ಅದಾನಿ ಮತ್ತು ಮೋದಿ ಸಂಬಂಧದ ಕುರಿತ ವಿಡಿಯೊ ಹಂಚಿಕೆಗೆ ಕಲ್ಕತ್ತಾ ಹೈಕೋರ್ಟ್ ತಡೆ

0
258

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ನಡುವಿನ ನಿಕಟ ಸಂಬಂಧದ ಆರೋಪದ ಕುರಿತ ಸಾಕ್ಷ್ಯಚಿತ್ರದ ಪ್ರಕಟಣೆ, ಅಪ್‌ಲೋಡ್ ಹಾಗೂ ಹಂಚಿಕೆಗೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಜನವರಿ 31 ರವರೆಗೆ ತಡೆ ನೀಡಿದೆ.

‘ದಿ ಫ್ರೆಂಡ್‌ಶಿಪ್ ಫೈಲ್ಸ್: ಹೌ ಮೋದಿ ಅಂಡ್ ಅದಾನಿ ಸ್ಟೋಲ್ ಇಂಡಿಯಾ’ ಎಂಬ 36 ನಿಮಿಷಗಳ ವಿಡಿಯೊ ಪ್ರಸಾರವನ್ನು ತಡೆಯಲು ಕೋರಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ತಂತ್ರಜ್ಞಾನ ಉದ್ಯಮಿ ಸಬೀರ್ ಭಾಟಿಯಾ ಮತ್ತು ಇತರರ ವಿರುದ್ಧ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ ನಂತರ ಈ ಆದೇಶ ಬಂದಿದೆ.

ಈ ವಿಡಿಯೊವನ್ನು ಅಕ್ಟೋಬರ್ 9 ರಂದು ಭಾಟಿಯಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಹಾಗೂ ಎಕ್ಸ್ (X) ನಲ್ಲೂ ಪೋಸ್ಟ್ ಮಾಡಲಾಗಿತ್ತು.

ನ್ಯಾಯಮೂರ್ತಿ ಆರ್ಯಕ್ ದತ್ ಅವರು ಸಾಕ್ಷ್ಯಚಿತ್ರವು ಸುದ್ದಿ ವರದಿಯಲ್ಲ ಎಂದು ಹೇಳಿದರು. ವಿಡಿಯೊದಲ್ಲಿ ಮಾಡಲಾದ ಆರೋಪಗಳನ್ನು ಯಾವುದೇ ಪ್ರಾಧಿಕಾರವು ದೃಢೀಕರಿಸಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸಾಕ್ಷ್ಯಚಿತ್ರದ ಶೀರ್ಷಿಕೆಯು “ಕಳ್ಳತನವನ್ನು ಬಿಂಬಿಸುತ್ತದೆ” ಹಾಗೂ ಅದರ ನಿರೂಪಣೆ ಮತ್ತು ದೃಶ್ಯಗಳನ್ನು ನೈಜ ಸಂಗತಿಗಳಂತೆ ಪ್ರಸ್ತುತಪಡಿಸಲಾಗಿರುವ ಒಂದು ನಾಟಕೀಯ ನಿರೂಪಣೆಯಾಗಿದೆ ಎಂದು ನ್ಯಾಯಾಲಯ ಬಣ್ಣಿಸಿದೆ.
“ಸಾಕ್ಷ್ಯಾಧಾರಗಳೊಂದಿಗೆ ಅರ್ಜಿದಾರರ ಮೇಲೆ ಅಥವಾ ಸರ್ಕಾರದ ನೀತಿಯ ಮೇಲೆ ಮಾಡುವ ರಚನಾತ್ಮಕ ಟೀಕೆ ಅಥವಾ ಸತ್ಯಸಂಗತಿಯ ವರದಿಗೆ ತಡೆಯಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಮೂಲ ವಿಡಿಯೊವನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿತ್ತು, ಆದರೆ ಭಾಟಿಯಾ ಅದನ್ನು ಮತ್ತೆ ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿತು. ಇದು ಮೇಲ್ನೋಟಕ್ಕೆ “ಸದ್ಭಾವನೆಯ ಕೊರತೆಯನ್ನು” ತೋರಿಸುತ್ತದೆ ಎಂದು ಹೇಳಿದೆ.

ಆನ್‌ಲೈನ್ ವಿಷಯಗಳು ಮರು-ಪೋಸ್ಟ್‌ಗಳು ಮತ್ತು ಮರು-ಅಪ್‌ಲೋಡ್‌ಗಳ ಮೂಲಕ ತ್ವರಿತವಾಗಿ ಹರಡಬಹುದು ಹಾಗೂ ಸುದೀರ್ಘ ಪ್ರಸಾರವು ನಷ್ಟ ಪರಿಹಾರದಿಂದಲೂ ಭರ್ತಿ ಮಾಡಲು ಸಾಧ್ಯವಾಗದಂತಹ ಗೌರವಕ್ಕೆ ಧಕ್ಕೆ ಉಂಟುಮಾಡಬಹುದು ಎಂದು ಕೋರ್ಟ್‌ ತಿಳಿಸಿದೆ.

ಅದಾನಿ ಎಂಟರ್‌ಪ್ರೈಸಸ್‌ನ ಅರ್ಜಿಯಲ್ಲಿ ಪಟ್ಟಿ ಮಾಡಲಾದ ಪ್ರತಿಯೊಂದು ಯುಆರ್‌ಎಲ್‌ನಲ್ಲ (URL) ಇರುವ ವಿಡಿಯೊವನ್ನು ತೆಗೆದುಹಾಕಲು ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ. ಆ ಯುಆರ್‌ಎಲ್‌ಗಳ ಮೂಲಕ ವಿಡಿಯೊ ಪ್ರವೇಶಿಸಲು ಸಾಧ್ಯವಾಗುವ ಮರು-ಪೋಸ್ಟ್‌ಗಳು, ಕೋಟ್ ಪೋಸ್ಟ್‌ಗಳು, ಶೇರ್‌ಗಳು ಹಾಗೂ ಇತರ ಬಳಕೆಯಳನ್ನು ನಿಷ್ಕ್ರಿಯಗೊಳಿಸಲು ನಿರ್ದೇಶಿಸಲಾಗಿದೆ.

ಅರ್ಜಿಯಲ್ಲಿ ಪಟ್ಟಿ ಮಾಡಲಾದ ಖಾತೆಗಳು ಮತ್ತು ಯುಆರ್‌ಎಲ್‌ಗಳ ಚಂದಾದಾರರು, ನೋಂದಣಿ ವಿವರಗಳು, ಐಪಿ (IP) ಹಾಗೂ ಪ್ರವೇಶ ಲಾಗ್‌ಗಳನ್ನು ಕಾಯ್ದಿರಿಸಲು ಯೂಟ್ಯೂಬ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ಗೆ ನ್ಯಾಯಾಲಯ ಸೂಚಿಸಿದೆ.

ಖಾತೆಗಳ ಮಾಲೀಕರನ್ನು ಗುರುತಿಸಲು ಸಾಧ್ಯವಾಗದ ಖಾತೆಗಳ ಮೂಲ ಚಂದಾದಾರರ ವಿವರಗಳನ್ನು ಎರಡು ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಅದು ವೇದಿಕೆಗಳಿಗೆ ಆದೇಶಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 31 ರಂದು ನಡೆಯಲಿದೆ.

ಅದಾನಿ ತಮ್ಮ ಗೌರವಕ್ಕೆ ಆದ ನಷ್ಟವನ್ನು 50 ಕೋಟಿ ರೂಪಾಯಿ ಎಂದು ಮೌಲ್ಯಮಾಪನ ಮಾಡಿದ್ದಾರೆ, ಆದರೆ ತಾವು ಅದನ್ನು 0 ರೂಪಾಯಿ ಎಂದು ಮೌಲ್ಯಮಾಪನ ಮಾಡುವುದಾಗಿ ಭಾಟಿಯಾ ಮಂಗಳವಾರ ಹೇಳಿದ್ದಾರೆ.
“ತಪ್ಪು ಕೆಲಸದ ಆರೋಪಗಳ ಮೂಲಕ ಗಳಿಸಿದ ಸಂಪತ್ತು ವಿಶ್ವಾಸಾರ್ಹತೆ ಅಥವಾ ಗೌರವವನ್ನು ತರುವುದಿಲ್ಲ ಎಂದು ನಾನು ವಾದಿಸುತ್ತೇನೆ” ಎಂದು ಭಾಟಿಯಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. “ಆ ಗೌರವಕ್ಕೆ ನನ್ನ ಮೌಲ್ಯಮಾಪನ? 0 ರೂಪಾಯಿ. ಮತ್ತು ಗೌರವಕ್ಕೆ ಆದ ನಷ್ಟ ಶೂನ್ಯವಾಗಿದ್ದರೆ, ಪರಿಹಾರವೂ ಶೂನ್ಯವಾಗಿರಬೇಕು” ಎಂದಿದ್ದಾರೆ.