✍️ ಅಬೂ ನೂಹ್ ಅಕ್ಕರಂಗಡಿ
ಇತಿಹಾಸವನ್ನು ನೆನಪಿಸಿಕೊಳ್ಳಲಿ ಇಬ್ರಾಹೀಮ್ ಅವರ ಮಾನವೀಯ ನಿಲುವಿನಿಂದ ಆರ್ಎಸ್ಎಸ್ ಮತ್ತು ಹಿಂದೂ ಸಂಘಟನೆಗಳು ಪಾಠ ಕಲಿಯಲಿ!
1930ರ ದಶಕದಲ್ಲಿ ಆರ್ಎಸ್ಎಸ್ ಅನ್ನು ನಿಷೇಧಿಸುವ ಪ್ರಸ್ತಾಪವು ಮಧ್ಯಪ್ರಾಂತ್ಯದ ವಿಧಾನಸಭೆಯಲ್ಲಿ ಚರ್ಚೆಗೆ ಬಂದಾಗ, ಆ ಸಂಘಟನೆಯ ಪರವಾಗಿ ಧ್ವನಿ ಎತ್ತಿದ್ದು ಒಬ್ಬ ಮುಸ್ಲಿಂ ವ್ಯಕ್ತಿ. ಅವರ ಹೆಸರು ಇಬ್ರಾಹೀಮ್.
ಈ ವಿಚಾರವನ್ನು ಸ್ವತಃ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು 2026ರ ನವೆಂಬರ್ 9ರಂದು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಆರ್ಎಸ್ಎಸ್ ಅನ್ನು ನಿಷೇಧಿಸಬಾರದು, ಅದು ಕೋಮುವಾದಿ ಸಂಘಟನೆಯಲ್ಲ ಎಂಬ ವಾದವನ್ನು ಇಬ್ರಾಹೀಮ್ ಅವರು ಮಂಡಿಸಿದ್ದರು ಎಂದು ಭಾಗವತ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಒಂದು ಸಂಘಟನೆಯ ಸಿದ್ಧಾಂತದೊಂದಿಗೆ ಒಪ್ಪಿಗೆ ಇಲ್ಲದಿದ್ದರೂ, ಆ ಸಂಘಟನೆಯ ವಿರುದ್ಧದ ಕ್ರಮವನ್ನು ವಿರೋಧಿಸುವ ಪ್ರಜಾಸತ್ತಾತ್ಮಕ ನಿಲುವನ್ನು ಒಬ್ಬ ವ್ಯಕ್ತಿ ತೆಗೆದುಕೊಳ್ಳಬಹುದು ಎಂಬುದು.
ಆದರೆ ಇಂದು ಪ್ರಶ್ನೆ ಉದ್ಭವಿಸುವುದು ಬೇರೆ ವಿಚಾರದಲ್ಲಿ.
ಇಂದು ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅದೇ ಆರ್ಎಸ್ಎಸ್ ನ ದ್ವೇಷದ ಭಾಷಣಗಳು, ಅವರ ದೇಶಪ್ರೇಮದ ಬಗ್ಗೆ ಎತ್ತಲಾಗುತ್ತಿರುವ ಪ್ರಶ್ನೆಗಳು, ಪಾಕಿಸ್ತಾನಕ್ಕೆ ಹೋಗಿ, ಅಫ್ಘಾನಿಸ್ತಾನಕ್ಕೆ ಹೋಗಿ ಎಂಬ ಪ್ರಚೋದನಾತ್ಮಕ ಹೇಳಿಕೆಗಳು ನಿಜಕ್ಕೂ ಕಳವಳಕಾರಿ.
ಭಾರತದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ದೇಶದ ಅಭಿವೃದ್ಧಿಯವರೆಗೆ ಮುಸ್ಲಿಮರ ಕೊಡುಗೆಯನ್ನು ಮರೆಯಲು ಸಾಧ್ಯವೇ? ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಹಕ್ಕು ಮತ್ತು ಗೌರವ ಒಂದೇ ಆಗಿರಬೇಕಲ್ಲವೇ?
ಇತ್ತೀಚಿನ ಎಸ್ಐಆರ್ (SIR) ಮತದಾರರ ಪಟ್ಟಿ ಪರಿಷ್ಕರಣೆಯ ವಿಚಾರದಲ್ಲಿಯೂ ಮುಸ್ಲಿಂ ಮತದಾರರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗುತ್ತಿದೆ ಅದರಲ್ಲೂ ಆರ್ಎಸ್ಎಸ್ ನ ಷಡ್ಯಂತ್ರವಿದೆ. ಈ ಆರೋಪಗಳ ಬಗ್ಗೆ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಪರಿಶೀಲನೆ ಅತ್ಯಗತ್ಯ.
ಅಂದು ಆರ್ಎಸ್ಎಸ್ ವಿರುದ್ಧ ನಿಷೇಧದ ಪ್ರಸ್ತಾಪ ಬಂದಾಗ ಇಬ್ರಾಹೀಮ್ ಅವರು ಸಂಘಟನೆಯ ಪರವಾಗಿ ಮಾತನಾಡಿದ್ದರು. ಆದರೆ ಇಂದು ಮುಸ್ಲಿಂ ಸಮುದಾಯದ ವಿರುದ್ಧ ಅದೇ ಆರ್ಎಸ್ಎಸ್ ದ್ವೇಷದ ವಾತಾವರಣ ನಿರ್ಮಾಣ ಮಾಡುತ್ತಿರುವುದು ವಿಪರ್ಯಾಸವಲ್ಲವೇ?
ಇಬ್ರಾಹೀಮ್ ಅವರ ನಿಲುವನ್ನು ನೆನಪಿಸಿಕೊಳ್ಳುವ ಆರ್ಎಸ್ಎಸ್ ನಾಯಕತ್ವವು ಇಂದು ದೇಶದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿದೆ.
ಒಂದು ಸಂಘಟನೆಯನ್ನು ಬೆಂಬಲಿಸುವುದು ಅಥವಾ ವಿರೋಧಿಸುವುದು ಪ್ರತಿಯೊಬ್ಬರ ವೈಯಕ್ತಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕು. ಆದರೆ ಧರ್ಮದ ಆಧಾರದ ಮೇಲೆ ಇಡೀ ಸಮುದಾಯವೊಂದನ್ನು ದ್ವೇಷಿಸುವುದು, ದೇಶದ್ರೋಹಿಗಳೆಂದು ಬಿಂಬಿಸುವುದು ಅಥವಾ ಅವರ ಪೌರತ್ವವನ್ನು ಪ್ರಶ್ನಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಆರ್ಎಸ್ಎಸ್ ಗೆ ಅಂದು ಜೀವ ನೀಡಿದ್ದು ಒಬ್ಬ ಮುಸ್ಲಿಮನಾಗಿದ್ದನು. ಇಂದು ಅದೇ ಮುಸ್ಸಿಮ್ ಸಮುದಾಯದ ವಿರುದ್ಧ ಆರ್ಎಸ್ಎಸ್ ದ್ವೇಷ ಸಾರುತ್ತಿರುವುದು ಮಾತ್ರ ಅಪಾಯಕಾರಿಯಾಗಿದೆ..
ಅಂದು ಇಬ್ರಾಹೀಮ್ ತೋರಿಸಿದ ನಿಲುವು ಧಾರ್ಮಿಕ ಸಾಮರಸ್ಯದ ಮಹತ್ವವನ್ನು ನೆನಪಿಸುತ್ತದೆ. ಇಂದು ಅದೇ ಸಾಮರಸ್ಯದ ಮೌಲ್ಯಗಳು ದೇಶಕ್ಕೆ ಅತ್ಯಂತ ಅಗತ್ಯವಾಗಿವೆ.
ಆರ್ಎಸ್ಎಸ್ ಸೇರಿದಂತೆ ದೇಶದ ಎಲ್ಲಾ ಪ್ಯಾಸಿಸ್ಟ್ ಹಿಂದುತ್ವವಾದಿ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ಮುಸ್ಲಿಮರ ವಿರುದ್ಧದ ದ್ವೇಷದ ರಾಜಕಾರಣಕ್ಕೆ ತೆರೆ ಎಳೆದು, ಸಂವಿಧಾನಬದ್ಧ ಸಮಾನತೆ, ಸಹಬಾಳ್ವೆ ಮತ್ತು ಸಹೋದರತ್ವದ ಹಾದಿಯಲ್ಲಿ ಸಾಗಲಿ.
ಭಾರತ ಯಾರೊಬ್ಬರ ಸ್ವತ್ತಲ್ಲ. ಇದು ಹಿಂದೂಗಳಿಗೂ ಸೇರಿದೆ, ಮುಸ್ಲಿಮರಿಗೂ ಸೇರಿದೆ, ಕ್ರೈಸ್ತರು, ಸಿಖ್ಖರು ಸೇರಿದಂತೆ ಪ್ರತಿಯೊಬ್ಬ ಭಾರತೀಯನಿಗೂ ಸೇರಿದೆ.
ಧರ್ಮ ಬೇರೆ ಇರಬಹುದು, ಆದರೆ ದೇಶ ಒಂದೇ. ಸಂವಿಧಾನ ಒಂದೇ. ಎಲ್ಲರಿಗೂ ಸಮಾನ ಹಕ್ಕುಗಳಿವೆ.












