ಸನ್ಮಾರ್ಗ ವಾರ್ತೆ
ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ಮಾತನಾಡಿ, ಕರುಣೆ ಮತ್ತು ಸಂವೇದನೆಯೇ ಮಾನವತೆ ಹಾಗೂ ಸಮಾಜದ ಅಡಿಪಾಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಜನರು ಯಾವುದೇ ಅಪೇಕ್ಷೆಯಿಲ್ಲದೆ ಇತರರ ಸೇವೆ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.
ಡಾ. ಸಂಜಯ್ ಪೈಠಣಕರ್ ಅವರಿಗೆ ‘ವಿದರ್ಭ ಗೌರವ’ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಭಾಗವತ್, “ಸೇವೆಯು ಯಾವುದೇ ವೃತ್ತಿಯಲ್ಲ, ಬದಲಿಗೆ ಸಮಾಜದ ಬಗ್ಗೆ ನಮಗಿರುವ ಜವಾಬ್ದಾರಿಯಾಗಿದೆ. ನಾವು ಕೇವಲ ನಮ್ಮ ಜೀವನೋಪಾಯವನ್ನು ಸಂಪಾದಿಸಲು ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಜಗತ್ತು ಸರಾಗವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಕೂಡ ಕೆಲಸ ಮಾಡುತ್ತೇವೆ” ಎಂದರು. ಸಂವೇದನೆಯ ಮಹತ್ವವನ್ನು ಒತ್ತಿಹೇಳಿದ ಭಾಗವತ್, ಸಂಕಷ್ಟದಲ್ಲಿರುವ ವ್ಯಕ್ತಿಗೆ ಸಹಾಯ ಮಾಡುವುದು, ಅವರೊಂದಿಗೆ ನಮಗೆ ಯಾವುದೇ ವೈಯಕ್ತಿಕ ಸಂಬಂಧವಿರಲಿ ಅಥವಾ ಇಲ್ಲದಿರಲಿ, ಅದು ಮಾನವತೆಯ ಸ್ವಾಭಾವಿಕ ಅಭಿವ್ಯಕ್ತಿಯಾಗಿದೆ ಎಂದರು.
“ಯಾವ ವ್ಯಕ್ತಿಯೊಂದಿಗೂ ನಮಗೆ ಸಂಬಂಧವಿರಲಿ ಅಥವಾ ಇಲ್ಲದಿರಲಿ, ಎಲ್ಲಾದರೂ ಯಾರಾದರೂ ದುಃಖದಲ್ಲಿದ್ದರೆ ಅಥವಾ ಕಷ್ಟದಲ್ಲಿದ್ದರೆ, ಅವರ ದುಃಖವನ್ನು ದೂರ ಮಾಡಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನಾವು ಮಾಡಬೇಕು. ಹೀಗೆ ಮಾಡುವಾಗ ನಾವು ಯಾವುದೋ ಅಸಾಧಾರಣ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಭಾವಿಸಬಾರದು. ಇದುವೇ ಮಾನವತೆಯ ನಿಜವಾದ ಗುರುತಾಗಿದೆ.” ಎಂದರು.
ಪ್ರಶಸ್ತಿಗಳು ಜನರನ್ನು ಸಮಾಜಸೇವೆಗೆ ಪ್ರೇರೇಪಿಸುವ ಉದ್ದೇಶದಿಂದ ನೀಡುವುದಿಲ್ಲ, ಏಕೆಂದರೆ ಸನ್ಮಾನಿತರಾದ ವ್ಯಕ್ತಿಗಳು ಎಂದಿಗೂ ಯಾವುದೇ ಪ್ರಶಸ್ತಿ ಅಥವಾ ಗೌರವದ ಅಪೇಕ್ಷೆಯಿಂದ ಕೆಲಸ ಮಾಡಿಲ್ಲ ಎಂದು ಭಾಗವತ್ ಹೇಳಿದರು.
“ಅವರ ಕೆಲಸವನ್ನು ಗೌರವಿಸಲು ಮತ್ತು ಅದನ್ನು ಮತ್ತಷ್ಟು ಮುಂದುವರಿಸಲು ಪ್ರೋತ್ಸಾಹಿಸಲು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ‘ಪ್ರಶಸ್ತಿ’ ಎನ್ನುವ ಪದದ ಅರ್ಥವೇ ಯಾವುದನ್ನಾದರೂ ಮುಂದೆ ಕೊಂಡೊಯ್ಯುವುದು ಎಂದರ್ಥ. ಈ ಪದದ ಅರ್ಥ ಪಾರಿತೋಷಕ ಮತ್ತು ಪ್ರೋತ್ಸಾಹ ಎಂದೂ ಆಗುತ್ತದೆ” ಎಂದು ಅವರು ವಿವರಿಸಿದರು. ಸಮಾಜಸೇವೆಯಲ್ಲಿ ನಿರತರಾದವರನ್ನು ಸನ್ಮಾನಿಸುವುದು ಅವರ ಕೊಡುಗೆಯನ್ನು ಶ್ಲಾಘಿಸಲು ಮತ್ತು ಇತರರನ್ನು ಸಹ ಹಾಗೆ ಮಾಡಲು ಪ್ರೇರೇಪಿಸುವ ಒಂದು ಮಾರ್ಗವಾಗಿದೆ ಎಂದು ಭಾಗವತ್ ನುಡಿದರು.
ಕರುಣೆ ಎನ್ನುವುದು ಮಾನವೀಯ ಸಂವೇದನೆಯ ಅಭಿವ್ಯಕ್ತಿಯಾಗಿದೆ ಮತ್ತು ಸಮಾಜವು ಕೇವಲ ಆರ್ಥಿಕ ಸಮೃದ್ಧಿಯ ಬಲದಿಂದ ಮಾತ್ರವಲ್ಲದೆ, ಇದೇ ಸಂವೇದನೆಯ ಆಧಾರದ ಮೇಲೆ ಉಳಿದುಕೊಂಡಿದೆ ಎಂದು ಭಾಗವತ್ ಹೇಳಿದರು. “ಸಮಾಜವು ಕರುಣೆ ಮತ್ತು ಸಂವೇದನೆಯ ಬಲದಿಂದ ಜೀವಂತವಾಗಿರುತ್ತದೆ. ಈ ಸಂವೇದನೆಯು ಮುಂದುವರಿದರೆ ಸಮಾಜವೂ ಉಳಿಯುತ್ತದೆ. ಒಂದು ವೇಳೆ ಇದು ನಶಿಸಿಹೋದರೆ ಮಾನವತೆಯೇ ನಾಶವಾಗುತ್ತದೆ.” ಎಂದು ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












