ಇಸ್ರೇಲಿ ಕಂಪನಿಗಳೊಂದಿಗೆ ಸರ್ಕಾರದ ನಂಟನ್ನು ವಿರೋಧಿಸಿ ಪ್ರತಿಭಟನೆ: ಮಧ್ಯರಾತ್ರಿ ವಾರಂಟ್ ಇಲ್ಲದೆ ಎಸ್‌ಐಒ, ಎಪಿಸಿಆರ್ ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ತೆಲಂಗಾಣ ಪೊಲೀಸರು

0
4

ಸನ್ಮಾರ್ಗ ವಾರ್ತೆ

ಹೈದರಾಬಾದ್‌ನ ಟಿ-ಹಬ್‌ನಲ್ಲಿ ನಡೆಯುತ್ತಿರುವ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ವಿರೋಧಿಸಿದ್ದಕ್ಕಾಗಿ ತೆಲಂಗಾಣ ಪೊಲೀಸರು ಸೋಮವಾರ ಮುಂಜಾನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ತೆಲಂಗಾಣ ಮತ್ತು ಎಪಿಸಿಆರ್ ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ಮಿರ್ಚೌಕ್ ಪೊಲೀಸರು ಎಸ್‌ಐಒ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್ ತಾಜ್ ಮತ್ತು ರಾಜ್ಯ ಕಾರ್ಯದರ್ಶಿ ತಕಿಯುದ್ದೀನ್ ಝೈದ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಎಪಿಸಿಆರ್ ರಾಜ್ಯ ಸಂಯೋಜಕ ಉಮರ್ ಫಾರೂಕ್ ಅವರನ್ನು ಆದಿಲಾಬಾದ್‌ನ ಇಚೋಡಾದಲ್ಲಿ ವಶಕ್ಕೆ ಪಡೆಯಲಾಗಿದೆ.

ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ನಾಗರಿಕ ಸಮಾಜದ ಗುಂಪುಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮೂವರೂ ಉಪಸ್ಥಿತರಿದ್ದರು.

ಎಐಎಂಐಎಂನ ಚಾರ್ಮಿನಾರ್ ಶಾಸಕ ಮಿರ್ ಝುಲ್ಫಿಕರ್ ಅಲಿ ಅವರ ಮಧ್ಯಪ್ರವೇಶದ ನಂತರ ಸೋಮವಾರ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಗಿದೆ. ಬಂಧಿತರ ವಿರುದ್ಧ ಯಾವುದೇ ಎಫ್‌ಐಆರ್‌ಗಳನ್ನು ದಾಖಲಿಸಲಾಗಿಲ್ಲ ಮತ್ತು ಈ ಬಂಧನಗಳನ್ನು ಸಂಘಟನೆಗಳು ದ್ವೇಷದ ಕ್ರಮ (ವಿಚ್-ಹಂಟ್) ಎಂದು ಕರೆದಿವೆ.

“ಆತ್ಮಸಾಕ್ಷಿಯ ಧ್ವನಿಗಳನ್ನು ಹತ್ತಿಕ್ಕುವುದರಿಂದ ದೃಢನಿಶ್ಚಯ, ಧೈರ್ಯ ಮತ್ತು ನ್ಯಾಯದಿಂದ ಪ್ರೇರಿತವಾದ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ. ಪ್ಯಾಲೆಸ್ಟೈನ್‌ಗೆ ನಮ್ಮ ಬೆಂಬಲ ಅಚಲವಾಗಿರುತ್ತದೆ,” ಎಂದು ಎಸ್‌ಐಒ ತೆಲಂಗಾಣ ಎಕ್ಸ್ (X) ನಲ್ಲಿ ತಿಳಿಸಿದೆ.

“ಇದು ಬೆದರಿಕೆ ಮತ್ತು ಇಸ್ರೇಲ್‌ಗೆ ನೀಡುತ್ತಿರುವ ಅಚಲ ಬೆಂಬಲವಲ್ಲದೆ ಬೇರೇನೂ ಅಲ್ಲ, ಹೈದರಾಬಾದ್ ನಗರ ಪೊಲೀಸರ ಈ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ,” ಎಂದು ಸಾಮಾಜಿಕ ಕಾರ್ಯಕರ್ತ ಎಸ್‌ಕ್ಯೂ ಮಸೂದ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ತೆಲಂಗಾಣ ಸರ್ಕಾರದ ಸ್ಟಾರ್ಟ್‌ಅಪ್ ಇನ್‌ಕ್ಯುಬೇಟರ್ ಆಗಿರುವ ಟಿ-ಹಬ್, ನವೆಂಬರ್ 16 ರಂದು 20 ಇಸ್ರೇಲಿ ತಂತ್ರಜ್ಞಾನ ಕಂಪನಿಗಳ ನಿಯೋಗಕ್ಕೆ ಆತಿಥ್ಯ ವಹಿಸುತ್ತಿದೆ. ಈ ಪೈಕಿ ಐದು ಕಂಪನಿಗಳು ಗಾಝಾ ಅಥವಾ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳು ಬಳಸುತ್ತವೆ ಎನ್ನಲಾದ ಹಾರ್ಡ್‌ವೇರ್, ಸಾಫ್ಟ್‌ವೇರ್ ಅಥವಾ ಸೇವೆಗಳನ್ನು ಪೂರೈಸುತ್ತವೆ ಎಂದು ‘ಸಿಯಾಸತ್ ಡೈಲಿ’ ತನಿಖಾ ವರದಿ ತಿಳಿಸಿದೆ.