ಹೊಸದಿಲ್ಲಿ,ಆ.7: ಜಮ್ಮುಕಾಶ್ಮೀರದಲ್ಲಿ ಬಂಧಿಸಲಾಗಿರುವ ಪಿಡಿಪಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರನ್ನು ಏಕಾಂತ ಬಂಧನದಲ್ಲಿರಿಸಲಾಗಿದೆ ಎಂದು ಅವರ ಪುತ್ರಿ ಇಲ್ತಿಜಾ ಜಾವೇದ್ ಹೇಳಿದ್ದಾರೆ. ಹರಿನಿವಾಸ್ ಎನ್ನುವ ಗೆಸ್ಟ್ ಹೌಸಿನಲ್ಲಿ ಇರಿಸಲಾಗಿದೆ. ತಾಯಿಯನ್ನು ಭೇಟಿಯಾಗಲು ಅಥವಾ ಮಾತಾಡಲು ಅನುಮತಿ ನೀಡಲಾಗಿಲ್ಲ. ಲ್ಯಾಂಡ್, ಮೊಬೈಲ್ ಫೋನ್ಗಳು ಕೆಲಸ ಮಾಡುತ್ತಿಲ್ಲ ಎಂದು ಇಲ್ತಿಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾದ ಸಂವಿಧಾನ 370ನೇ ವಿಧಿ ರದ್ದುಪಡಿಸುವ ಮೊದಲು ಮೆಹಬೂಬ ಮುಫ್ತಿ ಮತ್ತು ಮತ್ತು ಉಮರ್ ಅಬ್ದುಲ್ಲರನ್ನು ರವಿವಾರ ರಾತ್ರೆ ಗೃಹ ಬಂಧನದಲ್ಲಿರಿಸಲಾಗಿತ್ತು. ನಂತರ ಇಬ್ಬರನ್ನು ಬಂಧಿಸಿ ತಾತ್ಕಾಲಿಕ ಜೈಲಾದ ಸರಕಾರಿ ಗೆಸ್ಟ್ ಹೌಸಿನಲ್ಲಿರಿಸಲಾಗಿತ್ತು. ಇವರನ್ನಷ್ಟೇ ಅಲ್ಲ 400ರಷ್ಟು ರಾಜಕೀಯ ನಾಯಕರು, ಪ್ರತ್ಯೇಕತಾವಾದಿ ನಾಯಕರು ಮತ್ತು ಅವರ ಸಹಾಯಕರನ್ನು ಬಂಧಿಸಲಾಗಿದೆ. ಜೈಲುಗಳಾಗಿ ಹೊಟೇಲು, ಅತಿಥಿ ಗೃಹಗಳು, ಖಾಸಗಿ, ಸರಕಾರಿ ಕಟ್ಟಡಗಳಲ್ಲಿ ಇವರನ್ನು ಇರಿಸಲಾಗಿದೆ. ಇದರೊಂದಿಗೆ ಕಾಶ್ಮೀರ ಕಣಿವೆ ದೊಡ್ಡ ಪ್ರಮಾಣದಲ್ಲಿ ಜೈಲಾಗಿ ಪರಿವರ್ತನೆಯಾಗಿದೆ.












