ್ಧಾರ್ಥ್ ಅವರು ಚಾಲಕನನ್ನು ತಡೆದಿದ್ದು, ನಾನು ಬರುತ್ತೇನೆ, ನೀನು ಹಿಂಬಾಲಿಸಬೇಡ, ಇಲ್ಲೇ ಇರು ಎಂದವರು ಮತ್ತೂ ಬಾರದಿದ್ದಾಗ ಆತಂಕಗೊಂಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದೇನೆ ಎಂದಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗಿದ್ದಾರೆ ಎಂದು ಚಾಲಕ ತಿಳಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಅದೇವೇಳೆ, ಅವರು ಹೀಗೆ ಮೊದಲೇ ನಾಪತ್ತೆಯಾಗುವುದಕ್ಕೆ ಪ್ಲಾನ್ ಮಾಡಿದ್ದಾರೆ ಎಂಬ ಅನುಮಾನವೂ ಎದುರಾಗಿದ್ದು, ಅದಕ್ಕೆ ಸಾಕ್ಷ್ಯವೆಂಬಂತೆ ಅವರು ಬರೆದಿರುವ ಪತ್ರ ಸಿಕ್ಕಿದೆ. ತಮ್ಮ ಕಂಪನಿಯ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ಬರೆದಿರುವ ಈ ಪತ್ರದಲ್ಲಿ ಹೀಗಿದೆ:

ಕಳೆದ 37 ವರ್ಷದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿರುವ ನಾನು ಕಾಫಿ ಡೇ ಮೂಲಕ 30 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಆದರೆ ಆ ಎರಡೂ ಕಂಪನಿಗಳೂ ಲಾಭ ಗಳಿಸಿ ಕೊಡುವಲ್ಲಿ ವಿಫಲವಾಗಿವೆ.

ಕಂಪನಿಯಲ್ಲಿ ಹಣ ಹೂಡಿದ್ದ ಖಾಸಗಿ ವ್ಯಕ್ತಿಗಳು ತಮ್ಮ ಷೇರನ್ನು ವಾಪಸ್ ಕೊಡುವಂತೆ ಒತ್ತಾಯ ಮಾಡುತ್ತಿದ್ದು, ಸಾಲಗಾರರು ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಇತ್ತೀಚೆಗೆ ಸ್ನೇಹಿತರೊಬ್ಬರ ಬಳಿ ನಾನು ಭಾರೀ ಪ್ರಮಾಣದಲ್ಲಿ ಸಾಲ ಮಾಡಿದ್ದೇನೆ. 6 ತಿಂಗಳ ಹಿಂದೆಯಷ್ಟೇ ಅಪಾರ ಪ್ರಮಾಣದಲ್ಲಿ ಸಾಲ ಪಡೆದಿದ್ದೇನೆ.

ಹಾಗೆಯೇ, ಆದಾಯ ತೆರಿಗೆ ಇಲಾಖೆಯಿಂದಲೂ ಕಿರುಕುಳ ಇದೆ. ಈ ಹಿಂದಿನ ಐಟಿಯ ಡಿಜಿಯವರು ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದರು. ಅದಾದ ಬಳಿಕ ಕಾಫಿ ಡೇ ಷೇರಿಗೂ ಐಟಿ ಅಡ್ಡ ಬಂತು. ಖಾಸಗಿಯವರಿಂದಲೂ ಕಿರುಕುಳ ಇದೆ. ನಾನು ಸಾಕಷ್ಟು ಹೋರಾಟ ಮಾಡಿದೆ. ಆದರೆ ಅವರ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ ಎಂದು ಪತ್ರವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೆ, ಪತ್ರದಲ್ಲಿ ಭಾವುಕವಾಗಿ ಅವರು ಬರೆದಿರುವುದೂ ಕಂಡು ಬರುತ್ತಿದೆ-

ನಾನು ಮೋಸ ಹೋದೆ. ನಮಗೆ ಕೆಲವರು ನಂಬಿಕೆ ದ್ರೋಹ ಮಾಡಿದ್ದಾರೆ. ಷೇರುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ನಾನು ಖಾಸಗಿಯಿಂದ ಸಾಲ ತೆಗೆದುಕೊಂಡಿದ್ದೆ. ನಾನು ಯಾರಿಗೂ ಮೋಸ ಮಾಡಬೇಕೆಂದು ಈ ಪತ್ರ ಬರೆಯುತ್ತಿಲ್ಲ. ಓರ್ವ ಉದ್ದಿಮೆದಾರನಾಗಿ ನಾನು ಸೋತಿದ್ದೇನೆ ಎಂದಿರುವ ಅವರು,

ಈಗ ಆಗಿರುವ ಎಲ್ಲ ತಪ್ಪುಗಳಿಗೂ ನಾನೇ ಹೊಣೆಯಾಗಿದ್ದು, ನನ್ನ ತಂಡ ಆಡಿಟರ್ಸ್ ಹಾಗೂ ಹಿರಿಯ ಆಡಳಿತ ಮಂಡಳಿಗೂ ಹಣಕಾಸು ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಬರೆದಿದ್ದಾರೆ ಎಂದು ವರದಿಯಿದೆ.

ನನ್ನ ಉದ್ದಿಮೆಯನ್ನು ಲಾಭದಾಯಕವಾಗಿ ಮಾಡಲು ಎಲ್ಲಾ ಬಾಗಿಲುಗಳು ಮುಚ್ಚಿವೆ. ಹೀಗಾಗಿ ನಾನು ಕಂಪನಿ ನಡೆಸುವುದರಲ್ಲಿ ವಿಫಲನಾದೆ. ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ ಎಂದು ಬರೆದಿದ್ದು, ಈ ಪತ್ರದ ಆಧಾರದಲ್ಲಿ ಇದೊಂದು ಆತ್ಮಹತ್ಯಾ ಪತ್ರವಾಗಿ ಬಾಹ್ಯ ನೋಟಕ್ಕೆ ಕಾಣಿಸುತ್ತಿದೆ.

ಸಿದ್ಧಾರ್ಥ್ ಅವರ ತಂದೆಯನ್ನು ಮಾಧ್ಯಮ ಪ್ರತಿನಿಧಿಗಳು ಭೇಟಿ ಮಾಡಿದ್ದು, ಅವರ ಪ್ರಕಾರ, 1983ರಲ್ಲಿ ಸಿದ್ಧಾರ್ಥ್ 2 ಲಕ್ಷ ರೂ. ಪಡೆದು ಮುಂಬೈಗೆ ಹೋದವರು ಅಲ್ಲಿ ಉದ್ಯಮ ಆರಂಭಿಸಿ ನಷ್ಟ ಅನುಭವಿಸಿ ಮನೆಗೆ ವಾಪಸ್ ಬಂದಿದ್ದರು ಮತ್ತು ಮರಳಿ ಪ್ರಯತ್ನವ ಮಾಡು ಎಂಬಂತೆ, ನಾನು ಮುಂಬೈಗೆ ಹೋಗಬೇಕು, 5 ಲಕ್ಷ ರೂ. ಕೊಡಿ ಎಂದು ಪಟ್ಟು ಹಿಡಿದು ಪಡೆದುಕೊಂಡಿದ್ದರಂತೆ. ಮಗನಿಗೆ ಹಣ ನೀಡಲು ಅವರು ಸ್ವಲ್ಪ ಜಮೀನು, ಜಾಗ ಮಾರಾಟ ಮಾಡಿದ್ದರಂತೆ.

ಆ 5 ಲಕ್ಷ ರೂ. ಹಣದಿಂದ ಆ ಬಳಿಕ ಜಗತ್ತೇ ಬೆರಗಾಗುವಂಥ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿರುವುದು ಇತಿಹಾಸ. ಅವರನ್ನು ನಂಬಿ ಇವತ್ತು ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ.

ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 13 ಸಾವಿರ ಎಕರೆ ಕಾಫಿ ತೋಟ ಹೊಂದಿರುವುದಾಗಿ ಮಾಹಿತಿ ಇದೆ. ಅವರ ವಿವಿಧ ಕಂಪನಿಗಳಲ್ಲಿ ಸುಮಾರು ಒಂದು ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ ಎಂಬುದೇ ಅವರ ಉದ್ಯಮ ಸಾಮ್ರಾಜ್ಯದ ವಿಸ್ತಾರವನ್ನು ಹೇಳುತ್ತದೆ.