ಸನ್ಮಾರ್ಗ ವಾರ್ತೆ
ಮುಂಬಯಿ: ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಬೆಂಬಲಿಸುವುದಾಗಿ ಹೇಳಿರುವ ತನ್ನ ಮಿತ್ರಪಕ್ಷ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ನಿಲುವನ್ನು ಮಹಾರಾಷ್ಟ್ರ ಕಾಂಗ್ರೆಸ್ ಶನಿವಾರ ಟೀಕಿಸಿದೆ. ಈ ವರ್ಷದ ಆರಂಭದಲ್ಲಿ ಶರದ್ ಪವಾರ್ ಅವರ ರಾಜ್ಯಸಭಾ ಮರುಆಯ್ಕೆಗೆ ತಾನು ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯು, 2026ರ ಮಾರ್ಚ್ನಲ್ಲಿ ಹಿರಿಯ ನಾಯಕ ಶರದ್ ಪವಾರ್ ಅವರು ಮೇಲ್ಮನೆಗೆ (ರಾಜ್ಯಸಭೆ) ಮರಳಲು ಅನುವಾಗುವಂತೆ ಕಾಂಗ್ರೆಸ್ ತನ್ನ ರಾಜ್ಯಸಭಾ ಸ್ಥಾನದ ಹಕ್ಕನ್ನು ಬದಿಗಿಟ್ಟಿತ್ತು ಎಂಬುದನ್ನು ಪವಾರ್ ಮತ್ತು ಎನ್ಸಿಪಿ (ಶರದ್ ಪವಾರ್) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರಿಗೆ ನೆನಪಿಸಿದೆ.
ಇಂಡಿಯಾ ಮೈತ್ರಿಕೂಟದ ಹಲವು ಪಾಲುದಾರ ಪಕ್ಷಗಳು ವಿರೋಧಿಸುತ್ತಿರುವ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವನೆಯ ಕುರಿತು ಎನ್ಸಿಪಿ (ಶರದ್ ಪವಾರ್ ಬಣ) ತಳೆದಿರುವ ನಿಲುವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಆ ಸಮಯದಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್ಸಿಪಿ ಶರದ್ ಪವಾರ್ ಬಣ ಕೇವಲ 10 ಶಾಸಕರನ್ನು ಹೊಂದಿತ್ತು, ಆದರೆ ರಾಜ್ಯಸಭೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು 36 ಮತಗಳ ಅಗತ್ಯವಿತ್ತು ಎಂದು ಕಾಂಗ್ರೆಸ್ ಹೇಳಿದೆ. ಆಗ ಕಾಂಗ್ರೆಸ್ ಬಳಿ 16 ಶಾಸಕರು ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಳಿ 20 ಶಾಸಕರಿದ್ದರು. ಮಹಾರಾಷ್ಟ್ರ ಕಾಂಗ್ರೆಸ್ ಪ್ರಕಾರ, ಸುಪ್ರಿಯಾ ಸುಳೆ ಅವರು ತಮ್ಮ ತಂದೆಯ ಉಮೇದುವಾರಿಕೆಗೆ ಬೆಂಬಲ ಕೋರಿ ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ಸಂಪರ್ಕಿಸಿದ್ದರು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪವಾರ್ ಅವರನ್ನು ಬೆಂಬಲಿಸಲು ಒಪ್ಪಿಕೊಂಡರು, ನಂತರ ಕಾಂಗ್ರೆಸ್ ಆ ಸ್ಥಾನದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಟ್ಟಿತು. ಶಿವಸೇನೆ (ಯುಬಿಟಿ) ಕೂಡ ಬೆಂಬಲ ನೀಡಿತು ಮತ್ತು ಮಹಾ ವಿಕಾಸ್ ಅಘಾಡಿ (MVA) ಒಮ್ಮತದಿಂದ ಪವಾರ್ ಅವರ ಉಮೇದುವಾರಿಕೆಯನ್ನು ಬೆಂಬಲಿಸಿತು. ಎನ್ಸಿಪಿ (ಶರದ್ ಪವಾರ್) ಪ್ರಸ್ತುತ ನಿಲುವನ್ನು ಪ್ರಶ್ನಿಸಿರುವ ಮಹಾರಾಷ್ಟ್ರ ಕಾಂಗ್ರೆಸ್, ಮೈತ್ರಿಕೂಟದ ಪಾಲುದಾರರಿಂದ ಇಷ್ಟೆಲ್ಲಾ ಬೆಂಬಲ ಪಡೆದಿದ್ದರೂ, ಈಗ ಬಿಜೆಪಿ ನೇತೃತ್ವದ ಸರ್ಕಾರ ತಂದಿರುವ ಪ್ರಸ್ತಾವನೆಯನ್ನು ಬೆಂಬಲಿಸಲು ಪಕ್ಷ ಏಕೆ ಮುಂದಾಗಿದೆ ಎಂದು ಕೇಳಿದೆ.
ಶರದ್ ಪವಾರ್ ಅವರೊಂದಿಗಿನ ಚರ್ಚೆಯ ನಂತರ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ ಎಂದು ಎನ್ಸಿಪಿ (ಶರದ್ ಪವಾರ್) ನಾಯಕ ಜಿತೇಂದ್ರ ಅವ್ಹಾದ್ ಶುಕ್ರವಾರ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ನಿಂದ ಈ ಟೀಕೆ ವ್ಯಕ್ತವಾಗಿದೆ. ಕ್ಷೇತ್ರ ಪುನರ್ವಿಂಗಡಣೆಯು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಇಂದಲ್ಲ ನಾಳೆ ಅದನ್ನು ನಡೆಸಲೇಬೇಕಾಗುತ್ತದೆ ಎಂದು ಅವ್ಹಾದ್ ಬಣ್ಣಿಸಿದ್ದರು. ಆದಾಗ್ಯೂ, ಈ ವಿಷಯದಲ್ಲಿ ಪಕ್ಷದ ನಾಯಕರಿಂದ ಒಂದೇ ರೀತಿಯ ನಿಲುವು ವ್ಯಕ್ತವಾಗಿಲ್ಲ. ಸಂಸತ್ತಿನಲ್ಲಿ ಪಕ್ಷವು ಅಂತಿಮ ನಿಲುವು ತೆಗೆದುಕೊಳ್ಳುವ ಮೊದಲು ಕರಡು ಮಸೂದೆಯನ್ನು ಪರಿಶೀಲಿಸಬೇಕು ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ. ಪಕ್ಷದ ಎಂಟು ಲೋಕಸಭಾ ಸಂಸದರು ಮಸೂದೆಯನ್ನು ಅಧ್ಯಯನ ಮಾಡಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಎನ್ಸಿಪಿ (ಶರದ್ ಪವಾರ್) ಸಂಸದ ಮತ್ತು ಮುಖ್ಯ ಸಚೇತಕ ಅಮೋಲ್ ಕೊಲ್ಹೆ ಕೂಡ ತಿಳಿಸಿದ್ದಾರೆ.
ನವೆಂಬರ್ 30 ರಿಂದ ಲೋಕಸಭೆ ಮತ್ತು ಡಿಸೆಂಬರ್ 2 ರಿಂದ ರಾಜ್ಯಸಭೆ ಸೇರಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಉದ್ದೇಶಿತ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ. ಶರದ್ ಪವಾರ್ ನಿಲುವಿನ ಕುರಿತಾದ ಈ ಭಿನ್ನಾಭಿಪ್ರಾಯಗಳು ಅಧಿವೇಶನಕ್ಕೂ ಮುನ್ನವೇ ಮಹಾ ವಿಕಾಸ್ ಅಘಾಡಿ ಮತ್ತು ಇಂಡಿಯಾ ಮೈತ್ರಿಕೂಟದೊಳಗೆ ಉದ್ವಿಗ್ನತೆಯನ್ನು ಹೆಚ್ಚಿಸಿವೆ.












