ಮಂಗಳೂರು ಏರ್ಪೋರ್ಟ್ ನಿಂದ ಮುಸ್ಲಿಂ ದ್ವೇಷಿ ಸಿಬ್ಬಂದಿಗಳನ್ನು ಹೊರಗಿಡಿ: ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಆಗ್ರಹ

0
931

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಕೆಲವು ಸಿಬ್ಬಂದಿಗಳ ‘ಮುಸ್ಲಿಂ ದ್ವೇಷಕ್ಕೆ, ಕೊಲ್ಲಿ ರಾಷ್ಟ್ರಗಳಲ್ಲಿ ದುಡಿದು ತಾಯ್ನಾಡಿಗೆ ಬರುವ ಶ್ರಮಜೀವಿಗಳು ಕಿರುಕುಳ ಅನುಭವಿಸುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದ್ದು ಸಂಬಂಧ ಪಟ್ಟವರು ಕೂಡಲೇ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಿ, ಸೂಕ್ತ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಪಕ್ಷದ ದ.ಕ. ಜಿಲ್ಲಾ ವಕ್ತಾರ ಕೆ ಫಾರೂಕ್ ಉಳ್ಳಾಲ್ ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಂಜೇಶ್ವರ ಸಮೀಪದ ಯುವಕರು, ತಮಗಾದ ಅನ್ಯಾಯವನ್ನು ಮಾಧ್ಯಮದ ಮುಂದೆ ಹೇಳಿಕೊಳ್ಳುವ ಮೂಲಕ ಈ ‘ಮನುಷ್ಯ ವಿರೋಧಿ’ ಕೃತ್ಯಗಳು ಬಹಿರಂಗವಾಗಿ, ನಾಗರಿಕ ಜಗತ್ತು ಬೆಚ್ಚಿ ಬೀಳುವಂತಾಗಿದೆ.

ಗಲ್ಫ್ ರಾಷ್ಟ್ರಗಳಿಂದ ಊರಿಗೆ ಮರಳುವವರು, ‘ಮುಸ್ಲಿಂ ‘ಎಂದು ಗೊತ್ತಾದ ಕೂಡಲೇ ಪ್ರಯಾಣಕ್ಕೆ ಸಂಬಂಧ ಪಡದ ಪ್ರಶ್ನೆಗಳನ್ನು ಕೇಳಿ ಹಿಯ್ಯಾಳಿಸುತ್ತಾ, ಲೋಹ ಶೋಧಕ ಯಂತ್ರವನ್ನು ದೇಹಕ್ಕೆ ಇಟ್ಟು, ‘ನಿಮ್ಮ ದೇಹದಲ್ಲಿ ಬಂಗಾರ ಅವಿತಿಟ್ಟಿದ್ದೀರಿ’ ಎಂದು ಗದರಿಸುವುದು ಇಲ್ಲಿ ಸಾಮಾನ್ಯ ದೃಶ್ಯವಂತೆ. ಆಶ್ಚರ್ಯವೆಂದರೆ ಇಲ್ಲಿ ಬಳಸುವ ಲೋಹ ಶೋಧಕ ಮಾಪಕ ಮುಸ್ಲಿಮರ ದೇಹಕ್ಕೆ ಇಟ್ಟರೆ ಚಿನ್ನ ಇದೆ ಎಂದು ಸೈರನ್ ಕೊಡುತ್ತದೆ. ಸೈರನ್ ಕೇಳಿದ ತಕ್ಷಣ ಮುಸ್ಲಿಂ ಪ್ರಯಾಣಿಕರನ್ನು ನಗ್ನರನ್ನಾಗಿಸಿ ಗಂಟೆಗಳ ಕಾಲ ಮತ್ತೆ ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ ಎಂದು ಸಂತ್ರಸ್ತರು ಮಲಯಾಳಂ ಮಾಧ್ಯಮಗಳು ಮುಂದೆ ಅಲವತ್ತು ಕೊಂಡಿದ್ದಾರೆ. ಕಿರುಕುಳವನ್ನು ಮೌನವಾಗಿ ಸಹಿಸದೆ ಎದುರುತ್ತರ ಕೊಡುವವರನ್ನು -ಸಂಶಯಾಸ್ಪದವಾಗಿ “ಕಂಡು ಬಂದರೆಂದು ಪೋಲಿಸ್ ವಶ ಒಪ್ಪಿಸುವುದೂ ಇದೆ ಎಂದು ಹೇಳಲಾಗುತ್ತದೆ.

ಕೆಲವರು ವಿದೇಶದಿಂದ ತಮ್ಮವರಿಗಾಗಿ ದುಡ್ಡು ಕೊಟ್ಟು ತಂದ (ಕಾನೂನು ಬದ್ಧವಾಗಿ) ವಸ್ತುಗಳನ್ನು ಸಿಬ್ಬಂದಿಗಳಿಗೆ ನೀಡಿ ಬಚಾವ್ ಆಗುವುದೂ ಇದೆಯಂತೆ, ಕಾಸರಗೋಡಿನ ಗ್ರಾಮಾಂತರ ಪ್ರದೇಶಗಳ ಜನರಿಗೆ ಕಣ್ಣೂರು ವಿಮಾನ ನಿಲ್ದಾಣಕ್ಕಿಂತ ಮಂಗಳೂರು ಏರ್ಪೋರ್ಟ್ ಹತ್ತಿರವಾಗುತ್ತಿರುವುದರಿಂದ ಕಾಸರಗೋಡಿನವರು ಮಂಗಳೂರು ವಿಮಾನ ನಿಲ್ದಾಣವನ್ನೇ ಬಳಸುತ್ತಾರೆ. ಎಂದು ತಿಳಿಸಿರುವ ಫಾರೂಕ್ ಉಳ್ಳಾಲ್,

‘ಮುಸ್ಲಿಂ ಅಮಾಯಕರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ನಡೆಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಈಗಾಗಲೇ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಅಶೋಕ್ ಗಜಪತಿ ರಾಜು, ಮಾಜೀ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶ್ರೀ ಬಿ.ಕೆ.ಹರಿಪ್ರಸಾದ್, ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಶ್ರೀ ಕೆ.ಸಿ.ವೇಣುಗೋಪಾಲ್, ಮಾಜೀ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಸ್ಥಳೀಯ ಶಾಸಕ ಶ್ರೀ ಉಮಾನಾಥ್ ಕೋಟ್ಯಾನ್,ರಿಗೆ ಲಿಖಿತ ಮನವಿ ನೀಡಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿರುವುದಾಗಿ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.