ಸಿದ್ಧಾರ್ಥ್ ಸಾವಿನ ಬಳಿಕದ ಬೆಳವಣಿಗೆ: 12ರಿಂದ 16 ಗಂಟೆಗಳ ಕಾಲ ಸತತ ವಿಚಾರಣೆ, ತಮ್ಮೊಂದಿಗೆ ತೆರಿಗೆ ಕಳ್ಳರಂತೆ ವರ್ತನೆ- ಉದ್ಯಮಿಗಳ ಆರೋಪ

0
1038

ಬೆಂಗಳೂರು, ಅ. 2: ಕೆಫೆ ಕಾಫಿ ಡೇ ಮಾಲಕ ಸಿದ್ಧಾರ್ಥರ ಸಾವಿಗೆ ಕೇಂದ್ರ ವಿತ್ತ ಸಚಿವಾಲಯವನ್ನು ಉದ್ಯಮಿಗಳು ದೂಷಿಸಿದ್ದಾರೆ. ವಿತ್ತ ಸಚಿವಾಲಯದ ಅಧೀನದ ಆದಾಯ ತೆರಿಗೆ ಇಲಾಖೆ ಸಹಿತ ಏಜೆನ್ಸಿಗಳು ಉದ್ಯಮಿಗಳಿಗೆ ಕಿರುಕುಳ ನೀಡುವ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಅವರು ಆಕ್ಷೇಪಿಸಿದ್ದಾರೆ.

ಸಿದ್ಧಾರ್ಥರ ಸಾವಿನ ಹಿಂದೆಯೇ ಬಹಿರಂಗವಾದ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆಯ ವಿರುದ್ಧ ಆರೋಪ ಹೊರಿಸಿದ್ದಾರೆ. ನಂತರ ಉದ್ಯಮಿಗಳು, ವಹಿವಾಟುದಾರರು ಆದಾಯ ತೆರಿಗೆ ಇಲಾಖೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

ತನಿಖೆಗೆ ಕರೆದ ಬಳಿಕ ಗಂಟೆಗಳ ಕಾಲ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. 12ರಿಂದ 16 ಗಂಟೆಗಳ ಕಾಲ ಹೀಗೆ ಒಂದು ದಿವಸದವರೆಗೆ ಪ್ರಶ್ನಿಸಲಾಗುತ್ತಿದೆ ಎಂದು ಬಯೊಟೆಕ್ ಮ್ಯಾನೇಜಿಂಗ್ ಡೈರಕ್ಟರ್ ಕಿರಣ್ ಮಜುಂದಾರ್ ಶಾ ಆರೋಪಿಸಿದರು. ಇಂತಹ ವಿಚಾರಣೆಗಳನ್ನು ತನಿಖೆಯ ಭಾಗವೆಂದು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಪ್ಪು ಹಣ, ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಕಾಲದಲ್ಲಿ ಬ್ಯಾಂಕಿಗೆ ವಂಚಿಸಿ ನೀರವ್ ಮೋದಿಯಂತಹವರು ವಿದೇಶಕ್ಕೆ ಹಾರಿ ಹೋಗಿದ್ದಾರೆ. ಉದ್ಯಮದ ಮೂಲಕ ಸಾಲದ ಶೂಲಯಲ್ಲಿ ಬಿದ್ದವರೊಡನೆ, ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದವರಂತೆ ಕೇಂದ್ರದ ವಿತ್ತೀಯ ಏಜೆನ್ಸಿಗಳು ವರ್ತಿಸುತ್ತಿವೆ. ಇದು ದೇಶದ ಅರ್ಥವ್ಯವಸ್ಥೆಗೆ ಪ್ರತಿಕೂಲವಾಗಿ ಪರಿಣಮಿಸಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಆದರೆ, ಸಿದ್ಧಾರ್ಥರ ಕೆಫೆ ಉದ್ಯಮದ ವಿರುದ್ಧ ಕಾನೂನು ಪ್ರಕಾರ ತನಿಖೆಯನ್ನು ಮಾಡಲಾಗಿದೆ. ಕೆಲವು ರಹಸ್ಯ ವ್ಯವಹಾರಕ್ಕೆ ಸಂಬಂಧಿಸಿ ಸ್ಪಷ್ಟ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 2019 ಮಾರ್ಚ್ 31ರವರೆಗೆ ವಿ.ಜಿ. ಸಿದ್ಧಾರ್ಥರ ಕೆಫೆ ಕಾಫಿ ಡೆ ಎಂಟರ್‍ಪ್ರೈಸಸ್‍ಗೆ 5,251 ಕೋಟಿ ರೂ ಸಾಲವಿತ್ತು ಎಂದು ಕಾರ್ಪೊರೇಟ್ ವಿಷಯಗಳ ಸಚಿವಾಲಯದ ಲೆಕ್ಕಗಳು ತಿಳಿಸುತ್ತಿವೆ.

ಕೆಫೆ ಕಾಫಿ ಡೇಯ ಪ್ರಮೋಟರ್ ಕಂಪೆನಿಗಳಾದ ದೇವದರ್ಶಿನಿ ಇನ್ಫೋ ಟೆಕ್ನಾಲಜೀಸ್, ಕಾಫಿ ಡೆ ಕನ್ಸೊಲಿಡೇಸ್, ಗೋಣಿಬೀಡು ಕಾಫಿ ಎಸ್ಟೇಟ್ಸ್ ಪ್ರತಿ ಹಂತದಲ್ಲಿ ಭಾರೀ ಮೊತ್ತದ ಸಾಲವನ್ನು ಪಡೆದುಕೊಂಡಿತ್ತು. 2017ರ ನಂತರ ಸಿದ್ಧಾರ್ಥರು ಭಾರೀ ಸಾಲವನ್ನು ಪಡೆದಿದ್ದಾರೆ. ಇದರಲ್ಲಿ ಎಷ್ಟು ಮರುಪಾವತಿಯಾಗಿದೆ ಎಂದು ಸ್ಪಷ್ಟವಾಗಿಲ್ಲ.