ಭಾಷೆಗಳು ಭೇಟಿಯಾದಾಗ: ಕರಾವಳಿಯ ಭಾಷಾ ಸಮುದಾಯಗಳ ಕಥೆ

0
186

✍️ ಝಿಯಾದ್ ಬೋಳಂಗಡಿ
ಬಿ.ಎ ಅರೇಬಿಕ್ ಮತ್ತು ಇಸ್ಲಾಮಿಕ್ ಸ್ಟಡೀಸ್‌, ಅಝರುಲ್ ಉಲೂಮ್ ಇಸ್ಲಾಮಿಕ್ ಮತ್ತು ಭಾಷಾ ಅಧ್ಯಯನ ಕೇಂದ್ರ, ಕೇರಳ

ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾಷೆಗಳು ಎಂದಿಗೂ ಒಂದೇ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಜನರಾಡುವ ಭಾಷೆಯು ಅವರು ಎಲ್ಲಿ ವಾಸಿಸುತ್ತಿದ್ದರು ಎಂಬುದನ್ನು ತಿಳಿಸಬಹುದು. ಆದರೆ ಕೆಲವೊಮ್ಮೆ ಅದೇ ಭಾಷೆಯು ಅವರು ಎಲ್ಲಿ ಪ್ರಯಾಣಿಸಿದರು, ಯಾರೊಂದಿಗೆ ವ್ಯಾಪಾರ ಮಾಡಿದರು, ಯಾವ ನಂಬಿಕೆಯನ್ನಿರಿಸಿದರು ಮತ್ತು ಯಾವ ಸಮುದಾಯಗಳೊಂದಿಗೆ ಸೇರಿ ಬದುಕಿದರು ಎಂಬುದನ್ನೂ ತಿಳಿಸಬಹುದು. ಉತ್ತರ ಕೇರಳದಿಂದ ಕರ್ನಾಟಕದವರೆಗೆ ಹರಡಿರುವ ಕರಾವಳಿಯು ಇಂತಹ ಭಾಷೆಗಳನ್ನು ಹೊಂದಿರುವ ವಿಶಾಲ ಪ್ರದೇಶವಾಗಿದೆ. 

ಶತಮಾನಗಳಿಂದ ಹಡಗುಗಳು ಅರಬೀ ಸಮುದ್ರವನ್ನು ದಾಟಿ ಮಸಾಲೆ ಪದಾರ್ಥಗಳು, ಬಟ್ಟೆ, ಕುದುರೆಗಳು, ವಿಚಾರಗಳು ಮತ್ತು ಜನರನ್ನು ಹೊತ್ತು ಸಾಗುತ್ತಿದ್ದವು. ಅರೇಬಿಯಾ ಮತ್ತು ಪರ್ಷಿಯಾದಿಂದ ವ್ಯಾಪಾರಿಗಳು ಬಂದರು. ವಿವಿಧ ಪ್ರದೇಶಗಳಿಂದ ಸಮುದಾಯಗಳು ವಲಸೆ ಬಂದವು. ಧಾರ್ಮಿಕ ಗುರುಗಳು, ವ್ಯಾಪಾರಿಗಳು ಮತ್ತು ವಸತಿಗಾರರು ಕರಾವಳಿಯಲ್ಲಿ ಹೊಸ ಜೀವನವನ್ನು ಕಟ್ಟಿಕೊಂಡರು. ಸ್ಥಳೀಯ ಜನರು ಮಾರುಕಟ್ಟೆಗಳಲ್ಲಿ, ಬಂದರುಗಳಲ್ಲಿ, ಮಸೀದಿಗಳಲ್ಲಿ, ದೇವಾಲಯಗಳಲ್ಲಿ, ಚರ್ಚುಗಳಲ್ಲಿ ಮತ್ತು ಮನೆಗಳಲ್ಲಿ ಅವರೊಂದಿಗೆ ಬೆರೆತರು. ಕೇವಲ ಸರಕುಗಳನ್ನು ಮಾತ್ರ ಅವರು ವಿನಿಮಯ ಮಾಡಿಕೊಳ್ಳಲಿಲ್ಲ. ಅದರೊಂದಿಗೆ ಪದಗಳನ್ನೂ ವಿನಿಮಯ ಮಾಡಿಕೊಂಡರು.

ತಲೆಮಾರುಗಳ ಕಾಲ ನಡೆದ ಈ ಸಂಪರ್ಕಗಳಿಂದ ಕೊಂಕಣಿ, ಬ್ಯಾರಿ, ತುಳು ಮತ್ತು ಮೋಯ, ಮಲಯಾಳಂ ಮುಂತಾದ ಭಾಷಾ ಸಮುದಾಯಗಳು ರೂಪುಗೊಂಡವು. ಪ್ರತಿಯೊಂದು ಭಾಷೆಯೂ ತನ್ನದೇ ಆದ ಗುರುತನ್ನು ಬೆಳೆಸಿಕೊಂಡರೂ, ಸುತ್ತಮುತ್ತಲಿನ ಭಾಷೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರಲಿಲ್ಲ. ಈ ಫಲವಾಗಿ ಒಂದು ಅದ್ಭುತವಾದ ಭಾಷಾ ವೈವಿಧ್ಯತೆ ರೂಪುಗೊಂಡಿತು. ಈ ಭಾಷೆಗಳು ಜನರ ವಲಸೆ ಮತ್ತು ಪರಸ್ಪರ ಸಂಪರ್ಕದ ಇತಿಹಾಸವನ್ನು ತಮ್ಮೊಳಗೆ ಸಂಗ್ರಹಿಸಿಕೊಂಡಿವೆ.

ಕರಾವಳಿ ವಿಭಜಿಸುವ ಗಡಿಯಲ್ಲ, ಪರಸ್ಪರ ಬೆಸೆಯುವ ಸಂಗಮ

ಈ ಭಾಷೆಗಳ ಇತಿಹಾಸವನ್ನು ತಿಳಿದುಕೊಳ್ಳಲು ಮೊದಲು ಇಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಭಾರತದ ಪಶ್ಚಿಮ ಕರಾವಳಿಯು ಅರೇಬಿಯಾ, ಪರ್ಷಿಯಾ, ಪೂರ್ವ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾಗಳೊಂದಿಗೆ ದಕ್ಷಿಣ ಭಾರತವನ್ನು ಸಂಪರ್ಕಿಸುವ ಹಿಂದೂ ಮಹಾಸಾಗರದ ಪ್ರಮುಖ ‌ವ್ಯಾಪಾರ ಮಾರ್ಗಗಳ ಭಾಗವಾಗಿತ್ತು. ಮಂಗಳೂರು, ಬಾರ್ಕೂರು, ಭಟ್ಕಳ ಮತ್ತು ಕಾಸರಗೋಡು ಮುಂತಾದ ಬಂದರುಗಳು ವ್ಯಾಪಾರದ ಪ್ರಮುಖ ಕೇಂದ್ರಗಳಾಗಿದ್ದವು. ಮಸಾಲೆ ಪದಾರ್ಥಗಳು, ಬಟ್ಟೆಗಳು, ಅಕ್ಕಿ, ತೆಂಗಿನಕಾಯಿ, ಶ್ರೀಗಂಧ ಮತ್ತು ಇತರ ವಸ್ತುಗಳಿಗಾಗಿ ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದರು. ಅವರೊಂದಿಗೆ ಭಾಷೆಗಳು, ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳೂ ಬಂದವು. ಕೆಲವು ವ್ಯಾಪಾರಿಗಳು ಇಲ್ಲಿಯೇ ಶಾಶ್ವತವಾಗಿ ನೆಲೆಸಿದರು. ಕೆಲವರು ಸ್ಥಳೀಯರನ್ನು ವಿವಾಹವಾದರು. ಇನ್ನೂ ಕೆಲವರು ಈ ಕರಾವಳಿ ಪ್ರದೇಶ ಮತ್ತು ವಿದೇಶದ ವ್ಯಾಪಾರ ಕೇಂದ್ರಗಳ ನಡುವೆ‌ ನಿರಂತರವಾಗಿ ಪ್ರಯಾಣಿಸುತ್ತಿದ್ದರು.

ದೈನಂದಿನ ಸಂವಹನಕ್ಕಾಗಿ ಎಲ್ಲಾ ವರ್ಗದ ಜನರು ತಮ್ಮ ಭಾಷೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಒಬ್ಬ ವ್ಯಾಪಾರಿ ತನ್ನ ಮೂಲ ಭಾಷೆಯನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿರಲಿಲ್ಲ. ಅದೇ ರೀತಿ ಸ್ಥಳೀಯ ಸಮುದಾಯವೂ ತನ್ನ ಭಾಷೆಯನ್ನು ತ್ಯಜಿಸಬೇಕಾಗಿರಲಿಲ್ಲ. ಬದಲಾಗಿ, ಪರಸ್ಪರ ಅರ್ಥಮಾಡಿಕೊಳ್ಳಲು ಅಗತ್ಯವಾದ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಅವರು ಪರಸ್ಪರರಿಂದ ಪಡೆದುಕೊಂಡರು. ಈ ಪ್ರಕ್ರಿಯೆ ತಲೆಮಾರುಗಳ ಕಾಲ ಮುಂದುವರಿಯಿತು. ಹೀಗಾಗಿ ಈ ಪ್ರದೇಶಗಳಲ್ಲಿ ಬೆಳೆದ ಭಾಷೆಗಳು ವಿವಿಧ ಸಮುದಾಯಗಳ ಸಂಪರ್ಕದ ದಾಖಲೆಗಳಾಗಿ ಮಾರ್ಪಟ್ಟವು.

ಈ ಭಾಷೆಗಳ ಪದಸಂಪತ್ತು, ಉಚ್ಚಾರಣೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳಲ್ಲಿ ಪರಸ್ಪರ ಸಂಪರ್ಕ ಹೊಂದಿದ ಸಮುದಾಯಗಳ ಗುರುತುಗಳನ್ನು ಕಾಣಬಹುದು. ಸಂಶೋಧನೆಯ ಪ್ರಕಾರ, ಈ ಭಾಷೆಗಳ ರೂಪುಗೊಳ್ಳುವಿಕೆ ಪ್ರತ್ಯೇಕವಾಗಿ ನಡೆದ ಬೆಳವಣಿಗೆಯಲ್ಲ; ಬದಲಾಗಿ ವಿವಿಧ ಪ್ರದೇಶಗಳ ದೀರ್ಘಕಾಲದ ಸಂಪರ್ಕಗಳಿಂದ ರೂಪುಗೊಂಡ ಪ್ರಕ್ರಿಯೆಯಾಗಿದೆ.

ಕೊಂಕಣಿ: ಜನರೊಂದಿಗೆ ಪ್ರಯಾಣಿಸಿದ ಭಾಷೆ

ಕೊಂಕಣಿ ಇಂಡೋ-ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದೆ. ಇದು ಪಶ್ಚಿಮ ಕರಾವಳಿ, ವಿಶೇಷವಾಗಿ ಕೊಂಕಣ ಪ್ರದೇಶ, ಗೋವಾ ಮತ್ತು ಕರ್ನಾಟಕ ಹಾಗೂ ಕೇರಳದ ಕೆಲವು ಕರಾವಳಿ ಪ್ರದೇಶಗಳೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿದೆ. ಆದ್ದರಿಂದ ಕೊಂಕಣಿಯ ಇತಿಹಾಸವು ವಲಸೆಯ ಇತಿಹಾಸವೂ ಹೌದು. 16ನೇ ಶತಮಾನ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಯ ನಂತರ ಒಂದು ಪ್ರಮುಖ ವಲಸೆ ನಡೆಯಿತು. ಕೊಂಕಣಿ ಮಾತನಾಡುವ ಸಮುದಾಯಗಳು ದಕ್ಷಿಣದ ಕಡೆಗೆ ವಲಸೆ ಹೋಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಚ್ಚಿ ಮುಂತಾದ ಪ್ರದೇಶಗಳಲ್ಲಿ ನೆಲೆಸಿದರು. ಈ ಸಮುದಾಯಗಳು  ಭಾಷೆಯೊಂದಿಗೆ ಧಾರ್ಮಿಕ ಸಂಪ್ರದಾಯಗಳು, ಸಾಂಸ್ಕೃತಿಕ ಆಚರಣೆಗಳು ಮತ್ತು ತಮ್ಮ ಸಮುದಾಯದ ಸಂಸ್ಥೆಗಳನ್ನೂ ತಮ್ಮೊಂದಿಗೆ ತಂದರು. ಈ ಕಾರಣಗಳಿಂದ ತಮ್ಮ ಹಿಂದಿನ ನೆಲೆಯಿಂದ ವಲಸೆ ಹೋದ ನಂತರವೂ ಕೊಂಕಣಿ ಭಾಷೆಯನ್ನು ಉಳಿಸಿಕೊಳ್ಳಲು ಇಲ್ಲಿನ ದೇವಾಲಯಗಳು, ಚರ್ಚುಗಳು, ಶಾಲೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು‌ ಸಹಾಯ ಮಾಡಿದವು. ಆದರೆ ವಲಸೆಯಿಂದ ಭಾಷೆ ಬದಲಾಗದೆ ಉಳಿಯಲಿಲ್ಲ.

ಕೊಂಕಣಿ ಮಾತನಾಡುವವರು ಕನ್ನಡ, ತುಳು, ಮಲಯಾಳಂ ಮತ್ತು ಇತರ ಪ್ರಾದೇಶಿಕ ಭಾಷೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕಾಲಕ್ರಮೇಣ ಈ ಸಂಪರ್ಕವು ಕೊಂಕಣಿಯ ಪದಸಂಪತ್ತು ಮತ್ತು ಉಚ್ಚಾರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿಗೆ ಕಾರಣವಾಯಿತು. ಈ ವ್ಯತ್ಯಾಸಗಳಿಗೆ ವ್ಯಾಪಾರವು ಮತ್ತಷ್ಟು ಪ್ರಭಾವವನ್ನು ತಂದಿತು. ಕೊಂಕಣ ಕರಾವಳಿಯು ಅರೇಬಿಯಾ, ಪರ್ಷಿಯಾ, ಪೂರ್ವ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದೊಂದಿಗೆ ಬಹುಕಾಲದಿಂದ ಸಂಪರ್ಕ ಹೊಂದಿತ್ತು. ಪೋರ್ಚುಗೀಸ್ ಆಳ್ವಿಕೆಯು ಆಡಳಿತ, ಶಿಕ್ಷಣ, ಆಹಾರ, ಕ್ರೈಸ್ತ ಧರ್ಮ ಮತ್ತು ಇತರ ಜೀವನ ಕ್ಷೇತ್ರಗಳಿಗೆ ಸಂಬಂಧಿಸಿದ ಹೊಸ ಪದಗಳನ್ನು ಪರಿಚಯಿಸಿತು. ಹೀಗಾಗಿ ಕೊಂಕಣಿ ಕೇವಲ ಹಿಂದಿನಿಂದ ಬಂದ ಭಾಷೆಯಾಗಿರದೆ, ಹೊಸ ಪರಿಸರಗಳಿಗೆ ಹೊಂದಿಕೊಳ್ಳುತ್ತಾ ತನ್ನದೇ ಆದ ಗುರುತನ್ನು ಉಳಿಸಿಕೊಂಡ ಭಾಷೆಯಾಯಿತು.

1992ರಲ್ಲಿ ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಕೊಂಕಣಿ ಭಾಷೆಗೆ  ಅಧಿಕೃತ ಭಾಷೆಗಳ ಸಾಲಿನಲ್ಲಿ ಸ್ಥಾನ ದೊರೆತದ್ದು ಅದರ ಸಂರಕ್ಷಣೆ, ಸಾಹಿತ್ಯ ಮತ್ತು ಸಂಶೋಧನೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡಿತು.

ಬ್ಯಾರಿ: ಕರಾವಳಿ ಸಂಪರ್ಕದಿಂದ ರೂಪುಗೊಂಡ ಭಾಷೆ

ವಲಸೆಯ ಮೂಲಕ ಒಂದು ಭಾಷೆ ಹೇಗೆ ವಿವಿಧ ಪ್ರದೇಶಗಳಿಗೆ ಸಾಗಬಹುದು ಎಂಬುದನ್ನು ಕೊಂಕಣಿಯು ತೋರಿಸಿದರೆ, ಬ್ಯಾರಿ ಭಾಷೆಯು ದೀರ್ಘಕಾಲದ ಸಂಪರ್ಕವು ಹೇಗೆ ಒಂದು ವಿಶಿಷ್ಟ ಭಾಷಾ ಸಮುದಾಯವನ್ನು ರೂಪಿಸಬಹುದು ಎಂಬುದನ್ನು ತೋರಿಸುತ್ತದೆ. ಬ್ಯಾರಿ ಭಾಷೆಯನ್ನು ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಸಮುದಾಯಗಳು ಮಾತನಾಡುತ್ತವೆ. ಕಾಸರಗೋಡಿನ ಕೆಲವು ಭಾಗಗಳಲ್ಲಿಯೂ ಬ್ಯಾರಿ ಮಾತನಾಡುವವರು ಇದ್ದಾರೆ. ಈ ಇತಿಹಾಸವು ಪಶ್ಚಿಮ ಕರಾವಳಿಯ ಅರಬ್ ವ್ಯಾಪಾರಿಗಳೊಂದಿಗಿನ ದೀರ್ಘಕಾಲದ ಸಂಬಂಧದೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿದೆ.

ಹಿಂದೂ ಮಹಾಸಾಗರದ ವ್ಯಾಪಾರದ ಆರಂಭಿಕ ಶತಮಾನಗಳಿಂದಲೇ ಅರಬ್ ವ್ಯಾಪಾರಿಗಳು ಮಲಬಾರ್ ಮತ್ತು ಕೆನರಾ ಕರಾವಳಿಯ ಬಂದರುಗಳಿಗೆ ಬರುತ್ತಿದ್ದರು. ಅವರಲ್ಲಿ ಕೆಲವರು ಶಾಶ್ವತವಾಗಿ ಇಲ್ಲೇ ನೆಲೆಸಿ, ಕುಟುಂಬಗಳು ಹಾಗೂ ಸಮುದಾಯಗಳನ್ನು ಕಟ್ಟಿದರು. ಈ ಸಮುದಾಯಗಳು ತುಳು, ಕನ್ನಡ ಮತ್ತು ಮಲಯಾಳಂ ಮಾತನಾಡುವ ಜನರ ನಡುವೆ ವಾಸಿಸುತ್ತಿದ್ದವು. ಅವರ ನಡುವಿನ ಪರಸ್ಪರ ಸಂವಹನವು ಅಪರೂಪದ ಸಂಗತಿಯಾಗಿರದೆ ಅದು ದೈನಂದಿನ ಜೀವನದಲ್ಲಿ ನಿರಂತರವಾಗಿ ‌ನಡೆಯುತ್ತಿತ್ತು. ವ್ಯಾಪಾರ, ಮೀನುಗಾರಿಕೆ, ಕೃಷಿ, ಹಡಗು ನಿರ್ಮಾಣ, ಮಸಾಲೆ ವ್ಯಾಪಾರ ಮತ್ತು ಇತರ ಉದ್ಯೋಗಗಳು ವಿಭಿನ್ನ ಭಾಷಾ ಸಮುದಾಯಗಳನ್ನು ನಿರಂತರ ಸಂಪರ್ಕದಲ್ಲಿಟ್ಟವು.

ಈ ಎಲ್ಲದರ ಪರಿಣಾಮವಾಗಿ ಬ್ಯಾರಿ ಭಾಷೆಯಲ್ಲಿ ಹಲವು ಭಾಷೆಗಳ ಪ್ರಭಾವಗಳು ಕಂಡುಬಂದವು. ಬ್ಯಾರಿಯ ಮೂಲ ರಚನೆಯು ದ್ರಾವಿಡ ಭಾಷಾ ಪರಿಸರದೊಂದಿಗೆ ಸಂಬಂಧ ಹೊಂದಿದ್ದರೆ, ಅದರ ಪದಸಂಪತ್ತಿನಲ್ಲಿ ವಿಶೇಷವಾಗಿ ಧರ್ಮ, ವ್ಯಾಪಾರ ಮತ್ತು ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅರೇಬಿಕ್ ಮತ್ತು ಪರ್ಷಿಯನ್ ಪ್ರಭಾವವು ಗಮನಾರ್ಹವಾಗಿದೆ. ಒಂದು ಸಮುದಾಯವು ನೆರೆಹೊರೆಯ ಸಂಸ್ಕೃತಿಗಳ ಅಂಶಗಳನ್ನು ಸ್ವೀಕರಿಸಿ ತನ್ನದೇ ಆದ ಗುರುತನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ಬ್ಯಾರಿ ಒಂದು ಉತ್ತಮ ಉದಾಹರಣೆಯಾಗಿದೆ.

ಹಲವು ತಲೆಮಾರುಗಳವರೆಗೆ ಬ್ಯಾರಿ ಭಾಷೆ ಮುಖ್ಯವಾಗಿ ಮೌಖಿಕವಾಗಿ ಮುಂದುವರಿಯಿತು. ಧಾರ್ಮಿಕ ಶಿಕ್ಷಣದಲ್ಲಿ ಅರೇಬಿಕ್ ಲಿಪಿಯ ಬಳಕೆಯೂ ಪ್ರಮುಖವಾಗಿತ್ತು. ನಂತರ ಕನ್ನಡ ಲಿಪಿಯು ಬ್ಯಾರಿ ಬರವಣಿಗೆಯಲ್ಲಿ ವ್ಯಾಪಕವಾಗಿ ಬಳಕೆಯಾಯಿತು. ಇಂದು ಸಾಹಿತ್ಯ, ನಿಘಂಟುಗಳು, ಸಂಶೋಧನೆ ಮತ್ತು ಶಿಕ್ಷಣದ ಮೂಲಕ ಬ್ಯಾರಿಯನ್ನು ದಾಖಲಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಒಂದು ಮಹತ್ವದ ವಿಚಾರವನ್ನು ನಮಗೆ ತಿಳಿಸುತ್ತದೆ: ಒಂದು ಭಾಷೆ ನಾಶವಾದಾಗ ಕೇವಲ ಪದಗಳು ಮಾತ್ರ ಕಳೆದುಹೋಗುವುದಿಲ್ಲ; ಬದಲಾಗಿ ಅದರೊಂದಿಗೆ ಒಂದು ಸಮುದಾಯದ ಪ್ರಮುಖ ಐತಿಹಾಸಿಕ ನೆನಪುಗಳು ಕಳೆದುಹೋಗಬಹುದು.

ತುಳು: ಬಿಡುವಿಲ್ಲದ ಕರಾವಳಿಯಲ್ಲಿ ರೂಪುಗೊಂಡ ಪ್ರಾಚೀನ ಭಾಷೆ

ತುಳು ವಿಭಿನ್ನವಾದ ಕಥೆಯನ್ನು ಹೇಳುತ್ತದೆ. ತುಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದು, ಕರಾವಳಿ ಕರ್ನಾಟಕದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದು, ಇದರ ಬೆಳವಣಿಗೆಯನ್ನು ಪ್ರೋಟೋ-ದ್ರಾವಿಡ ಭಾಷೆಯ ವಿಶಾಲ ಇತಿಹಾಸದೊಂದಿಗೆ ಮತ್ತು ಐತಿಹಾಸಿಕವಾಗಿ ತುಳುನಾಡು ಎಂದು ಕರೆಯಲ್ಪಡುವ ಪ್ರದೇಶದೊಂದಿಗೆ ಸಂಪರ್ಕಿಸಲಾಗಿದೆ. ದೊಡ್ಡ ಪ್ರಮಾಣದ ವಲಸೆಯಿಂದ ವ್ಯಾಪಕವಾಗಿ ಹರಡಿದ ಕೆಲವು ಭಾಷೆಗಳಿಗಿಂತ ಭಿನ್ನವಾಗಿ, ತುಳು ತನ್ನ ಸಾಂಪ್ರದಾಯಿಕ ಭೌಗೋಳಿಕ ಪ್ರದೇಶದೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಆದರೆ ಇದರರ್ಥ ತುಳು ಪ್ರತ್ಯೇಕವಾಗಿ ಬೆಳೆದಿರುವ ಭಾಷೆ ಎಂದಲ್ಲ. ಬದಲಾಗಿ ತುಳುನಾಡು ಎಂಬುವುದು ಸ್ವತಃ ವಿವಿಧ ಜನರ ಭೇಟಿಯ ಸ್ಥಳವಾಗಿತ್ತು. ಜೈನ ವ್ಯಾಪಾರಿಗಳು, ಬ್ರಾಹ್ಮಣ ಪಂಡಿತರು, ಅರಬ್ ವ್ಯಾಪಾರಿಗಳು, ಪೋರ್ಚುಗೀಸ್ ವ್ಯಾಪಾರಿಗಳು ಮತ್ತು ಕೊಂಕಣಿ ಮಾತನಾಡುವ ಸಮುದಾಯಗಳು ಈ ಪ್ರದೇಶದೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದ್ದರು. ಕರಾವಳಿ ಪ್ರದೇಶವು ಕೃಷಿ, ಮೀನುಗಾರಿಕೆ ಮತ್ತು ವ್ಯಾಪಾರಕ್ಕೆ ಅನುಕೂಲಕರವಾಗಿತ್ತು. ಹೀಗಾಗಿ ಮಂಗಳೂರು, ಬಾರ್ಕೂರು ಮತ್ತು ಬಸ್ರೂರು ಮುಂತಾದ ಬಂದರುಗಳು ಈ ಪ್ರದೇಶವನ್ನು ವಿಶಾಲ ಹಿಂದೂ ಮಹಾಸಾಗರದ ವ್ಯಾಪಾರ ಜಾಲದೊಂದಿಗೆ ಸಂಪರ್ಕಿಸಿದವು.

ಈ ಸಂಪರ್ಕಗಳಿಂದ ತುಳು ಭಾಷೆಯಲ್ಲಿಯೂ, ವಿಶೇಷವಾಗಿ ವ್ಯಾಪಾರ, ನೌಕಾಯಾನ, ಆಡಳಿತ ಮತ್ತು ಧರ್ಮಕ್ಕೆ ಸಂಬಂಧಿಸಿದ ಪದಸಂಪತ್ತಿನಲ್ಲಿ ಹಲವು ಪ್ರಭಾವಗಳು ಕಂಡುಬಂದವು. ಆದರೆ ಭಾಷೆಯ ಮೂಲ ರಚನೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿತು. ತುಳುವಿನ ಉಳಿವಿಗೆ ಅತ್ಯಂತ ಶಕ್ತಿಶಾಲಿ ಸಾಕ್ಷಿ ಕೇವಲ ಲಿಖಿತ ದಾಖಲೆಗಳಲ್ಲಿ ಕಂಡುಬರುವುದಿಲ್ಲ. ಅದು ಅದರ ಮೌಖಿಕ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಪಾಡ್ದನಗಳು ಎಂಬ ಸಾಂಪ್ರದಾಯಿಕ ಕಥನಗೀತೆಗಳು ಜನರ ನಂಬಿಕೆಗಳು ಮತ್ತು ಸಾಮಾಜಿಕ ಜೀವನದ ನೆನಪುಗಳನ್ನು ತಲೆಮಾರುಗಳಿಂದ ಮುಂದಕ್ಕೆ ಸಾಗಿಸಿವೆ. ಭೂತಕೋಲ ಸಂಪ್ರದಾಯ ಮತ್ತು ಯಕ್ಷಗಾನ ಪ್ರದರ್ಶನಗಳೂ ತುಳು ಭಾಷೆ ಮತ್ತು ಸಂಸ್ಕೃತಿಯ ರೂಪಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡಿವೆ. ಅಂದರೆ ತುಳು ಕೇವಲ ಬರವಣಿಗೆಯಿಂದ ಉಳಿಯಲಿಲ್ಲ. ಜನರು ತುಳುವನ್ನು ಮಾತನಾಡಿ, ಹಾಡಿ, ಪ್ರದರ್ಶಿಸಿ, ಕಥೆ ಹೇಳಿ ನೆನಪಿನಲ್ಲಿ ಉಳಿಸಿಕೊಂಡರು.

ಮೋಯ ಮಲಯಾಳಂ: ಭಾಷೆ, ಧರ್ಮ ಮತ್ತು ವ್ಯಾಪಾರ ಭೇಟಿಯಾದ ಸ್ಥಳ

ಮೋಯ ಮಲಯಾಳಂನ ಕಥೆಯು ಮಲಬಾರ್ ಮತ್ತು ಅದರ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳ ಮುಸ್ಲಿಂ ಸಮುದಾಯಗಳೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಇದರ ಬೆಳವಣಿಗೆಯು ಮಲಯಾಳಂ ಮಾತನಾಡುವ ಸಮುದಾಯಗಳು ಮತ್ತು ಅರಬ್ ಮುಸ್ಲಿಂ ವ್ಯಾಪಾರಿಗಳ ನಡುವಿನ ಶತಮಾನಗಳ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಮಲಬಾರ್ ಕರಾವಳಿಯು ಹಿಂದೂ ಮಹಾಸಾಗರದ ವ್ಯಾಪಾರದೊಂದಿಗೆ ಆಳವಾಗಿ ಸಂಪರ್ಕ ಹೊಂದಿತ್ತು. ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಮತ್ತು ಮಂಗಳೂರು ಮುಂತಾದ ಬಂದರುಗಳು ಈ ಪ್ರದೇಶವನ್ನು ಅರೇಬಿಯಾ, ಪರ್ಷಿಯಾ ಮತ್ತು ಪೂರ್ವ ಆಫ್ರಿಕಾದೊಂದಿಗೆ ಸಂಪರ್ಕಿಸಿದವು.

ಅರಬ್ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಬಂದರು. ಅವರಲ್ಲಿಕೆಲವರು ಇಲ್ಲಿಯೇ ನೆಲೆಸಿದ್ದರಿಂದ ಕುಟುಂಬಗಳು ರೂಪುಗೊಂಡವು ಮತ್ತು ಸಮುದಾಯಗಳು ಬೆಳೆದವು. ದೈನಂದಿನ ಸಂವಹನದಲ್ಲಿ ಮಲಯಾಳಂ ಪ್ರಮುಖವಾಗಿ ಉಳಿದಿದ್ದರೂ, ಧರ್ಮ, ವ್ಯಾಪಾರ ಮತ್ತು ದೈನಂದಿನ ಜೀವನಕ್ಕೆ ಸಂಬಂಧಿಸಿದ ಅರೇಬಿಕ್ ಪದಗಳು ಮಲಯಾಳಂಗೆ ಪ್ರವೇಶಿಸಿದವು. ಬ್ಯಾರಿ, ತುಳು, ಕನ್ನಡ ಮತ್ತು ತಮಿಳಿನ ಸಂಪರ್ಕವೂ ಈ ಭಾಷೆಗೆ ಮತ್ತಷ್ಟು ಪದರಗಳನ್ನು ಸೇರಿಸಿತು. ಈ ನಿರಂತರ ಸಂಪರ್ಕದಿಂದ ಮಲಯಾಳಂಗೆ ಪರ್ಯಾಯವಾಗಿ ಮತ್ತೊಂದು ಭಾಷೆಯು ಉದಯಿಸಿ ಒಂದು ವಿಶಿಷ್ಟ ಭಾಷಾ ರೂಪ ಪಡೆಯಲು ಸಹಕಾರಿಯಾಯಿತು. 

ಈ ಬೆಳವಣಿಗೆಯಲ್ಲಿ ಧರ್ಮದ ಪಾತ್ರವೂ ಮಹತ್ತರದಾಗಿತ್ತು. ಮಸೀದಿಗಳು ಮತ್ತು ಶಾಲೆಗಳು ಅರೇಬಿಕ್ ಮತ್ತು ಮಲಯಾಳಂ ಎರಡೂ ಬಳಕೆಯಾಗುವ ಸ್ಥಳಗಳಾದವು. ಧಾರ್ಮಿಕ ಬೋಧನೆ, ಸಾಹಿತ್ಯ ಮತ್ತು ಪತ್ರವ್ಯವಹಾರಗಳು ಸಮುದಾಯದ ಭಾಷಾ ಗುರುತನ್ನು ಬಲಪಡಿಸಿದವು. ವ್ಯಾಪಾರವೂ ಇದೇ ರೀತಿಯ ಪ್ರಭಾವ ಬೀರಿತು. ವ್ಯಾಪಾರಿಗಳು ಮತ್ತು ಸ್ಥಳೀಯ ಉತ್ಪಾದಕರು ಒಟ್ಟಿಗೆ ಕೆಲಸ ಮಾಡುವಾಗ ಹಣ, ಸರಕು, ವ್ಯವಹಾರ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಸಾಮಾನ್ಯ ಪದಸಂಪತ್ತಿನ ಅಗತ್ಯವಿತ್ತು. ಹೀಗೆ ಆರ್ಥಿಕ ಜೀವನದೊಂದಿಗೆ ಭಾಷೆಯೂ ಬೆಳೆಯಿತು.

ಬರವಣಿಗೆಯಲ್ಲಿಯೂ ಈ ಸಂಪರ್ಕ ಕಂಡುಬಂತು. ಕೆಲವು ಸಂದರ್ಭಗಳಲ್ಲಿ ಮಲಯಾಳಂ ಅನ್ನು ಅರೇಬಿಕ್ ಲಿಪಿಯ ಮೂಲಕ ಬರೆಯಲಾಗುತ್ತಿತ್ತು. ಇದರಿಂದ ಭಾಷೆ, ಸಾಕ್ಷರತೆ ಮತ್ತು ಧಾರ್ಮಿಕ ಜೀವನದ ನಡುವಿನ ಸಂಬಂಧ ಮತ್ತಷ್ಟು ಬಲವಾಯಿತು. ಹೀಗಾಗಿ ಮೋಯ ಮಲಯಾಳಂ ಒಂದು ದೊಡ್ಡ ವಿಚಾರವನ್ನು ತೋರಿಸುತ್ತದೆ: ಭಾಷೆಯ ಬದಲಾವಣೆಯನ್ನು ಜನರು ಬದುಕುವ ಸಾಮಾಜಿಕ ಸಂಸ್ಥೆಗಳಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. 

ಮಾರುಕಟ್ಟೆಗಳು, ಮಸೀದಿಗಳು, ಶಾಲೆಗಳು, ಕುಟುಂಬಗಳು ಮತ್ತು ಸಮುದಾಯಗಳು ಭಾಷಾ ಬದಲಾವಣೆಗೆ ಪ್ರಮುಖ ಕಾರಣಗಳಾಗಬಹುದು.

ಈ ಎಲ್ಲಾ ಭಾಷೆಗಳಲ್ಲಿರುವ ಸಾಮಾನ್ಯ ಅಂಶಗಳು

ಮೊದಲ ನೋಟಕ್ಕೆ ಕೊಂಕಣಿ, ಬ್ಯಾರಿ, ತುಳು ಮತ್ತು ಮೋಯ ಮಲಯಾಳಂ ಭಾಷೆಗಳು ವಿಭಿನ್ನ ಇತಿಹಾಸಗಳನ್ನು ಹೊಂದಿರುವಂತೆ ಭಾಸವಾಗುತ್ತದೆ. ನಿಜಕ್ಕೂ ಅವುಗಳ ಇತಿಹಾಸಗಳು ವಿಭಿನ್ನವೇ. ಆದರೆ ಸಂಶೋಧನೆಯು ಈ ಎಲ್ಲವುಗಳಲ್ಲಿ ಒಂದು ಸಾಮಾನ್ಯ ಮಾದರಿಯನ್ನು ಗುರುತಿಸುತ್ತದೆ: ಅದೇನೆಂದರೆ, 

ವಲಸೆ ಸಂಪರ್ಕವನ್ನು ಸೃಷ್ಟಿಸಿತು.

ಸಂಪರ್ಕ ವಿನಿಮಯವನ್ನು ಸೃಷ್ಟಿಸಿತು.

ವಿನಿಮಯ ಭಾಷೆಯನ್ನು ರೂಪಿಸಿತು.

ಸಮುದ್ರ ವ್ಯಾಪಾರವು ಈ ಪ್ರಕ್ರಿಯೆಯ ಪ್ರಮುಖ ಶಕ್ತಿಗಳಲ್ಲಿ ಒಂದಾಗಿತ್ತು. ಪಶ್ಚಿಮ ಕರಾವಳಿಯು ಸ್ಥಳೀಯ ಸಮುದಾಯಗಳನ್ನು ಅರೇಬಿಯಾ, ಪರ್ಷಿಯಾ, ಪೂರ್ವ ಆಫ್ರಿಕಾ, ಯುರೋಪ್ ಮತ್ತು ಭಾರತದ ಇತರ ಭಾಗಗಳ ಜನರೊಂದಿಗೆ ಸಂಪರ್ಕಿಸಿತು. 

ವಲಸೆಯು ಮತ್ತೊಂದು ಪದರವನ್ನು ಸೇರಿಸಿತು. ಕೊಂಕಣಿ ಮಾತನಾಡುವ ಸಮುದಾಯಗಳು ಗೋವಾದಿಂದ ದಕ್ಷಿಣಕ್ಕೆ ವಲಸೆ ಬಂದವು. ಅರಬ್ ವ್ಯಾಪಾರಿಗಳು ಕರಾವಳಿಯಲ್ಲಿ ನೆಲೆಸಿದರು. ವ್ಯಾಪಾರ, ಉದ್ಯೋಗ, ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆಗಳಿಗಾಗಿ ಜನರು ಕೇರಳ ಮತ್ತು ಕರ್ನಾಟಕದ ನಡುವೆ ಸಂಚರಿಸಿದರು. ಪ್ರತಿಯೊಂದು ವಲಸೆಯೂ ಭಾಷೆಗಳು ಪರಸ್ಪರ ಭೇಟಿಯಾಗಲು ಹೊಸ ಅವಕಾಶಗಳನ್ನು ಸೃಷ್ಟಿಸಿತು.

ಆದರೆ ಭಾಷಾ ಸಂಪರ್ಕವು ವ್ಯತ್ಯಾಸಗಳನ್ನು ಅಳಿಸಿಹಾಕಲಿಲ್ಲ. ತುಳು ಮಾತನಾಡುವವರು ಕಡ್ಡಾಯವಾಗಿ ಬ್ಯಾರಿ ಮಾತನಾಡುವವರಾಗಲಿಲ್ಲ. ಕೊಂಕಣಿ ಸಮುದಾಯವು ಕನ್ನಡ ಅಥವಾ ಮಲಯಾಳಂ ಸಮಾಜದಲ್ಲಿ ಸಂಪೂರ್ಣವಾಗಿ ಮರೆಯಾಗಲಿಲ್ಲ. ಬದಲಾಗಿ, ಸಮುದಾಯಗಳು ತಮ್ಮದೇ ಆದ ಭಾಷಾ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡು ಕೆಲವು ಅಂಶಗಳನ್ನು ಪರಸ್ಪರ ರಿಂದ ಸ್ವೀಕರಿಸಿದವು.

ಈ ಸಮತೋಲನವೇ ಈ ಅಧ್ಯಯನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಸಮುದಾಯಗಳು ಬಳಸುವುದರಿಂದಲೇ ಭಾಷೆ ಉಳಿಯುತ್ತದೆ

ಭಾಷೆಗಳು ಕೇವಲ ನಿಘಂಟುಗಳ ಮೂಲಕ ಉಳಿಯುವುದಿಲ್ಲ. ಜನರು ಅವುಗಳನ್ನು ಬಳಸುವುದರಿಂದ ಅವು ಉಳಿಯುತ್ತವೆ. ಕುಟುಂಬಗಳು ಮಕ್ಕಳಿಗೆ ಭಾಷೆಯನ್ನು ಕಲಿಸುತ್ತವೆ. ಹಿರಿಯರು ಕಥೆಗಳನ್ನು ಹೇಳುತ್ತಾರೆ. ಧಾರ್ಮಿಕ ಸಂಸ್ಥೆಗಳು ಭಾಷೆಯನ್ನು ಕಲಿಸುತ್ತವೆ. ಸಮುದಾಯಗಳು ಹಬ್ಬಗಳನ್ನು ಭಾಷೆಯ ಮೂಲಕ ಆಚರಿಸುತ್ತವೆ. ಕಲಾವಿದರು ಮತ್ತು ಪ್ರದರ್ಶಕರು ಹಾಡುತ್ತಾರೆ. ಬರಹಗಾರರು ದಾಖಲಿಸುತ್ತಾರೆ. ವ್ಯಾಪಾರಿಗಳು ಮಾರುಕಟ್ಟೆಗಳಲ್ಲಿ ಭಾಷೆಯನ್ನು ಬಳಸುತ್ತಾರೆ. ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಸಮುದಾಯ ಸಂಸ್ಥೆಗಳು ಭಾಷಾ ಗುರುತನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಸಂಶೋಧನೆ ಒತ್ತಿಹೇಳುತ್ತದೆ.

ತುಳು ಸಮುದಾಯಗಳಲ್ಲಿ: ಮೌಖಿಕ ಸಂಪ್ರದಾಯಗಳು, ಹಾಡುಗಳು ಮತ್ತು ಪ್ರದರ್ಶನಗಳು ಭಾಷೆಯನ್ನು ತಲೆಮಾರುಗಳಿಂದ ಮುಂದಕ್ಕೆ ಸಾಗಿಸಿವೆ.

ಬ್ಯಾರಿ ಮತ್ತು ಮೋಯ ಮಲಯಾಳಂ ಸಮುದಾಯಗಳಲ್ಲಿ: ಧಾರ್ಮಿಕ ಪದಸಂಪತ್ತು ಮತ್ತು ಸಂಪ್ರದಾಯಗಳು ಭಾಷಾ ಗುರುತಿನ ಪ್ರಮುಖ ಭಾಗಗಳಾಗಿವೆ.

ಕೊಂಕಣಿ ಸಮುದಾಯಗಳಲ್ಲಿ: ವಲಸೆಯ ನಡುವೆಯೂ ಶಾಲೆಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಭಾಷೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡಿವೆ.

ಇದರಿಂದ ಒಂದು ಪ್ರಮುಖ ವಿಚಾರ ಸ್ಪಷ್ಟವಾಗುತ್ತದೆ: ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಸಾಮಾಜಿಕ ಸ್ಮರಣೆಯ ವ್ಯವಸ್ಥೆಯೂ ಹೌದು.

ಒಂದು ಪದವು ಒಂದು ವ್ಯಾಪಾರ ಮಾರ್ಗದ ನೆನಪನ್ನು ಹೊತ್ತಿರಬಹುದು. ಒಂದು ಕಥೆಯು ಒಂದು ಸಮುದಾಯದ ನೆನಪನ್ನು ಉಳಿಸಬಹುದು. ಒಂದು ಲಿಪಿಯು ಧಾರ್ಮಿಕ ಅಥವಾ ಶೈಕ್ಷಣಿಕ ಸಂಪ್ರದಾಯದ ಪ್ರಭಾವವನ್ನು ತೋರಿಸಬಹುದು. ಒಂದು ಉಪಭಾಷೆಯು ಹಲವು ತಲೆಮಾರುಗಳ ಜನರು ಎಲ್ಲಿ ವಾಸಿಸಿ, ಹೇಗೆ ಪರಸ್ಪರ ಸಂಪರ್ಕ ಹೊಂದಿದ್ದರು ಎಂಬುದನ್ನು ತಿಳಿಸಬಹುದು.

ಪಶ್ಚಿಮ ಕರಾವಳಿಯಿಂದ ದೊರೆಯುವ ದೊಡ್ಡ ಪಾಠ

ಭಾರತದ ಪಶ್ಚಿಮ ಕರಾವಳಿಯು ಭಾಷೆಗಳು ಪ್ರತ್ಯೇಕವಾದ ಪೆಟ್ಟಿಗೆಗಳಲ್ಲಿ ಅಚ್ಚುಕಟ್ಟಾಗಿ ಬೆಳೆಯುತ್ತವೆ ಎಂಬ ಕಲ್ಪನೆಯನ್ನು ಪ್ರಶ್ನಿಸುತ್ತದೆ. ಭಾಷೆಗಳು ಜನರ ನಡುವೆ ಬದುಕುತ್ತವೆ. ಜನರು ಸಂಚರಿಸುತ್ತಾರೆ. ಅವರು ವ್ಯಾಪಾರ ಮಾಡುತ್ತಾರೆ. ವಿವಾಹವಾಗುತ್ತಾರೆ. ವಲಸೆ ಹೋಗುತ್ತಾರೆ. ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾರೆ. ಒಟ್ಟಿಗೆ ಕೆಲಸ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಅವರು ನೆರೆಹೊರೆಯವರಿಂದ ಪದಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಪದಗಳ ಉಚ್ಚಾರಣೆಯನ್ನೂ ಬದಲಾಯಿಸುತ್ತಾರೆ. ಹೀಗೆ ಶತಮಾನಗಳ ಕಾಲ ನಡೆಯುವ ಇಂತಹ ಸಾಮಾನ್ಯ ಮಾನವ ಸಂಬಂಧಗಳು ಅಸಾಧಾರಣ ಭಾಷಾ ಇತಿಹಾಸಗಳನ್ನು ಸೃಷ್ಟಿಸಬಹುದು.

ಕೊಂಕಣಿ; ವಲಸೆ ಮತ್ತು ಬಹುಭಾಷಾ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಬ್ಯಾರಿ; ಅರಬ್, ಇಸ್ಲಾಮಿಕ್ ಮತ್ತು ದಕ್ಷಿಣ ಭಾರತದ ಕರಾವಳಿ ಸಮುದಾಯಗಳ ಪರಸ್ಪರ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ತುಳು; ತುಳುನಾಡಿನ ಆಳವಾದ ಭಾಷಾ ಮತ್ತು ಸಾಂಸ್ಕೃತಿಕ ಇತಿಹಾಸದ ಜೊತೆಗೆ ಶತಮಾನಗಳ ಕಾಲ ನಡೆದ ಬಾಹ್ಯ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಮೋಯ ಮಲಯಾಳಂ; ಮಲಯಾಳಂ, ಅರೇಬಿಕ್ ಮತ್ತು ಮಲಬಾರ್ ಹಾಗೂ ಕರ್ನಾಟಕ ಕರಾವಳಿಯ ವಿಶಾಲ ಭಾಷಾ ಪರಿಸರದ ಭೇಟಿಯನ್ನು ಪ್ರತಿಬಿಂಬಿಸುತ್ತದೆ.

ಒಟ್ಟಾಗಿ ಇವೆಲ್ಲವೂ ಒಂದು ಮಹತ್ವದ ವಿಚಾರವನ್ನು ಎತ್ತಿ ತೋರಿಸುತ್ತವೆ: ಸಮುದಾಯಗಳು ಪರಸ್ಪರ ಸಂಪರ್ಕ ಹೊಂದುವುದರಿಂದ ಸಾಂಸ್ಕೃತಿಕ ಗುರುತು ಅಗತ್ಯವಾಗಿ ದುರ್ಬಲವಾಗುವುದಿಲ್ಲ. ಕೆಲವೊಮ್ಮೆ, ಅಂತಹ ಸಂಪರ್ಕವೇ ಹೊಸ ಮತ್ತು ದೀರ್ಘಕಾಲ ಉಳಿಯುವ ಗುರುತುಗಳನ್ನು ರೂಪಿಸುತ್ತದೆ.

ಈ ಭಾಷೆಗಳು ಇಂದು ಏಕೆ ಮುಖ್ಯ?

ಜಾಗತೀಕರಣವು ಭಾಷಾ ಪರಿಸರವನ್ನು ವೇಗವಾಗಿ ಬದಲಾಯಿಸುತ್ತಿದೆ. ಕಡಿಮೆ ಸಂಖ್ಯೆಯ ಜನರು ಮಾತನಾಡುವ ಭಾಷೆಗಳು ಪ್ರಬಲ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಿಂದ ಒತ್ತಡವನ್ನು ಎದುರಿಸಬಹುದು. ಯುವ ಪೀಳಿಗೆಯವರು ಹೆಚ್ಚಿನ ಶೈಕ್ಷಣಿಕ, ಆರ್ಥಿಕ ಅಥವಾ ತಾಂತ್ರಿಕ ಅವಕಾಶಗಳನ್ನು ನೀಡುವ ಭಾಷೆಗಳನ್ನು ಹೆಚ್ಚು ಬಳಸುವ ಸಾಧ್ಯತೆ ಇದೆ. ಇದು ಒಂದು ಕಠಿಣ ಪ್ರಶ್ನೆಯನ್ನು ಮುಂದಿಡುತ್ತದೆ: ಬದಲಾಗುತ್ತಿರುವ ಜಗತ್ತಿನಲ್ಲಿ ಸಮುದಾಯಗಳು ಸಕ್ರಿಯವಾಗಿ ಪಾಲ್ಗೊಂಡು, ತಮ್ಮ ಇತಿಹಾಸವನ್ನು ಹೊತ್ತೊಯ್ಯುವ ಭಾಷೆಗಳನ್ನು ಹೇಗೆ ಉಳಿಸಿಕೊಳ್ಳಬಹುದು?

ಭಾಷೆಗಳನ್ನು ಕೇವಲ ವಸ್ತುಸಂಗ್ರಹಾಲಯದಲ್ಲಿರುವ ಹಳೆಯ ವಸ್ತುಗಳಂತೆ ಸಂರಕ್ಷಿಸುವುದು ಮಾತ್ರ ಇದಕ್ಕಿರುವ ಉತ್ತರವಲ್ಲ. ಭಾಷೆಗಳು ಉಪಯುಕ್ತವಾಗಿರಬೇಕು. ಅವುಗಳಲ್ಲಿ ಸಾಹಿತ್ಯ ಇರಬೇಕು. ಶಿಕ್ಷಣದಲ್ಲಿ ಅವುಗಳಿಗೆ ಸ್ಥಾನ ಇರಬೇಕು. ಡಿಜಿಟಲ್ ವಿಷಯಗಳು ಲಭ್ಯವಾಗಬೇಕು. ಸಂಶೋಧನೆ ಮತ್ತು ದಾಖಲೀಕರಣ ನಡೆಯಬೇಕು. ದೈನಂದಿನ ಜೀವನದಲ್ಲಿ ಅವುಗಳನ್ನು ಬಳಸಲು ಅವಕಾಶಗಳಿರಬೇಕು. ಯುವ ತಲೆಮಾರುಗಳು ತಮ್ಮ ಭಾಷೆಯನ್ನು ಕೇವಲ ಅಜ್ಜ-ಅಜ್ಜಿಯರಿಂದ ಬಂದ ಪರಂಪರೆಯಾಗಿ ನೋಡದೆ, ಆಧುನಿಕ ಜೀವನದಲ್ಲಿಯೂ ಸಕ್ರಿಯವಾಗಿ ಬಳಸಬಹುದಾದ ಭಾಷೆಯಾಗಿ ಕಾಣಬೇಕು.

ಆದ್ದರಿಂದ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ಭಾಷಾ ವೈವಿಧ್ಯತೆಯನ್ನು ರಕ್ಷಿಸಲು ದಾಖಲೀಕರಣ ಮತ್ತು ನಿರಂತರ ಸಂಶೋಧನೆ ಪ್ರಮುಖ ಹೆಜ್ಜೆಗಳಾಗಿವೆ ಎಂಬುದನ್ನು ಸಂಶೋಧನೆಯು ಸೂಚಿಸುತ್ತದೆ.

ಕರಾವಳಿಗೆ ಹೇಳಲು ಇನ್ನೂ ಒಂದು ಕಥೆಯಿದೆ

ಭಾರತದ ಪಶ್ಚಿಮ ಕರಾವಳಿಯ ಭಾಷಾ ಇತಿಹಾಸವು ಅಂತಿಮವಾಗಿ ಒಂದು ಮಾನವ ಕಥೆಯಾಗಿದೆ. ಇದು ಸಮುದ್ರ ದಾಟಿ ಪ್ರಯಾಣಿಸಿದ ಜನರ ಕಥೆ. ಅಪರಿಚಿತ ಸ್ಥಳಗಳಲ್ಲಿ ನೆಲೆಸಿದ, ನೆರೆಹೊರೆಯವರನ್ನು ಭೇಟಿಯಾದ, ಕುಟುಂಬಗಳನ್ನು ನಿರ್ಮಿಸಿದ ಹಾಗೂ ಪರಸ್ಪರ ಅರ್ಥಮಾಡಿಕೊಳ್ಳಲು ಹೊಸ ಮಾರ್ಗಗಳನ್ನು ಕಂಡುಕೊಂಡ ಜನರ ಕಥೆ. 

ಈ ಲೋಕದಲ್ಲಿ ರೂಪುಗೊಂಡ ಭಾಷೆಗಳು ಹಿಂದಿನ ಕಾಲದ ಸ್ಥಿರ ಅವಶೇಷಗಳಲ್ಲ. ಅವು ಪರಸ್ಪರರ ನಡುವಿನ ಸಂಪರ್ಕದ ಜೀವಂತ ದಾಖಲೆಗಳಾಗಿವೆ. ಕೊಂಕಣಿ, ಬ್ಯಾರಿ, ತುಳು ಮತ್ತು ಮೋಯ ಮಲಯಾಳಂ ಪ್ರತಿಯೊಂದೂ ವಿಭಿನ್ನ ಇತಿಹಾಸಗಳನ್ನು ಹೊಂದಿವೆ. ಆದರೆ ಅವುಗಳಲ್ಲೆಲ್ಲಾ ಒಂದು ಸಾಮಾನ್ಯ ಸತ್ಯವಿದೆ: ಜನರು ಭೇಟಿಯಾಗುವಲ್ಲಿ ಭಾಷೆಗಳು ಬೆಳೆಯುತ್ತವೆ.

ಪಶ್ಚಿಮ ಕರಾವಳಿಯು ವ್ಯಾಪಾರ ಮಾರ್ಗಗಳು ಹೇಗೆ ಸಾಂಸ್ಕೃತಿಕ ಮಾರ್ಗಗಳಾಗಿ ಬದಲಾಗುತ್ತವೆ, ವಲಸೆ ಹೇಗೆ ಸಮುದಾಯಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ ಮತ್ತು ದೈನಂದಿನ ಸಂಭಾಷಣೆಗಳು ಹೇಗೆ ತಲೆಮಾರುಗಳವರೆಗೆ ಉಳಿಯುವ ಗುರುತುಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ತೋರಿಸುತ್ತದೆ.