ಇಸ್ಲಾಮೀ ಕರ್ಮಶಾಸ್ತ್ರದ ವಿದ್ವಾಂಸೆಯರಾದ ಮಹಿಳೆಯರು

0
203

✍️ ಅಬ್ದುಸ್ಸಲಾಮ್ ಪಿ.

ಇಸ್ಲಾಮ್ ಮಹಿಳೆಯನ್ನು ಸಂಕೋಲೆಯಲ್ಲಿ ಬಂಧಿಸಿಟ್ಟಿದೆಯೆಂದು ಅವರ ಚಿಂತನೆಯ ಶಕ್ತಿಯನ್ನೇ ನಿಗ್ರಹಿಸಿದೆಯೆಂದೂ ಆಕ್ರೋಶ ವ್ಯಕ್ತಪಡಿಸುವ ಆಧುನಿಕ ವಿಮರ್ಶಕರು ಒಂದು ರೀತಿಯಲ್ಲಿ ಇತಿಹಾಸವನ್ನು ಭಯಪಡುತ್ತಾರೆ. ಅಥವಾ ಇತಿಹಾಸದೊಂದಿಗೆ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಜಗತ್ತು ಅಜ್ಞಾನದ ಅಂಧಕಾರದಲ್ಲಿರುವಾಗ ಮಹಿಳೆಯನ್ನು ಕೇವಲ ಭೋಗದ ವಸ್ತುವಾಗಿ ಬಳಸುತ್ತಿರುವ ಒಂದು ಸಮಾಜದಲ್ಲಿ ಪ್ರವಾದಿ ಮುಹಮ್ಮದರು(ಸ) ಆಗಮಿಸಿದರು. ಮಹಿಳೆಯರಿಗೆ ಸಂರಕ್ಷಣೆಯ ಜೊತೆಗೆ ಜ್ಞಾನದ ಕಿರೀಟವನ್ನೇ ಅವರು ತೊಡಿಸಿದರು. ಆರಂಭ ಕಾಲದ ಇಸ್ಲಾಮೀ ಇತಿಹಾಸವನ್ನು ಗಮನಿಸಿದಾಗ ಆಕೆ ಅಡುಗೆ ಕೋಣೆಗೆ ಮಾತ್ರ ಸೀಮಿತಳಾಗಿರುವವಳಲ್ಲ, ಬದಲಾಗಿ ಪುರುಷರೊಂದಿಗೆ ಆದೇಶವನ್ನು ಹೊರಡಿಸುವ ವಿದ್ವಾಂಸರನ್ನಾಗಿಯೂ, ಕಾನೂನು ಕಟ್ಟಳೆಗಳನ್ನು ರೂಪಿಸುವ ಫಕೀಹ್‌ಗಳಾಗಿಯೂ ಅವರು ಮಾರ್ಪಡಿಸಿದರು. ಹ. ಆಯಿಶಾ(ರ) ರಂತಹ ವಿದ್ವಾಂಸೆಯರು ಪುರುಷರಾದ ಸಹಾಬಿಗಳಿಗೆ ಶಿಕ್ಷಣ ನೀಡಿದರು. ಹೀಗೆ ಶಿಕ್ಷಣ ನೀಡುವಾಗ ಅಲ್ಲಿ ಲಿಂಗ ತಾರತಮ್ಯವಿರಲಿಲ್ಲ. ಇಸ್ಲಾಮ್ ಮಹಿಳೆಯರನ್ನು ಅದುಮಿಡುತ್ತದೆ ಎಂದು ವಾದಿಸುವವರು ಶತಮಾನಗಳ ಹಿಂದೆಯೇ ಜಗತ್ತನ್ನು ವಿಸ್ಮಯಗೊಳಿಸಿದ ಈ ಜ್ಞಾನ ಶಿಖರದ ಮಹಿಳಾಮಣಿಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಾರೆ.

ಇಸ್ಲಾಮ್ ಪುರುಷರಿಗೂ ಮಹಿಳೆಯರಿಗೂ ಒಂದೇ ರೀತಿ ಜ್ಞಾನ ಆರ್ಜಿಸಿಕೊಳ್ಳಲು ಆದೇಶಿಸಿದೆ. ಅಲ್ಲಾಹನ ಪ್ರವಾದಿ ಮುಹಮ್ಮದ್(ಸ) ರು ಪುರುಷರಿಗೆ ಶಿಕ್ಷಣ ನೀಡಿ ಅವರಿಗೆ ಕುರ್‌ಆನ್ ಮತ್ತು ಧರ್ಮದ ಕಾನೂನು ಕಟ್ಟಳೆಗಳನ್ನು ನೀಡಿದಂತೆ ಮಹಿಳೆಯರ ಶಿಕ್ಷಣದ ಬಗ್ಗೆಯೂ ವಿಶೇಷ ಗಮನ ಹರಿಸಿದ್ದರು. ಆ ಕಾರಣದಿಂದಲೇ ಪುರುಷರಲ್ಲಿ ಮಹಾ ಕರ್ಮಶಾಸ್ತ್ರ ವಿದ್ವಾಂಸ(ಫುಕಹಾ) ಗಳೂ ಹದೀಸ್ ವಿದ್ವಾಂಸರೂ (ಮುಹದ್ದಿಸೀನ್), ಮತ್ತಿತರ ಶಾಸ್ತ್ರಗಳಲ್ಲಿ ನೈಪುಣ್ಯತೆ ಹೊಂದಿರುವ ಮಹಿಳೆಯರೂ ಹಾದು ಹೋಗಿದ್ದಾರೆ. ಸಂಖ್ಯೆಯಲ್ಲಿ ಸ್ವಲ್ಪ ಏರಿಳಿತ ಉಂಟಾಗಿರಬಹುದು.

ಪ್ರವಾದಿ ಮುಹಮ್ಮದ್(ಸ) ರವರಿಂದ ನೇರವಾಗಿ ಶಿಕ್ಷಣ ಪಡೆದ ಅಥವಾ ಪ್ರವಾದಿವರ್ಯರ ಶಿಕ್ಷಣದಿಂದ ಪ್ರೇರಕಗೊಂಡ ಜನರಿಂದ ಶಿಷ್ಯತ್ವ ಸ್ವೀಕರಿಸಿದ ಪ್ರಸಿದ್ಧ ಮಹಿಳಾಮಣಿಗಳ ಕುರಿತು ವಿವರಿಸಲಿದ್ದೇವೆ. ಅಂದರೆ “ಫಕೀಹ್” (ಕರ್ಮಶಾಸ್ತ್ರ ತಜ್ಞೆಯರು) ಎಂದೇ ಹೆಸರುವಾಸಿಯಾದ ಮಹಿಳೆಯರ ಸಂಕ್ಷಿಪ್ತ ವಿವರಗಳನ್ನು ನೀಡುತ್ತಿದ್ದೇನೆ.

ಉಮ್ಮುಲ್ ಮೂಮಿನೀನ್ (ಸತ್ಯವಿಶ್ವಾಸಿಗಳ ಮಾತೆ) ಹ. ಆಯಿಶಾ(ರ)

ಹಝ್ರತ್ ಅಬೂಬಕ್ಕರ್ ಸಿದ್ದೀಖ್(ರ) ಮತ್ತು ಉಮ್ಮು ರುಮಾನ್ ದಂಪತಿಗಳ ಪುತ್ರಿಯಾಗಿದ್ದಾರೆ. ಫತ್ವಾ ನೀಡುವುದರಲ್ಲಿ, ಹದೀಸ್ ವರದಿಗಾರಿಕೆಯಲ್ಲಿ ಮುಕ್ಸಿರೀನ್ (ಬಹಳಷ್ಟು ಹದೀಸ್ ವರದಿ ಮಾಡಿದವರು) ಎಂಬ ವಿಭಾಗದಲ್ಲಿ ಇವರು ಸೇರಿದ್ದಾರೆ. ಪ್ರವಾದಿವರ್ಯರ(ಸ) ನಿಧನದ ಸಂದರ್ಭದಲ್ಲಿ ಅವರಿಗೆ ಹದಿನೆಂಟು ವರ್ಷ ವಯಸ್ಸಾಗಿತ್ತು ಎಂದು ಬಹಳಷ್ಟು ವಿದ್ವಾಂಸರು ವರದಿ ಮಾಡಿದ್ದಾರೆ. ಅವರ ಶ್ರೇಷ್ಠತೆಯ ವಿಚಾರದಲ್ಲಿ ಸಾಕಷ್ಟು ಹದೀಸ್ ವರದಿಗಳು ಪ್ರಕಟವಾಗಿವೆ. ಹಿಜ್ರಾ 59 ರಲ್ಲಿ ಅವರು ಇಹಲೋಕ ತ್ಯಜಿಸಿದರು. ಅವರನ್ನು ಜನ್ನತುಲ್ ಬಕೀಅದಲ್ಲಿ ದಫನ ಮಾಡಲಾಯಿತು. ಹಾಫಿಝ್ ಇಬ್ನು ಹಜರ್, ಅಲ್ಲಾಮಾ ಝರ್ಕಾಶಿ ಮುಂತಾದ ವಿದ್ವಾಂಸರು “ಫಕೀಹ” ಎಂದು ಕರೆದಿದ್ದಾರೆ. ಅಂದರೆ ಕರ್ಮಶಾಸ್ತ್ರ ವಿದ್ವಾಂಸೆ ಎಂದಾಗಿದೆ. ಅಲ್ಲದೆ ಉನ್ನತ ಮಟ್ಟದ ಬಹಳಷ್ಟು ವಿದ್ವಾಂಸರು ಅವರಲ್ಲಿರುವ ಕರ್ಮಶಾಸ್ತ್ರಪರವಾದ ಆಳವಾದ ಚಿಂತನೆ, ಗ್ರಹಿಕೆಗೆ ಸಾಕ್ಷಿ ಪುರಾವೆಗಳನ್ನು ಒದಗಿಸುವ ಚಾಣಾಕ್ಷತೆಗೆ ಅವರಲ್ಲಿರುವ ಜ್ಞಾನವೇ ಸಾಕ್ಷಿಯಾಗಿತ್ತು. ಅಬೂ ಮೂಸಲ್ ಅಶ್‌ಅರಿ(ರ) ಅವರು ಹೇಳುತ್ತಾರೆ: “ಪ್ರವಾದಿವರ್ಯರ ಅನುಚರರಲ್ಲಿ ಸೇರಿದ ನಮಗೆ ಯಾವುದಾದರೂ ಹದೀಸ್‌ನ ಬಗ್ಗೆ ಯಾವಾಗಲಾದರೂ ಸಂಶಯ ಉಂಟಾದರೆ ನಾವು ಆಯಿಶಾ(ರ) ರನ್ನು ಭೇಟಿಯಾಗಿ ಕೇಳುತ್ತಿದ್ದೆವು. ಅವರಿಂದ ಖಂಡಿತವಾಗಿಯೂ ನಮಗೆ ಪರಿಹಾರ ಸಿಗುತ್ತಿತ್ತು.”

ಹ. ಅತಾಅ್ ಹೇಳುತ್ತಾರೆ: “ಜನರಲ್ಲಿ ಅತೀ ಶ್ರೇಷ್ಠ ಕರ್ಮಶಾಸ್ತ್ರ ಪಂಡಿತೆ(ಫಕೀಹ) ಅತೀ ಹೆಚ್ಚು ಜ್ಞಾನವಂತೆಯೂ ಹ. ಆಯಿಶಾ ಆಗಿದ್ದರು.” ಹ. ಉರ್ವ ಬಿನ್ ಝುಬೈರ್(ರ) ಹೇಳುತ್ತಾರೆ: “ಕರ್ಮಶಾಸ್ತ್ರದಲ್ಲಿ(ಫಿಖ್), ವೈದ್ಯಶಾಸ್ತ್ರದಲ್ಲಿ(ತಿಬ್ಬ್), ಕವಿತೆಗಳಲ್ಲಿ ಹ. ಆಯಿಶಾ(ರ) ರಷ್ಟು ಜ್ಞಾನವಿರುವ ಯಾರನ್ನೂ ನಾನು ಕಂಡಿಲ್ಲ.” ಹಝ್ರತ್ ಮಸ್ರೂಖ್ ಹೀಗೆ ಪ್ರಸ್ತಾಪಿಸಿದ್ದಾರೆ: “ಹಿರಿಯ ಸಹಾಬಿಗಳು ಕೂಡಾ ವಾರಸು ಸೊತ್ತು ಹಂಚಿಕೆಯ ನಿಯಮಗಳ ಕುರಿತು ಹ. ಆಯಿಶಾ(ರ) ರವರೊಡನೆ ವಿಚಾರಿಸುತ್ತಿರುವುದನ್ನು ನಾನು ನೋಡಿದ್ದೇನೆ.”