ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ. 15: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕ್ರಮ ತನ್ನ ಸರಕಾರದ ಸಾಧನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅನುಚ್ಛೇದ 370 ಅಗತ್ಯವಿದ್ದಿದ್ದರೆ ಅದನ್ನು ಯಾಕೆ ತಾತ್ಕಾಲಿಕ ಅಸ್ತಿತ್ವವಾಗಿ ಉಳಿಸಿಕೊಳ್ಳಲಾಯಿತು ಎಂದು ಸರಕಾರದ ಕ್ರಮವನ್ನು ವಿರೋಧಿಸುತ್ತಿರುವವರು ಹೇಳಬೇಕೆಂದು ಮೋದಿ ಹೇಳಿದರು. ಎಪ್ಪತ್ತು ವರ್ಷದ ತಪ್ಪನ್ನು ಎಪ್ಪತ್ತು ದಿವಸಗಳಿಂದ ತಿದ್ದಿದ್ದೇವೆ. ಸರ್ದಾರ್ ಪಟೇಲರ ಕನಸು ನಿಜಗೊಳಿಸುವ ಪ್ರಯಾಣದಲ್ಲಿದ್ದೇವೆ ಎಂದರು.
ಮುತ್ತಲಾಕ್ ನಿಷೇಧ ಕಾನೂನು ದೇಶದ ಮುಸ್ಲಿಂ ಮಹಿಳೆಯ ಗೌರವವನ್ನು ಎತ್ತಿಹಿಡಿಯುತ್ತದೆ ಎಂದು ಮೋದಿ ಹೇಳಿದರು. ಜನಸಂಖ್ಯೆ ಹೆಚ್ಚುತ್ತಿರುವುದು ದೇಶ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಬಡತನ ನಿರ್ಮೂಲನಕ್ಕೆ ಸರಕಾರ ಪ್ರತಿಜ್ಞಾ ಬದ್ಧವಾಗಿದೆ. ತಾನು ನೀಡಿದ ಭರವಸೆಯನ್ನು ಪಾಲಿಸುವೆ ಎಂದೂ ಅವರು ತಿಳಿಸಿದರು.
ಸ್ವಾತಂತ್ರ್ಯ ದಿನ ಆಚರಣೆಯ ಅನ್ವಯ ದಿಲ್ಲಿ ಮೆಟ್ರೋ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಸುರಕ್ಷೆಯನ್ನು ಹೆಚ್ಚಿಸಲಾಗಿದೆ. ಕೆಂಪು ಕೋಟೆ ಪರಿಸರ ಭಾರೀ ಸುರಕ್ಷೆಯ ವಲಯವಾಗಿ ಪರಿವರ್ತನೆಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಭಾರೀ ಸುರಕ್ಷೆಯನ್ನು ಏರ್ಪಡಿಸಲಾಗಿದೆ. ನಿಷೇಧಾಜ್ಞೆ, ನಿಯಂತ್ರಣಗಳನ್ನು ಕಠಿಣಗೊಳಿಸಲಾಗಿದೆ. ಗಡಿಯಲ್ಲಿ ಹೆಚ್ಚುವರಿ ಸೈನ್ಯವನ್ನು ನಿಯೋಜಿಸಲಾಗಿದೆ. ಕಾಶ್ಮೀರ ವಿಷಯದ ಹಿನ್ನೆಲೆಯಲ್ಲಿ ದೇಶದ ಇತರ ಪ್ರಧಾನ ಕೇಂದ್ರಗಳಲ್ಲಿಯೂ ಕೂಡ ಭಾರೀ ಸುರಕ್ಷೆ ಏರ್ಪಡಿಸಲಾಗಿದೆ.












