ಸಂಗೀತ್ ಸೋಮ್ ವಿರುದ್ಧ ನಾಲ್ಕು ಪ್ರಕರಣಗಳನ್ನು ಹಿಂಪಡೆಯಲು ಹೊರಟ ಉತ್ತರಪ್ರದೇಶ ಸರಕಾರ

0
614

ಸನ್ಮಾರ್ಗ ವಾರ್ತೆ

ಮುಝಪ್ಫರ್‌ನಗರ,ಆ.15: ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧ ನಾಲ್ಕು ಪ್ರಕರಣಗಳನ್ನು ಹಿಂಪಡೆಯಲು ಉತ್ತರಪ್ರದೇಶ ಸರಕಾರ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ 2013ರಲ್ಲಿ ಮುಝಪ್ಫರ್‌ನಗರ ಗಲಭೆಗೆ ಸಂಬಂಧಿಸಿದ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವೀಡಿಯೊ ಅಪ್‍ಲೋಡ್ ಮಾಡಿದ ಘಟನೆಗೆ ಸಂಬಂಧಿಸಿದ ಪ್ರಕರಣಗಳೂ ಸೇರಿವೆ. ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್‍ಐಟಿ ಸಂಗೀತ್ ಸೋಮ್‍ಗೆ ಕ್ಲೀನ್ ಚಿಟ್ ನೀಡಿತ್ತು. ಸೋಮ್ ಸಾರ್ಧನ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ವಿವಾದ ವೀಡಿಯೊ ಕುರಿತ ವಿವರಗಳನ್ನು ಎಸ್‍ಐಟಿ ಫೇಸ್‍ಬುಕ್‍ನಲ್ಲಿ ಹುಡುಕಿತ್ತು. ಆದರೆ ಅವರಿಗೆ ಅದು ಸಿಕ್ಕಿರಲಿಲ್ಲ. ವೀಡಿಯೊ ಅಪ್‍ಲೋಡಿಂಗ್, ಲೈಕ್ ಮಾಡಿದವರ ವಿವರಗಳನ್ನು ಒಂದು ವರ್ಷ ಮಾತ್ರ ಸಂಗ್ರಹಿಸಡಲಾಗುತ್ತದೆ ಎಂದು ಫೇಸ್‍ಬುಕ್ ಉತ್ತರಿಸಿದೆ ಎಂದು ಎಸ್‍ಐಟಿ ಅಂತಿಮ ವರದಿಯಲ್ಲಿದೆ. ಯುವಕನನ್ನು ಕೊಲೆ ಮಾಡುತ್ತಿರುವ ವೀಡಿಯೊವನ್ನು ಹಾಕಿದ್ದು ಮುಝಪ್ಫರ್‍‌ನಗರದಲ್ಲಿ ಕೋಮು ಗಲಭೆಗೆ ಕಾರಣವಾಗಿತ್ತು ಎನ್ನಲಾಗುತ್ತಿದೆ. ಗಲಭೆಯಲ್ಲಿ 60 ಮಂದಿಗೂ ಹೆಚ್ಚು ಮಂದಿ ಹತ್ಯೆಯಾಗಿದ್ದರು. 40,0000 ಮಂದಿ ಮನೆ ಮಠ ತೊರೆದು ಸಂತ್ರಸ್ತರಾಗಿದ್ದರು. ಈ ವೀಡಿಯೊ ಗಲಭೆ ನಡೆಯುವುದಕ್ಕಿಂತ ಎರಡು ವರ್ಷ ಮೊದಲು ಪಾಕಿಸ್ತಾನ ಅಥವಾ ಅಪಘಾನಿಸ್ತಾನದಲ್ಲಿ ಚಿತ್ರೀಕರಿಸಲಾಗಿರುವುದೆಂದು ನಂತರ ತಿಳಿದು ಬಂದಿತ್ತು.