ಬೆಂಗಳೂರಿನಲ್ಲಿ ಸುಮಾರು 25 ಮನೆಗಳನ್ನು ನೆಲಸಮಗೊಳಿಸಲು ನೋಟಿಸ್ ಜಾರಿ ಮಾಡಿದ ರೈಲ್ವೆ ಇಲಾಖೆ: ನಿವಾಸಿಗಳ ಆತಂಕ

0
22

ಸನ್ಮಾರ್ಗ ವಾರ್ತೆ

ಬೆಂಗಳೂರು: ನೈಋತ್ಯ ರೈಲ್ವೆಯ ಎಸ್ಟೇಟ್ ಕಚೇರಿಯು ಬೆಂಗಳೂರು ಪೂರ್ವದ ಕೆ.ಆರ್. ಪುರಂನ ಹೊರಮಾವಿನ ಬಾಲಾಜಿ ಲೇಔಟ್ ಮತ್ತು ಪ್ರಕೃತಿ ಟೌನ್‌ಶಿಪ್‌ನಲ್ಲಿರುವ ಸುಮಾರು 25 ಮನೆಗಳಿಗೆ ತೆರವು ನೋಟಿಸ್ ಜಾರಿ ಮಾಡಿದೆ. ನವೆಂಬರ್ 21 ರಿಂದ ಜೆಸಿಬಿ ಯಂತ್ರಗಳನ್ನು ಬಳಸಿ ನೆಲಸಮ ಕಾರ್ಯಾಚರಣೆ ಆರಂಭವಾಗುವ ಮುನ್ನವೇ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಹೊರಮಾವು ರೈಲ್ವೆ ಕೆಳಸೇತುವೆ ಆವರಣದ ಅಂಚಿನಿಂದ 6 ರಿಂದ 12 ಮೀಟರ್ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ನೆಲಸಮಗೊಳಿಸಲು ರೈಲ್ವೆ ಅಧಿಕಾರಿಗಳು ಗುರುತು ಮಾಡಿದ್ದಾರೆ.

ತಾವು ಭೂಮಿಯ ಕಾನೂನುಬದ್ಧ ಮಾಲೀಕರಾಗಿದ್ದು, ರೈಲ್ವೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ. ಪದೇ ಪದೇ ವಿನಂತಿಸಿದರೂ ಭೂಮಿಯ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಹಾಜರುಪಡಿಸಲು ರೈಲ್ವೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. “ಅದು ಅವರ ಭೂಮಿಯಾಗಿದ್ದರೆ, ಅವರು ದಾಖಲೆಗಳನ್ನು ತೋರಿಸಲಿ. ಅವರು ಮನೆಗಳನ್ನು ಕೆಡವಿ ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದರೆ, ಪರಿಹಾರವನ್ನು ನೀಡಬೇಕು,” ಎಂದು ಪ್ರಕೃತಿ ಟೌನ್‌ಶಿಪ್ ಅಸೋಸಿಯೇಷನ್ ಸದಸ್ಯರು ಒತ್ತಾಯಿಸಿದ್ದಾರೆ.

ಆತಂಕದಲ್ಲಿ ಕುಟುಂಬಗಳು; ನಿವಾಸಿಗಳ ಪ್ರತಿಕ್ರಿಯೆ

ಸ್ಥಳೀಯ ನಿವಾಸಿ ಫಾತಿಮಾ ಮಾತನಾಡಿ, 2016 ರಿಂದ ತಮ್ಮ ಸಹೋದರನ ಒಡೆತನದ ಮನೆಯಲ್ಲಿ ವಯಸ್ಸಾದ ಪೋಷಕರೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಒಂದು ವಾರದ ಹಿಂದೆ, ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕೇರಳ/ಕರ್ನಾಟಕ) ಲಿಮಿಟೆಡ್‌ನ ಅಧಿಕಾರಿಗಳು ಕೇವಲ 15 ದಿನಗಳ ನೋಟಿಸ್ ನೀಡಿ ಕಟ್ಟಡಗಳನ್ನು ಕೆಡವಲು ಬಂದಿದ್ದರು. ವಯಸ್ಸಾದ ಪೋಷಕರು ಮತ್ತು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಕ್ಕಳಿರುವ ಕುಟುಂಬಕ್ಕೆ ಮುಂದೇನಾಗಲಿದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಇ-ಖಾತಾ ಮತ್ತು ನವೀಕರಿಸಿದ ತೆರಿಗೆ ರಶೀದಿಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.

2004 ರಿಂದ ಇಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕ ಆಂಟಾವೊ ಎ.ವಿ. ಮಾತನಾಡಿ, ಈ ಪ್ರದೇಶವು 2015 ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬಂದಿದ್ದು, ದಶಕಗಳಿಂದ ಯಾವುದೇ ಆಕ್ಷೇಪಣೆಗಳು ಇರಲಿಲ್ಲ ಎಂದು ಹೇಳುತ್ತಾರೆ. ಸೆಪ್ಟೆಂಬರ್ 2025 ರಲ್ಲಿ ಸುಮಾರು 20 ಮನೆಗಳಿಗೆ ಮೊದಲ ನೋಟಿಸ್ ನೀಡಲಾಗಿತ್ತು. ದಾಖಲೆಗಳನ್ನು ಕೇಳಿದಾಗ ರೈಲ್ವೆ ಇಲಾಖೆ ಮಾಲೀಕತ್ವದ ದಾಖಲೆಗಳನ್ನು ನೀಡದಿರುವುದು ಮಾತ್ರವಲ್ಲದೆ, ನಿವಾಸಿಗಳು ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ಪಡೆಯುವುದನ್ನು ತಡೆಯಲು ರೈಲ್ವೆ ಇಲಾಖೆಯೇ ನ್ಯಾಯಾಲಯದಲ್ಲಿ ತಡೆಯಾಜ್ಞೆ (ಸ್ಟೇ ಆರ್ಡರ್) ಅರ್ಜಿ ಸಲ್ಲಿಸಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.

ಕೋಕನಟ್ ಗ್ರೋವ್ ಲೇಔಟ್‌ನ ಗೃಹಿಣಿ ಚಿತ್ರಾ ಮಾತನಾಡಿ, ತಮ್ಮ ಚಿನ್ನವನ್ನು ಅಡವಿಟ್ಟು ಮತ್ತು ಪತಿಯೊಂದಿಗೆ ಕಷ್ಟಪಟ್ಟು ದುಡಿದು ತಮ್ಮ ಕನಸಿನ ಮನೆಯನ್ನು ಕಟ್ಟಿರುವುದಾಗಿ ನೋವಿನಿಂದ ಹೇಳಿದ್ದಾರೆ. ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಪ್ರಭಾವಿಗಳನ್ನು ಹಾಗೆಯೇ ಬಿಡಲಾಗುತ್ತಿದೆ ಮತ್ತು ಸರ್ಕಾರದ ಈ ಕ್ರಮವು ತಮ್ಮ ಇಡೀ ಜೀವನದ ಶ್ರಮವನ್ನು ಅರ್ಥಹೀನಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ನಾಗರಾಜ್ ಮಾತನಾಡಿ, ತಮ್ಮ ಮಾವನಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಅಭಿವೃದ್ಧಿಗಾಗಿ ಈಗಾಗಲೇ 10 ಅಡಿ ಜಾಗವನ್ನು ಬಿಟ್ಟುಕೊಟ್ಟಿದ್ದರೂ, ಅಧಿಕಾರಿಗಳು 11 ಮೀಟರ್ ಒಳಗೆ ಗುರುತು ಮಾಡಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ಬಲಿಷ್ಠವಾಗಿದೆ ಮತ್ತು ಅಂತ್ಯವಿಲ್ಲದ ಕಾನೂನು ಹೋರಾಟಗಳನ್ನು ನಡೆಸಲು ತಮಗೆ ಆರ್ಥಿಕ ಸಾಮರ್ಥ್ಯವಿಲ್ಲ ಎಂದು ಅವರು ಆತಂಕದಿಂದ ನುಡಿದಿದ್ದಾರೆ.