ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಸ್ಲಿಂ ಪ್ರಯಾಣಿಕರಿಗೆ ಕಿರುಕುಳ: ಜನಪ್ರತಿನಿಧಿಗಳಿಗೆ ಮುಖಂಡರಿಗೆ ಪತ್ರ ಬರೆದ ದ ಕ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್

0
580

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಸ್ಲಿಂ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ದೂರುಗಳಿಗೆ ಸ್ಪಂದಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಫಾರೂಕ್ ಉಳ್ಳಾಲ್ ಅವರು, ಈ ಬಗ್ಗೆ ತಪ್ಪಿತಸ್ಥ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ಈಗಾಗಲೇ ಹೇಳಿಕೆಯ ಮೂಲಕ ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿದ್ದು, ಇದೀಗ ಈ ಒತ್ತಾಯವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರಿಗೂ ಜಿಲ್ಲಾ ಸಂಸದರು ಮತ್ತು ಶಾಸಕರಿಗೂ ಮಾಡಿಕೊಂಡಿದ್ದು, ಸಾರ್ವಜನಿಕ ದೂರಿನ ಬೆನ್ನು ಬಿದ್ದು ಗುರುತಿಸಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಮುಖಂಡರಾದ ಬಿ ಕೆ ಹರಿಪ್ರಸಾದ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಉಸ್ತುವಾರಿಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ಕೆ ಸಿ ವೇಣುಗೋಪಾಲ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ.ಖಾದರ್, ಉಮಾನಾಥ್ ಕೋಟ್ಯಾನ್ ರಿಗೂ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅವರ ಪತ್ರದ ಸಾರಾಂಶ ಹೀಗಿದೆ:

ಗೌರವಾನ್ವಿತ ರೇ,

ಮಂಗಳೂರು ವಿಮಾನ ನಿಲ್ದಾಣದ ಕೆಲವು ಸಿಬ್ಬಂದಿಗಳು, ಗಲ್ಫ್ ನಿಂದ ಊರಿಗೆ ಬರುವಮುಸ್ಲಿಂ ಪ್ರಯಾಣಿಕರನ್ನು, ತನಿಖೆಯ ನೆಪದಲ್ಲಿ, ಮುಸ್ಲಿಂ ಎಂದು ಗೊತ್ತಾದ ತಕ್ಷಣ, ಅವಹೇಳನ ಮತ್ತು ಕಿರುಕುಳಕ್ಕೆ ಗುರಿ ಮಾಡುತ್ತಿದ್ದಾರೆ ಎಂಬ ದೂರು ಬಹಳ ದಿನಗಳಿಂದ ಕೇಳಿ ಬರುತ್ತಿವೆ. ಅದರಲ್ಲೂ ಕಾಸರಗೋಡು ಭಾಗದ ಗಲ್ಫ್ ನಿಂದ ಮರಳುವ ಮುಸ್ಲಿಮ್ ಪ್ರಯಾಣಿಕರನ್ನು ಸಂಪೂರ್ಣ ನಗ್ನರನ್ನಾಗಿಸಿ, ತನಿಖೆಗೊಳಪಡಿಸಿ ಅಮಾನವೀಯವಾಗಿ ಸತಾಯಿಸಲಾಗುತ್ತವೆ ಎಂದೂ ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ, ಕಾಸರಗೋಡು ಜಿಲ್ಲೆಯ ಯುವಕರನ್ನು ಮುಸ್ಲಿಂ ಎನ್ನುವ ಕಾರಣಕ್ಕೆ ನಗ್ನರಾಗಿಸಿ, ಅವಮಾನಕರವಾಗಿ ನಡೆಸಿಕೊಂಡ ಬಗ್ಗೆ ಮಾಧ್ಯಮಗಳಲ್ಲಿ ಸಚಿತ್ರವಾಗಿ ವರದಿಯಾಗಿವೆ. (ಮಾಹಿತಿಗಾಗಿ ಆ ವರದಿಯನ್ನು ಈ ಮನವಿಯೊಂದಿಗೆ ಲಗತ್ತಿಸಿರುವೆ).

ಆದ್ದರಿಂದ, ತಮ್ಮೊಂದಿಗೆ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ಹೀಗೆ ಅನಾಗರಿಕವಾಗಿ ಹಾಗೂ ಕೋಮುದ್ವೇಷ ಸಾಧಿಸುವ ರೀತಿಯಲ್ಲಿ ವರ್ತಿಸುವ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ, ಮುಸ್ಲಿಂ ಎನ್ನುವ ಕಾರಣಕ್ಕೆ ಅವಮಾನ ಮತ್ತು ಸುಳ್ಳು ಪೋಲಿಸ್ ಕೇಸಿಗೆ ಈಡಾಗುತ್ತಿರುವ ಅಮಾಯಕರಿಗೆ ನ್ಯಾಯ ದೊರಕಿಸಿ.’ಜಾತ್ಯಾತೀತ ಪರಂಪರೆ’ಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂರಕ್ಷಿಸಲು ಅಗತ್ಯ ಸಹಕಾರವನ್ನು ನೀಡ ಬೇಕಾಗಿ ವಿನಂತಿಸಿಕೊಳ್ಳುವೆ.