ಕೋಮು ಪ್ರಚೋದನೆ ಮತ್ತು ನಮ್ಮ ಪ್ರತಿಕ್ರಿಯೆಗಳು

0
4

✍️ ಮುಹಿಯುದ್ದೀನ್ ಗಾಝಿ
ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್‌

ಕೋಮುವಾದಿ ಶಕ್ತಿಗಳ (ಅಧಿಕೃತ ಹಾಗೂ ಅನಧಿಕೃತ) ಪ್ರಚೋದನಾಕಾರಿ ಕ್ರಮಗಳು, ನಿರ್ಧಾರಗಳು ಮತ್ತು ಚಟುವಟಿಕೆಗಳ ಮುಂದೆ ಮುಸ್ಲಿಮರು ಸಂಪೂರ್ಣ ಮೌನ ಹಾಗೂ ನಿಷ್ಕ್ರಿಯತೆಯನ್ನು ಪ್ರದರ್ಶಿಸಿದಾಗ, ಅದರಿಂದ ಎರಡು ಸಂಭವನೀಯ ಪರಿಣಾಮಗಳು ಉಂಟಾಗಬಹುದು. 

ಒಂದನೇ ಪರಿಣಾಮವು, ಪ್ರಚೋದನೆ ಮಾಡುವವರ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ ಇದು ಒಳ್ಳೆಯ ವಿಷಯವೆಂದು ಪರಿಗಣಿಸಬಹುದು. ಕೋಮುಶಕ್ತಿಗಳು ನಿರಂತರವಾಗಿ ಬೇರೆ ಬೇರೆ ವಿಷಯಗಳನ್ನು ಹುಟ್ಟುಹಾಕುತ್ತಿರುತ್ತವೆ. ಮುಸ್ಲಿಮರಿಂದ ತೀವ್ರ ಪ್ರತಿಕ್ರಿಯೆ ಬರುವಂತೆ ಮಾಡುವುದು ಅವರ ಗುರಿ. ಮುಸ್ಲಿಮರ ತೀವ್ರ ಪ್ರತಿಕ್ರಿಯೆಯು ದೇಶದಲ್ಲಿ ಕೋಮು ಶಕ್ತಿಗಳಿಗೆ ದೊಡ್ಡ ರಾಜಕೀಯ ಲಾಭ ತಂದುಕೊಡುತ್ತದೆ. ಕೆಲವೊಮ್ಮೆ ಅವರು ಒಬ್ಬ ಗಣ್ಯ ವ್ಯಕ್ತಿಯನ್ನು ಜೈಲಿಗೆ ಹಾಕುತ್ತಾರೆ, ಕೆಲವೊಮ್ಮೆ ಶರಿಯತ್‌ಗೆ ತೊಂದರೆ ಕೊಡುವ ಮತ್ತು ಅದನ್ನು ಜಾರಿಗೆ ತರದಂತೆ ತಡೆಯುವ ಕಾನೂನುಗಳನ್ನು ಮಾಡುತ್ತಾರೆ, ಇನ್ನು ಕೆಲವೊಮ್ಮೆ ಆರಾಧನಾಲಯಗಳನ್ನು ಆಕ್ರಮಿಸಿಕೊಳ್ಳಲು ಅಥವಾ ಕೆಡವಲು ಮುಂದಾಗುತ್ತಾರೆ. ಇಂತಹ ಕೆಲಸಗಳ ಮೂಲಕ ಕೋಮು ಶಕ್ತಿಗಳು ಮುಸ್ಲಿಮರನ್ನು ಕೆರಳಿಸಲು ಬಯಸುತ್ತವೆ. ಆದರೆ ಮುಸ್ಲಿಮರ ಮೌನವು ಅವರ ಆ ಕೆಟ್ಟ ಉದ್ದೇಶಗಳು ಈಡೇರದಂತೆ ತಡೆಯುತ್ತದೆ.

ಎರಡನೇಯದಾಗಿ ಈ ಸಂಪೂರ್ಣ ಮೌನ ಮತ್ತು ನಿಷ್ಕ್ರಿಯೆಯ ದೀರ್ಘಕಾಲದ ಪರಿಣಾಮ ಏನೆಂದರೆ, ಇದು ಕೋಮುವಾದಿಗಳಿಗೆ ಧೈರ್ಯ ಹೆಚ್ಚಿಸುತ್ತದೆ ಮತ್ತು ಅವರ ದೀರ್ಘಕಾಲದ ಯೋಜನೆಗಳನ್ನು ಜಾರಿಗೆ ತರಲು ದಾರಿ ಮಾಡಿಕೊಡುತ್ತದೆ. ಕೋಮುವಾದಿಗಳ ಎಲ್ಲ ಕೆಲಸಗಳು ಕೇವಲ ಪ್ರಚೋದನೆಗಾಗಿ ಮತ್ತು ಸ್ವಲ್ಪ ದಿನದ ರಾಜಕೀಯ ಲಾಭಕ್ಕಾಗಿ ಮಾತ್ರ ಎಂದು ಭಾವಿಸುವುದು ಮೇಲ್ಮಟ್ಟದ ಅವಲೋಕನವಾಗುತ್ತದೆ. ಈ ದೇಶದಲ್ಲಿರುವ ಕೋಮು ಶಕ್ತಿಗಳು ಸಾಂಸ್ಕೃತಿಕ ದಾಳಿಯ ದೀರ್ಘಕಾಲದ ಯೋಜನೆಗಳನ್ನು ಹೊಂದಿವೆ. ಇಸ್ಲಾಮೀ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವುದು, ಪವಿತ್ರ ಸ್ಥಳಗಳನ್ನು ಗುರಿಯಾಗಿಸುವುದು, ಮುಸ್ಲಿಮರ ನಂಬಿಕೆಗೆ ವಿರುದ್ಧವಾಗಿ ಸಾಂಸ್ಕೃತಿಕ ಆಚರಣೆಗಳನ್ನು ಹೇರುವುದು, ಮುಸ್ಲಿಮರ ಧಾರ್ಮಿಕ ಶಿಕ್ಷಣ ಮತ್ತುಅದರ ಸಂಸ್ಥೆಗಳ ವಿರುದ್ಧ ಕಾನೂನು ರಚನೆ ಮಾಡುವುದು, ಹಾಗೂ ಮುಸ್ಲಿಮರ ವಕ್ಫ್‌ ಆಸ್ತಿಗಳನ್ನು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಹಾಳುಮಾಡುವುದು, ಇದೆಲ್ಲವೂ ಅವರ ದೀರ್ಘಕಾಲದ ಯೋಜನೆಯ ಭಾಗವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂತಹ ಅನ್ಯಾಯಗಳ ಸಂದರ್ಭದಲ್ಲಿ ಮುಸ್ಲಿಮರು ಸಂಪೂರ್ಣ ಮೌನ ಮತ್ತು ನಿಷ್ಕ್ರಿಯತೆಯನ್ನು ತಾಳುವುದರಿಂದ ತಾತ್ಕಾಲಿಕವಾಗಿ ಕೋಮು ಉದ್ವಿಗ್ನತೆ ಅಥವಾ ಸರ್ಕಾರದ ಜತೆಗಿನ ಸಂಘರ್ಷ ತಪ್ಪಬಹುದು; ಆದರೆ, ದೂರಗಾಮಿ ಪರಿಣಾಮಗಳ ದೃಷ್ಟಿಯಿಂದ ಇದು ಸಮುದಾಯಕ್ಕೆ ಹಿತಕರವೆಂದು ಭಾವಿಸಲು ಬರುವುದಿಲ್ಲ. ಬದಲಾಗಿ, ಪರಿಸ್ಥಿತಿಗೆ ತಕ್ಕಂತೆ ಜಾಣ್ಮೆಯ ಹೆಜ್ಜೆ ಇಡುವುದು ಅಗತ್ಯ; ಕೆಲವೆಡೆ ಮೌನವೇ ಪ್ರತಿಕ್ರಿಯೆಯಾಗಿದ್ದರೂ, ಕೇವಲ ಸುಮ್ಮನಿರುವುದಕ್ಕೆ ಸೀಮಿತಗೊಳ್ಳದೆ ಪರಿಣಾಮಕಾರಿ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಪರ್ಯಾಯವಾಗಿ ರೂಪಿಸುವುದು ಅನಿವಾರ್ಯವಾಗಿದೆ. 

ಕೋಮು ಪ್ರಚೋದನೆಗಳು ಸಫಲವಾಗದಂತೆ ತಡೆಯಲು ತಾತ್ಕಾಲಿಕವಾಗಿ ಆವೇಶದ ಅಥವಾ ಅವಿವೇಕದ ಪ್ರತಿಕ್ರಿಯೆಗಳಿಂದ ದೂರವಿರುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಕೋಮು ಹಾಗೂ ಸಾಂಸ್ಕೃತಿಕ ಆಕ್ರಮಣದ ದೂರಗಾಮಿ ಯೋಜನೆಗಳು ಯಶಸ್ವಿಯಾಗದಂತೆ ತಡೆಯಲು ಮುಸ್ಲಿಮರು ಒಂದು ಬಲಿಷ್ಠ ಹಾಗೂ ಸ್ಪಷ್ಟವಾದ ದೀರ್ಘಕಾಲೀನ ಕಾರ್ಯತಂತ್ರವನ್ನು ಹೊಂದಿರುವುದು ಅತ್ಯಂತ ಅವಶ್ಯಕವಾಗಿದೆ. 

ಈ ಮೇಲೆ ಹೇಳಿರುವುದು ಸಂಭವಿಸಬಹುದಾದ ಫಲಿತಾಂಶಗಳ ಕುರಿತಾಗಿದೆ. ಆದರೆ, ಯಾವುದೇ ಕೆಲಸದ ಸಂಭವನೀಯ ಪರಿಣಾಮಗಳನ್ನು ಗಮನಿಸುವುದು ಎಷ್ಟು ಮುಖ್ಯವೋ, ಆ ಕೆಲಸದ ಹಿಂದಿನ ಕಾರಣಗಳು ಕೂಡ ಅಷ್ಟೇ ಮುಖ್ಯವಾಗಿವೆ. ಒಂದು ಗುಂಪಿನ ದೌರ್ಜನ್ಯ ಮತ್ತು ಪ್ರಚೋದನೆಯ ತೊಂದರೆಗೆ ಒಳಗಾಗಿರುವ ಸಮುದಾಯವು ಸಂಪೂರ್ಣವಾಗಿ ಸುಮ್ಮನಿರಲು ಮತ್ತು ಪ್ರತಿಕ್ರಿಯಿಸದಿರಲು ಪ್ರಮುಖ ಕಾರಣ ಅದರ ವಿವೇಕತನ ಮತ್ತು ತಿಳಿವಳಿಕೆ ಆಗಿರಬಹುದು, ಮತ್ತೊಂದು ಕಾರಣ ಅದಕ್ಕೆ ಅನಿಸುವ ಅಸಹಾಯಕತೆ ಮತ್ತು ನಿರ್ಲಕ್ಷ್ಯದ ಭಾವನೆ ಆಗಿರಬಹುದು. 

ಮೊದಲನೆಯ ಕಾರಣವು ಅತ್ಯಂತ ಪ್ರಶಂಸನೀಯವಾದದ್ದು. ಯಾವುದೇ ರಾಷ್ಟ್ರ ಅಥವಾ ಸಮುದಾಯದ ಪ್ರತಿಯೊಂದು ನಿಲುವು ಜ್ಞಾನ ಮತ್ತು ವಿವೇಕದ ಅಡಿಪಾಯದ ಮೇಲೆ ರೂಪುಗೊಳ್ಳಬೇಕು. ಮೌನವಾಗಿರುವುದೇ ಆಗಲಿ ಅಥವಾ ಯಾವುದೇ ಪ್ರತಿಕ್ರಿಯೆ ನೀಡುವುದೇ ಆಗಲಿ, ಪ್ರತಿಯೊಂದು ಹೆಜ್ಜೆಯೂ ಸುದೀರ್ಘವಾಗಿ ಯೋಚಿಸಿ ರೂಪಿಸಿದ ಕಾರ್ಯತಂತ್ರದ ಚೌಕಟ್ಟಿನಲ್ಲೇ ಇರಬೇಕು. ಕೇವಲ ಭಾವಾವೇಶಕ್ಕೆ ಒಳಗಾಗಿ ವರ್ತಿಸುವುದು ವ್ಯಕ್ತಿಗಳಿಗಷ್ಟೇ ಅಲ್ಲ, ಸಮುದಾಯಗಳು ಹಾಗೂ ರಾಷ್ಟ್ರಗಳಿಗೂ ಸಹ ಅತ್ಯಂತ ಅಪಾಯಕಾರಿಯಾಗಿದೆ. ಅನ್ಯಾಯ ಅಥವಾ ದೌರ್ಜನ್ಯದ ಸಂದರ್ಭದಲ್ಲಿ ಸಂಪೂರ್ಣ ಮೌನ ಹಾಗೂ ನಿಷ್ಕ್ರಿಯತೆಯನ್ನು ಕಾಯ್ದುಕೊಳ್ಳುವ ಜಾಗೃತ ನಿರ್ಧಾರವು, ಯಾವುದೇ ಆಕ್ರಮಣಕಾರಿ ಅಥವಾ ತಕ್ಷಣದ ಕ್ರಮಕ್ಕಿಂತಲೂ ಹೆಚ್ಚು ಕಠಿಣವಾದುದಾಗಿದೆ. ಇಂತಹ ನಿರ್ಧರವನ್ನು ಕೈಗೊಳ್ಳಲು ಕೇವಲ ಅಸಾಧಾರಣ ಕಾರ್ಯತಂತ್ರದ ದೂರದೃಷ್ಟಿ ಹಾಗೂ ದೃಢಸಂಕಲ್ಪವಿರುವ ರಾಷ್ಟ್ರಗಳು ಮತ್ತು ಸಮುದಾಯಗಳಿಂದ ಮಾತ್ರ ಸಾಧ್ಯ.

ಈ ಸನ್ನಿವೇಶಕ್ಕೆ ಅತ್ಯುತ್ತಮ ಐತಿಹಾಸಿಕ ನಿದರ್ಶನವೆಂದರೆ ಹುದೈಬಿಯಾ ಒಪ್ಪಂದ. ಅಂದು ಪ್ರವಾದಿ ಮುಹಮ್ಮದ್(ಸ) ಮೇಲ್ನೋಟಕ್ಕೆ ತಮಗೆ ಪ್ರತಿಕೂಲ ಹಾಗೂ ಕಠಿಣವೆನಿಸಿದ ಕರಾರುಗಳನ್ನು ಸ್ವೀಕರಿಸಿದ್ದರು; ಆದರೆ, ದೂರಗಾಮಿ ದೃಷ್ಟಿಯ ಆ ಕಾರ್ಯತಂತ್ರವೇ ಮುಂದೆ ಇಸ್ಲಾಮಿನ ವಿಸ್ತರಣೆಗೆ ಮಹತ್ವದ ಹೆಬ್ಬಾಗಿಲಾಗಿ ಪರಿಣಿಮಿಸಿತು. ಅದೇ ರೀತಿಯಲ್ಲಿ, ಭಾರತೀಯ ಉಪಖಂಡದ ಕೆಲವು ಪ್ರಮುಖ ಮುಸ್ಲಿಂ ಚಿಂತಕರು ಮತ್ತು ಸುಧಾರಕರು ರಾಜಕೀಯ ಸಂಘರ್ಷಗಳ ಹಾದಿಯನ್ನು ಬಿಟ್ಟು, ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆಗೆ ಆದ್ಯತೆ ನೀಡಿದರು. ಉದಾಹರಣೆಗೆ, ಸರ್ ಸೈಯದ್ ಅಹ್ಮದ್ ಖಾನ್ ಅವರ ಶೈಕ್ಷಣಿಕ ಚಳುವಳಿಯು ಸಮುದಾಯಕ್ಕೆ ಸಂಪೂರ್ಣ ಹೊಸ ಬೌದ್ಧಿಕ ಹಾಗೂ ಪ್ರಾಯೋಗಿಕ ದಿಕ್ಕನ್ನು ತೋರಿಸಿತು. ನದಿಯ ಹರಿವನ್ನು ತಡೆದರೆ ಅದು ಖಾಯಂ ಆಗಿ ನಿಂತುಹೋಗುವುದಿಲ್ಲ, ಬದಲಿಗೆ ತನ್ನ ಪಥವನ್ನು ಬದಲಿಸಿಕೊಳ್ಳುತ್ತದೆ. ಕೆಲವೊಮ್ಮೆ ಅದು ಅಂತರ್ಜಲದಂತೆ ಹರಿದರೆ, ಇನ್ನು ಕೆಲವೊಮ್ಮೆ ದಂಡೆಗಳನ್ನು ಭೇದಿಸಿ ಹೊಸ ಹಾದಿಯನ್ನು ನಿರ್ಮಿಸಿಕೊಳ್ಳುತ್ತದೆ. ಅದೇ ರೀತಿ, ಬಿಗಿ ಮಣ್ಣಿನಲ್ಲಿ ಅಥವಾ ಕಠಿಣ ಬಂಡೆಗಳ ನೆಲದಲ್ಲಿ ಹುದುಗಿದ ಬೀಜವು, ನೇರವಾಗಿ ಮೇಲೆ ಚಿಗುರಿಬರಲು ಸಾಧ್ಯವಾಗದಿದ್ದರೂ ಬಾಗಿದ ಹಾದಿಯಲ್ಲಿ ಸಾಗಿ ಅಂತಿಮವಾಗಿ ಭೂಮಿಯ ಕತ್ತಲನ್ನು ಮೀರಿ ಬೆಳಕನ್ನು ಕಾಣುತ್ತದೆ. ಇದೇ ನೈಸರ್ಗಿಕ ನಿಯಮದಂತೆ, ಮರಗಳ ಬೇರುಗಳು ಕೂಡ ತಮಗೆ ಬೇಕಾದ ನೀರು ಹಾಗೂ ಪೋಷಕಾಂಶಗಳನ್ನು ಪಡೆದುಕೊಳ್ಳಲು ಕಲ್ಲುಬಂಡೆಗಳ ನಡುವೆಯೂ ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳುತ್ತವೆ.

ಆದರೆ, ಇಲ್ಲಿ ಎರಡನೆಯ ಕಾರಣವು ಅತ್ಯಂತ ಕಳವಳಕಾರಿ ಮತ್ತು ಗಂಭೀರ ಸ್ವರೂಪದ್ದಾಗಿದೆ. ಒಂದು ಸಮುದಾಯದೊಳಗೆ ಅಸಹಾಯಕತೆ ಹಾಗೂ ನಿಷ್ಕ್ರೀಯತೆಯ ಭಾವನೆ ಎಷ್ಟು ಆಳವಾಗಿ ಬೇರೂರಿಬಿಡುತ್ತದೆ ಎಂದರೆ, ಎಂಥಹುದೇ ಮಹಾವಿಪತ್ತು ಎದುರಾದರೂ ಆ ಸಮುದಾಯವು ಜಾಗೃತಗೊಳ್ಳುವುದಿಲ್ಲ; ಮಸೀದಿಗಳು ಕೆಡವಲಾಗುತ್ತವೆ, ವೈಯಕ್ತಿಕ ಕಾನೂನುಗಳು ರದ್ದಾಗುತ್ತವೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುತ್ತದೆ, ಇಸ್ಲಾಮೀ ವಿಶ್ವಾಸದ ವಿರುದ್ಧವಾದ ವಿಚಾರಗಳನ್ನು ಹೇರಲಾಗುತ್ತದೆ ಮತ್ತು ಧಾರ್ಮಿಕ ಆಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಇಷ್ಟೆಲ್ಲಾ ಅನ್ಯಾಯಗಳು ನಡೆದರೂ ಸಮಾಜದಲ್ಲಿ ಯಾವುದೇ ರೀತಿಯ ಪ್ರತಿರೋಧ ಅಥವಾ ಅಸಮಧಾನದ ಆವೇಶ ಪುಟಿಯುವುದಿಲ್ಲ ಎಂದಾದರೆ, ಈ ಮಟ್ಟದ ನಿರ್ಲಿಪ್ತತೆ ಹಾಗೂ ಮೌನವು ಅತ್ಯಂತ ಅಪಾಯಕಾರಿ ಹಾಗೂ ಕಳವಳಕಾರಿಯಾದ ಸಂಗತಿಯಾಗಿದೆ.

ಅಸಹಾಯಕತೆಯ ಭಾವನೆಯು ಆಳವಾದ ಅಂಜಿಕೆ ಹಾಗೂ ಅತಿ ಭೀಕರವಾದ ಹತಾಶೆಯ ಗರ್ಭದಿಂದ ಜನಿಸುತ್ತದೆ. ಭಯ ಹಾಗೂ ನಿರಾಶೆಗಳೆಂಬ ಈ ಎರಡೂ ಅಂಶಗಳ ಸಮ್ಮಿಶ್ರಣವು ಯಾವುದೇ ರಾಷ್ಟ್ರವನ್ನು ಸಂಪೂರ್ಣವಾಗಿ ಹೈರಾಣಾಗಿಸಬಲ್ಲ ಅತಿ ಮಾರಕ ರೋಗದಂತಿದೆ. ಧರ್ಮ ಮತ್ತು ದೇಶದ ಬಗ್ಗೆ ಅಪಾರವಾದ ಭಾವನಾತ್ಮಕ ಬದ್ಧತೆ ಹೊಂದಿರುವವರನ್ನು ಸಹ ಈ ಮಾನಸಿಕ ಸ್ಥಿತಿ ಆವರಿಸಿಕೊಳ್ಳಬಲ್ಲದು. ಯಾಕೆಂದರೆ ಈ ಪಿಡುಗಿಗೆ ಮೂಲ ಕಾರಣ ಧರ್ಮನಿಷ್ಠೆಯ ಕೊರತೆಯಲ್ಲ, ಬದಲಿಗೆ ಮನಸ್ಸಿನಲ್ಲಿ ಮನೆಮಾಡಿರುವ ಭಯ ಹಾಗೂ ನಿರಾಶೆಯ ಅಧಿಪತ್ಯ. ಇತಿಹಾಸದಲ್ಲಿ ಇದರ ಪ್ರಮುಖ ಉದಾಹರಣೆಯು ಅಂದಲೂಸಿಯಾದ ಅಂತ್ಯದ ದಿನಗಳಲ್ಲಿ ಗೋಚರಿಸುತ್ತದೆ. ಆಂತರಿಕ ದೌರ್ಬಲ್ಯಗಳು, ಪರಸ್ಪರ ಭಿನ್ನಾಭಿಪ್ರಾಯಗಳು ಹಾಗೂ ಭಯ-ಹತಾಶೆಗಳು ಸೇರಿಕೊಂಡು ಸಾಮೂಹಿಕ ಪ್ರತಿರೋಧದ ಶಕ್ತಿಯನ್ನೇ ಇಲ್ಲವಾಗಿಸುವಂಥ ವಾತಾವರಣವನ್ನು ಸೃಷ್ಟಿಸಿದಾಗ, ಅದು ಅಂತಿಮವಾಗಿ ಅವರ ಮುಕ್ತಾಯ ಹಾಡಿತು. ಅಂತೆಯೇ, ವಸಾಹತುಶಾಹಿ ಕಾಲಘಟ್ಟದಲ್ಲಿ ಕೆಲವು ಸಮಾಜಗಳು ಸುದೀರ್ಘ ಕಾಲದ ಗುಲಾಮಗಿರಿಯ ಕಾರಣದಿಂದ ಎಂಥ ಸ್ಥಿತಿಗೆ ತಲುಪಿದವು ಎಂದರೆ, ಅಲ್ಲಿನ ಜನರು ಅನ್ಯಾಯ ಹಾಗೂ ದೌರ್ಜನ್ಯಗಳನ್ನೇ ಸಹಜ ಎಂಬಂತೆ ಸ್ವೀಕರಿಸಲಾರಂಭಿಸಿದರು ಮತ್ತು ಅವರಲ್ಲಿ ಪ್ರತಿರೋಧ ಒಡ್ಡುವ ಸಾಮರ್ಥ್ಯವು ಸಂಪೂರ್ಣವಾಗಿ ಕುಗ್ಗಿಹೋಯಿತು.  

ಸಮುದಾಯದ ಬಗ್ಗೆ ಕಾಳಜಿ ಇಲ್ಲದಿರುವ ಈ ನಿಷ್ಕ್ರಿಯತೆಯು ಧರ್ಮ ಹಾಗೂ ರಾಷ್ಟ್ರದ ಮೇಲಿನ ನಂಟನ್ನು ಕಳೆದುಕೊಂಡು, ಕೇವಲ ತನ್ನ ಸ್ವಾರ್ಥ ಮತ್ತು ವೈಯಕ್ತಿಕ ಲಾಭಗಳಲ್ಲೇ ಮೈಮರೆಯುವುದರ ಪರಿಣಾಮವಾಗಿದೆ. ಇದು ಕೂಡ ಸಮಾಜವನ್ನು ಕೊಲ್ಲುವ ಅತ್ಯಂತ ಅಪಾಯಕಾರಿ ಹಾಗೂ ಗಂಭೀರವಾದ ಪಿಡುಗಾಗಿದೆ. 

ದೇಶದಾದ್ಯಂತ ದ್ವೇಷದ ವಿಷಬೀಜಗಳು ಬಿತ್ತಲ್ಪಡುತ್ತಾ, ಭೀತಿಯ ವಾತಾವರಣವು ಮಡುಗಟ್ಟುತ್ತಾ, ಹಾಗೂ ಇಸ್ಲಾಮ್‌ ಮತ್ತು ಮುಸ್ಲಿಮರ ವಿರುದ್ಧ ವ್ಯವಸ್ಥಿತವಾಗಿ ಜನಾಭಿಪ್ರಾಯವನ್ನುರೂಪಿಸುತ್ತಿರುವ ಈ ಸಂದರ್ಭದಲ್ಲಿ, ಕೇವಲ ಯಾವುದಾದರೂ ಒಂದು ಮುಸ್ಲಿಂ ಕೇರಿಗೆ ಅಥವಾ ಸುರಕ್ಷಿತ  ಪ್ರದೇಶಕ್ಕೆ ಸ್ಥಳಾಂತರಗೊಂಡು ಅದೇ ಸಾಕು ಎಂದುಕೊಂಡು, ಇಡೀ ದೇಶದ ವಾತಾವರಣ ಹಾಗೂ ಜನಸಾಮಾನ್ಯರ ಧೋರಣೆಯನ್ನು ಬದಲಾಯಿಸುವ ಬಗ್ಗೆ ಕಿಂಚಿತ್ತೂ ತಲೆ ಕೆಡಿಕೊಳ್ಳದಿರುವುದು ನಿರ್ಲಿಪ್ತತೆ ಹಾಗೂ ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಸಮುದಾಯದ ಉಳಿವು, ರಾಷ್ಟ್ರದ ಪ್ರಗತಿ ಹಾಗೂ ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರ ಪ್ರಥಮ ಆದ್ಯತೆಯು, ಈ ಎರಡೂ ಮಾರಕ ಪಿಡುಗುಗಳ ಮೂಲ ಕಾರಣವನ್ನು ಪತ್ತೆಹಚ್ಚಿ ಅವುಗಳನ್ನು ಬುಡಸಹಿತ ನಿವಾರಿಸಲು ಅತ್ಯುತ್ತಮವಾದ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದಾಗಿರಬೇಕು. 

ಈ ಎರಡೂ ಮಾರಕ ಮಾನಸಿಕ ಪಿಡುಗುಗಳ ಗಂಭೀರತೆಯನ್ನು ಸರಿಯಾಗಿ ಗ್ರಹಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಒಪ್ಪಿಕೊಳ್ಳಲೇಬೇಕಾದ ಕಹಿ ಸತ್ಯವೆಂದರೆ, ಕೋಮುವಾದಿ ಶಕ್ತಿಗಳಿಂದ ಭಾರತೀಯ ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ದೌರ್ಜನ್ಯಗಳು ಅತಿ ಭೀಕರವಾದದ್ದೇ ಆದರೂ, ಈ ಎರಡೂ ರೋಗಗಳ (ಉದಾಸೀನತೆ ಹಾಗೂ ಅಸಹಾಯಕತೆ) ಅಪಾಯ ಮತ್ತು ಗಂಭೀರತೆಯು ಆ ದೌರ್ಜನ್ಯಗಳಿಗಿಂತಲೂ ಮಿಗಿಲಾದ ವಿನಾಶಕಾರಿ ಪರಿಣಾಮಗಳನ್ನು ಹೊಂದಿದೆ. 

ಸಮಾಜದ ಬಗ್ಗೆ ಕಾಳಜಿ ಕಳೆದುಕೊಂಡ ಅಲಿಪ್ತ ಅಥವಾ ಉದಾಸೀನ ಸ್ಥಿತಿಯಲ್ಲಿರುವವರಿಗೆ ಮುಂದಿನ ಸರಿಯಾದ ಹಾದಿ ಯಾವುದು ಎಂಬ ಅರಿವೇ ಇರುವುದಿಲ್ಲ; ಮತ್ತೊಂದೆಡೆ, ಅಸಹಾಯಕತೆಯ ಬಲೆಯಲ್ಲಿ ಸಿಲುಕಿದವರಿಗೆ ಈ ಜಗತ್ತಿನಲ್ಲಿ ಎಲ್ಲಾ ದಾರಿಗಳೂ ಮುಚ್ಚಿಹೋಗಿವೆ ಎಂಬ ಹತಾಶೆ ಆವರಿಸಿಕೊಳ್ಳುತ್ತದೆ. ಈ ಎರಡೂ ಗುಂಪಿನ ಜನರು ಸ್ವತಂತ್ರವಾಗಿ ಆಲೋಚಿಸುವ ಮತ್ತು ಪ್ರತಿಕ್ರಿಯಿಸುವ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ. ವ್ಯತ್ಯಾಸವಿಷ್ಟೇ; ಉದಾಸೀನತೆಯ ಸುಳಿಯಲ್ಲಿರುವವರು ತಾವು ಎಲ್ಲಿಯೋ ನೆಮ್ಮದಿಯಲ್ಲಿದ್ದೇವೆ ಎಂದು ಭ್ರಮಿಸುತ್ತಾ ಕೀಳು ಮಟ್ಟದ ಹಾಗೂ ಅವಮಾನದ ಬದುಕನ್ನು ಮೈಮೇಲೆಳೆದುಕೊಳ್ಳುತ್ತಾರೆ, ಅಸಹಾಯಕತೆಯ ಸಂಕಟದಲ್ಲಿರುವವರಾದರೋ ನಿರಂತರವಾದ ಮನಸ್ಸಿನ ಯಾತನೆ ಹಾಗೂ ನೊಂದ ಬದುಕಿನ ನರಳಾಟದಲ್ಲೇ ಕಾಲ ಕಳೆಯುತ್ತಾರೆ. 

ಜನಸಮೂಹವೊಂದು ಅಸಹಾಯಕತೆ ಹಾಗೂ ಹತಾಶೆಯ ಕತ್ತಲಲ್ಲಿ ಮುಳುಗಿಹೋದಾಗ, ಎದುರಾಗಿರುವ ಸವಾಲುಗಳನ್ನು ಎದುರಿಸಲು ಅದಕ್ಕೆ ಯಾವ ದಾರಿಯೂ ಕಾಣದಂತಾಗುತ್ತದೆ; ಕಣ್ಣಮುಂದೆಯೇ ಪರಿಹಾರಗಳಿದ್ದರೂ ಅದು ಗುರುತಿಸಲಾರದು. ಆದರೆ, ಅಂತಹ ಸೋಲಿನ ಮನಸ್ಥಿತಿಯಿಂದ ಹೊರಬಂದ ಜಾಗೃತ ಸಮೂಹವು ಎಂಥದ್ದೇ ಭೀಕರ ಬಿಕ್ಕಟ್ಟಿನ ಸಂದರ್ಭದಲ್ಲೂ ಸಾವಿರಾರು ಹೊಸ ದಾರಿಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಅನ್ಯಾಯ ಹಾಗೂ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತುವ ಸಾರ್ವಜನಿಕ ಪ್ರತಿರೋಧವು ಅಂಥ ಮಾರ್ಗಗಳಲ್ಲಿ ಒಂದಾಗಿದೆ. ಇಂತಹ ಪ್ರತಿಭಟನೆ ಹಾಗೂ ವಿರೋಧಕ್ಕೆ ಕೇವಲ ಒಂದೇ ಹಾದಿಯಿಲ್ಲ, ಬದಲಿಗೆ ವೈವಿಧ್ಯಮಯ ಮಾರ್ಗಗಳಿವೆ. ಒಂದು ನಿರ್ದಿಷ್ಟ ವಿಧಾನವು ಅವಿವೇಕತನದಿಂದ ಕೂಡಿದೆ ಎಂದೋ ಅಥವಾ ಕಾನೂನುಬಾಹಿರ ಎಂದೋ ಭಾವಿಸಿದರೆ, ಅಂತಹ ಸಂದರ್ಭಗಳಲ್ಲಿ ಬಳಸಿಕೊಳ್ಳಲು ಇನ್ನು ಅನೇಕ ಪರ್ಯಾಯ ಮಾರ್ಗಗಳು ಸದಾ ಮುಕ್ತವಾಗಿರುತ್ತವೆ. 

ಸಾರ್ವಜನಿಕ ಪ್ರತಿಭಟನೆಗಳಷ್ಟೇ ಅಲ್ಲದೆ, ಕಾನೂನುಬದ್ಧವಾಗಿ ಹೋರಾಡುವ ಮಾರ್ಗವು ಸದಾ ಮುಕ್ತವಾಗಿರುತ್ತದೆ; ನ್ಯಾಯವನ್ನು ಪಡೆಯುವ ಪ್ರಯತ್ನದಲ್ಲಿ ನೂರು ಬಾರಿ ಸೋತರೂ, ಅದಕ್ಕಾಗಿ ಎಂದಿಗೂ ನಿರಾಶೆಯ ಮಡುವಿಗೆ ಜಾರುವ ಪ್ರಮೇಯ ಇರಬಾರದು. ಅದೇ ರೀತಿಯಲ್ಲಿ, ಮಾಧ್ಯಮಗಳ ಸಮರ್ಥ ಬಳಕೆ ಎಂಬುದು ಅತ್ಯಂತ ವಿಶಾಲವಾದ ಕ್ಷೇತ್ರವಾಗಿದೆ. ಇಲ್ಲಿಯೂ ಸಹ ಕೆಲವೊಮ್ಮೆ ಕೆಲವು ಬಾಗಿಲುಗಳು ಮುಚ್ಚಿದಂತೆನಿಸಿದರೆ, ಸಾವಿರಾರು ಹೊಸ ದಾರಿಗಳು ತೆರೆದುಕೊಂಡಿರುತ್ತವೆ. ಇಂದಿನ ಸಾಮಾಜಿಕ ಜಾಲತಾಣಗಳ ಲೋಕವಂತೂ ಅತ್ಯಂತ ವಿಸ್ತಾರವಾಗಿದ್ದು ಪ್ರತಿಯೊಬ್ಬರ ಕೈಯಲ್ಲೂ ಲಭ್ಯವಿದೆ; ಆದರೆ, ಅದನ್ನು ಜಾಗರೂಕತೆಯಿಂದ ಮತ್ತು ಅತ್ಯಂತ ವಿವೇಚನೆಯಿಂದ ಬಳಸುವುದು ಅತಿ ಅವಶ್ಯಕವಾಗಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಗರಿಕ ಸಮಾಜದ ಪಾತ್ರವು ಅತಿ ಅಮೂಲ್ಯವಾದದ್ದು. ಸಮಾಜವು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಎತ್ತಿಹಿಡಿಯುವುದು ಹಾಗೂ ನ್ಯಾಯ-ನಿಷ್ಠೆಯೆಡೆಗೆ ಅವರ ಜವಾಬ್ದಾರಿಗಳನ್ನು ಎಚ್ಚರಿಸುವುದು ಇಂದಿನ ವಿಷಮ ಪರಿಸ್ಥಿತಿಯನ್ನು ಸರಿಪಡಿಸಲು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಆಧುನಿಕ ಯುದ್ಧ ರಣರಂಗಕ್ಕೆ ಸೀಮಿತವಾಗಿಲ್ಲ, ಬದಲಿಗೆ ಅವು ಜನರ ಆಲೋಚನೆ ಹಾಗೂ ಮನಸ್ಸುಗಳ ಮೇಲೆ ನಡೆಯುತ್ತಿವೆ. ಸಮುದಾಯವೊಂದು ತನ್ನದೇ ಆದ ಸಕಾರಾತ್ಮಕ, ಎಚ್ಚರಿಕೆಯ ಹಾಗೂ ವಾಸ್ತವಿಕ ನಿರೂಪಣೆಯನ್ನು ಜಗತ್ತಿನ ಮುಂದೆ ಇಡಲು ವಿಫಲವಾದರೆ, ಇತರರು ಸೃಷ್ಟಿಸುವ ದ್ವೇಷದ ಕಥನಗಳೇ ವಿಜೃಂಭಿಸುತ್ತವೆ; ಇದು ಅಂತಿಮವಾಗಿ ಸಮುದಾಯಕ್ಕೆ ತುಂಬಲಾರದ ನಷ್ಟವನ್ನು ತರುತ್ತದೆ. ಈ ಕದನದಲ್ಲಿ ಗೆಲುವು ಸಾಧಿಸಲು ಸಾಮಾಜಿಕ ಮಾಧ್ಯಮಗಳು, ಪತ್ರಿಕೋದ್ಯಮ ಹಾಗೂ ಬೌದ್ಧಿಕ ಬರಹಗಳ ರಂಗದಲ್ಲಿ ಜಾಗರೂಕ ಹಾಗೂ ಸಕ್ರಿಯ ನಾಯಕತ್ವವನ್ನು ನೀಡಬೇಕಿದೆ. 

ಈ ಸತ್ಯವನ್ನು ಒಂದು ಉದಾಹರಣೆಯ ಮೂಲಕ ಗ್ರಹಿಸೋಣ: ಎಲ್ಲಾದರೂ ಒಂದು ಕಡೆ ಮಸೀದಿಯೊಂದನ್ನು ಅಕ್ರಮವಾಗಿ ಕೆಡವಿಹಾಕಿದರೆ, ಅದಕ್ಕೆ ಪ್ರತಿಕ್ರಿಯಿಸುವ ಬಗೆಗಳು ಹೇಗಿರುತ್ತವೆ? ಮೊದಲ ಹಾದಿಯೆಂದರೆ, ಏನೂ ಸಂಭವಿಸಿಲ್ಲವೆಂಬಂತೆ ಕಣ್ಣುಮುಚ್ಚಿ ಸಂಪೂರ್ಣ ಮೌನ ತಾಳುವುದು. ಎರಡನೆಯ ಹಾದಿಯೆಂದರೆ, ಕೇವಲ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿ ನಮಗೆ ನ್ಯಾಯ ಸಿಕ್ಕಿದೆ ಎಂದು ಮೈಮರೆಯುವುದು. ಮೂರನೆಯ ಹಾದಿಯೆಂದರೆ, ಮಾಧ್ಯಮ ಹಾಗೂ ನಾಗರಿಕ ಜಗತ್ತಿನ ಬಲವನ್ನು ಒಗ್ಗೂಡಿಸಿ ನ್ಯಾಯಾಲಯದ ಮೆಟ್ಟಿಲೇರಿ ಕಡೇ ಉಸಿರಿನವರೆಗೆ ಕಾನೂನು ಹೋರಾಟ ನಡೆಸುವುದು. ಇನ್ನು ನಾಲ್ಕನೆಯ ಹಾಗೂ ಅತ್ಯಂತ ರಚನಾತ್ಮಕವಾದ ಹಾದಿಯೆಂದರೆ, ಮಾಧ್ಯಮ ಪ್ರಚಾರ ಹಾಗೂ ಕಾನೂನು ಕ್ರಮಗಳ ಜೊತೆಗೆ, ಆ ಮಸೀದಿ ಧ್ವಂಸದ ಹಿಂದೆ ಕೆಲಸ ಮಾಡಿದ ಆ ವಿಷಕಾರಿ ಮನಸ್ಥಿತಿಯ ಬೇರುಗಳನ್ನೇ ಕಿತ್ತು ಹಾಕಲು ಬಲಿಷ್ಠವಾದ ಪರ್ಯಾಯ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುವುದು. ಈ ಬಗೆಯ ವಿಶಾಲ ದೃಷ್ಟಿಕೋನವನ್ನು ಮೈಗೂಡಿಸಿಕೊಂಡರೆ, ಉದಾಸೀನತೆ ಹಾಗೂ ಅಸಹಾಯಕತೆಯ ಸಂಕೋಲೆಯಿಂದ ಹೊರಬಂದವರಿಗೆ ಸಮಾಜವನ್ನು ಬದಲಾಯಿಸಲು ಸಾವಿರಾರು ಅವಕಾಶಗಳು ಕಣ್ಣಮುಂದೆ ತೆರೆದುಕೊಳ್ಳುವುದನ್ನು ಕಾಣಬಹುದು. 

ಕೊನೆಗೂ ಭಾರತವೆಂಬುದು ಒಂದು ಮುಕ್ತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಒಂದು ಕಡೆ ಸಂಘರ್ಷ ಹಾಗೂ ಸವಾಲುಗಳ ಅಲೆಗಳಿದ್ದರೆ, ಮತ್ತೊಂದೆಡೆ ಸ್ವಯಂ ರಕ್ಷಣೆ ಹಾಗೂ ಪ್ರಗತಿಗಾಗಿ ಅಗಾಧವಾದ ಸಾಧ್ಯತೆಗಳ ಬಾಗಿಲುಗಳು ತೆರೆದೇ ಇವೆ. ಧಮನಕಾರಿ ಸರ್ವಾಧಿಕಾರವಿರುವ ದೇಶಗಳಲ್ಲೇ ಸುಧಾರಣೆಗೆ ದಾರಿಗಳಿರುವಾಗ, ಪ್ರಜಾಪ್ರಭುತ್ವದ ನೆಲದಲ್ಲಿ ಅದಕ್ಕೆ ಅವಕಾಶಗಳ ಕೊರತೆಯೆಂಬುದೇ ಇರುವುದಿಲ್ಲ. 

ಭಾರತದಲ್ಲಿ 1857ರ ಸೋಲು ಹಾಗೂ ಕರಾಳ ದಿನಗಳ ಬಳಿಕ, ದೇವಬಂದ್ ಮತ್ತು ಅಲಿಘರ್ ಆಂದೋಲನಗಳು ಮುಸ್ಲಿಮರಿಗೆ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣದ ಬಲದೊಂದಿಗೆ ಸ್ವಾವಲಂಬನೆಯ ಹಾದಿಯನ್ನು ತೋರಿಸಿಕೊಟ್ಟವು. ಸಮುದಾಯವು ಯಾವಾಗ ಶಿಕ್ಷಣವನ್ನೇ ತನ್ನ ಬದುಕಿನ ಪ್ರಥಮ ಆದ್ಯತೆಯನ್ನಾಗಿ ಸ್ವೀಕರಿಸಿತೋ, ಆಗ ಅದು ತನ್ನ ಮೂಲ ಅಸ್ತಿತ್ವವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಹೊಸ ದಿಕ್ಕಿನ ನೂರಾರು ಅವಕಾಶಗಳನ್ನು ಸೃಷ್ಟಿಸಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಸಾಂಪ್ರದಾಯಿಕ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳ್ಳದೆ ಆಧುನಿಕ ವಿಜ್ಞಾನ, ಕಾನೂನು, ಮಾಧ್ಯಮ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ರಂಗದಲ್ಲೂ ಪರಿಣತಿ ಸಾಧಿಸುವುದು ಅತ್ಯಂತ ಅನಿವಾರ್ಯವಾಗಿದೆ. ಯಾಕೆಂದರೆ, ಜಾಗೃತಿ ಹಾಗೂ ಉತ್ತಮ ಶಿಕ್ಷಣವನ್ನು ಪಡೆದ ಸಮಾಜದಿಂದ ಮಾತ್ರ ತನ್ನ ಸಂವಿಧಾನದ ಹಾಗೂ ಮಾನವೀಯ ಹಕ್ಕುಗಳನ್ನು ಸಮರ್ಥವಾಗಿ ಅರಿಯಲು ಮತ್ತು ಅವುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. 

ಈ ಸಮಗ್ರ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖವಾದ ಅಂಶವೆಂದರೆ; ಯಾವುದೇ ಅನ್ಯಾಯ ಅಥವಾ ಅತಿರೇಕದ ಘಟನೆಗಳು ಎದುರಾದಾಗ, ಕೇವಲ ಆವೇಶದಿಂದ ಪ್ರತಿಕ್ರಿಯೆ ನೀಡುವುದೇ ನಮ್ಮ ಏಕೈಕ ಗುರಿಯಾಗಬಾರದು; ಹಾಗೆಯೇ, ನಮ್ಮ ಭಾವನೆಗಳ ತೃಪ್ತಿಯನ್ನು ಕೇವಲ ಆ ಪ್ರತಿಕ್ರಿಯೆಯ ತೀವ್ರತೆಯ ಮಾನದಂಡದಲ್ಲಿ ಅಳೆಯಬಾರದು. ಬದಲಿಗೆ, ಪ್ರತಿಯೊಂದು ಆಘಾತಕಾರಿ ಘಟನೆಯು ನಮ್ಮಲ್ಲಿ ವ್ಯವಸ್ಥೆಯನ್ನು ಸುಧಾರಿಸಬೇಕೆಂಬ ಜಾಗೃತಿಯನ್ನು ಮತ್ತಷ್ಟು ಬಲಪಡಿಸಬೇಕು. ನಮ್ಮೆಲ್ಲಾ ಸಮಸ್ಯೆಗಳಿಗೆ ಅಂತಿಮ ಹಾಗೂ ನೈಜ ಪರಿಹಾರವಿರುವುದು ಕೇವಲ ಆಕ್ರೋಶಭರಿತ ಪ್ರತಿಕ್ರಿಯೆಗಳಲ್ಲಿ ಅಲ್ಲ, ಬದಲಿಗೆ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ತಿದ್ದುವ ಪ್ರಾಮಾಣಿಕ ಮತ್ತು ಪರಿಣಾಮಕಾರಿ ಪ್ರಯತ್ನಗಳಲ್ಲಾಗಿದೆ. 

ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಆಳವಾದ ಸುಧಾರಣೆಯಿಲ್ಲದೆ ಯಾವುದೇ ಸಮಸ್ಯೆಗೆ ಶಾಶ್ವತವಾದ ಮುಕ್ತಿ ದೊರೆಯಲು ಸಾಧ್ಯವಿಲ್ಲ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಸ್ವತಂತ್ರ ಭಾರತದ ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಿದರೆ, ಮುಸ್ಲಿಮರ ತೀವ್ರ ಪ್ರತಿರೋಧದ ಕಾರಣದಿಂದ ಸರ್ಕಾರವು ಕೆಲವು ಕಾನೂನುಗಳ ವಿಚಾರದಲ್ಲಿ ತಾತ್ಕಾಲಿಕ ಮೌನ ತಾಳಿದರೂ, ತೆರೆಮರೆಯಲ್ಲಿ ಆ ಕಾನೂನುಗಳ ಅನುಷ್ಠಾನ ಮಾತ್ರ ನಿರಂತರವಾಗಿ ಮುಂದುವರಿದ ಉದಾಹರಣೆಗಳು ಬೇಕಾದಷ್ಟಿವೆ. ಕೆಲವೊಮ್ಮೆ ಜನರ ವಿರೋಧಕ್ಕೆ ಮಣಿದು ಕಾನೂನುಗಳನ್ನು ವಾಪಸ್ ಪಡೆದಂತೆ ನಾಟಕವಾಡಿದರೂ, ಅದೇ ಕಾಯ್ದೆಯನ್ನು ಬೇರೆ ರೂಪದಲ್ಲಿ ಹೇರಲು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಲಾಗಿದೆ. ಕೆಲವೊಮ್ಮೆ ರಕ್ಷಣಾತ್ಮಕ ಕಾನೂನುಗಳನ್ನು ತಂದಂತೆ ಬಿಂಬಿಸಿದರೂ, ಅದರಲ್ಲಿ ಜನರಿಗೆ ನೀಡಲಾಗಿದ್ದ ವಿನಾಯಿತಿಗಳನ್ನು ಕಡಿತಗೊಳಿಸಲಾಗಿದೆ. ಮತ್ತೆ ಕೆಲವೊಮ್ಮೆ ಸರ್ಕಾರಗಳು ನೀಡಿದ ಭರವಸೆಗಳೆಲ್ಲವೂ ಕೇವಲ ಬರಿ ಭ್ರಮೆಗಳಷ್ಟೇ ಎಂದು ಕಾಲ ಉರುಳಿದಂತೆ ಸಾಬೀತಾಗಿವೆ. 

ಅಂದರೆ, ಮೂಲಭೂತ ಸುಧಾರಣೆಯಿಲ್ಲದೆ ಕೇವಲ ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಬಗೆಹರಿಸುವ ಯತ್ನಗಳು ಮೇಲ್ನೋಟಕ್ಕೆ ಗೆಲುವಿನಂತೆ ಕಂಡರೂ, ಅವು ಸಮುದಾಯಕ್ಕೆ ಎಂದಿಗೂ ಶಾಶ್ವತ ನೆಮ್ಮದಿಯನ್ನಾಗಲಿ, ತೃಪ್ತಿಯನ್ನಾಗಲಿ ನೀಡಲಾರವು. ಈ ಕಹಿ ಸತ್ಯವು ನಮ್ಮ ಕಣ್ಣಮುಂದೆ ಸ್ಪಷ್ಟಗೊಂಡಾಗ ಮಾತ್ರ, ನಾವು ಭವಿಷ್ಯಕ್ಕಾಗಿ ಒಂದು ದೀರ್ಘಕಾಲೀನ ಹಾಗೂ ಗಟ್ಟಿಯಾದ ಕಾರ್ಯತಂತ್ರದ ಯೋಜನೆಯನ್ನು ರೂಪಿಸಲು ಸಮರ್ಥರಾಗುತ್ತೇವೆ; ತಪ್ಪಿದಲ್ಲಿ, ನಾವು ಕೊನೆಯಿಲ್ಲದ ಅನ್ಯಾಯಗಳ ಎದುರು ಅಸಹಾಯಕತೆಯಿಂದ ಕಣ್ಣೀರುಹಾಕುತ್ತಾ ಬದುಕಬೇಕಾಗುತ್ತದೆ ಅಥವಾ ಕೇವಲ ಆವೇಶಭರಿತ ಪ್ರತಿಕ್ರಿಯೆಗಳ ಅಂತ್ಯವಿಲ್ಲದ ಸರಪಳಿಯಲ್ಲಿ ಸಿಲುಕಿ ನಷ್ಟ ಅನುಭವಿಸಬೇಕಾಗುತ್ತದೆ.  

ಸಮುದಾಯದ ಮನಸ್ಸನ್ನು ಆವರಿಸಿರುವ ಅಸಹಾಯಕತೆಯ ಕತ್ತಲನ್ನು ತೊಡೆದುಹಾಕುವುದು ಮತ್ತು ಉದಾಸೀನತೆಯ ಪಿಡುಗಿಗೆ ಪರಿಹಾರ ಕಂಡುಕೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಪ್ರಪಂಚದಲ್ಲಿ ನಡೆಯುವುದೆಲ್ಲವೂ ಕೇವಲ ನಕಾರಾತ್ಮಕ ಶಕ್ತಿಗಳ ನಿಯಂತ್ರಣದಲ್ಲೇ ಇದೆ ಎಂಬ ಭ್ರಮೆಯಿಂದ ಹೊರಬರಬೇಕು; ಯಾಕೆಂದರೆ, ಆ ದುಷ್ಟ ಶಕ್ತಿಗಳ ವಿರುದ್ಧ ಧೈರ್ಯದಿಂದ ಪರಿಶ್ರಮಿಸುವವರ ಪರವಾಗಿ ದೇವ ಇಚ್ಛೆ ಕೂಡ ಸದಾ ಕಾರ್ಯನಿರ್ವಹಿಸುತ್ತಿರುತ್ತದೆ. ಇತಿಹಾಸದುದ್ದಕ್ಕೂ ದೇವನು ಪ್ರತಿಯೊಂದು ಕಷ್ಟ ಹಾಗೂ ಬಿಕ್ಕಟ್ಟಿನ ಜೊತೆಜೊತೆಗೇ ಅಸಂಖ್ಯಾತ ಹೊಸದಾದ ವಿಜಯದ ಬಾಗಿಲುಗಳನ್ನು ತೆರೆದಿದ್ದಾನೆ. ಹಾಗಿದ್ದಮೇಲೆ, ಸತ್ಯವಿಶ್ವಾಸಿಗಳು ತಮ್ಮ ಒಡೆಯನಾದ ಅಲ್ಲಾಹನ ಮೇಲೆ ಸಂಪೂರ್ಣ ಭರವಸೆಯನ್ನು (ತವಕ್ಕುಲ್) ಇಟ್ಟು, ಅಲ್ಲಾಹನ ದಿವ್ಯ ಗ್ರಂಥದ (ಕುರ್‌ಆನ್) ಬೆಳಕಿನಲ್ಲಿ ತಮ್ಮ ಮೋಕ್ಷ ಹಾಗೂ ಯಶಸ್ಸಿನ ನಿಜವಾದ ಹಾದಿಯನ್ನು ಏಕೆ ಹುಡುಕಿಕೊಳ್ಳಬಾರದು?