ಸನ್ಮಾರ್ಗ ವಾರ್ತೆ
ಚಂಡಿಗಡ,ಆ. 17: ಪಾಕಿಸ್ತಾನದಲ್ಲಿ ಹಾಡಿ ವ್ಯಾಪಕ ಟೀಕೆಗಳನ್ನು ಎದುರಿಸಿದ ಗಾಯಕ ಮಿಕಾ ಸಿಂಗ್ ಮುಖವುಳಿಸಲಿಕ್ಕಾಗಿ ಹೊಸ ವೀಡಿಯೊವನ್ನು ಹೊರ ತಂದಿದ್ದಾರೆ. ಕರಾಚಿಯಲ್ಲಿ ಕೋಟ್ಯಧಿಪತಿಯೊಬ್ಬರ ಪುತ್ರಿ ಮದುವೆಯಲ್ಲಿ ಹಾಡಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಿಂದಲೂ ಅವರು ವ್ಯಾಪಕ ಟೀಕೆಗೊಳಗಾಗಿದ್ದರು.
ವಾಗ ಗಡಿಯಲ್ಲಿ ‘ಭಾರತ್ ಮಾತಾ ಕಿ ಜೈ’ , ‘ವಂದೇ ಮಾತರಂ’ ಘೋಷಣೆ ಕೂಗುವ ತನ್ನ ವೀಡಿಯೊವನ್ನು ಗಾಯಕ ಮಿಕಾ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಸ್ವಾತಂತ್ರ್ಯದಿನ ಶುಭಾಶಯವನ್ನು ಹಾಗೂ ಯೋಧರಿಗೆ ಅಭಿನಂದನೆಯನ್ನೂ ಕೋರಿದ್ದಾರೆ. ಕರಾಚಿಯಿಂದ ವಾಗ ಗಡಿ ಮೂಲಕ ಭಾರತಕ್ಕೆ ಮರಳುವ ಅಟ್ಟಾರಿಯಲ್ಲಿ ಇವರು ವೀಡಿಯೊ ರೆಕಾರ್ಡ್ ಮಾಡಿದ್ದರು. ಕರಾಚಿಯಲ್ಲಿ ಅವರು ಹಾಡಿದ್ದಕ್ಕಾಗಿ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಶನ್, ವೆಸ್ಟರ್ನ್ ಇಂಡಿಯ ಸಿನಿ ಎಂಪ್ಲೋಯೀಸ್ ಅಸೋಸಿಯೇಶನ್ ಮುಂತಾದ ಸಂಘಟನೆಗಳು ಮಿಕಾಸಿಂಗ್ರನ್ನು ಬಹಿಷ್ಕರಿಸಲು ಕರೆ ನೀಡಿವೆ.












