ಭಾರತದಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ: ಜನಸಾಮಾನ್ಯನನ್ನು ರಕ್ಷಿಸುವವರು ಯಾರು?

0
20

✍️ ಡಾ. ಸೈಯದ್ ಕಾಝಿಮ್‌
ಸಹ ಕಾರ್ಯದರ್ಶಿಗಳು, ಜ.ಇ. ಹಿಂದ್‌, ಕರ್ನಾಟಕ

ಭಾರತವು ನಿರಂತರ ಬೆಲೆಯೇರಿಕೆಯ ಬಿಕ್ಕಟ್ಟಿಗೆ ಸಾಕ್ಷಿಯಾಗುತ್ತಿದೆ. ಅಗತ್ಯ ವಸ್ತುಗಳು ಹಾಗೂ ಇಂಧನದಿಂದ ಹಿಡಿದು ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ವಸತಿಯ ವರೆಗೆ, ಸಂಸಾರವನ್ನು ನಿರ್ವಹಿಸುವ ವೆಚ್ಚವು ಸ್ಥಿರವಾಗಿ ಹೆಚ್ಚುತ್ತಿದೆ. ಕೋಟ್ಯಂತರ ಸಾಮಾನ್ಯ ಭಾರತೀಯರಿಗೆ, ಮಾಸಿಕ ವೆಚ್ಚವನ್ನು ನಿರ್ವಹಿಸುವುದು ದಿನನಿತ್ಯದ ಪರದಾಟವಾಗಿದೆ. ಸರ್ಕಾರಗಳು ಆರ್ಥಿಕ ಪ್ರಗತಿ ಮತ್ತು ರಾಷ್ಟ್ರೀಯ ಬೆಳವಣಿಗೆಯ ಅಂಕಿ ಅಂಶಗಳ ಬಗ್ಗೆ ಮಾತನಾಡುತ್ತದೆ. ಆದರೆ, ಒಂದು ಪ್ರಮುಖ ಪ್ರಶ್ನೆ ಹಾಗೆಯೇ ಉಳಿದಿದೆ: ಈ ಪ್ರಗತಿಯ ಅಂಕಿಅಂಶಗಳು ಜನ ಸಾಮಾನ್ಯನ ಜೀವನಮಟ್ಟವನ್ನು ಉತ್ತಮವಾಗಿ ಪರಿವರ್ತನೆಗೊಳಿಸುತ್ತಿದೆಯೇ? ಇಂಧನ ಬೆಲೆಯಲ್ಲಿನ ಇತ್ತೀಚಿನ ಏರಿಕೆಗಳು ಮತ್ತು ಕರ್ನಾಟಕ ಸರ್ಕಾರದ ಹಾಲಿನ ಬೆಲೆಯನ್ನು ಲೀಟರ್‌ಗೆ ₹8 ರಷ್ಟು ಹೆಚ್ಚಿಸುವ ನಿರ್ಧಾರವು ಸಾಮಾನ್ಯ ಕುಟುಂಬಗಳ ಮೇಲೆ ಹಣದುಬ್ಬರದ ಹೊರೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಏರುತ್ತಿರುವ ಬೆಲೆಗಳು, ಕುಗ್ಗುತ್ತಿರುವ ಕೌಟುಂಬಿಕ ಬಜೆಟ್‌ಗಳು

ಇಂಧನ ಬೆಲೆಗಳು ಆರ್ಥಿಕತೆಯ ಪ್ರತಿಯೊಂದು ವಲಯದ ಮೇಲೂ ನೇರ ಪರಿಣಾಮ ಬೀರುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾದಾಗ, ಸಾರಿಗೆ ವೆಚ್ಚಗಳು ಹೆಚ್ಚಾಗುತ್ತವೆ. ಇದು ತರಕಾರಿಗಳು, ದಿನಸಿ ಸಾಮಗ್ರಿಗಳು ಮತ್ತು ಇತರ ಅಗತ್ಯ ಸರಕುಗಳ ಸಾಗಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಂತಿಮವಾಗಿ, ಈ ಹೆಚ್ಚುವರಿ ವೆಚ್ಚಗಳನ್ನು ಗ್ರಾಹಕರ ಮೇಲೆಯೇ ಹೊರಸಲಾಗುತ್ತದೆ.

ಅದೇ ರೀತಿ, ಹಾಲಿನ ಬೆಲೆಯನ್ನು ಲೀಟರ್‌ಗೆ ₹8 ರಷ್ಟು ಹೆಚ್ಚಿಸುವ ಕರ್ನಾಟಕ ಸರ್ಕಾರದ ಇತ್ತೀಚಿನ ನಿರ್ಧಾರವು ಕ್ಷೀರ ಕೃಷಿಕರಿಗೆ ಪ್ರಯೋಜನ ತರುತ್ತದೆ ಎಂದು ನಿರೀಕ್ಷಿಸಲಾಗಿದೆ. ರೈತರನ್ನು ಬೆಂಬಲಿಸುವುದು ಮುಖ್ಯ, ವಿಶೇಷವಾಗಿ ಅವರ ಉತ್ಪಾದನಾ ವೆಚ್ಚಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇದು ಮಹತ್ವದಾಯಕ. ಆದಾಗ್ಯೂ, ಗ್ರಾಹಕರ ಮೇಲಿನ ಪರಿಣಾಮವನ್ನು ನಿರ್ಲಕ್ಷಿಸುವಂತಿಲ್ಲ. ಹಾಲು ಕೋಟ್ಯಂತರ ಕುಟುಂಬಗಳಿಗೆ ದಿನನಿತ್ಯದ ಅಗತ್ಯ ವಸ್ತು. ಹಾಲಿನ ಹೆಚ್ಚಾದ ಬೆಲೆಯು ಚಹಾ, ಕಾಫಿ, ಸಿಹಿತಿಂಡಿಗಳು, ಮೊಸರು, ಬೇಕರಿ ಉತ್ಪನ್ನಗಳು ಮತ್ತು ಹಾಲು ಆಧಾರಿತ ಇತರ ವಸ್ತುಗಳ ವೆಚ್ಚದ ಮೇಲೆಯೂ ವಿಪರೀತ ಪರಿಣಾಮ ಬೀರುತ್ತದೆ. 

ಪ್ರಶ್ನೆಯು ರೈತರು ಉತ್ತಮ ಸಂಭಾವನೆಗೆ ಅರ್ಹರೇ ಎಂಬುದಲ್ಲ. ಖಂಡಿತವಾಗಿಯೂ ಅವರು ಅರ್ಹರು. ನಿಜವಾದ ಪ್ರಶ್ನೆ: ಗ್ರಾಹಕರ ಮೇಲೆ, ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮೇಲೆ ವಿಪರೀತ ಹೊರೆ ಹಾಕದೆ ಸರ್ಕಾರಗಳು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವೇ? ಎಂಬುದಾಗಿದೆ.

ವೆಚ್ಚಗಳ ಏರಿಕೆ; ಆದಾಯದ ಕುಂಟುವಿಕೆ

ಭಾರತೀಯ ಕುಟುಂಬಗಳು ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದೆಂದರೆ ಆದಾಯ ಮತ್ತು ಖರ್ಚಿನ ನಡುವೆ ಹೆಚ್ಚಾಗುತ್ತಿರುವ ಅಂತರ. ಸಂಬಳ ಮತ್ತು ಕೂಲಿಯು ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುವಷ್ಟೇ ವೇಗದಲ್ಲಿ ಏರುತ್ತಿಲ್ಲ.

ತಿಂಗಳಿಗೆ ₹30,000 ಸಂಪಾದಿಸುವ ಒಂದು ಮಧ್ಯಮ ವರ್ಗದ ಕುಟುಂಬವನ್ನು ಪರಿಗಣಿಸಿ. ಕೆಲವು ವರ್ಷಗಳ ಹಿಂದೆ, ಆ ಕುಟುಂಬವು ದಿನಸಿ, ಬಾಡಿಗೆ, ಸಾರಿಗೆ, ಶಿಕ್ಷಣ, ಆರೋಗ್ಯ ಮತ್ತು ಉಳಿತಾಯಕ್ಕೆ ಸಂಬಂಧಿಸಿದ ಖರ್ಚುಗಳನ್ನು ಸುಲಭವಾಗಿ ನಿರ್ವಹಿಸುತ್ತಿರಬಹುದು. ಇಂದು, ಅದೇ ಕುಟುಂಬವು ತನ್ನ ಆದಾಯ ಸ್ವಲ್ಪ ಹೆಚ್ಚಾಗಿದ್ದರೂ ಸಹ ಈ ವೆಚ್ಚಗಳನ್ನು ಸರಿದೂಗಿಸಲು ಪರದಾಡುತ್ತಿದೆ. ದಿನಗೂಲಿ ಕಾರ್ಮಿಕರು, ಮನೆ ಕೆಲಸದವರು, ಸಣ್ಣ ಅಂಗಡಿಯವರು, ಆಟೋ ಚಾಲಕರು ಮತ್ತು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಜನರಿಗೆ ಪರಿಸ್ಥಿತಿ ಇನ್ನು ಹೆಚ್ಚು ಕಠಿಣವಾಗಿದೆ. ಈ ವರ್ಗದ ಗಳಿಕೆಯು ಹೆಚ್ಚಾಗಿ ಅನಿಶ್ಚಿತವಾಗಿರುದರಿಂದ್ದ ಹೆಚ್ಚಿನ ವೇತನವನ್ನು ಚರ್ಚಿಸಿ ಪಡೆಯಲು ಅವರಿಗೆ ಸೀಮಿತ ಅವಕಾಶಗಳಿರುತ್ತದೆ.

ಆಹಾರ, ಇಂಧನ, ವಿದ್ಯುತ್, ಶಾಲಾ ಶುಲ್ಕ, ಬಾಡಿಗೆ ಮತ್ತು ವೈದ್ಯಕೀಯ ವೆಚ್ಚಗಳು ಏಕಕಾಲದಲ್ಲಿ ಹೆಚ್ಚಾದಾಗ, ಕುಟುಂಬಗಳು ರಾಜಿ ಮಾಡಿಕೊಳ್ಳಲು ಒತ್ತಾಯಿಸಲ್ಪಡುತ್ತವೆ. ಕೆಲವರು ತಮ್ಮ ಪೌಷ್ಟಿಕಾಂಶಯುಕ್ತ ಆಹಾರದ ಸೇವನೆಯನ್ನು ಕಡಿಮೆ ಮಾಡುತ್ತಾರೆ, ಇನ್ನು ಕೆಲವರು ವೈದ್ಯಕೀಯ ಚಿಕಿತ್ಸೆಯನ್ನು ಮುಂದೂಡುತ್ತಾರೆ, ಅನೇಕರು ದಿನನಿತ್ಯದ ಖರ್ಚನ್ನು ಪೂರೈಸಲು ತಮ್ಮ ಉಳಿತಾಯವನ್ನು ಖಾಲಿ ಮಾಡುತ್ತಾರೆ ಅಥವಾ ಸಾಲ ಮಾಡುತ್ತಾರೆ. ಮೂಲಭೂತ ಅವಶ್ಯಕತೆಗಳನ್ನು ಭರಿಸಿಕೊಳ್ಳಲು ಸಾಧ್ಯವಿಲ್ಲದ ಕುಟುಂಬಕ್ಕೆ ಆರ್ಥಿಕ ಬೆಳವಣಿಗೆಯ ಸರ್ಕಾರಿ ವಾದವು ಬಹಳ ಕಡಿಮೆ ಅರ್ಥವನ್ನು ನೀಡುತ್ತದೆ.  

ಬೆಲೆ ಏರಿಕೆ ಹತೋಟಿಗೆ ತರಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆಯೇ?

ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಯಾವುದೇ ಸರ್ಕಾರದ ಅತ್ಯಂತ ಪ್ರಮುಖ ಹೊಣೆಗಾರಿಕೆಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳು, ಹವಾಮಾನ ಬದಲಾವಣೆಗಳು ಹಾಗೂ ಜಾಗತಿಕ ಆರ್ಥಿಕ ವಿದ್ಯಮಾನಗಳು ದೇಶೀಯ ಬೆಲೆಗಳ ಮೇಲೆ ಪ್ರಭಾವ ಬೀರುವುದು ನಿಜವಾದರೂ, ನಾಗರಿಕರ ಮೇಲಾಗುವ ಅದರ ತೀವ್ರತೆಯನ್ನು ತಗ್ಗಿಸಲು ಸರ್ಕಾರಗಳ ಬಳಿ ಹಲವು ನೀತಿ ನಿಯಮಗಳ ಹಾಗೂ ಯೋಜನೆಗಳ ದಾರಿಗಳಿವೆ.

ಅಗತ್ಯ ವಸ್ತುಗಳ ಬೆಲೆಗಳು ಮತ್ತೆ ಮತ್ತೆ ಗಗನಕ್ಕೇರಿದಾಗ, ಸರ್ಕಾರದ ನೀತಿಗಳ ಕಾರ್ಯಸಾಧುತನ ಹಾಗೂ ಹೊಣೆಗಾರಿಕೆಯ ಕುರಿತು ಸಹಜವಾಗಿಯೇ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ತೆರಿಗೆ ನೀತಿಗಳು, ಸಾಗಣೆ ವೆಚ್ಚಗಳು, ಪೂರೈಕೆ ವ್ಯವಸ್ಥೆಯ ಲೋಪದೋಷಗಳು, ಅನಗತ್ಯ ಮಧ್ಯವರ್ತಿಗಳ ಹಾವಳಿ, ಮಾರುಕಟ್ಟೆಯಲ್ಲಿ ಕೆಲವರ ಏಕಸ್ವಾಮ್ಯ ಹಾಗೂ ಬೆಲೆಗಳ ಮೇಲಿನ ಸೂಕ್ತ ನಿಗಾ ಕೊರತೆಯು ಗ್ರಾಹಕರ ಮೇಲಿನ ಹೊರೆಯನ್ನು ಹೆಚ್ಚಿಸುತ್ತಿವೆಯೇ ಎಂಬುದನ್ನು ಸರ್ಕಾರಗಳು ಗಂಭೀರವಾಗಿ ಪರಿಶೀಲಿಸಬೇಕು.

ಕೇವಲ ಆರ್ಥಿಕ ವೃದ್ಧಿಯ ಅಂಕಿಅಂಶಗಳನ್ನು ಪ್ರಕಟಿಸುವುದರಿಂದ ಪ್ರಯೋಜನವಿಲ್ಲ. ತಮ್ಮ ನೀತಿಗಳು ಸಾಮಾನ್ಯ ನಾಗರಿಕರ ಖರೀದಿ ಶಕ್ತಿಯನ್ನು ಹೇಗೆ ಹೆಚ್ಚಿಸುತ್ತಿವೆ ಎಂಬುದನ್ನು ಸರ್ಕಾರಗಳು ತೋರಿಸಿಕೊಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯ ಮಿತಿಯೊಳಗೆ ಈ ಹೊಣೆಯನ್ನು ಹೊರಬೇಕು.  

ಇಸ್ಲಾಮೀ ದೃಷ್ಟಿಕೋನ: ಆರ್ಥಿಕ ನ್ಯಾಯ ಮತ್ತು ಸಾಮಾಜಿಕ ಜವಾಬ್ದಾರಿ

ಇಸ್ಲಾಮ್ ಆರ್ಥಿಕ ನ್ಯಾಯ, ಪ್ರಾಮಾಣಿಕ ವ್ಯಾಪಾರ ಮತ್ತು ಜನರ ಮೂಲಭೂತ ಅವಶ್ಯಕತೆಗಳ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ಬಡವರು ಬದುಕುಳಿಯಲು ಪರದಾಡುತ್ತಿರುವಾಗ ಸಂಪತ್ತು ಕೇವಲ ಶ್ರೀಮಂತರಲ್ಲಿ ಮಾತ್ರ ಚಲಾವಣೆಯಾಗಬಾರದು.

ಪವಿತ್ರ ಕುರ್‌ಆನ್ ಹೀಗೆ ಹೇಳುತ್ತದೆ: “ಸಂಪತ್ತು ನಿಮ್ಮಲ್ಲಿರುವ ಶ್ರೀಮಂತರ ನಡುವೆ ಮಾತ್ರ ಸುಳಿದಾಡದಿರಲಿ.” (ಸೂರಃ ಅಲ್-ಹಶ್ರ್ 59:7). ಈ ತತ್ವವು ಸಮಾಜದಲ್ಲಿ ಸಂಪತ್ತು ಮತ್ತು ಅವಕಾಶಗಳು ಹೆಚ್ಚು ನ್ಯಾಯಯುತವಾಗಿ ಹಂಚಲ್ಪಡುವ ಆರ್ಥಿಕ ವ್ಯವಸ್ಥೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಶೋಷಣೆ, ಅಪ್ರಾಮಾಣಿಕತೆ, ಕೃತಕ ಅಭಾವ ಮತ್ತು ಅನ್ಯಾಯದ ವಾಣಿಜ್ಯ ಪದ್ಧತಿಗಳನ್ನು ಇಸ್ಲಾಮ್ ನಿಷೇಧಿಸುತ್ತದೆ. ಅಲ್ಲಾಹನು ಹೇಳುತ್ತಾನೆ: “ನೀವು ಪರಸ್ಪರರ ಸಂಪತ್ತನ್ನು ಅನ್ಯಾಯದ ರೀತಿಯಿಂದ ಕಬಳಿಸಬೇಡಿರಿ. ಲೇವಾದೇವಿಗಳು ಪರಸ್ಪರ ಒಪ್ಪಿಗೆಯಿಂದಲೂ ನಿಯಮಬದ್ಧವೂ ಆಗಿರಬೇಕು.” (ಸೂರಃ ಅನ್ನಿಸಾ 4:29). 

ಕುರ್‌ಆನ್ ತೂಕ ಮತ್ತು ಅಳತೆಗಳಲ್ಲಿ ವಂಚನೆ ಮಾಡುವುದರ ವಿರುದ್ಧವೂ ಎಚ್ಚರಿಸುತ್ತದೆ (ಸೂರಃ ಅಲ್-ಮುತಫ್ಫಿಫೀನ್ 83:1-3), ಮಾರುಕಟ್ಟೆಯಲ್ಲಿ ಪ್ರಾಮಾಣಿಕತೆ ಮತ್ತು ನ್ಯಾಯದ ಮಹತ್ವವನ್ನೂ ಸ್ಥಾಪಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ಅವರ ಜೀವನದ ಒಂದು ಪ್ರಮುಖ ಘಟನೆಯು ಬೆಲೆ ನಿಯಂತ್ರಣದ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಜನರು ಬೆಲೆ ಏರಿಕೆಯ ಬಗ್ಗೆ ದೂರು ನೀಡಿ, ಬೆಲೆಗಳನ್ನು ನಿಗದಿಪಡಿಸುವಂತೆ ಅವರಿಗೆ ವಿನಂತಿಸಿದಾಗ, ಬೆಲೆಗಳನ್ನು ನಿರ್ಧರಿಸುವವನು ಅಲ್ಲಾಹನಾಗಿದ್ದಾನೆ ಎಂದರು ಮತ್ತು ಯಾರದ್ದಾದರೂ ಆಸ್ತಿಗೆ ಅನ್ಯಾಯ ಮಾಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು (ಸುನನ್ ಅಬೀ ದಾವೂದ್ 3451). 

ಈ ಘಟನೆಯನ್ನು ಎಲ್ಲಾ ಪರಿಸ್ಥಿತಿಗಳಲ್ಲೂ ಸರ್ಕಾರದ ಹಸ್ತಕ್ಷೇಪದ ಮೇಲಿನ ನಿಷೇಧ ಎಂದು ತಪ್ಪಾಗಿ ಅರ್ಥೈಸಬಾರದು. ಬದಲಿಗೆ, ಆರ್ಥಿಕ ನಿರ್ಧಾರಗಳು ನ್ಯಾಯವನ್ನು ಆಧರಿಸಿರಬೇಕು ಮತ್ತು ಉತ್ಪಾದಕರು ಅಥವಾ ಗ್ರಾಹಕರ ಹಕ್ಕುಗಳನ್ನು ಅನಿಯಂತ್ರಿತವಾಗಿ ಉಲ್ಲಂಘಿಸಬಾರದು ಎಂದು ಇದು ಕಲಿಸುತ್ತದೆ. ಶೋಷಣೆ, ಅಕ್ರಮ ಸಂಗ್ರಹ, ಕೃತಕ ಅಭಾವ ಮತ್ತು ಮಾರುಕಟ್ಟೆಯ ದುರ್ಬಳಕೆಯನ್ನು ತಡೆಯುವ ಜವಾಬ್ದಾರಿ ಸರ್ಕಾರಗಳ ಮೇಲಿದೆ. 

ಪ್ರಾಯೋಗಿಕ ಪರಿಹಾರಗಳು

ಹಣದುಬ್ಬರವನ್ನು ಪರಿಹರಿಸಲು ತಾತ್ಕಾಲಿಕ ಪರಿಹಾರಕ್ಕಿಂತ ಹೆಚ್ಚಿನ ಯೋಜನೆಯ ಅಗತ್ಯವಿದೆ. ಆರ್ಥಿಕ ನ್ಯಾಯ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ಸುದೀರ್ಘ ಬದ್ಧತೆಯ ಅಗತ್ಯವಿದೆ.

  1. ತೆರಿಗೆಯ ಹೊರೆಯನ್ನು ಕಡಿಮೆ ಮಾಡುವುದು: ಹಣಕಾಸಿನ ಪರಿಸ್ಥಿತಿಗಳು ಅನುಮತಿಸುವಲ್ಲೆಲ್ಲಾ ಸರ್ಕಾರಗಳು ಅಗತ್ಯ ವಸ್ತುಗಳ ಮೇಲಿನ, ವಿಶೇಷವಾಗಿ ಇಂಧನ ಮತ್ತು ಆಹಾರದ ಮೇಲಿನ ತೆರಿಗೆಗಳು ಮತ್ತು ಸುಂಕಗಳನ್ನು ಮರುಪರಿಶೀಲಿಸಬೇಕು.
  2. ಮಾರುಕಟ್ಟೆ ನಿಯಂತ್ರಣವನ್ನು ಬಲಪಡಿಸುವುದು: ಅಕ್ರಮ ಸಂಗ್ರಹಣೆ, ಕಾಳಸಂತೆ, ಕೃತಕ ಅಭಾವ ಮತ್ತು ಅತಿಯಾದ ಲಾಭಕೋರತನದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಗತ್ಯ ವಸ್ತುಗಳು ನ್ಯಾಯಯುತ ಬೆಲೆಯಲ್ಲಿ ಲಭ್ಯವಿರಬೇಕು.
  3. ನ್ಯಾಯಯುತ ವೇತನವನ್ನು ಖಚಿತಪಡಿಸುವುದು: ಕಾರ್ಮಿಕರ ವೇತನ ಮತ್ತು ಕನಿಷ್ಠ ವೇತನವನ್ನು ಜೀವನ ವೆಚ್ಚಕ್ಕೆ ಅನುಗುಣವಾಗಿ ನಿಯತಕಾಲಿಕವಾಗಿ ಮರುಪರಿಶೀಲಿಸಬೇಕು, ಇದರಿಂದ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಗೌರವಯುತವಾಗಿ ಪೂರೈಸಿಕೊಳ್ಳಬಹುದು.
  4. ರೈತರನ್ನು ಬೆಂಬಲಿಸುವುದು: ಅತ್ಯಗತ್ಯ ಉತ್ಪನ್ನಗಳು ಸಾರ್ವಜನಿಕರಿಗೆ ಕೈಗೆಟುಕುವಂತೆ ನೋಡಿಕೊಳ್ಳುವುದರ ಜೊತೆಗೆ ರೈತರಿಗೆ ನ್ಯಾಯಯುತ ಪ್ರತಿಫಲವನ್ನು ಖಚಿತಪಡಿಸಲು ಅವರಿಗೆ ನೇರ ಆರ್ಥಿಕ ನೆರವು, ಸಬ್ಸಿಡಿಗಳು, ಸಶಕ್ತ ಸಂಗ್ರಹಣಾ ಸೌಲಭ್ಯಗಳು ಹಾಗೂ ಸುಧಾರಿತ ಮೂಲಸೌಕರ್ಯಗಳನ್ನು ಒದಗಿಸುವುದು. 
  5. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು: ಅಗತ್ಯ ಆಹಾರ ಪದಾರ್ಥಗಳ ಲಭ್ಯತೆಯನ್ನು ಸುಧಾರಿಸುವುದು, ಸೋರಿಕೆಯನ್ನು ತಡೆಗಟ್ಟುವುದು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸೂಕ್ತ ನೆರವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು.
  6. ದಾನ ಮತ್ತು ಸಾಮಾಜಿಕ ಕಲ್ಯಾಣದ ಪ್ರೋತ್ಸಾಹ: ಇಸ್ಲಾಮೀ ವ್ಯವಸ್ಥೆಯು ದಾನ-ಧರ್ಮ ಹಾಗೂ ಧರ್ಮಾರ್ಥ ಸಂಸ್ಥೆಗಳ ಮೂಲಕ ಸಂಪತ್ತನ್ನು ನ್ಯಾಯಯುತವಾಗಿ ಮರುಹಂಚಿಕೆ ಮಾಡಲು ಸಶಕ್ತ ಮಾರ್ಗಗಳನ್ನು ಒದಗಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ವಿಧವೆಯರು, ನಿರುದ್ಯೋಗಿಗಳು ಹಾಗೂ ಜೀವನದ ಕನಿಷ್ಠ ಅಗತ್ಯಗಳಿಗಾಗಿ ಶ್ರಮಿಸುತ್ತಿರುವ ಜನರಿಗೆ ನೆರವಾಗಲು ಈ ಸೌಲಭ್ಯಗಳನ್ನು ಬಲವರ್ಧನೆಗೊಳಿಸುವುದು. 
  7. ಜವಾಬ್ದಾರಿಯುತ ಬಳಕೆಯ ಉತ್ತೇಜನ: ಇಸ್ಲಾಮೀ ತತ್ವಗಳು ದುಂದುವೆಚ್ಚ ಹಾಗೂ ಸಂಪನ್ಮೂಲಗಳ ಪೋಲನ್ನು ನಿರಾಕರಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿ ಮತ್ತು ಕುಟುಂಬವು ಆರ್ಥಿಕ ಶಿಸ್ತು ಹಾಗೂ ಮಿತವ್ಯಯವನ್ನು ಅಳವಡಿಸಿಕೊಳ್ಳುವುದು ಅಗತ್ಯ. ಆದಾಗ್ಯೂ, ಕೇವಲ ವೈಯಕ್ತಿಕ ಮಟ್ಟದ ಉಳಿತಾಯವು ಆರ್ಥಿಕತೆಯ ಮೂಲಭೂತ ಹಣದುಬ್ಬರ ಸಮಸ್ಯೆಗೆ ಪೂರ್ಣ ಪರಿಹಾರವಾಗಲಾರದು. 

ಜನಸಾಮಾನ್ಯರು ಮತ್ತು ಮಾಧ್ಯಮಗಳು ನೈಜ ಸಮಸ್ಯೆಗಳ ಮೇಲೆ ಗಮನಹರಿಸಬೇಕು

ಸಾರ್ವಜನಿಕ ಚರ್ಚೆಗಳು ಮತ್ತು ಮಾಧ್ಯಮ ಚರ್ಚೆಗಳು ಹೆಚ್ಚಾಗಿ ರಾಜಕೀಯ ವಿವಾದಗಳು, ವ್ಯಕ್ತಿತ್ವಗಳು, ಧರ್ಮಗಳ ನಡುವಿನ ವ್ಯತ್ಯಾಸಗಳು ಮತ್ತು ಸಂವೇದನಾಶೀಲ ಸುದ್ದಿಗಳ ಪ್ರಾಬಲ್ಯಕ್ಕೆ ಒಳಗಾಗುತ್ತಿವೆ. ಈ ವಿಷಯಗಳು ಗಮನಕ್ಕೆ ಅರ್ಹವಾಗಿರಬಹುದು, ಆದರೆ ಜನರ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳು ಹೆಚ್ಚಲ್ಲದಿದ್ದರೂ, ಸಮಾನ ಪ್ರಾಮುಖ್ಯತೆಯನ್ನು ಪಡೆಯಬೇಕು.

ಒಂದು ಕುಟುಂಬವು ಗೌರವದಿಂದ ಜೀವಿಸಲು ಎಷ್ಟು ಸಂಪಾದಿಸುವ ಅಗತ್ಯವಿದೆ? ಅಗತ್ಯ ವಸ್ತುಗಳು ಏಕೆ ಕೈಗೆಟುಕದಂತಾಗುತ್ತಿವೆ? ಜೀವನ ವೆಚ್ಚಗಳಿಗೆ ಅನುಗುಣವಾಗಿ ವೇತನ ಹೆಚ್ಚಾಗುತ್ತಿದೆಯೇ? ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ರಕ್ಷಿಸಲು ಸರ್ಕಾರಗಳು ಏನು ಮಾಡುತ್ತಿವೆ? ಇವು ನಿರಂತರ ಗಮನಕ್ಕೆ ಅರ್ಹವಾದ ಪ್ರಶ್ನೆಗಳಾಗಿವೆ. 

ಮಾಧ್ಯಮ ಸಂಸ್ಥೆಗಳು, ನಾಗರಿಕ ಸಮಾಜದ ಗುಂಪುಗಳು, ಅರ್ಥಶಾಸ್ತ್ರಜ್ಞರು, ಧಾರ್ಮಿಕ ಸಂಸ್ಥೆಗಳು ಮತ್ತು ನಾಗರಿಕರು ಈ ಸಮಸ್ಯೆಗಳನ್ನು ಮುಖ್ಯವಾಹಿನಿಯ ಸಾರ್ವಜನಿಕ ಚರ್ಚೆಗೆ ತರಬೇಕು. ಸರ್ಕಾರಗಳನ್ನು ಕೇವಲ ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳ ಬಗ್ಗೆ ಮಾತ್ರವಲ್ಲದೆ, ಆ ಬೆಳವಣಿಗೆಯು ಸಾಮಾನ್ಯ ಜನರ ಜೀವನವನ್ನು ಹೇಗೆ ಸುಧಾರಿಸುತ್ತದೆ ಎಂಬುದರ ಕುರಿತ ಪ್ರಶ್ನೆಗೆ ಒಳಡಿಸಬೇಕು.

ಉಪಸಂಹಾರ: ಆರ್ಥಿಕ ನ್ಯಾಯವೇ ಪ್ರಥಮ ಆದ್ಯತೆ 

ಒಂದು ರಾಷ್ಟ್ರದ ಪ್ರಗತಿಯ ನೈಜ ಮಾನದಂಡವು ಕೇವಲ ಅದರ ಜಿಡಿಪಿ, ಮೂಲಸೌಕರ್ಯ ಹಾಗೂ ಅಂತಾರಾಷ್ಟ್ರೀಯ ಮನ್ನಣೆಯಲ್ಲ. ಬದಲಾಗಿ, ಅದು ಅಲ್ಲಿನ ಜನರ — ಅದರಲ್ಲೂ ಮುಖ್ಯವಾಗಿ ಅತ್ಯಂತ ದುರ್ಬಲರ ಹಾಗೂ ಕಡುಬಡವರ ಜೀವನದ ಗುಣಮಟ್ಟದಲ್ಲಿದೆ. ಇಸ್ಲಾಮಿನ ಬೋಧನೆಯ ಪ್ರಕಾರ ಸಮಾಜವು ನ್ಯಾಯ, ಕಾರುಣ್ಯ, ಹೊಣೆಗಾರಿಕೆ ಮತ್ತು ಮಾನವ ಘನತೆಯ ಅಡಿಪಾಯದ ಮೇಲೆ ನಿರ್ಮಾಣವಾಗಬೇಕು. ಜನರಿಗೆ ಮೂಲಭೂತ ಅವಶ್ಯಕತೆಗಳು ಲಭ್ಯವಾಗುತ್ತಿದೆಯೇ ಮತ್ತು ಆರ್ಥಿಕ ನೀತಿಗಳು ಈಗಾಗಲೇ ಸಂಕಷ್ಟದಲ್ಲಿರುವವರ ಮೇಲೆ ಅತಿಯಾದ ಹೊರೆಯನ್ನು ಹಾಕುತ್ತಿಲ್ಲ ತಾನೇ ಎಂಬುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು.  

ತನ್ನ ಪ್ರಜೆಗಳು ಆಹಾರ, ಹಾಲು, ಇಂಧನ, ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚಗಳಿಗಾಗಿ ನಿರಂತರವಾಗಿ ಕಂಗಾಲಾಗಿರುವಾಗ, ಯಾವುದೇ ದೇಶವು ಅರ್ಥಪೂರ್ಣ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ದಿನೇ ದಿನೇ ಏರುತ್ತಿರುವ ಜೀವನ ವೆಚ್ಚವು ಕೇವಲ ಒಂದು ಆರ್ಥಿಕ ವಿಚಾರ ಮಾತ್ರವಲ್ಲ; ಅದು ಸಾಮಾಜಿಕ ನ್ಯಾಯ, ಜವಾಬ್ದಾರಿಯುತ ಆಡಳಿತ ಹಾಗೂ ಮಾನವ ಘನತೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಸರ್ಕಾರಗಳು, ನೀತಿ ನಿರ್ಮಾತೃಗಳು, ಮಾಧ್ಯಮಗಳು ಹಾಗೂ ನಾಗರಿಕರು ಈ ವಿಷಯಕ್ಕೆ ದೊರೆಯಬೇಕಾದ ಸೂಕ್ತ ಗಂಭೀರತೆಯನ್ನು ನೀಡಬೇಕಾದ ಸಮಯ ಇದಾಗಿದೆ.