ಮಾಲೆಗಾಂವ್ ಸ್ಫೋಟ ಪ್ರಕರಣ; ರಹಸ್ಯ ವಿಚಾರಣೆಗೆ ಎನ್‍ಐಎ ಮನವಿ; ವರದಿಗೂ ತಡೆ ಕೋರಿಕೆ

0
319

ಮುಂಬೈ, ಆ. 3: ಸನ್ಯಾಸಿಗಳು, ಸೈನಿಕರು ಆರೋಪಿಗಳಾಗಿರುವ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ರಹಸ್ಯ ವಿಚಾರಣೆಗೆ ಆಗ್ರಹಿಸಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ವಿಶೇಷ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಅರ್ಜಿಯಲ್ಲಿ ಅಭಿಪ್ರಾಯವನ್ನು ಸೋಮವಾರದೊಳಗೆ ತಿಳಿಸಬೆಕೆಂದು ಕೋರ್ಟು ಆರೋಪಿಗಳಿಗೆ ತಿಳಿಸಿದೆ. ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ , ಮಾಜಿ ಸೈನಿಕ ಇಂಟಲಿಜೆನ್ಸ್ ಅಧಿಕಾರಿ ಲೆ. ಕರ್ನಲ್ ಶ್ರೀಕಾಂತ್ ಪುರೋಹಿತ್ ಸಹಿತ ಏಳು ಮಂದಿ ಪ್ರಕರಣದ ಆರೋಪಿಗಳಾಗಿದ್ದಾರೆ.

ಇವರ ವಿರುದ್ಧ ಯುಎಪಿಎ ಕಾನೂನು ಪ್ರಕಾರ ಕೋರ್ಟು ಆರೋಪ ಹೊರಿಸಿದೆ. ಸಮಾಜದ ಒಗ್ಗಟ್ಟು ನಾಶಪಡಿಸುವ ಉದ್ದೇಶದಿಂದ ಮಾಲೆಗಾಂವ್‍ನಲ್ಲಿ ಸ್ಫೋಟ ನಡೆಸಿದ್ದಾರೆ ಎಂದು ಎನ್‍ಐಎಗೆ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಸಲ್ ಕೋರ್ಟಿನಲ್ಲಿ ತಿಳಿಸಿದರು. ಈ ಪರಿಸ್ಥಿತಿಯಲ್ಲಿ ಸಮಾಜದ ಒಗ್ಗಟ್ಟಿಗೆ ಹಾನಿಯಾಗದ ರೀತಿ ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ವಿಚಾರಣಾ ಪ್ರಕ್ರಿಯೆಯನ್ನು ರಹಸ್ಯವಾಗಿ ನಡೆಸಬೇಕಾಗಿದೆ. ವಿಚಾರಣೆಯ ವರದಿ ಮಾಡುವುದನ್ನು ತಡೆಯಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ. ಇದರೊಂದಿಗೆ ಪ್ರಕರಣದ 38 ಸಾಕ್ಷಿಗಳಿಗೆ ಸಂರಕ್ಷಣೆ ನೀಡಬೇಕೆಂದು ಕೂಡ ಎನ್‍ಐಎ ಆಗ್ರಹಿಸಿದ್ದಾರೆ.