ಅಮೆರಿಕ ಮಧ್ಯಂತರ ಚುನಾವಣೆ; ಮಿಚಿಗನ್‌ನ 12 ನೇ ಕಾಂಗ್ರೆಸ್ ಕ್ಷೇತ್ರದಿಂದ ಫೆಲೆಸ್ತೀನ್ ಮೂಲದ ರಶೀದಾ ತಲೈಬ್‌ಗೆ ಭಾರಿ ಜಯ

0
384

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕ ಮಧ್ಯಂತರ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ರಿಪಬ್ಲಿಕನ್ ಪಕ್ಷವು ಭಾರಿ ಹಿನ್ನಡೆ ಅನುಭವಿಸಿದ್ದರೆ, ಡೆಮಾಕ್ರಟ್‌ಗಳು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ (ಕೆಳಮನೆ) ಪ್ರಗತಿ ಸಾಧಿಸುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದ ನಾಯಕಿ ಹಾಗೂ ಫೆಲೆಸ್ತೀನಿ-ಅಮೆರಿಕನ್ ಆದ ರಶೀದಾ ತಲೈಬ್ ಮಿಚಿಗನ್‌ನ 12 ನೇ ಕಾಂಗ್ರೆಸ್ ಕ್ಷೇತ್ರವನ್ನು ಪ್ರತಿನಿಧಿಸಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಮರುಆಯ್ಕೆಯಾಗಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜೇಮ್ಸ್ ಹೂಪರ್ ಅವರ ಎದುರಾಳಿಯಾಗಿದ್ದರು.

ರಶೀದಾ ತಲೈಬ್ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಫೆಲೆಸ್ತೀನಿ ಮಹಿಳೆಯಾಗಿದ್ದಾರೆ. 2019 ರಿಂದ ಮಿಚಿಗನ್‌ನ 12 ನೇ ಕಾಂಗ್ರೆಸ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಶೀದಾ, ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಇಬ್ಬರು ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಮತ್ತೊಬ್ಬ ಮಹಿಳೆ ಇಲ್ಹಾನ್ ಓಮರ್, ಅವರು ಮಿನ್ನೆಸೋಟದ 5 ನೇ ಕಾಂಗ್ರೆಸ್ ಕ್ಷೇತ್ರದಿಂದ ಡೆಮಾಕ್ರಟಿಕ್ ಪ್ರತಿನಿಧಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ರಶೀದಾ ತಲೈಬ್ ಅವರು ಫೆಲೆಸ್ತೀನ್ ಜನರ ಪರವಾಗಿ ಮತ್ತು ಗಾಝಾ ಯುದ್ಧದ ವಿರುದ್ಧ ಬಲವಾದ ಧ್ವನಿಯಾಗಿದ್ದಾರೆ.

ರಶೀದಾ ಡೆಮಾಕ್ರಟಿಕ್ ಪಕ್ಷದ ಪ್ರಗತಿಪರ ಪ್ರತಿನಿಧಿಗಳ ಒಕ್ಕೂಟವಾದ ‘ದಿ ಸ್ಕ್ವಾಡ್’ನ (The Squad) ಸದಸ್ಯೆಯಾಗಿದ್ದಾರೆ. ಇದಕ್ಕೂ ಮುನ್ನ, ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಮುಂಬರುವ ಚುನಾವಣೆಗೆ ಮುಂಚಿತವಾಗಿ, ರಶೀದಾ ಮಿಚಿಗನ್‌ನ 12 ನೇ ಕಾಂಗ್ರೆಸ್ ಕ್ಷೇತ್ರದ ಪ್ರಾಥಮಿಕ (Primary) ಚುನಾವಣೆಯಲ್ಲಿ ಭಾರಿ ಜಯ ಸಾಧಿಸಿದ್ದರು.

ಟೆಕ್ಸಾಸ್, ಸೌತ್ ಕ್ಯಾರೋಲಿನಾ, ಐಯೋವಾ, ಓಹಿಯೋ ಮತ್ತು ಕ್ಯಾನ್ಸಾಸ್‌ಗಳಲ್ಲಿ ಯಶಸ್ವಿ ಬದಲಾವಣೆ ಕಂಡುಬಂದಿದೆ. ಇಲ್ಲಿ ರಿಪಬ್ಲಿಕನ್ನರ ವಶದಲ್ಲಿದ್ದ ಸ್ಥಾನಗಳನ್ನು ಡೆಮಾಕ್ರಟ್‌ಗಳು ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ, ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ಅಧ್ಯಕ್ಷರಾಗಿರುವ ರಿಪಬ್ಲಿಕನ್ ಅಭ್ಯರ್ಥಿ ಬ್ರೇನ್ ಮಾಸ್ಟ್ ಫ್ಲೋರಿಡಾದ 21 ನೇ ಕಾಂಗ್ರೆಸ್ ಕ್ಷೇತ್ರದಿಂದ ಮರುಆಯ್ಕೆಯಾಗಿದ್ದಾರೆ. ಇವರು ಇಸ್ರೇಲ್ ಪರ ವಹಿಸುವವರಾಗಿದ್ದು, ಫೆಲೆಸ್ತೀನ್ ವಿರುದ್ಧ ಆಗಾಗ್ಗೆ ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿದ್ದರು.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಒಟ್ಟು 435 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಕೆಳಮನೆಯಲ್ಲಿ ಪೂರ್ಣ ಬಹುಮತ ಪಡೆಯಲು ಪಕ್ಷವೊಂದಕ್ಕೆ 218 ಸ್ಥಾನಗಳ ಅಗತ್ಯವಿದೆ.