ಉನ್ನಾವ: ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಆತಂಕ ತೋಡಿಕೊಂಡ ಮುಖ್ಯ ನ್ಯಾಯಾಧೀಶ ; ಸಂತ್ರಸ್ತೆಗೆ 25 ಲಕ್ಷ ರೂ. ಪರಿಹಾರಕ್ಕೆ ಆದೇಶ

0
731

ಹೊಸದಿಲ್ಲಿ, ಆ. 1: ಉನ್ನಾವ ಅತ್ಯಾಚಾರ ಪ್ರಕರಣದಲ್ಲಿ, ಅತ್ಯಾಚಾರಕ್ಕೊಳಗಾದ ಬಾಲಕಿ , ಕುಟುಂಬ, ವಕೀಲರು ವಾಹನ ಅಪಘಾತಕ್ಕೊಳಗಾದ ಪ್ರಕರಣ ಸಹಿತ ಐದು ಪ್ರಕರಣಗಳು ಉತ್ತರಪ್ರದೇಶದ ಕೋರ್ಟಿನಿಂದ ದಿಲ್ಲಿಗೆ ವರ್ಗಾಯಿಸಲು ಸುಪ್ರೀಂಕೋರ್ಟು ಆದೇಶ ಹೊರಡಿಸಿದೆ. ಕುಟುಂಬಕ್ಕೆ ಒಪ್ಪಿಗೆಯಾದರೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಮತ್ತು ವಕೀಲರ ಮುಂದಿನ ಚಿಕಿತ್ಸೆಗೆ ವಿಮಾನದ ಮೂಲಕ ದಿಲ್ಲಿಗೆ ಕರೆತರಲು ಸೂಚಿಸಲಾಗಿದೆ. ತನಿಖೆಯನ್ನು ಏಳು ದಿವಸದೊಳಗೆ ಪೂರ್ತಿ ಮಾಡಲು ಸಿಬಿಐಗೆ ಸೂಚಿಸಲಾಗಿದೆ. ನಂತರ ದಿನಾಲೂ ವಿಚಾರಣೆ ನಡೆಸಿ 45 ದಿವಸಗಳೊಳಗೆ ಅದನ್ನು ಪೂರ್ತಿ ಮಾಡಬೇಕೆಂದು ಕೋರ್ಟು ಆದೇಶಿಸಿದೆ.

ಉತ್ತರ ಪ್ರದೇಶ ಉನ್ನಾವ ಅತ್ಯಾಚಾರಕ್ಕೆ ಈಡಾದ ಬಾಲಕಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟು ಕಟುವಾಗಿ ತರಾಟೆಗೆತ್ತಿಕೊಂಡಿದೆ. ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಕೋರ್ಟು ಪ್ರಶ್ನಿಸಿತು. ಈ ವಿಷಯದಲ್ಲಿ ಏನು ಏನು ಮಾಡಲು ಸಾಧ್ಯ ಎಂದು ಉತ್ತರಪ್ರದೇಶ ಸರಕಾರದ ಪ್ರತಿನಿಧಿಯನ್ನು ಕೇಳಿದಾಗ ವ್ಯವಸ್ಥೆಯ ಪ್ರಕಾರ ಇರುವ ನಷ್ಟಪರಿಹಾರ ನೀಡಲಾಗುವುದು ಎಂದು ಹೇಳಿದರು. ಈ ಹಂತದಲ್ಲಿ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಕೋರ್ಟು ಪ್ರಶ್ನಿಸಿತು. ಸಂತ್ರಸ್ತೆಗೆ ನಷ್ಟಪರಿಹಾರ ನೀಡಲು ಕೋರ್ಟು ಸೂಚಿಸಬೇಕೆಂದು ಚೀಫ್ ಜಸ್ಟಿಸ್ ಕೇಳಿದರು. ಬಾಲಕಿಗೂ ಅವಳ ಕುಟುಂಬಕ್ಕೂ ದೊಡ್ಡ ಮೊತ್ತದ ನಷ್ಟಪರಿಹಾರವನ್ನು ಸರಕಾರ ನೀಡಬೇಕೆಂದು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಹೇಳಿದರು.

ಸಂತ್ರಸ್ತೆ ಮತ್ತು ಕುಟುಂಬಕ್ಕೆ ಮಧ್ಯಾಂತರ ನಷ್ಟಪರಿಹಾರವಾಗಿ ಉತ್ತರಪ್ರದೇಶ ಸರಕಾರ 25 ಲಕ್ಷ ರೂಪಾಯಿ ನಷ್ಟಪರಿಹಾರ ನೀಡಬೇಕು. ಹಣವನ್ನು ನಾಳೆಯೇ ನೀಡಬೇಕು. ಬಾಲಕಿ, ಕುಟುಂಬ ಮತ್ತು ಸಂಬಂಧಿಕರು ಹಾಗೂ ವಕೀಲರಿಗೆ ಸಿ ಆರ್ ಪಿ ಎಫ್ ರಕ್ಷಣೆ ನೀಡಬೇಕು. ರಕ್ಷಣೆಯ ಕುರಿತು ಸಿ ಆರ್ ಪಿ ಎಫ್ ವರದಿ ನೀಡಬೇಕು. ಆಮಿಕಸ್ ಕ್ಯೂರಿ ಸಂತ್ರಸ್ತೆಯ ಕುಟುಂಬವನ್ನು ಸಂಪರ್ಕಿಸಿ ವಿವರಗಳನ್ನು ಯಥಾಸಮಯ ಸುಪ್ರೀಂಕೊರ್ಟಿಗೆ ತಿಳಿಸಬೇಕು. ಬಾಲಕಿ ಸುಪ್ರೀಂಕೋರ್ಟಿಗೆ ಬರೆದ ಪತ್ರ ಸಿಗಲು ವಿಳಂಬವಾಗಿರುವುದಕ್ಕೆ ಕೋರ್ಟು ವಿವರಣೆ ಕೇಳಿತು. ಬಿಜೆಪಿ ಶಾಸಕ ಕುಲ್‍ದೀಪ್ ಸಿಂಗ್ ಸೇಂಗರ್ ಅತ್ಯಾಚಾರ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿ ಕಳುಹಿಸಿದ ಪತ್ರವೆಂದು ಮನವರಿಕೆಯಾಗಿರಲಿಲ್ಲ ಎಂದು ಸೆಕ್ರಟರಿ ಜನರಲ್ ಕೋರ್ಟಿಗೆ ತಿಳಿಸಿದರು. ಜುಲೈಯಲ್ಲಿ 6900 ಪತ್ರಗಳು ಬಂದಿವೆ ಎಂದು ಕಾರ್ಯದರ್ಶಿ ತಿಳಿಸಿದರು.