ಸನ್ಮಾರ್ಗ ವಾರ್ತೆ-
ಬೆಂಗಳೂರು, ಆ. 14- ಆರೆಸ್ಸೆಸ್ ಸಂಘಟನೆಯು ಭಾರತದ ರಾಷ್ಟ್ರ ಧ್ವಜವನ್ನು ತನ್ನ ಕಚೇರಿ ಮತ್ತು ಶಾಖೆಗಳಲ್ಲಿ ಹಾರಿಸುತ್ತಿಲ್ಲ ಅನ್ನುವುದಕ್ಕೆ ಇವತ್ತಿನ (ಆ. 14, 2019, ಬುಧವಾರ) ಪ್ರಜಾವಾಣಿ ಪತ್ರಿಕೆಯು ಸಾಕ್ಷ್ಯವನ್ನು ಒದಗಿಸಿದೆ. ತನ್ನ “25 ವರ್ಷಗಳ ಹಿಂದೆ” ಎಂಬ ನಿತ್ಯದ ಕಾಲಂ ನಲ್ಲಿ ಅದು ಈ ವಿವರವನ್ನು ಅದು ಪ್ರಕಟಿಸಿದೆ. 25 ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಏನೇನು ಪ್ರಕಟವಾಗಿದೆ ಅನ್ನುವುದನ್ನು ಹೇಳುವ, “25 ವರ್ಷಗಳ ಹಿಂದೆ” ಎಂಬ ಕಾಲಂ ಅನ್ನು ಪ್ರಜಾವಾಣಿಯು ತನ್ನ ಸಂಪಾದಕೀಯ ಪುಟದಲ್ಲಿ ಪ್ರತಿದಿನ ಪ್ರಕಟಿಸುತ್ತಿದ್ದು, ಇದು 25 ವರ್ಷಗಳ ಹಿಂದಿನ ಸುದ್ದಿಗಳನ್ನು ಅರಿತುಕೊಳ್ಳುವುದಕ್ಕೆ ಒಂದು ಅವಕಾಶವೂ ಆಗಿದೆ. ಇವತ್ತು ಪ್ರಕಟವಾದ ಬರಹವು ಆರೆಸ್ಸೆಸ್ ನ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ್ದಾಗಿದೆ.
“ಆರ್ ಎಸ್ ಎಸ್ ಕಛೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರ್ಧಾರ” ಎಂಬ ಶೀರ್ಷಿಕೆಯಲ್ಲಿ ಆಗಸ್ಟ್ 14, 1994, ಭಾನುವಾರದಂದು ಪ್ರಕಟವಾದ ಆ ಸುದ್ದಿಯು ಹೀಗಿದೆ:
ಬೆಂಗಳೂರು, ಆ: 13- ಸ್ವಾತಂತ್ರ್ಯ ದಿನದಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ರಾಜ್ಯ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರದೇಶ ಜನತಾ ಪಕ್ಷ ನಿರ್ಧರಿಸಿದೆ.
ರಾಷ್ಟ್ರದ ಜನತೆ, ಸಂಘ- ಸಂಸ್ಥೆಗಳು ಆಗಸ್ಟ್ ೧೫ ರಂದು ಮತ್ತು ಜನವರಿ ೨೬ ರಂದು ರಾಷ್ಟ್ರ ಧ್ವಜ ಹಾರಿಸಲಿ ಗೌರವ ಸಲ್ಲಿಸಿದರೆ, ಬಿಜೆಪಿಯ ಮಾತೃ ಸಂಘಟನೆ ಆರ್ ಎಸ್ ಎಸ್ ಮಾತ್ರ ತನ್ನ ಕಚೇರಿ-ಶಾಖೆಗಳಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿಲ್ಲ. ಆದ್ದರಿಂದ ಈ ಬಾರಿ ರಾಷ್ಟ್ರಧ್ವಜ ಹಾರಿಸಲು ಜನತಾ ಪಕ್ಷ ನಿರ್ಧರಿಸಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ ಸುಬ್ಬಯ್ಯ ಶೆಟ್ಟಿ ತಿಳಿಸಿದ್ದಾರೆ.












