ಸಿದ್ಧಾರ್ಥರ ಹುಡುಕಾಟಕ್ಕೆ ಸಕಲ ಏರ್ಪಾಟನ್ನೂ ಮಾಡಿದ ಸಂಸದರೇ, ಸುವರ್ಣ ತ್ರಿಭುಜ ಬೋಟ್ ಕಣ್ಮರೆಯಾದಾಗ ಹೇಗೆ ವರ್ತಿಸಿದ್ದಿರಿ?

0
952

ಸುದ್ದಿ ವಿಶ್ಲೇಷಣೆ: ಅಲ್ಮೈಡಾ ಗ್ಲಾಡ್ಸನ್

ದಿನದ ಫೇಸ್ ಬುಕ್ ಪೋಸ್ಟ್

Cafe Coffee Day ಸ್ಥಾಪಕ ಹಾಗೂ ಮ್ಹಾಲಿಕ ಸಿದ್ದಾರ್ಥ ಹೆಗ್ಡೆಯವರು ನಿಗೂಢವಾಗಿ ಕಣ್ಮರೆಯಾಗಿ ಇಪ್ಪತ್ನಾಲ್ಕು ಘಂಟೆಗಳಲ್ಲಿ ನಮ್ಮ ಜನಪ್ರತಿನಿಧಿಗಳ ಆದ್ಯತೆಗಳು ಯಾವುವೆಂದು ತಿಳಿಯಲು ಸಹಕಾರಿಯಾಗಿವೆ. ಸಿದ್ದಾರ್ಥ್ ಕಣ್ಮರೆಯಾಗಿ ಕೆಲವೇ ತಾಸುಗಳಲ್ಲಿ ಕರಾವಳಿಯ ಇಬ್ಬರೂ ಸಂಸದರು ಕೇಂದ್ರ ಗೃಹಮಂತ್ರಿಯನ್ನು ಭೇಟಿಮಾಡಿ ಅವರ ಹುಡುಕಾಟಕ್ಕಾಗಿ ಏನೆಲ್ಲಾ ವ್ಯವಸ್ಥೆ ಮಾಡಬೇಕೋ, ಅದನ್ನೆಲ್ಲಾ ಮಾಡಿಕೊಟ್ಟಿದ್ದಾರೆ. ಹತ್ತಾರು ಬೋಟ್‍ಗಳು, ಹೋವರ್ ಕ್ರಾಪ್ಟ್, NDRFನ ಒಂದಿಡೀ ಬೆಟಾಲಿಯನ್, ಕರಾವಳಿಯ ಗಸ್ತುಪಡೆಯ ಸಾವಿತ್ರಿಭಾಯ್ ಫುಲೆ ಬೋಟ್, ಪೋಲೀಸ್, ಗೃಹ ರಕ್ಷಣಾ ದಳ, ಅಗ್ನಿಶಾಮಕ ದಳ, ಕರಾವಳಿ ಭದ್ರತಾ ಪಡೆ, ಕಾರವಾರ ಹಾಗೂ ಇತರೆಡೆಯ ನುರಿತ ಮುಳುಗುತಜ್ಞರು, ಭಾರತೀಯ ನೌಕಾದಳದ ಮುಳುಗುತಜ್ಞರು, ಹೆಲಿಕಾಪ್ಟರ್, ಅತ್ಯಾಧುನಿಕ ಯಾಂತ್ರಿಕ ಬೋಟ್‍ಗಳು ಎಲ್ಲವೂ ತುಂಬಿ ಹರಿಯುತ್ತಿರುವ ನೇತ್ರಾವತಿಯನ್ನು ಜಾಲಾಡುತ್ತಿದ್ದಾರೆ, ಹಗಲು ರಾತ್ರಿಯೆನ್ನದೆ, ಮಳೆಗಾಲಯೆನ್ನದೆ. ಅವರನ್ನು ಹುಡುಕುವ ಜವಾಬ್ದಾರಿ ನಮ್ಮದಲ್ಲ, ಅವರದ್ದು, ಇವರದ್ದು ಎನ್ನುವ ಮಾತುಗಳೂ ಕೇಳುತ್ತಿಲ್ಲ. ಯಾವುದೇ ತಪ್ಪಿಲ್ಲ. ಸಿದ್ದಾರ್ಥ್ ಅವರಿಗೆ ಏನಾಗಿದೆ ಎಂದು ತಿಳಿಯುವ ತನಕ ಈ ಕಾರ್ಯಾಚರಣೆ ನಡೆಯಬೇಕು. ಅವರು ಎಲ್ಲಿದ್ದರೂ ಸುರಕ್ಷಿತವಾಗಿ ವಾಪಾಸ್ ಬರಬೇಕು.

ಆದರೆ ನನಗೆ ನೋವಿರೋದು ನಮ್ಮ ಸಂಸದರ ಹಾಗೂ ಇತರ ಪ್ರತಿನಿಧಿಗಳ ಆದ್ಯತೆಯ ಬಗ್ಗೆ. ಕಳೆದ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಇದೇ ಕರಾವಳಿ ಪ್ರದೇಶದ ಮಲ್ಪೆಯಿಂದ ಮೀನುಗಾರಿಕೆಗೆ ಹೋದ ಸುವರ್ಣಾ ತ್ರಿಭುಜಾ ಬೋಟ್ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು, ಅದರಲ್ಲಿದ್ದ ಏಳು ಮಂದಿ ಮೀನುಗಾರರು ಕೂಡಾ ಕಣ್ಮರೆಯಾದರು, ಮಹಾರಾಷ್ಟ್ರದ ಮಾಲ್ವಣ ತೀರದ ಬಳಿಯಿಂದ. ಇದರ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಕರಾವಳಿಯುದ್ದಕ್ಕೂ ಈ ಸುದ್ದಿ ಹಬ್ಬಿತ್ತು. ಬೋಟ್ ಮ್ಹಾಲಕರು, ಮಲ್ಪೆಯ ಇತರ ಬೋಟ್ ಮ್ಹಾಲಕರು, ಮೀನುಗಾರರು ಯಾರಿಗೂ ಕಾಯದೇ ತಮ್ಮಷ್ಟಕ್ಕೇ ಹುಡುಕಾಟವನ್ನೂ ಆರಂಭಿಸಿದ್ದರು. ಪೋಲೀಸರಿಗೂ ಸುದ್ದಿ ತಲುಪಿತ್ತು, ಜಿಲ್ಲಾಡಳಿತಕ್ಕೂ ಇದರ ಬಗ್ಗೆ ಹೇಳಲಾಗಿತ್ತು.

ಆದರೂ ನಮ್ಮ ಜನಪ್ರತಿನಿಧಿಗಳ ಪ್ರತಿಕ್ರಿಯೆಯನ್ನು ಒಮ್ಮೆ ಯೋಚಿಸಿ ನೋಡಬೇಕು. ಇವತ್ತಿರುವ ಸಂಸದರೇ ಅಂದೂ ಇದ್ದಿದ್ದರು, ಇವತ್ತಿರುವ ಶಾಸಕರೇ ಅಂದೂ ಇದ್ದಿದ್ದರು. ಆದರೂ ಕಾಣೆಯಾದ ಮೀನುಗಾರರು ಹಾಗೂ ಬೋಟ್ ಹುಡುಕಾಟಕ್ಕಾಗಿ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಯಲೇ ಇಲ್ಲ. ಸಂಸದರು, ಶಾಸಕರು ಒಂದು ಪಕ್ಷದವರಾಗಿದ್ದರೆ, ರಾಜ್ಯ ಮೀನುಗಾರಿಕಾ ಸಚಿವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೊಂದು ಪಕ್ಷದವರು. ಎರಡೂ ಕಡೆಯವರು ಒಬ್ಬರೊಬ್ಬರ ಮೇಲೆ ಬೊಟ್ಟು ತೋರಿಸುತ್ತಲೇ ದಿನಗಳೆದರು.

ಇವತ್ತು ಸಿದ್ಧಾರ್ಥ್ ಕಾಣೆಯಾಗಿ ಇಪ್ಪತ್ನಾಲ್ಕು ತಾಸಾಗುವ ಮೊದಲೇ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದ ಇದೇ ಸಂಸದರಿಗೆ ಅವತ್ತು, ಗೃಹಮಂತ್ರಿಯನ್ನು ಭೇಟಿಯಾಗಲು ಹದಿನೇಳು ದಿನಗಳು ಬೇಕಾಯ್ತು. ಅಲ್ಲೂ ಹೋಗಿ ಗೂಬೆ ಕೂರಿಸಿದ್ದು ರಾಜ್ಯ ಸರಕಾರದ ಮೇಲೆ. ನಿಜವಾಗಿ ನೋಡುವುದಾದರೆ ಇವತ್ತು ಸಿದ್ದಾರ್ಥರನ್ನು ಹುಡುಕಲು ಕೇಂದ್ರ ಸರಕಾರ ವಹಿಸಿರುವ ಮುತುವರ್ಜಿಕ್ಕಿಂತ ಹೆಚ್ಚಿನ ಮುತುವರ್ಜಿಯನ್ನು ಅವತ್ತು ಕೇಂದ್ರ ಸರಕಾರ ವಹಿಸಬೇಕಾಗಿತ್ತು. ಯಾಕೆಂದರೆ ಬೋಟ್ ಹಾಗೂ ಮೀನುಗಾರರು ಕಾಣೆಯಾಗಿದ್ದು ಇನ್ನೊಂದು ರಾಜ್ಯದ ಸಮುದ್ರ ಗಡಿಯೊಳಗೆ. ಮೇಲಾಗಿ ನಮ್ಮ ಮೀನುಗಾರರೇ ತಮಗೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾದ ಮೀನುಗಾರರಿಂದ ತೊಂದರೆಗಳಿವೆಯೆಂದು ಬೇರೆ ಹೇಳಿದ್ದರೂ. ಆದರೂ ಯಾವತ್ತೂ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಯಲೇ ಇಲ್ಲ. ಕೊನೆಗೆ ವಿಧಿಯಿಲ್ಲದೆ ಮೀನುಗಾರರು ಕಾಣೆಯಾಗಿ ಇಪ್ಪತ್ತೆರಡು ದಿನಗಳ ಬಳಿಕವೂ ಯಾವುದೇ ಸರಿಯಾದ ಕಾರ್ಯಾಚರಣೆ ನಡೆಯದಿದ್ದಾಗ, ಮೀನುಗಾರರೇ ಜಿಲ್ಲೆಯನ್ನು ಬಂದ್ ಮಾಡಬೇಕಾಯ್ತು, ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಲು. ಅದರಲ್ಲೂ ಕೆಲವರು ರಾಜಕೀಯ ಮಾಡಿದರು. ನೌಕಾದಳದ ಬೋಟೊಂದು ಸುವರ್ಣಾ ತ್ರಿಭುಜಾವನ್ನು ಹೊಡೆದಿರಬಹುದೆಂಬ ಅನುಮಾನಗಳು ಕೆಲದಿನಗಳಲ್ಲೇ ವ್ಯಕ್ತವಾದರೂ, ನೌಕಾದಳವದವರನ್ನು ಸಂಪರ್ಕಿಸಿ, ಅದರ ಬಗ್ಗೆ ತಿಳಿಯುವ ಪ್ರಯತ್ನ ಕೂಡಾ ನಡೆಯಲಿಲ್ಲ.

ಅದರೆ ಇವತ್ತು ನೋಡಿ ಹೇಗೆ ಕೇಂದ್ರ, ರಾಜ್ಯ ಸರಕಾರವೆನ್ನದೆ, ಸಂಬಂಧಪಟ್ಟ ಕ್ಷೇತ್ರದ ಸಂಸದರು, ಸಂಬಂಧಪಡದ ಕ್ಷೇತ್ರದ ಸಂಸದರು, ಶಾಸಕರು ಎಲ್ಲರೂ ಚಿಂತಾಕ್ರಾಂತರಾಗಿದ್ದರೆ. ತಪ್ಪಲ್ಲ. ಆಗಲೇಬೇಕಾಗಿದ್ದು. ಆದರೆ ಅದ್ಯತೆಗಳು?