ಸೈಬರ್ ವಂಚನೆಗೆ ಬ್ಯಾಂಕ್‌ಗಳ ಹೊಣೆಗಾರಿಕೆ ನಿರ್ಧಾರ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ

0
254

ಸನ್ಮಾರ್ಗ ವಾರ್ತೆ

ಬೆಂಗಳೂರು: ಸೈಬರ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್‌ಗಳ ನಿರ್ಲಕ್ಷ್ಯ ಸಾಬೀತಾದಲ್ಲಿ ಗ್ರಾಹಕರಿಗೆ ಪರಿಹಾರ ನೀಡುವುದು ಬ್ಯಾಂಕ್‌ಗಳದ್ದೇ ಹೊಣೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ಸ್ವಾಗತಿಸಿದೆ.

ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಆನ್‌ಲೈನ್ ಹಣಕಾಸು ವಂಚನೆ ಸೇರಿದಂತೆ ವಿವಿಧ ಡಿಜಿಟಲ್ ಅಪರಾಧಗಳ ಹಿನ್ನೆಲೆಯಲ್ಲಿ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ನಿರ್ದೇಶನಗಳು ಸ್ವಾಗತಾರ್ಹ. ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕುಗಳು ಅಗತ್ಯ ಮುನ್ನೆಚ್ಚರಿಕೆ ಮತ್ತು ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದರೆ, ವಂಚನೆಗೆ ಒಳಗಾದ ಗ್ರಾಹಕರಿಗೆ ಕಳೆದುಕೊಂಡ ಹಣಕ್ಕೆ ಸಮಾನವಾದ ಪರಿಹಾರ ನೀಡುವ ವ್ಯವಸ್ಥೆ ಇರಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಂ ಅಹ್ಮದ್ ಅಭಿಪ್ರಾಯಿಸಿದ್ದಾರೆ.

ಡಿಜಿಟಲ್ ಅರೆಸ್ಟ್ ವಂಚನೆ ಸೇರಿದಂತೆ ಸೈಬರ್ ಅಪರಾಧಗಳನ್ನು ತಡೆಯುವಲ್ಲಿ ಬ್ಯಾಂಕ್‌ಗಳ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ಒತ್ತಿಹೇಳಿದೆ. ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೂ ಒಳಗೊಂಡ ಪೀಠವು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೂಪಿಸುತ್ತಿರುವ ನಿಯಮಗಳಲ್ಲಿ ಪರಿಹಾರ, ವಂಚನೆ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಂಸ್ಥೆಗಳ ಹೊಣೆಗಾರಿಕೆಗೆ ಸಂಬಂಧಿಸಿದ ಸ್ಪಷ್ಟ ಹಾಗೂ ಜಾರಿಗೊಳಿಸಬಹುದಾದ ನಿಬಂಧನೆಗಳು ಇರಬೇಕು ಎಂದು ತಿಳಿಸಿದೆ. ತ್ರಿಸದಸ್ಯ ಪೀಠವು ಅಕ್ಟೋಬರ್ 29ರಂದು ಡಿಜಿಟಲ್ ಅರೆಸ್ಟ್ ಮತ್ತು ಸೈಬರ್ ವಂಚನೆ ಪ್ರಕರಣಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ, ಬ್ಯಾಂಕುಗಳ ನಿರ್ಲಕ್ಷ್ಯದಿಂದ ವಂಚನೆ ಸಂಭವಿಸಿದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಕಡ್ಡಾಯ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಬೇಕೆಂದು ಸ್ಪಷ್ಟಪಡಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕವು ಇದನ್ನು ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.

ಸೈಬರ್ ವಂಚನೆಗೆ ಒಳಗಾದ ಸಾಮಾನ್ಯ ಜನರು ತಮ್ಮ ಜೀವಮಾನದ ಉಳಿತಾಯ, ನಿವೃತ್ತಿ ವೇತನ ಹಾಗೂ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ಕೇವಲ ಗ್ರಾಹಕರಿಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವುದಕ್ಕೆ ಸೀಮಿತವಾಗದೆ, ಗ್ರಾಹಕರ ಹಣ ಮತ್ತು ಖಾತೆಗಳ ಸುರಕ್ಷತೆಗೆ ಸಕ್ರಿಯ ಜವಾಬ್ದಾರಿ ವಹಿಸಬೇಕು. ವಿಶೇಷವಾಗಿ ಹಿರಿಯ ನಾಗರಿಕರು, ನಿವೃತ್ತ ನೌಕರರು, ಮಹಿಳೆಯರು ಹಾಗೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವಿಲ್ಲದ ಜನರು ಡಿಜಿಟಲ್ ಅರೆಸ್ಟ್ ಮತ್ತು ಆನ್‌ಲೈನ್ ವಂಚನೆಗೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ವಂಚಕರು ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ಹಣ ವರ್ಗಾವಣೆ ಮಾಡುವುದನ್ನು ತಡೆಯಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಬಲಿಷ್ಠ ತಂತ್ರಜ್ಞಾನ ಹಾಗೂ ನಿಗಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕವು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ ಅನ್ನು ಒತ್ತಾಯಿಸಿದೆ.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕವು ಕಳೆದ ಹಲವಾರು ತಿಂಗಳಿನಿಂದ ಸೈಬರ್ ಅಪರಾಧದ ಬಗ್ಗೆ ಅಧ್ಯಯನ ನಡೆಸಿ ‘ಡಿಜಿಟಲ್ ಸ್ವಾತಂತ್ರ್ಯ’ ಎಂಬ ಕಿರು ಪುಸ್ತಕವನ್ನು ಕೂಡ ಬಿಡುಗಡೆಗೊಳಿಸಿತ್ತು. ಅಲ್ಲದೇ, ಈ ಬಗ್ಗೆ ಗಮನ ಹರಿಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಕೂಡ ಮನವಿ ಸಲ್ಲಿಸಿತ್ತು. ಅಲ್ಲದೇ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈ ಬಗ್ಗೆ ಅಭಿಯಾನವನ್ನು ಕೂಡ ನಡೆಸಿತ್ತು. ಈ ನಡುವೆ, ಸುಪ್ರೀಂ ಕೋರ್ಟ್‌ನ ಈ ಮಹತ್ವದ ನಿಲುವು ಸೈಬರ್ ವಂಚನೆ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ. ಗ್ರಾಹಕರ ಸುರಕ್ಷತೆ ಕೇವಲ ಅವರ ವೈಯಕ್ತಿಕ ಜವಾಬ್ದಾರಿಯಲ್ಲ; ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿರುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೂ ಅಷ್ಟೇ ದೊಡ್ಡ ಹೊಣೆಗಾರಿಕೆ ಇದೆ. ಸಂತ್ರಸ್ತರನ್ನೇ ತಪ್ಪಿತಸ್ಥರಂತೆ ಕಾಣುವ ಮತ್ತು ಬ್ಯಾಂಕುಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರವೃತ್ತಿಗೆ ಅಂತ್ಯ ಹಾಡಬೇಕು. ಡಿಜಿಟಲ್ ಭಾರತ ನಿರ್ಮಾಣದ ಜೊತೆಗೆ ಜನರ ಹಣಕಾಸಿನ ಭದ್ರತೆಯನ್ನೂ ಖಾತರಿಪಡಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಂ ಅಹ್ಮದ್ ಒತ್ತಾಯಿಸಿದ್ದಾರೆ.