ಸನ್ಮಾರ್ಗ ವಾರ್ತೆ
ಕುಂದಾಪುರ: ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅವರ ಕಥೆ, ನಿರ್ದೇಶನದ ಬ್ಯಾರಿ ಭಾಷೆಯ ಕಲಾತ್ಮಕ ಚಿತ್ರ “ಇದ್ದತ್”_ ಪ್ರತಿಷ್ಠಿತ 32ನೇ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (KIFF) 2026 ಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.
ಡಿಸೆಂಬರ್ 16 ರಿಂದ 23 ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ Indian Unheard Languag ಅನ್ ಸಂಗ್ ಇನ್ ಕ್ರೆಡಿಬಲ್ ಇಂಡಿಯಾ – ಸ್ವಲ್ಪವೇ ತಿಳಿದಿರುವ ಭಾರತದ ಭಾಷೆಗಳ (ಬ್ಯಾರಿ ಭಾಷೆ) ವಿಭಾಗದಲ್ಲಿ ಈ ಚಿತ್ರ ವಿಷೇಷ ಪ್ರದರ್ಶನಗೊಳ್ಳಲಿದೆ. ಈ ಬಗ್ಗೆ ಉತ್ಸವದ ನಿರ್ದೇಶಕಿ ಶರ್ಮಿಷ್ಠಾ ಬ್ಯಾನರ್ಜಿ ಅವರು ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ.
1995 ರಲ್ಲಿ ಆರಂಭವಾದ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಪಶ್ಚಿಮ ಬಂಗಾಳ ಸರ್ಕಾರದ ವಾರ್ತಾ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯಡಿಯಲ್ಲಿ, ಪಶ್ಚಿಮ ಬಂಗಾಳ ಚಲನಚಿತ್ರ ಕೇಂದ್ರ – ನಂದನ್ ಆಯೋಜಿಸುವ ಈ ಉತ್ಸವವು ಸತ್ಯಜಿತ್ ರೇ, ಋತ್ವಿಕ್ ಘಟಕ್, ಮೃಣಾಲ್ ಸೇನ್ ಅವರಂತಹ ದಿಗ್ಗಜರ ಚಲನಚಿತ್ರ ಪರಂಪರೆಯಿಂದ ಪ್ರೇರಣೆ ಪಡೆದಿದೆ.
ಇದ್ದತ್ ಚಿತ್ರವನ್ನು ಬೆಂಗಳೂರಿನ ಮಹರ್ಷಿ ಪ್ರೊಡಕ್ಷನ್ಸ್ ಅಡಿಯಲ್ಲಿ ಹೆಚ್.ಎಂ. ನರೇಂದ್ರ ಬಾಬು ನಿರ್ಮಿಸಿದ್ದಾರೆ. ಹಲವು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ಕೆಲಸ ಮಾಡಿರುವ
ವೆಂಕಟರಮಣ ಸ್ವಾಮಿ ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ , ಚಿತ್ರಕಥೆ ಯಾಕೂಬ್ ಖಾದರ್ ಗುಲ್ವಾಡಿ – ರಮೇಶ್ ಗುಲ್ವಾಡಿ, ಸಂಭಾಷಣೆ ಆಯಿಷಾ ಫರ್ಝಾನಾ, ಸಂಕಲನ ಮುತ್ತುರಾಜ್. ಟಿ, ಸಂಗೀತ ನಚಿಕೇತ್ ಶರ್ಮಾ ಅವರದ್ದು. ಈ ವರ್ಷದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ರೂಪಾ ವರ್ಕಾಡಿ, ರಾಜ್ಯ ಪ್ರಶಸ್ತಿ ವಿಜೇತ ನಟ ಎಂ.ಕೆ. ಮಠ ಉಪ್ಪಿನಂಗಡಿ, ಸ್ಥಳೀಯ ನೀನಾಸಂ ಕಲಾವಿದರಾದ ವಾಸುದೇವ ಗಂಗೇರ, ಚಿನ್ನ ವಿ. ಗಂಗೇರ, ಹಲವು ಕಲಾತ್ಮಕ ಸಿನಿಮಾಗಳಲ್ಲಿ ನಟಿಸಿರುವ ಗುಲ್ವಾಡಿಯ ಅಮೀರ್ ಹಂಝ, ಜಮಾಲ್ ಕುದ್ರಿಮಕ್ಕಿ, ಫಹದ್ ಯಾಕೂಬ್, ರವಿಕಿರಣ್ ಮುರ್ಡೇಶ್ವರ್, ಆಶಾ ಸುಳ್ಯ, ಫಹಿಮತುಲ್ ಯುಶ್ರ ಸೇರಿದಂತೆ ಅನೇಕ ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ.
ಯಾಕೂಬ್ ಖಾದರ್ ಗುಲ್ವಾಡಿ ಯಾರು?
ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ರಾಷ್ಟ್ರ, ಅಂತರಾಷ್ಟ್ರೀಯ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಯಾಕೂಬ್ ಖಾದರ್ ಗುಲ್ವಾಡಿ ಅವರು 2006 ರಲ್ಲಿ ಡಾ. ಗಿರೀಶ್ ಕಾಸರವಳ್ಳಿಯವರ ‘ಗುಲಾಬಿ ಟಾಕೀಸ್’ ಚಿತ್ರಕ್ಕೆ ಕನ್ನಡದ ಹಿರಿಯ ನಟಿ ಉಮಾಶ್ರೀ ಅವರಿಗೆ ವಸ್ತ್ರವಿನ್ಯಾಸಕರಾಗಿ ಚಿತ್ರರಂಗ ಪ್ರವೇಶಿಸಿದರು.
ನಂತರ ಹಲವು ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಕೆಲಸ ಮಾಡಿದ ಅವರು, 2016 ರಲ್ಲಿ ತಮ್ಮ ‘ಗುಲ್ವಾಡಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಮೊದಲ ಕನ್ನಡ ಸಿನಿಮಾ ‘ರಿಸರ್ವೇಶನ್’ ಗೆ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಹಾಗೂ 2018 ರಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿತು. ತಮ್ಮ ಮೊದಲ ನಿರ್ದೇಶನದ ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್’ ಚಿತ್ರಕ್ಕೆ 2019 ರಲ್ಲಿ ಅತ್ಯುತ್ತಮ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕರ್ನಾಟಕ ವಾರ್ತಾ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆ ಮತ್ತು ಸಾಹಿತ್ಯ ಲೋಕದಲ್ಲೂ ಕೊಡುಗೆ ನೀಡಿರುವ ಇವರಿಗೆ ಅಂಡಮಾನ್ನಲ್ಲಿ ನಡೆದ ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಕೇಂದ್ರ ಸರ್ಕಾರದ ಗೌರವ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಡಾ. ವಹಾಬ್ ದೊಡ್ಡಮನೆ ಸ್ಮಾರಕ ಗೌರವ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ಅಮೇರಿಕಾದ ಅಕ್ಕ ಸಂಸ್ಥೆ, ದುಬೈ ಕರ್ನಾಟಕ ಸಂಘ, ಸೌದಿ ಅರೇಬಿಯ ಕನ್ನಡ ಸಂಘದ ಗೌರವ ಸೇರಿದಂತೆ ದೇಶ-ವಿದೇಶಗಳ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಇವರ ಪ್ರವಾಸದ ಅನಿಸಿಕೆಗಳನ್ನು ‘ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ’, ‘ಅಂಡಮಾನ್ ಮತ್ತು ಸುನಾಮಿ’ ಹಾಗೂ ‘ನನ್ನ ಫಾರೀನ್ ಟೂರಿಂಗ್ ಟಾಕೀಸ್’ ಎಂಬ ಮೂರು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.












