ಕುಕ್ಕಾಜೆ ಆ. ೮- ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಅಂಗಸಂಸ್ಥೆಯಾದ ಸಮಾಜ ಸೇವಾ ಘಟಕವು ಅತೀ ಬಡ ಕುಟುಂಬಕ್ಕೆ ವಸತಿ ಸೌಕರ್ಯವನ್ನು ಒದಗಿಸಿಕೊಟ್ಟಿದೆ. ಬಂಟ್ವಾಳ ತಾಲೂಕಿನ ಕುಕ್ಕಾಜೆಯ ನೋಳ ಎಂಬ ಪ್ರದೇಶದಲ್ಲಿ ದಾನಿಗಳ ನೆರವಿನಿಂದ ಸಕಲ ಮೂಲಭೂತ ಸೌಕರ್ಯಗಳುಳ್ಳ ಚೆಂದದ ಮನೆಯೊಂದನ್ನು ಊರವರ ಸಮ್ಮುಖದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಹಸ್ತಾಂತರವನ್ನು ಉದ್ಘಾಟಿಸಿದ ಸನ್ಮಾರ್ಗ ವಾರಪತ್ರಿಕೆಯ ಪ್ರಧಾನ ಸಂಪಾದಕರಾದ ಏ.ಕೆ. ಕುಕ್ಕಿಲರವರು,
ಮನೆಯ ಗಾತ್ರಕ್ಕಿಂತಲೂ ಮನಸ್ಸಿನ ಗಾತ್ರ ಹಿರಿದಾದರೆ ಮಾತ್ರ ಮನೆಯಲ್ಲಿ ಧಾರಾಳ ನೆಮ್ಮದಿ ಆಸ್ವದಿಸಬಹುದು ಹಾಗೂ ಮನೆ ಎಂಬುದು ಸದಾ ಅಲ್ಲಾಹನನ್ನು ಸ್ಮರಿಸುವ ಮತ್ತು ನೆರೆಹೊರೆಯವರೊಂದಿಗೂ ಪರಿಸರದೊಂದಿಗೂ ಪ್ರೀತಿ-ವಿಶ್ವಾಸಗಳಿಂದ ಬೆರೆಯುವ ಶಾಂತಿಧಾಮಗಳಾಗಬೇಕೆಂದು ನೆನಪಿಸಿದರು.
ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಮದನಿಯವರು ಸಮಾರೋಪದ ಹಿತವಚನಗಳನ್ನಾಡಿ, ಬಡಕುಟುಂಬಕ್ಕೆ ಆಸರೆ ನೀಡಿ ಸಹಕರಿಸಿದ ಸರ್ವರಿಗೂ ಪ್ರಾರ್ಥಿಸಿದರು. ಸಮಾಜ ಸೇವಕರೂ ಉದ್ಯಮಿಗಳೂ ಆದ ಮುಹಮ್ಮದ್ ಇಸ್ಹಾಕ್ ಫರಂಗಿಪೇಟೆ, ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್, ಎಸ್.ಐ.ಓ. ಜಿಲ್ಲಾಧ್ಯಕ್ಷರಾದ ರಿಝ್ವಾನ್ ಅಝ್ಹರಿ, ಶಂಶೀರ್ ಮೆಲ್ಕಾರ್ ಮತ್ತು ಅಬ್ದುಶ್ಶುಕೂರ್ ಬೋಳಂಗಡಿಯವರೂ ಉಪಸ್ಥಿತರಿದ್ದರು.


















