ಇಲ್ಹಾನ್ ಓಮರ್ ಮತ್ತೆ ಜಯಭೇರಿ: ಟ್ರಂಪ್ ಆರೋಪಗಳಿಗೆ ಮತಗಳ ಮೂಲಕ ಉತ್ತರ

0
403

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಮಿನ್ನೆಸೋಟದ 5 ನೇ ಕಾಂಗ್ರೆಸ್ ಕ್ಷೇತ್ರದಿಂದ ಡೆಮಾಕ್ರಟಿಕ್ ಪಕ್ಷದ ಪ್ರತಿನಿಧಿ ಇಲ್ಹಾನ್ ಓಮರ್ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಸುಳ್ಳು ಆರೋಪಗಳಿಗೆ ಎದೆಗುಂದದೆ ಇಲ್ಹಾನ್ ಓಮರ್ ಅವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ (ಕೆಳಮನೆ) ಮರುಆಯ್ಕೆಯಾಗಿದ್ದಾರೆ.

ಓಮರ್ ಅವರ ವಲಸೆ ದಾಖಲೆಗಳು ಮತ್ತು ಅವರ ಹೆಸರಿಗೆ ಸಂಬಂಧಿಸಿದ ಪ್ರಮುಖ ನಕಲಿ/ಗುರುತು ವಂಚನೆ ಆರೋಪಗಳನ್ನು ಉಲ್ಲೇಖಿಸಿ, ಟ್ರಂಪ್ ಮತ್ತು ರಿಪಬ್ಲಿಕನ್ ನಾಯಕರು ಇಲ್ಹಾನ್ ಓಮರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಎಲ್ಲಾ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಕರೆದು ಓಮರ್ ಚುನಾವಣೆಯನ್ನು ಎದುರಿಸಿದ್ದರು.

ಸೊಮಾಲಿ ನಿರಾಶ್ರಿತೆಯಾಗಿ ಅಮೆರಿಕಕ್ಕೆ ಬಂದ ನಂತರ ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾದ ಇಲ್ಹಾನ್ ಓಮರ್, ಮುಂಬರುವ ದಿನಗಳಲ್ಲಿ ಮಿನ್ನೆಸೋಟದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಲವಾದ ನೆಲೆಯನ್ನು ಒದಗಿಸಲಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ, ಫೆಡರಲ್ ಏಜೆನ್ಸಿಗಳು (ಹೋಮ್‌ಲ್ಯಾಂಡ್ ಸೆಕ್ಯೂರಿಟಿ) ಇಲ್ಹಾನ್ ಓಮರ್ ಅವರ ವಾಷಿಂಗ್ಟನ್ ನಿವಾಸದ ಮೇಲೆ ದಾಳಿ ನಡೆಸಿದ್ದವು. ಅವರ ಪೌರತ್ವಕ್ಕೆ ಸಂಬಂಧಿಸಿದ ಹಿಂದಿನ ವಲಸೆ ದಾಖಲೆಗಳ ತನಿಖೆಯ ಭಾಗವಾಗಿ ಈ ದಾಳಿ ನಡೆದಿತ್ತು. ಆದರೆ ಡೆಮಾಕ್ರಟಿಕ್ ಪಕ್ಷದ ನಾಯಕರು ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದರು. ರಾಜಕೀಯ ವಿರೋಧಿಗಳನ್ನು ಗುರಿಯಾಗಿಸುವ ಆಡಳಿತದ ನಡೆಯು ಅಮೆರಿಕದ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದು ಮಾಜಿ ಅಧ್ಯಕ್ಷ ಒಬಾಮಾ ಪ್ರತಿಕ್ರಿಯಿಸಿದ್ದರು. ಅಧ್ಯಕ್ಷರ ವಿಮರ್ಶಕರನ್ನು ಗುರಿಯಾಗಿಸಿಕೊಂಡು ಓಮರ್ ಅವರ ಪೌರತ್ವವನ್ನು ರದ್ದುಗೊಳಿಸಲು ಆಡಳಿತವು ಯತ್ನಿಸುತ್ತಿದೆ ಎಂದು ಒಬಾಮಾ ಆರೋಪಿಸಿದ್ದರು.

ಈ ಮಧ್ಯೆ, ಅಮೆರಿಕದಲ್ಲಿ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಲೆ ಕಂಡುಬರುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಕ್ಷವಾದ ರಿಪಬ್ಲಿಕನ್ನರನ್ನು ಹಿಂದಿಕ್ಕಿ ಡೆಮಾಕ್ರಟ್‌ಗಳು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಭಾರಿ ಮುನ್ನಡೆ ಸಾಧಿಸುತ್ತಿದ್ದಾರೆ. ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಎರಡರ ನಿಯಂತ್ರಣವೂ ಡೆಮಾಕ್ರಟಿಕ್ ಪಕ್ಷದ ಕೈವಶವಾಗುವುದು ಖಚಿತವಾಗಿದೆ. ಪ್ರಮುಖ ಕ್ಷೇತ್ರವಾದ ಮಿಚಿಗನ್‌ನಲ್ಲಿ ಅಬ್ದುಲ್ ಅಲ್-ಸಯೀದ್ ಮುನ್ನಡೆಯಲ್ಲಿದ್ದಾರೆ. ಸಯೀದ್ ಅವರನ್ನು ಸೋಲಿಸಲು ಟ್ರಂಪ್ ಇಲ್ಲಿ ‘ಕಠಿಣ ಸ್ಪರ್ಧೆ’ ಒಡ್ಡಿದ್ದರು.