ಭಯಬಿತ್ತುವ ರಾಜಕಾರಣಿಗಳಿಗೆ ಪಾಠ ಹೇಳಿದ ಸೆರ್ಬಿಯಾ ಮತ್ತು ಇಸ್ರೇಲ್

0
415

ಸನ್ಮಾರ್ಗ ಸಂಪಾದಕೀಯ

ಇರಾನಿನಲ್ಲಿ ಆಡಳಿತ ಬದಲಾಯಿಸಲು ಹೊರಟ ನೇತನ್ಯಾಹು ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲರಾಗಿದ್ದಾರೆ. ಇವರ ಗಾಝಾ ದಾಳಿಯನ್ನು ಪ್ರಬಲವಾಗಿ ಬೆಂಬಲಿಸಿದ್ದ ಮತ್ತು ಇಸ್ರೇಲ್‌ಗೆ ತನ್ನ ಶಸ್ತ್ರಾಸ್ತ್ರ ಸರಬರಾಜನ್ನು ಹಲವು ಪಟ್ಟು ಹೆಚ್ಚಿಸಿದ್ದ ಸರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅಧಿಕಾರ ಕಳಕೊಂಡಿದ್ದಾರೆ. ಇವರ ಸರಕಾರವನ್ನು ಕಣ್ಣುಮುಚ್ಚಿ ಬೆಂಬಲಿಸುತ್ತಾ ಬಂದಿದ್ದ ಅಲ್ಲಿನ ಮಾಧ್ಯಮಗಳು ಒಂದೊಂದಾಗಿ ಜನರ ಕ್ಷಮೆ ಯಾಚಿಸಲು ಪ್ರಾರಂಭಿಸಿವೆ. ಇದರಲ್ಲಿ RTV ಎಂಬ ಟಿವಿ ಚಾನೆಲ್ ಲೈವ್ ಆಗಿ ಕ್ಷಮೆ ಯಾಚಿಸುತ್ತಾ, ತಾನು ಮಾಡಿರುವ ತಪ್ಪುಗಳನ್ನು' ಒಪ್ಪಿಕೊಂಡಿದೆ. 'ನಾವು ಏಕಪಕ್ಷೀಯವಾಗಿ ಕಾರ್ಯಕ್ರಮ ಪ್ರಸಾರ ಮಾಡಿದ್ದೇವೆ, ವರ್ಷಗಳಿಂದ ಈ ತಪ್ಪುಗಳನ್ನು ಮಾಡುತ್ತಾ ಬಂದಿದ್ದೇವೆ, ದೇಶದ ಸಮಸ್ಯೆಗಳನ್ನು ಮರೆಮಾಚಿದ್ದೇವೆ, ಅನೇಕ ವಿಷಯಗಳಿಗೆ ಕಣ್ಣು ಮುಚ್ಚಿದ್ದೇವೆ, ವಿಮರ್ಶೆ ಮಾಡದೇ ವರದಿ ಮಾಡಿದ್ದೇವೆ. ಆಡಳಿತಗಾರರಿಗೆ ನಾವು ಪ್ರಶ್ನೆಗಳನ್ನು ಕೇಳಲಿಲ್ಲ. ನಮ್ಮನ್ನು ಕ್ಷಮಿಸಿ...' ಎಂದು ಅಕ್ಟೋಬರ್ 26ರ ಸುದ್ದಿ ಪ್ರಸಾರದಲ್ಲಿ ಆ್ಯಂಕರ್ ಗೋರಾನ್ ಹೆರೂರ್ ಸಾರ್ವಜನಿಕರಲ್ಲಿ ಬೇಡಿಕೊಂಡಿದ್ದಾರೆ. ಈ ಚಾನೆಲ್‌ನ ಮುಖ್ಯ ಸಂಪಾದಕ ನೆನಾದ್ ಚಾಸಿಕ್ ರಾಜೀನಾಮೆ ನೀಡಿದ್ದಾರೆ. ಈ ಚಾನೆಲ್ ಎಷ್ಟು ಏಕಪಕ್ಷೀಯವಾಗಿ ವರ್ತಿಸಿತ್ತೆಂದರೆ, ಚುನಾವಣೆಯಲ್ಲಿ ಗೆದ್ದ ಸ್ಟೂಡೆಂಟ್ಸ್ ಲಿಸ್ಟ್ ಪಕ್ಷದ ವಿಜಯೋತ್ಸವವನ್ನೂ ಪ್ರಸಾರ ಮಾಡಿರಲಿಲ್ಲ. ಇದೀಗ ಈ ಕ್ಷಮೆ ಯಾಚನೆಯೊಂದಿಗೆ ಆ ವಿಜಯೋತ್ಸವದ ದೃಶ್ಯಗಳನ್ನೂ ಪ್ರಸಾರ ಮಾಡಿದೆ. ಅಂದಹಾಗೆ,

ಅಲೆಕ್ಸಾಂಡರ್ ವುಸಿಕ್ ಅವರು ತೀವ್ರ ಬಲಪಂಥೀಯ ನಿಲುವುಗಳಿಗಾಗಿ ಗುರುತಿಸಿಕೊಂಡಿದ್ದರು. 2012ರಿಂದ ನಿರಂತರ ಅಧಿಕಾರದಲ್ಲಿದ್ದ ಇವರು ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರ ಪ್ರಬಲ ಬೆಂಬಲಿಗ. ಗಾಝಾದ ಮೇಲೆ ಅವರು ನಡೆಸಿದ ದಾಳಿಯ ಮುಂಚೂಣಿ ಸಮರ್ಥಕರಲ್ಲಿ ಒಬ್ಬರು. 2023 ಅಕ್ಟೋಬರ್ 7ರ ನಂತರ ಇಸ್ರೇಲ್‌ಗೆ ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ನಿರಂತರ ಪೂರೈಸುತ್ತಾ ಬಂದವರು. ಯುರೋಪ್ ರಾಷ್ಟ್ರಗಳ ಪೈಕಿ ಇಸ್ರೇಲನ್ನು ಬೆಂಬಲಿಸುವ ಏಕೈಕ ನಾಯಕ ನಾನು ಎಂದೂ ಅವರು ಬಹಿರಂಗವಾಗಿಯೇ ಹೆಮ್ಮೆಪಟ್ಟು ಕೊಂಡಿದ್ದರು. ಮಾಧ್ಯಮಗಳು ಇವರ ತುತ್ತೂರಿಯಾದುವು. ಇವರಿಗೆ ಪ್ರಶ್ನೆ ಕೇಳುವ ಬದಲು ವಿರೋಧಿಗಳನ್ನು ಹಣಿಯುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಪ್ರತಿಯೊಂದನ್ನೂ ಸರಕಾರದ ಪರವಾಗಿ ವ್ಯಾಖ್ಯಾನಿಸ ತೊಡಗಿದುವು. ಹೀಗೆ ಮಾಧ್ಯಮದ ಸಂಪೂರ್ಣ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿದ್ದ ಮತ್ತು ಸೋಲಿಸಲು ಸಾಧ್ಯವೇ ಇಲ್ಲ ಎಂಬಂಥ ವಾತಾವರಣ ನಿರ್ಮಾಣವಾಗಿದ್ದ ಸಮಯದಲ್ಲಿ ಅಂದರೆ, 2024 ನವೆಂಬರ್‌ನಲ್ಲಿ ನೋವಿಸಾದ್ ಎಂಬಲ್ಲಿ ರೈಲು ನಿಲ್ದಾಣದ ಮೇಲ್ಛಾವಣಿ ಕುಸಿಯಿತು. 16 ಮಂದಿ ಸಾವನ್ನಪ್ಪಿದರು. ಇಲ್ಲಿಂದ ವುಸಿಕ್ ಅವರ ಪತನ ಪ್ರಾರಂಭವಾಯಿತು. ವಿದ್ಯಾರ್ಥಿ ನೇತೃತ್ವದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಭ್ರಷ್ಟಾಚಾರ, ಅಧ್ಯಕ್ಷ ವುಸಿಕ್ ಅವರ ಸರ್ವಾಧಿಕಾರಿ ಪ್ರವೃತ್ತಿ ಮತ್ತು ಸರಕಾರದ ವೈಫಲ್ಯಗಳನ್ನು ಯುವ ಸಮೂಹ ಪ್ರಶ್ನಿಸತೊಡಗಿತು. ಅಲ್ಲಿಂದ ನಿರಂತರ ಎರಡು ವರ್ಷಗಳ ವರೆಗೆ ಈ ಪ್ರತಿಭಟನೆ ನಡೆಯಿತು. ಇದರ ನಡುವೆಯೇ ಮೊನ್ನೆಮೊನ್ನೆಯಂತೆ ಸಾರ್ವತ್ರಿಕ ಚುನಾವಣೆಯೂ ನಡೆಯಿತು. ಇದರಲ್ಲಿ ವಿದ್ಯಾರ್ಥಿ ನೇತೃತ್ವದ ಸ್ಟೂಡೆಂಟ್ಸ್ ಲಿಸ್ಟ್ ಪಕ್ಷವು ಒಟ್ಟು 250 ಪಾರ್ಲಿಮೆಂಟ್ ಸ್ಥಾನಗಳ ಪೈಕಿ 140 ಸ್ಥಾನಗಳನ್ನು ಪಡೆಯುವುದರೊಂದಿಗೆ ಜಯಶಾಲಿಯಾಯಿತು. ವುಸಿಕ್ ಅವರ ಪಕ್ಷ 105 ಸ್ಥಾನಗಳನ್ನು ಪಡೆಯಿತು. ಇದರ ಬಳಿಕ ಅಲ್ಲಿನ ಮಾಧ್ಯಮಗಳು ಕ್ಷಮೆ ಯಾಚನೆಯಲ್ಲಿ ತೊಡಗಿವೆ.

ಈ ಬೆಳವಣಿಗೆಯ ತಿಂಗಳೊಳಗೆ ಇಸ್ರೇಲ್‌ನಲ್ಲೂ ಚುನಾವಣೆ ನಡೆದಿದೆ. ಈ ಚುನಾವಣೆಗಿಂತ ಎರಡು ದಿನಗಳ ಮೊದಲು ಪ್ರಧಾನಿ ನೇತನ್ಯಾಹು ಅವರು ಸೋಶಿಯಲ್ ಮೀಡಿಯಾದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿರ್ಮಿತ ಚಿತ್ರವೊಂದನ್ನು ಹಂಚಿಕೊಂಡರು. ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್‌ಗೆ ಇರಾನ್ ಅಣುಬಾಂಬ್ ದಾಳಿ ಮಾಡಿದ ಚಿತ್ರ. ಇದರಿಂದಾಗಿ ಬೆಂಕಿಯ ಹೊಗೆ ಏಳುತ್ತಿರುವುದು ಮತ್ತು ಸ್ಫೋಟದಿಂದ ಕಟ್ಟಡಗಳು ಸುಟ್ಟು ಭಸ್ಮವಾಗುತ್ತಿರುವುದಾಗಿ ಈ ಚಿತ್ರ ಸೂಚಿಸಿತ್ತು. ಇರಾನಿನಿಂದ ಇಸ್ರೇಲ್‌ಗೆ ಅಪಾಯ ಇದೆ, ಅದು ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂಬ ಸಂದೇಶವನ್ನು ಸಾರುವುದೇ ಇದರ ಉದ್ದೇಶ. ಈ ಚಿತ್ರಕ್ಕಿಂತ ವಾರ ಮೊದಲು, ಇರಾನ್ ಮೇಲೆ ದಾಳಿ ನಡೆಸಲು ಇವರು ಸೇನೆಗೆ ನಿರ್ದೇಶನ ನೀಡಿದ್ದರು. ಈ ಮೂಲಕ ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡುವುದು ಮತ್ತು ಇಸ್ರೇಲ್ ನಾಗರಿಕರಲ್ಲಿ ಭಯವನ್ನು ಬಿತ್ತಿ ಚುನಾವಣೆ ಗೆಲ್ಲುವುದು ಅವರ ಉದ್ದೇಶವಾಗಿತ್ತು. ಆದರೆ ಸೇನೆ ನಿರಾಕರಿಸಿದ್ದರಿಂದ ಈ ತಂತ್ರ ವಿಫಲವಾಯಿತು. ಅಂದಹಾಗೆ, ಭಯಬಿತ್ತಿ ಚುನಾವಣೆ ಗೆಲ್ಲುವ ಇವರ ತಂತ್ರ ಇದು ಮೊದಲ್ಲ. 1996 ರಿಂದ ಈ 2026 ರ ವರೆಗೆ 19 ವರ್ಷಗಳ ಕಾಲ ಪ್ರಧಾನಿಯಾಗಿ ಇವರು ಇಸ್ರೇಲನ್ನು ಮುನ್ನಡೆಸಿದ್ದಾರೆ. 1996 ರಿಂದ 1999ರ ವರೆಗೆ 3 ವರ್ಷಗಳ ಕಾಲ ಪ್ರಧಾನಿಯಾದ ಬಳಿಕ 2009 ರಿಂದ 2021ರ ವರೆಗೆ ದೀರ್ಘ 12 ವರ್ಷಗಳ ವರೆಗೆ ಮರಳಿ ಪ್ರಧಾನಿಯಾಗಿದ್ದಾರೆ. 2022 ರಿಂದ ಈ ವರೆಗೆ ಸುಮಾರು 3 ವರ್ಷ 10 ತಿಂಗಳ ಕಾಲ ಪ್ರಧಾನಿಯಾಗಿ ಇಸ್ರೇಲ್‌ಗೆ ನೇತೃತ್ವ ನೀಡಿದ್ದಾರೆ. ಇಷ್ಟು ದೀರ್ಘಕಾಲ ಆಳಿದ ಇನ್ನೋರ್ವ ಪ್ರಧಾನಿಯನ್ನು ಇಸ್ರೇಲ್ ಕಂಡಿಲ್ಲ. ಆದರೆ, ಈ 19 ವರ್ಷಗಳ ಉದ್ದಕ್ಕೂ ಇವರು ಇರಾನ್‌ನ್ನು ತೋರಿಸಿ ಭಯಬಿತ್ತುವುದನ್ನು ಮಾತ್ರ ನಿಲ್ಲಿಸಿಯೂ ಇಲ್ಲ. 1996ರ ಜುಲೈಯಲ್ಲಿ ಇವರು ಪ್ರಧಾನಿಯಾದ ಬೆನ್ನಿಗೇ ಅಮೇರಿಕಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಪಾರ್ಲಿಮೆಂಟ್‌ನಲ್ಲಿ ಮಾತನಾಡಿದ್ದರು ಮತ್ತು ಇರಾನಿನ ಪರಮಾಣು ಅಸ್ತ್ರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇರಾನ್ ಪರಮಾಣು ಅಸ್ತ್ರವನ್ನು ತಯಾರಿಸುತ್ತಿದೆ ಮತ್ತು ಅದನ್ನು ತಡೆಯಬೇಕಾದ ಅಗತ್ಯ ಇದೆ ಎಂದು ಹೇಳಿದ್ದರು. ಇದಕ್ಕಿಂತಲೂ ಮೊದಲು 1992 ರಲ್ಲಿ ಇವರು ಇಸ್ರೇಲ್ ಪಾರ್ಲಿಮೆಂಟ್‌ನ ಸದಸ್ಯರಾಗಿ ಮಾತನಾಡಿದಾಗಲೂ ಇರಾನ್‌ನ ಪರಮಾಣು ಬಾಂಬ್‌ನ ಬಗ್ಗೆ ಭಯಬಿತ್ತಿದ್ದರು. ಇನ್ನು ಮೂರರಿಂದ 5 ವರ್ಷಗಳ ಒಳಗೆ ಇರಾನ್ ಪರಮಾಣು ಬಾಂಬ್ ತಯಾರಿಸುವ ಸಾಮರ್ಥ್ಯ ಪಡೆಲಿದೆಯೆಂದು’ ಹೇಳಿದ್ದರು. ಆದರೆ,

ಹೀಗೆಯೇ ಭಯಬಿತ್ತಿ 34 ವರ್ಷಗಳೇ ಕಳೆದರೂ ಇರಾನ್ ಪರಮಾಣು ಬಾಂಬ್ ತಯಾರಿಸಿಲ್ಲ ಎನ್ನುವುದಕ್ಕೆ ಇಸ್ರೇಲ್ ಮತ್ತು ಅಮೆರಿಕ ಜೊತೆಗೂಡಿ ಕಳೆದ ಫೆಬ್ರವರಿಯಲ್ಲಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಸ್ಪಷ್ಟವಾಗಿದೆ. ಇಷ್ಟಿದ್ದ ಮೇಲೂ ಇವರು ಅಣುಬಾಂಬ್ ದಾಳಿ ಎಐ ಚಿತ್ರವನ್ನು ಹಂಚಿಕೊಳ್ಳುತ್ತಾರೆ ಎಂದರೆ ಭಯಬಿತ್ತುವುದನ್ನೇ ಚುನಾವಣಾ ಗೆಲುವಿನ ತಂತ್ರವನ್ನಾಗಿ ಮಾಡಿದ್ದಾರೆ ಅನ್ನುವುದು ಸ್ಪಷ್ಟ.

ನಮ್ಮ ದೇಶದಲ್ಲೂ ಚುನಾವಣೆ ಗೆಲ್ಲುವುದಕ್ಕಾಗಿ ಇದೇ ತಂತ್ರವನ್ನು ಅನುಸರಿಸಲಾಗುತ್ತಿದೆ. ಪಾಕಿಸ್ತಾನವನ್ನು ಮತ್ತು ಮುಸ್ಲಿಮರನ್ನು ತೋರಿಸಿ ಭಯ ಹರಡುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಹೀಗೆಯೇ ಮುಂದುವರಿದರೆ 2050ರ ವೇಳೆಗೆ ದೇಶ ಮುಸ್ಲಿಮ್‌ಮಯವಾಗುತ್ತದೆ ಎಂಬುದು ಈ ಭಯದ ಹಲವು ವಿಧಗಳಲ್ಲಿ ಒಂದಾಗಿದೆ. ಆದರೆ, ವಾಸ್ತವ ಹೀಗಿಲ್ಲ. ಸ್ವಾತಂತ್ರö್ಯದ ನಡೆದ 1951ರ ಮೊದಲ ಜನಗಣತಿಯಲ್ಲಿ ಈ ದೇಶದ ಮುಸ್ಲಿಮರ ಜನಸಂಖ್ಯೆ 9.5% ಇತ್ತು. ಅದರ 60 ವರ್ಷಗಳ ಬಳಿಕ 2011ರಲ್ಲಿ ನಡೆದ ಕೊನೆಯ ಜನಗಣತಿಯ ಪ್ರಕಾರ ಮುಸ್ಲಿಮರ ಜನಸಂಖ್ಯೆ 14.2%. ಅಂದರೆ, ಈ 60 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಏರಿರುವುದು ಕೇವಲ 4.8% ಮಾತ್ರ. ಹೀಗಾದರೆ ಮುಂದಿನ ಸಾವಿರ ವರ್ಷ ಕಳೆದರೂ ಈ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ವೈ. ಖುರೇಶಿ ಅವರು ತನ್ನ ಪುಸ್ತಕದಲ್ಲಿ ಅಂಕಿ ಅಂಶ ಸಹಿತ ವಿವರಿಸಿದ್ದಾರೆ. ಆದರೆ ಭಯಬಿತ್ತುವವರು ಈ ಸತ್ಯವನ್ನು ಹೇಳುತ್ತಲೇ ಇಲ್ಲ. ನಿಜವಾಗಿ,

ಸರ್ಬಿಯಾದಲ್ಲಿ ಏನು ನಡೆದಿದೆವೋ ಅದು ಅನಿರೀಕ್ಷತವಲ್ಲ. ಸುಳ್ಳು, ದಬ್ಬಾಳಿಕೆ ಮತ್ತು ಸಾರ್ವಧಿಕಾರಿ ಸ್ವರೂಪದ ಆಡಳಿತ ದೀರ್ಘಕಾಲ ಬಾಳುವುದಿಲ್ಲ. ಅಲ್ಲಿಯ ಯುವ ಸಮೂಹದಂತೆ ಈ ದೇಶದಲ್ಲೂ ಯುವ ಸಮೂಹ ಪ್ರಶ್ನೆ ಕೇಳಲು ಪ್ರಾರಂಭಿಸಿದೆ. ಇದನ್ನು ಇಲ್ಲಿನ ಮಾಧ್ಯಮಗಳು ಅರಿತುಕೊಂಡಷ್ಟು ಅವುಗಳಿಗೆ ಕ್ಷೇಮ.