ಟೆಸ್ಟ್ ತಂಡದಿಂದ ಆಟಗಾರ ಸಿರಾಜ್‌ನನ್ನು ಕೈಬಿಟ್ಟಿರುವುದರ ಹಿಂದೆ ಧಾರ್ಮಿಕ ತಾರತಮ್ಯವಿದೆ ಎಂದ ಕಾಂಗ್ರೆಸ್ ಸಂಸದ

0
4

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಡುವ ಹನ್ನೊಂದರ ಬಳಗದಿಂದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಡುವ ನಿರ್ಧಾರದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಮರ ತೀವ್ರಗೊಂಡಿದೆ. ಸಿರಾಜ್ ಅವರನ್ನು ಕೈಬಿಟ್ಟಿರುವುದರ ಹಿಂದೆ ಧಾರ್ಮಿಕ ತಾರತಮ್ಯವಿದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆರೋಪಿಸಿದರೆ, ಕ್ರಿಕೆಟ್‌ನಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮತ್ತು ಕೋಮುವಾದವನ್ನು ಕಾಂಗ್ರೆಸ್ ಬೆರೆಸುತ್ತಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಲ್ವರು ವೇಗದ ಬೌಲರ್‌ಗಳನ್ನು ಸೇರಿಸಿಕೊಂಡಿದ್ದರೂ ಹೈದರಾಬಾದ್ ಮೂಲದ ಸಿರಾಜ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳದಿದ್ದಾಗ ಈ ವಿವಾದ ಆರಂಭವಾಯಿತು. ಉತ್ತಮ ದಾಖಲೆ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವ ಪರಂಪರೆ ಹೊಂದಿರುವ ಸಿರಾಜ್ ಅವರನ್ನು ಕೈಬಿಟ್ಟಿರುವುದರ ಹಿಂದೆ ಧಾರ್ಮಿಕ ಕಾರಣಗಳಿವೆ ಎಂದು ಇಮ್ರಾನ್ ಮಸೂದ್ ಬಹಿರಂಗವಾಗಿ ಆರೋಪಿಸಿದ್ದಾರೆ.

“ಅವನ ಹೆಸರು ಸಿರಾಜ್. ಬೇರೆ ಏನು ಕಾರಣವಿದೆ? ಉತ್ತಮ ಪ್ರದರ್ಶನ ನೀಡಿಯೂ ಆತನನ್ನು ಆಯ್ಕೆ ಮಾಡದಿದ್ದರೆ, ಬೇರೆ ಯಾವ ಕಾರಣವಿದೆ? ಇದೊಂದೇ ಕಾರಣ; ಇದನ್ನು ಬಿಟ್ಟು ಬೇರೆ ಯಾವುದೇ ಕಾರಣವಿಲ್ಲ,” ಎಂದು ಇಮ್ರಾನ್ ಮಸೂದ್ ಹೇಳಿದ್ದಾರೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಸಿರಾಜ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳದಿರುವುದಕ್ಕೆ ಟೀಕೆ ವ್ಯಕ್ತವಾಗುತ್ತಿದೆ, ಮತ್ತು ಉತ್ತಮ ಪ್ರದರ್ಶನ ನೀಡಿಯೂ ಅವರನ್ನು ಆಯ್ಕೆ ಮಾಡದಿದ್ದರೆ, ಅಲ್ಲಿ ಸ್ಪಷ್ಟವಾದ ತಾರತಮ್ಯವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಇಮ್ರಾನ್ ಮಸೂದ್ ಅವರ ಹೇಳಿಕೆಯ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ. ತಂಡದ ಆಯ್ಕೆಯನ್ನು ಕೋಮು ವಿಷಯವನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕ್ರಿಕೆಟ್ ಅನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ. ‘ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು! ಕ್ರಿಕೆಟ್ ತಂಡದ ಆಯ್ಕೆಯಲ್ಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ‘ಸಿರಾಜ್ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಕೈಬಿಡಲಾಗಿದೆ’ ಎಂದು ಕಾಂಗ್ರೆಸ್ ಹೇಳುತ್ತಿದೆ’ – ಎಂದು ಪ್ರದೀಪ್ ಭಂಡಾರಿ ಹೇಳಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನೂ ತಂಡದಿಂದ ಕೈಬಿಡಲಾಗಿದೆ ಎಂಬುದನ್ನು ಬೆಟ್ಟು ಮಾಡಿದ ಅವರು, ಪ್ರತಿಯೊಬ್ಬ ಕ್ರಿಕೆಟಿಗನೂ ಭಾರತವನ್ನು ಪ್ರತಿನಿಧಿಸುವ ಜರ್ಸಿಯನ್ನು ಧರಿಸುತ್ತಾನೆ ಎಂದು ಹೇಳಿದ್ದಾರೆ! ವೋಟ್ ಬ್ಯಾಂಕ್ ಮತ್ತು ಕೋಮು ರಾಜಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ವಿಭಜಿಸುವುದನ್ನು ನಿಲ್ಲಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತದ ವೇಗದ ಬೌಲಿಂಗ್ ದಾಳಿಯಲ್ಲಿ ಸಿರಾಜ್ ವಹಿಸಿರುವ ಪ್ರಮುಖ ಪಾತ್ರವನ್ನು ಗಮನಿಸಿದರೆ ಈ ನಿರ್ಧಾರವು ವಿವಾದಾತ್ಮಕವಾಗಿದೆ. ಹದಿನೈದು ತಿಂಗಳ ಹಿಂದೆ, ಲಂಡನ್‌ನ ದಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ದಿನದಂದು ಜಸ್ಪ್ರೀತ್ ಬುಮ್ರಾ ಅವರ ನೆರಳಿನಿಂದ ಹೊರಬಂದ ಸಿರಾಜ್, ತಮ್ಮ ತಂಡವು ಸರಣಿಯನ್ನು 2-2 ರಿಂದ ಸಮಬಲಗೊಳಿಸಲು ನೆರವಾಗಿದ್ದರು.

ಕಾರ್ಯಭಾರ ನಿರ್ವಹಣೆಯ (ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್) ಭಾಗವಾಗಿ ಬುಮ್ರಾ ಅವರನ್ನು ಹೊರಗಿಟ್ಟಿದ್ದ ಅವಧಿಯಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಯ ಮುಂಚೂಣಿ ಆಟಗಾರನಾಗಿ ಸಿರಾಜ್ ಹೊರಹೊಮ್ಮಿದ್ದರು. ಈ ನಡುವೆ, ಮೂರು ತಿಂಗಳ ಹಿಂದೆ ಕೊಲಂಬೊ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಸಿರಾಜ್ ನೀಡಿದ ನೀರಸ ಪ್ರದರ್ಶನವು ಆಡುವ ಹನ್ನೊಂದರ ಬಳಗದಲ್ಲಿ ಅವರ ಸ್ಥಾನವನ್ನು ಮರುಪರಿಶೀಲಿಸುವಂತೆ ತಂಡದ ಆಡಳಿತ ಮಂಡಳಿಯನ್ನು ಪ್ರೇರೇಪಿಸಿದೆ ಎಂದು ನಂಬಲಾಗಿದೆ.